ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಆಯೋಜಿಸಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಕ್ಷಯರೋಗ ಮುಕ್ತ ಜಿಲ್ಲೆಗೆ ಸಹಕರಿಸಿ, ಕ್ಷಯರೋಗ ಗುಣಪಡಿಸುವ ಕಾಯಿಲೆ: ಸುರೇಶ್ ಕುಮಾರ್ ಮಾತನಾಡಿದರು. ಅನಾದಿ ಕಾಲದಿಂದಲೂ ಬಂದ ಕ್ಷಯರೋಗ ಗುಣಮುಖವಾಗುವ ಕಾಯಿಲೆ ಆಗಿದೆ. ಇದರ ಬಗ್ಗೆ ರೋಗಿಗಳು ಚಿಂತಿಸುವುದು ಬೇಡ ಎಂದು ಮೊಳಕಾಲ್ಮೂರು ತಹಶೀಲ್ದಾರ್ ಸುರೇಶ್ ಕುಮಾರ್ ತಿಳಿಸಿದರು. * ಮೊಳಕಾಲ್ಮೂರು ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿರುವ ಕ್ಷಯರೋಗಿಗಳನ್ನು ಗುರುತಿಸಿ ಚಿಕಿತ್ಸೆ ನೀಡಿ ಸಂಪೂರ್ಣವಾಗಿ ಗುಣಪಡಿಸಬಹುದು. ಇಲಾಖೆಯ ಎಲ್ಲಾ ಕಾರ್ಯಕರ್ತರು ಮನೆ ಮನೆಗೆ ಭೇಟಿ ಮಾಡುವ ಮುಖಾಂತರ ಬೇಗನೆ ರೋಗಿಯನ್ನು ಪತ್ತೆ ಹಚ್ಚಿ ವೈದ್ಯರ ಸಲಹೆಯಂತೆ ಚಿಕಿತ್ಸೆ ನೀಡಿದರೆ ರೋಗ ಹತೋಟಿಗೆ ತರಬಹುದು ಎಂದರು. ತಾಲ್ಲೂಕು ಆರೋಗ್ಯಧಿಕಾರಿ ಡಾ.ಸುಧಾ ಮಾತನಾಡಿ, ಸಂಜೆವೇಳೆ ಜ್ವರ, ಒಂದು ವಾರಕ್ಕಿಂತ ಹೆಚ್ಚು ಕೆಮ್ಮು, ಕಫ, ತೂಕ ಕಡಿಮೆಯಾಗುವುದು, ಹಸಿವಾಗದೇ ಇರುವುದು ಇಂತಹ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ತಪ್ಪದೇ ಕಫ ಪರೀಕ್ಷೆ ಮಾಡಿಸಬೇಕು ಎಂದು ಸಲಹೆ ನೀಡಿದರು.
ಕ್ಷಯರೋಗ ಧೃಡಪಟ್ಟಿದ್ದರೆ ಅಂತಹ ರೋಗಿಯ ಮನೆಬಾಗಿಲಿಗೆ ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು ಮತ್ತು ವಿದ್ಯಾವಂತರಿಂದ ರೋಗಿಗೆ ಚಿಕಿತ್ಸೆ ನೀಡಲಾಗುತ್ತದೆ ಹಾಗೂ ಚಿಕಿತ್ಸೆ ಪಡೆಯದ ಕ್ಷಯರೋಗಿ ವರ್ಷಕ್ಕೆ ಹತ್ತರಿಂದ ಹದಿನೈದು ಜನರಿಗೆ ರೋಗವನ್ನು ಹರಡುತ್ತಾನೆ ಎಂದು ತಿಳಿಸಿದರು. ಈ ವರ್ಷದ ಘೋಷವಾಕ್ಯ “ಕಾಲಘಟಿಸುತ್ತಿದೆ” ಎಂಬುದಾಗಿದ್ದು, ನಾವುಗಳು ಸಮಾಜದಲ್ಲಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿ ಸಾರ್ವಜನಿಕರಿಗೆ ಆರೋಗ್ಯ ಒದಗಿಸಲು ಶ್ರಮಿಸಬೇಕು ಎಂದರು. ವೈದ್ಯಾಧಿಕಾರಿ ಡಾ. ಪದ್ಮಾವತಿ ಮಾತನಾಡಿ, ಕ್ಷಯರೋಗಕ್ಕೆ ಇತ್ತಿಚೀನ ದಿನಗಳಲ್ಲಿ ಯಾವುದೇ ಕಳಂಕ ಇಲ್ಲ. ಯಾರು ಕೂಡ ಆಂತಕ ಪಡದೇ ರೋಗಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸಿ ರೋಗ ಹರಡದಂತೆ ಶ್ರಮಿಸಬೇಕು ಎಂದು ಹೇಳಿದರು. ಪ್ರಭಾರೆ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಮಾತನಾಡಿ, ಕ್ಷಯರೋಗಿ ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಪೌಷ್ಟಿಕ ಆಹಾರ ಸೇವನೆಗಾಗಿ ಸರ್ಕಾರ ರೋಗಿಯ ಬ್ಯಾಂಕ್ ಖಾತೆಗೆ ಐದುನೂರು ರೂಪಾಯಿಗಳನ್ನು ನೀಡುತ್ತಿದ್ದು, ಹಣ ಸದ್ವಿನಿಯೋಗ ಮಾಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುವುದು ಸೂಕ್ತ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ತುಳಸಿ ರಂಗನಾಥ್ ಅವರು ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೊಗಗಳ ನಿಯಂತ್ರಣ ಕುರಿತು ತರಬೇತಿ ನೀಡಿದರು. ಇದೇ ವೇಳೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರು, ಆರೋಗ್ಯ ಇಲಾಖೆಯ ಕಾರ್ಯಕರ್ತರು ನಗರದ ವಿವಿಧ ಬೀದಿಗಳಲ್ಲಿ ಜಾಥಾ ಕಾರ್ಯಕ್ರಮದ ಮುಖಾಂತರ ಕ್ಷಯರೋಗ ಕುರಿತು “ಟಿಬಿಯನ್ನು ಸೋಲಿಸಿ, ದೇಶವನ್ನು ಗೆಲ್ಲಿಸಿ” ಎಂಬ ಘೋಷಣೆಯೊಂದಿಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ಸಹಾಯಕ ತಿಪ್ಪೇಸ್ವಾಮಿ, ಅಶೋಕ, ರಾಧಮ್ಮ, ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದ ಸಿಬ್ಬಂದಿ ಸಿದ್ದನಾಯ್ಕ್, ಚಿದಾನಂದ, ಸೇರಿದಂತೆ ಸಮುದಾಯ ಆರೋಗ್ಯ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
