ಹೊನ್ನಾಳಿ ಯುವಕನ ಹತ್ಯೆ ಪ್ರಕರಣ 7 ಮಂದಿ ಆರೋಪಿಗಳ ಬಂಧನ
,: ಹೊನ್ನಾಳಿ ಪಟ್ಟಣದ ದುರ್ಗಿಗುಡಿ ಬಡಾವಣೆಯಲ್ಲಿ ಬನ್ನಿ ಮಹಾಕಾಳಮ್ಮ ದೇವಸ್ಥಾನದ ಹತ್ತಿರ ನಡೆದ ಅಮಿತ್ ಎಂಬ ಯುವಕನ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೂರ್ವ ನಿಯೋಜಿತ * ಕೃತ್ಯವೆಸಗಿ ಪರಾರಿಯಾಗಿದ್ದ 7 ಜನ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತ ಅಮಿತ್ ಹಾಗೂ ಪ್ರಮುಖ ಆರೋಪಿ ಗಣೇಶ ಸ್ನೇಹಿತರಾಗಿದ್ದು, ಗಣೇಶನ ಹೆಂಡತಿಯೊಂದಿಗೆ ಅನೈತಿಕ ಸಂಬಂಧವಿತ್ತೆಂಬ ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುವುದು ತನಿಖೆಯಿಂದ ತಿಳಿದುಬಂದಿದೆ.
ಅಕ್ಟೋಬರ್ 13 ರಂದು ರಾತ್ರಿ 11:30 ರ ಸುಮಾರಿಗೆ ಹೊನ್ನಾಳಿ ಪಟ್ಟಣದ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ದಸರಾ ಹಬ್ಬದ ಪುರಾಣ ಕಾರ್ಯಕ್ರಮ ಮುಗಿಸಿ, ಪಿರ್ಯಾದಿ ನಾಗರತ್ನಮ್ಮ ಹಾಗೂ ಅವರ ಹಿರಿಯ ಮಗ ಅಮಿತ್ ಮನೆಗೆ ನಡೆದುಕೊಂಡು ತೆರಳುತ್ತಿದ್ದರು. ಈ ವೇಳೆ ಸ್ಕೂಟಿ ಮತ್ತು ಕಾರಿನಲ್ಲಿ ಬಂದ ಆರೋಪಿಗಳಾದ ಗಣೇಶ ಹಾಗೂ ಇತರರು ಏಕಾಏಕಿ ಅಮಿತ್ ಹಾಗೂ ಆತನ ತಾಯಿಯ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಅಮಿತ್‌ನನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಶೇಖರ್ ಹೆಚ್.ಟಿ., ಹೆಚ್ಚುವರಿ ಎಸ್‌ಪಿ ಪರಮೇಶ್ವರ ಹೆಗಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಚನ್ನಗಿರಿ ಉಪವಿಭಾಗದ ಡಿವೈಎಸ್‌ಪಿ ರುದ್ರಪ್ಪ ಎಸ್. ಉಜ್ಜನಕೊಪ್ಪ ಹಾಗೂ ಹೊನ್ನಾಳಿ ವೃತ್ತ ನಿರೀಕ್ಷಕ ಸುನೀಲ್ ಕುಮಾರ್ ಹೆಚ್. ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆಗೆ ಸೂಚಿಸಲಾಗಿತ್ತು.
ಪೊಲೀಸರು ತೀವ್ರ ಶೋಧ ನಡೆಸಿ ಹೊನ್ನಾಳಿ ಟೌನ್ ವಾಸಿ ಗಣೇಶ (23), ಚಂದ್ರಶೇಖರ್ ಯಾನೆ ಕಾರದಪುಡಿ ಚಂದ್ರು (30), ಆಕಾಶ್ ಸಿ.ಎಲ್. ಯಾನೆ ತುಪ್ಪ ಆಕಾಶ್ (26), ಸಂದೀಪ್ ಎನ್(25), ಪುನೀತ್(27) ಮಣಿಕಂಠ ಜಿ. (30), ವಿನಯ್ ಕುಮಾರ್ * ಜಿ. (31) ಎಂಬುವವರನ್ನು ದಸ್ತಗಿರಿ ಮಾಡಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 1 ಸ್ಕೂಟಿ, 2 ಬೈಕ್, 1 ಬುಲೆಟ್ ಬೈಕ್, 1 ಬೊಲೆರೊ ವಾಹನ, 2 ಮಚ್ಚುಗಳು, 3 ಚಾಕುಗಳು, 2 ಕಪ್ಪು ಬಣ್ಣದ ಮುಖಕವಚ ಹಾಗೂ ಖಾರದ ಪುಡಿಯ ಕವರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆಯ ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ತಿಳಿಸಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
