ವರದಿ. ಶಶಿಕುಮಾರ್ ಚಳ್ಳಕೆರೆ

ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು
ಕ್ಷಯರೋಗ ನಿರ್ಮೂಲನೆಯಲ್ಲಿ ಜಿಲ್ಲೆ 5ನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ
****
ಚಿತ್ರದುರ್ಗ, ಮಾರ್ಚ್24:
ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮದ ಅನೇಕ ಸೂಚ್ಯಂಕಗಳಲ್ಲಿ ಜಿಲ್ಲೆ ಅತ್ಯುತ್ತಮ ಕೆಲಸ ನಿರ್ವಹಣೆ ಮಾಡಿದ್ದು, 2020ರಲ್ಲಿ ರಾಜ್ಯದಲ್ಲಿ 5ನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಹೇಳಿದರು.
ನಗರದ ಜೆಎಂಐಟಿ ಕ್ಯಾಂಪಸ್‍ನ ಬಸವೇಶ್ವರ ಮೆಡಿಕಲ್ ಕಾಲೇಜು ಉಪನ್ಯಾಸ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಕಚೇರಿ, ಜಿಲ್ಲಾ ಆಸ್ಪತ್ರೆ ಹಾಗೂ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕ್ಷಯ ಮುಕ್ತ ಭಾರತ ಅಭಿಯಾನದಡಿಯಲ್ಲಿ ಕ್ಷಯರೋಗ ನಿರ್ಮೂಲನೆಗಾಗಿ ಕಾಲ ಘಟಿಸುತ್ತಿದೆ ಎಂಬ ಘೋಷ ವಾಕ್ಯದೊಂದಿಗೆ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲೇ ಅತಿ ಹೆಚ್ಚು ಸಂಭಾವ್ಯ ಕ್ಷಯರೋಗಿಗಳನ್ನು ತಪಾಸಣೆಗೊಳಪಡಿಸಿದ ಕೀರ್ತಿ ಚಿತ್ರದುರ್ಗ ಜಿಲ್ಲೆಗೆ ಸಲ್ಲುತ್ತದೆ ಹಾಗೂ ಹೆಚ್‍ಐವಿ ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತಿದ್ದ ಕ್ಷಯರೋಗದ ಪ್ರಮಾಣ ಶೇ.7ರಿಂದ9ರಷ್ಟಿದ್ದಿದ್ದು ಈಗ ಶೇ.3ರಿಂದ4ಕ್ಕೆ ಇಳಿಕೆ ಆಗಿದೆ. ಮಧ್ಯದಲ್ಲೇ ಚಿಕಿತ್ಸೆ ಬಿಟ್ಟಿರುವವರ ಪ್ರಮಾಣ ಕೂಡ ಗಣನೀಯವಾಗಿ ಕಡಿಮೆಯಾಗಿರುವುದು ಹಾಗೂ ಚಿಕಿತ್ಸೆ ವೈಫಲ್ಯ ಸಂಖ್ಯೆಯು ಕೂಡ ಕಡಿಮೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಸಿ.ಎಲ್.ಫಾಲಾಕ್ಷ ಮಾತನಾಡಿ, ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಸೂಕ್ಷ್ಮ ಪ್ರದೇಶಗಳಾದ ನಗರ ಕೊಳೆಗೇರಿಗಳು ಹಾಗೂ ಹೆಚ್ಚು ಕ್ಷಯರೋಗಿಗಳು ದಾಖಲಾದ ಗ್ರಾಮಗಳು, ಪ್ರದೇಶಗಳಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳು ಮತ್ತು ತಂಡ ಉತ್ತಮ ರೀತಿಯಲ್ಲಿ ಕ್ರಿಯಾ ಯೋಜನೆ ರೂಪಿಸಿಕೊಂಡು ಕ್ಷಯರೋಗ ನಿರ್ಮೂಲನೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಆರ್.ರಂಗನಾಥ್ ಮಾತನಾಡಿ, 2020-25ರ ವೇಳೆಗೆ ಕ್ಷಯ ಮುಕ್ತ ಭಾರತ ನಿರ್ಮಾಣ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ಸಮುದಾಯದ ಸಹಭಾಗಿತ್ವ, ವೈದ್ಯಕೀಯ ಕಾಲೇಜುಗಳು ಹಾಗೂ ಖಾಸಗಿ ವೈದ್ಯರುಗಳು ಮತ್ತು ಆರೋಗ್ಯ ಸಂಸ್ಥೆಗಳು ಕ್ಷಯ ಮುಕ್ತ ಭಾರತ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.
ಕ್ಷಯರೋಗ ನಿರ್ಮೂಲನೆಗೆ ರಾಜಕೀಯ ಮುಖಂಡರುಗಳು, ಧಾರ್ಮಿಕ ಮುಖಂಡರುಗಳು ಹಾಗೂ ಅಧಿಕಾರಿ ವರ್ಗ ಮತ್ತು ಇಲಾಖೆಯ ಸಹಯೋಗ ಹೆಚ್ಚಿನ ಬದ್ಧತೆ ತೋರಬೇಕಾಗಿದೆ. ಈ ಸಂಬಂಧ ಜಿಲ್ಲೆಯಲ್ಲಿ 15 ದಿನಗಳು ವಿಶೇಷ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಸಾರ್ವಜನಿಕರು ಕೈಜೋಡಿಸ ಬೇಕು ಎಂದು ಹೇಳಿದರು.
ಕ್ಷಯ ಮುಕ್ತ ಜಿಲ್ಲೆಗಾಗಿ ಪ್ರತ್ಯೇಕ ಸೂಕ್ಷ್ಮ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದ್ದು, ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಇಲಾಖೆಯ ಎಲ್ಲಾ ವರ್ಗದ ಅಧಿಕಾರಿಗಳು ಮತ್ತು ನೌಕರರು ಸಹಕರಿಸಬೇಕು. ಪೋಲಿಯೋ,ಸ್ಮಾಲ್ ಪಾಕ್ಸ್ ನಂತಹ ರೋಗಗಳನ್ನು ದೇಶದಿಂದ ನಿರ್ಮೂಲನೆ ಮಾಡಲಾಗಿದ್ದು, ಇದೇ ಮಾದರಿಯಲ್ಲಿ ಕ್ಷಯರೋಗ, ಮಲೇರಿಯಾ, ಕುಷ್ಠರೋಗ ಇವುಗಳನ್ನು 2025ರ ವೇಳೆಗೆ ನಿರ್ಮೂಲನೆ ಮಾಡುವುದು ಪ್ರತಿಯೊಬ್ಬ ಭಾರತೀಯನ ಸಾಮಾಜಿಕ ಜವಾಬ್ದಾರಿಯಾಗ ಬೇಕು ಎಂದು ಹೇಳಿದರು.
ಬಸವೇಶ್ವರ ವೈದ್ಯಕೀಯ ಕಾಲೇಜು ಕಮ್ಯೂನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ನಾಗೇಂದ್ರಗೌಡ ಮಾತನಾಡಿ, ಕ್ಷಯ ಮುಕ್ತ ಭಾರತ ನಿರ್ಮಾಣಕ್ಕೆ ಅಗತ್ಯ ಸಹಕಾರವನ್ನು ವೈದ್ಯಕೀಯ ಕಾಲೇಜು ವತಿಯಿಂದ ನೀಡಲಾಗುತ್ತದೆ ಎಂದು ತಿಳಿಸಿದರು.
ಕ್ಷಯ ಮುಕ್ತ ಭಾರತ ಕುರಿತಂತೆ, ಬಸವೇಶ್ವರ ವೈದ್ಯಕೀಯ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಬಸವರಾಜ್ ಸಂಗೊಳ್ಳಿ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಕ್ಷಯರೋಗಕ್ಕೆ ಕಾರಣವಾಗಿರುವ ಮೈಕೋ ಬ್ಯಾಕ್ಟೀರಿಯಂ ಟ್ಯೂಬರ್‍ಕ್ಯೂಲೋಸಿಸ್ ಬ್ಯಾಕ್ಟೀರಿಯವನ್ನು ಕಂಡು ಹಿಡಿದ ವಿಜ್ಞಾನಿ ರಾಬರ್ಟ್ ಕಾಕ್ ಇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಅಕ್ಷಯ್ ಗ್ಲೋಬಲ್ ಆಸ್ಪತ್ರೆಯ ಡಾ.ರವೀಂದ್ರ, ಕನಕ ಕಂಪ್ಯೂಟರ್ಸ್ ಮಾಲೀಕರಾದ ಸತೀಶ್ ಚಿಕಿತ್ಸೆ ಪಡೆಯುತ್ತಿರುವ ಕ್ಷಯರೋಗಿಗಳಿಗೆ ಪೌಷ್ಠಿಕಾಂಶದ ಆಹಾರ ಪದಾರ್ಥಗಳನ್ನು ನೀಡಿದರು.
ಜಿಲ್ಲಾ ಮಟ್ಟದಲ್ಲಿ ಕ್ಷಯರೋಗ ಕುರಿತು ಹಮ್ಮಿಕೊಳ್ಳಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇರಾದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.
ಜಾಗೃತಿ ಕಾರ್ಯಕ್ರಮ: ಬುದ್ಧ ನಗರದಲ್ಲಿರುವ ನಗರ ಆರೋಗ್ಯ ಕೇಂದ್ರದಲ್ಲಿ ಜಾಗೃತಿ ಜಾಥಾ, ಟ್ಯಾಬ್ಲೋ, ಐಇಸಿ ಮಳಿಗೆ, ಜನಪದ ಕಲಾ ತಂಡ ಹಾಗೂ ಕ್ಷಯರೋಗ ನಿಯಂತ್ರಣ ಸಂದೇಶವುಳ್ಳ ಟೀ-ಶರ್ಟ್ ಮತ್ತು ಟೋಪಿ ಧರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಬಸವರಾಜಪ್ಪ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಶೇಖರ್ ಕಂಬಾಳಿ ಮಠ್, ಜಿಲ್ಲಾ ಕೀಟಜನ್ಯ ಆಶ್ರಿತ ರೋಗಗಳ ಕಾರ್ಯಕ್ರಮ ಅಧಿಕಾರಿ ಡಾ.ಜಯಮ್ಮ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯ್ಕ್, ಜಿಲ್ಲಾ ಕೀಟಶಾಸ್ತ್ರ ತಜ್ಞೆ ನಂದಿನಿ ಕಡಿ, ಬಸವೇಶ್ವರ ವೈದ್ಯಕೀಯ ಕಾಲೇಜು ಪ್ರಭಾರ ಪ್ರಾಂಶುಪಾಲರಾದ ಡಾ.ರಾಜೇಶ್, ಬಸವೇಶ್ವರ ವೈದ್ಯಕೀಯ ಕಾಲೇಜು ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕರಾದ ಡಾ.ಸುದೀಂದ್ರ, ಎಂ.ಬಿ.ಹನುಮಂತಪ್ಪ, ಮಾರುತಿ ಪ್ರಸಾದ್ ಸೇರಿದಂತೆ ಕ್ಷಯರೋಗದಿಂದ ಮುಕ್ತಿ ಪಡೆದ ಸ್ವಯಂಸೇವಾ ಕಾರ್ಯಕರ್ತರು ಮತ್ತಿತ್ತರರು ಉಪಸ್ಥಿತರಿದ್ದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
