;

ಅಪಘಾತ ತಗ್ಗಿಸಲು ಚಾಲನಾ ತರಬೇತಿ ಕೇಂದ್ರಗಳ ಸ್ಥಾಪನೆ..

ವರದಿ. ಸುರೇಶ್ ಹೊಳಲ್ಕೆರೆ

ಅಪಘಾತ ತಗ್ಗಿಸಲು ಚಾಲನಾ ತರಬೇತಿ ಕೇಂದ್ರಗಳ ಸ್ಥಾಪನೆ

ಹೊಳಲ್ಕೆರೆ
ಪ್ರತೀ ವರ್ಷ ಒಂದೂವರೆ ಲಕ್ಷ ಜನ ರಸ್ತೆ ಅಪಘಾತಗಳಲ್ಲಿ ಮರಣ ಹೊಂದುತ್ತಿದ್ದಾರೆ. ಚಾಲಕರಿಗೆ ಉತ್ತಮ ತರಬೇತಿ ನೀಡುವುದರಿಂದ ಅಪಘಾತ ಪ್ರಮಾಣವನ್ನು ತಗ್ಗಿಸಬಹುದು ಎಂಬ ಉದ್ದೇಶದಿಂದ ರಾಜ್ಯದ ವಿವಿಧ ಕಡೆ ಚಾಲನಾ ತರಬೇತಿ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.


ತಾಲೂಕಿನ ಬಸಾಪುರ ಕ್ರಾಸ್‌ನಲ್ಲಿರುವ ಚಾಲಕರ ತರಬೇತಿ ಕೇಂದ್ರ ಉದ್ಘಾಟನೆ ಹಾಗೂ ಕೆಎಸ್‌ಆರ್‌ಟಿಸಿ ಡಿಪೋ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಅನಿವಾರ್ಯ ಕಾರಣಗಳಿಂದ ಚಾಲಕರ ತರಬೇತಿ ಕೇಂದ್ರ ಉದ್ಘಾಟನೆ ವಿಳಂಬವಾಯಿತು. ಆದರೆ ಈ ದಿನ ತರಬೇತಿ ಕೇಂದ್ರದ ಜೊತೆ ಕೆಎಸ್‌ಆರ್‌ಟಿಸಿ ಡಿಪೋ ಶಂಕುಸ್ಥಾಪನೆ ಮಾಡಿದ್ದು, ಸಂತಸ ತಂದಿದೆ. ದಿನದಿಂದ ದಿನಕ್ಕೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ತರಬೇತಿ ಪಡೆದು, ಲೈಸೆನ್ಸ್ ಹೊಂದಿದ ಚಾಲಕರು ವಾಹನಗಳನ್ನು ಚಲಾಯಿಸುವುದರಿಂದ ಅಪಘಾತಗಳನ್ನು ತಗ್ಗಿಸಬಹುದು. ಈ ಕಾರಣಕ್ಕೆ ರಾಜ್ಯದ ನಾಲ್ಕು ಕಡೆ ಚಾಲಕರ ತರಬೇತಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು.
ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು, ಸಾರಿಗೆ ಇಲಾಖೆ ಸಚಿವನಾದ ಬಳಿಕ ನಷ್ಟದಲ್ಲಿರುವ ಸಾರಿಗೆ ಇಲಾಖೆಯನ್ನು ಮೇಲೆತ್ತಲು ಹಲವು ಯೋಜನೆಗಳನ್ನು ರೂಪಿಸಿಕೊಂಡಿದ್ದೆವು. ಇದೇ ವೇಳೆ ಕೊರೊನಾ ವಕ್ಕರಿಸಿ ಎರಡು ತಿಂಗಳು ಬಸ್ ಓಡಾಟ ಸ್ತಬ್ಧವಾಯಿತು. ಇದರಿಂದ ಸಾರಿಗೆ ಇಲಾಖೆಗೆ ಸಾಕಷ್ಟು ನಷ್ಟ ಉಂಟಾಯಿತು. ಆದರು ಕೂಡ ಸರಕಾರದಿಂದ ೧೯೦೦ ಕೋಟಿ ರೂ. ಹಣ ಪಡೆದು ಸಿಬ್ಬಂದಿಗೆ ಪೂರ್ಣ ವೇತನ ನೀಡಿದೆವು. ಬೇರೆ ಯಾವ ರಾಜ್ಯದಲ್ಲಿಯು ಕೂಡ ಪೂರ್ಣ ವೇತನ ನೀಡಲಿಲ್ಲ. ಇದಾದ ಬಳಿಕ ಸಾರಿಗೆ ಸಿಬ್ಬಂದಿ ಒಂದು ವಾರ ಕೆಲಸಕ್ಕೆ ಬಾರದೆ ಪ್ರತಿಭಟನೆ ನಡೆಸಿದರು. ಇದರಿಂದ ಇಲಾಖೆಗೆ ಬರೋಬ್ಬರಿ ೩ ಸಾವಿರ ಕೋಟಿ ನಷ್ಟ ಉಂಟಾಯಿತು. ಆದರು ಕೂಡ ಅವರ ೧೦ ಬೇಡಿಕೆಗಳಲ್ಲಿ ೯ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ ೮ ಬೇಡಿಕೆಗಳನ್ನು ಈಗಾಗಲೇ ಈಡೇರಿಸಿದ್ದೇವೆ. ೬ನೇ ವೇತನ ಜಾರಿಗೊಳಿಸುವ ಬೇಡಿಕೆಯನ್ನು ಸದ್ಯದಲ್ಲೇ ಈಡೇರಿಸುತ್ತೇವೆ. ಇಷ್ಟಾದರು ಕೂಡ ಏ. ೭ರಂದು ಮತ್ತೆ ಪ್ರತಿಭಟನೆ ಮಾಡುವುದಾಗಿ ನೋಟಿಸ್ ಕಳುಹಿಸಿದ್ದಾರೆ. ಪ್ರತಿಭಟನೆಯಿಂದ ಇಲಾಖೆಗೆ ನಷ್ಟ ಹಾಗೂ ಸಾರ್ವಜನಿಕರಿಂದ ಟೀಕೆಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಒಂದೇ ಕುಟುಂಬದ ಸದಸ್ಯರಂತಿರುವ ನಾವೆಲ್ಲ ಒಟ್ಟಾಗಿ ಕೂತು ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಸಾರಿಗೆ ಇಲಾಖೆ ಸಿಬ್ಬಂದಿಗೆ ಕಿವಿಮಾತು ಹೇಳಿದರು.
೧೮ ಚಾಲಕರಿಗೆ ಬೆಳ್ಳಿ ಪದಕ
ಸತತ ಐದು ವರ್ಷ ಯಾವುದೇ ಅಪಘಾತ ಮಾಡದ ೧೮ ಕೆಎಸ್‌ಆರ್‌ಟಿಸಿ ಬಸ್‌ಗಳ ಚಾಲಕರನ್ನು ಬೆಳ್ಳಿ ಪದಕ ಹಾಗೂ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಲಕ್ಷö್ಮಣ ಸವದಿ, ಇದೇ ರೀತಿ ಅಪಘಾತ ರಹಿತವಾಗಿ ಐದು ವರ್ಷ ಸೇವೆ ಸಲ್ಲಿಸುವ ಚಾಲಕರಿಗೆ ಮುಖ್ಯಮಂತ್ರಿಗಳಿಂದ ಬೆಳ್ಳಿ ಪದಕ, ೧೫ ವರ್ಷಕ್ಕೆ ಬಂಗಾರದ ಪದಕ ನೀಡಲಾಗುವುದು. ಒಂದು ವರ್ಷದ ಅವಧಿಯಲ್ಲಿ ಕಡಿಮೆ ಇಂಧನ ಬಳಸಿ ಹೆಚ್ಚು ಕಿ.ಮೀ. ಬಸ್ ಓಡಿಸುವ ಚಾಲಕರಿಗೆ ೧೦ ಗ್ರಾಂ ತೂಕದ ಬಂಗಾರದ ಪದಕ ನೀಡುವುದಾಗಿ ಹೇಳಿದರು.
ಶಾಸಕ ಎಂ. ಚಂದ್ರಪ್ಪ ಮಾತನಾಡಿ. ಚಾಲಕರ ತರಬೇತಿ ಕೇಂದ್ರ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಶಂಕುಸ್ಥಾಪನೆಯಾಗಿತ್ತು. ತರಬೇತಿ ಕೇಂದ್ರ ಮತ್ತು ಡಿಪೋ ಅಕ್ಕ-ಪಕ್ಕ ಇರಬೇಕು ಎಂಬ ಉದ್ದೇಶದಿಂದ ತರಬೇತಿ ಕೇಂದ್ರದ ಮುಂದೆ ೬ ಎಕ್ಕರೆ ಜಮೀನು ಖರೀದಿಸಿ ಡಿಪೋ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ಜನಪ್ರತಿನಿಧಿಯಾದವನು ಜನರ ಮನಸ್ಸನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ತಾಲೂಕಿಗೆ ಕುಡಿಯುವ ನೀರು ಒದಗಿಸಲು ಮುಖ್ಯಮಂತ್ರಿಗಳಿಂದ ೩೧೯ ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿರುವುದಾಗಿ ತಿಳಿಸಿದರು. ಚಿಕ್ಕಜಾಜೂರು ಸಮೀಪ ಕೋಟೆಹಾಳ್ ಬಳಿ ೨೫೦ ಕೋಟಿ ರೂ. ವೆಚ್ಚದಲ್ಲಿ ೨೨೦ ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಘಟಕ ಸ್ಥಾಪನೆ, ಭದ್ರಾ ಪ್ರಾಜೆಕ್ಟ್ನಲ್ಲಿ ಪೈಪ್‌ಲೈನ್ ಮೂಲಕ ತಾಲೂಕಿನ ೪೦ ಕೆರೆಗಳಿಗೆ ನೀರು ತುಂಬಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ವಿಜಯಕುಮಾರ್, ತಹಶೀಲ್ದಾರ್ ರಮೇಶಾಚಾರಿ, ಚೀಫ್ ಇಂಜಿನಿಯರ್ ಜಗದೀಶ್ ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದೇಶ್, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರಪ್ಪ, ಸಿಡಿಪಿಐ ತಿಪ್ಪಯ್ಯ, ರೈತ ಸಂಘದ ಮುಖಂಡ ಭೂತಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಶೋಕ್, ಉಪಾಧ್ಯಕ್ಷ ರಮೇಶ್, ಕೆ.ಸಿ. ಮಹೇಶ್ವರಪ್ಪ, ಎಂ.ಬಿ. ತಿಪ್ಪೇಸ್ವಾಮಿ, ಲಿಂಗಮೂರ್ತಿ, ರಂಗಮ್ಮ, ಅಂಜಿನಪ್ಪ, ಸುಜಾತ ಧನಂಜಯ್, ರುದ್ರೇಶ್, ನಾಗರಾಜ್ ಇತರರು ಇದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;