ಹೊಸದುರ್ಗ: ತಾಲೂಕಿನ ಹೊನ್ನೆನಹಳ್ಳಿಯಲ್ಲಿ ಇಂದು ನ್ಯಾನೋ ಯೂರಿಯಾ ಬಳಕೆ ಕುರಿತು ಪ್ರಾತ್ಯಕ್ಷಿಕ 2025-26ನೇ ಸಾಲಿನ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಾದ್ಯಂತ ಅಲ್ಲಲ್ಲಿ ಮಳೆಯಾಗುತ್ತಿರುವುದರಿಂದ ರೈತರು ವಿವಿಧ ಕೃಷಿ ಚಟುವಟಿಕೆಗಳಿಗೆ ಮುಂದಾಗಿದ್ದಾರೆ, ಹಾಗೂ ವಿವಿಧ ಬೆಳೆಗಳಿಗೆ ಯೂರಿಯಾ ರಸಗೊಬ್ಬರವನ್ನು ಮೇಲುಗೊಬ್ಬರವಾಗಿ ನೀಡುತ್ತಿದ್ದು, ಹರಳು ರೂಪದ ಯೂರಿಯಾ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ದಿನಾಂಕ:16-08-2025 ರಂದು ಮಾಡದಕೆರೆ ಹೋಬಳಿ ಹೊನ್ನೇನಹಳ್ಳಿ ಗ್ರಾಮದಲ್ಲಿ ನ್ಯಾನೋ ಯೂರಿಯಾ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಇಪ್ಕೋ ಸಂಸ್ಥೆ ವ್ಯವಸ್ಥಾಪಕರಾದ ಶ್ರೀ ಚಿದಂಬರಂರವರು, ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಈಶ ಸಿ ಎಸ್ ಮಾಡದಕೆರೆ ಹೋಬಳಿಯ ಕೃಷಿ ಅಧೀಕಾರಿಗಳಾದ ಶ್ರೀ ವಿಕಾಸ್ ಜಿ ಡಿ ಹಾಗೂ ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗದವರು ಹೊನ್ನೇನಹಳ್ಳಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಈಶ ಸಿ ಎಸ್ ರವರು ಮಾತನಾಡಿ, ಹರಳು ರೂಪದ ಯೂರಿಯಾ ರಸಗೊಬ್ಬರವನ್ನು ಬಳಸುವುದರಿಂದ ಮಾನವನ ಆರೋಗ್ಯದ ಮೇಲೆ ಹೆಚ್ಚಿನ ದುಷ್ಠಪರಿಣಾಮ ಬೀರುತ್ತಿದ್ದು, ಹರಳು ರೂಪದ ಯೂರಿಯಾ ರಸಗೊಬ್ಬರವನ್ನು ಹೆಚ್ಚಾಗಿ ಬಳಸಿದಾಗ ಬೆಳೆದ ತರಕಾರಿ, ಹಣ್ಣುಗಳು ಮತ್ತು ಧಾನ್ಯಗಳಲ್ಲಿ ನೈಟ್ರೇಟ್ ಪದಾರ್ಥಗಳ ಅಂಶ ಹೆಚ್ಚಾಗುತ್ತದೆ. ಇವು ದೀರ್ಘಾವಧಿಯಲ್ಲಿ ಸೇವಿಸಿದರೆ ಮಾನವನಿಗೆ ವಿಷಕಾರಿಯಾಗಿ ಹೊಟ್ಟೆ ನೋವು, ಅಜೀರ್ಣ, ವಾಂತಿ ಮುಂತಾದವು ಸಂಭವಿಸಬಹುದು ಹಾಗೂ ಬೆಳೆಗಳಿಗೆ ಕೀಟಬಾಧೆ ಹಾಗೂ ರೋಗಬಾಧೆ ಹೆಚ್ಚಾಗಿ ಕಂಡು ಬರುತ್ತದೆ ಹಾಗೂ ಅತೀಯಾದ ಹರಳು ರೂಪದ ಯೂರಿಯಾ ರಸಗೊಬ್ಬರದ ಬಳಕೆಯಿಂದ ಮಣ್ಣಿನಲ್ಲಿರುವ PH ಅನ್ನು ಕಡಿಮೆ ಮಾಡಿ ಮಣ್ಣನ್ನು ಆಮ್ಲೀಯವಾಗಿಸುತ್ತದೆ. ಈ ಆಮ್ಲೀಯವು ಮಣ್ಣುಗಳಲ್ಲಿ ಸಸ್ಯಗಳಿಗೆ ಅಗತ್ಯವಿರುವ ಪೋಷಕಾಂಶಗಳ ಲಭ್ಯತೆ ಕಡಿಮೆಯಾಗುತ್ತದೆ. ಹಾಗೂ ಹರಳು ರೂಪದ ಯೂರಿಯಾ ರಸಗೊಬ್ಬರವು ಭೂಮಿಯಿಂದ ಬೋರ್ವೆಲ್ ನೀರಿಗೆ ಹಾಗೂ ನದಿ-ಕೆರೆಗಳಿಗೆ ಸೇರಿದರೆ ಕುಡಿಯುವ ನೀರಿನಲ್ಲಿ ನೈಟ್ರೇಟ್ ಮಟ್ಟ ಹೆಚ್ಚಾಗಬಹುದು ಇದು ಮಾನವ ಆರೋಗ್ಯಕ್ಕೆ ತುಂಬಾ ಹಾನಿಕಾರ. ಹಾಗೂ ಬಹು ಮುಖ್ಯವಾಗಿ ಹರಳು ರೂಪದ ಯೂರಿಯಾ ರಸಗೊಬ್ಬರ ಬಳಸುವುದರಿಂದ ಉತ್ಪಾದನಾ ವೆಚ್ಚ ಜಾಸ್ತಿಯಾಗುತ್ತದೆ. ಆದ್ದರಿಂದ ಹರಳು ರೂಪದ ಯೂರಿಯಾ ರಸಗೊಬ್ಬರದ ಬದಲು ದ್ರವ ರೂಪದ ನ್ಯಾನೋ ಯೂರಿಯಾ ಬಳಸುವುದರಿಂದ ಉತ್ಪಾದನಾ ವೆ್ಚ್ಚ ಕಡಿಮೆಯಾಗುತ್ತದೆ. ಆದ್ದರಿಂದ ನ್ಯಾನೋ ಯೂರಿಯಾವನ್ನು ಪ್ರತಿ ಲೀಟರ್ ನೀರಿಗೆ 3 ರಿಂದ 4 ಎಂ.ಎಲ್ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು ಹಾಗೂ ಮೊಳಕೆಯೊಡದ 30 ರಿಂದ 35 ದಿನಗಳಿಗೆ ಒಮ್ಮೆ ಸಿಂಪಡಣೆ ಹಾಗೂ 45 ರಿಂದ 50 ದಿನಗಳ ಒಳಗೊಮ್ಮೆ ಸಿಂಪಡಣೆ ಮಾಡಬೇಕು ಎಂದು ತಿಳಿಸಿದರು.
ಇಪ್ಕೋ ಸಂಸ್ಥೆ ವ್ಯವಸ್ಥಾಪಕರಾದ ಶ್ರೀ ಚಿದಂಬರಂರವರು,ಮಾತನಾಡಿ ನ್ಯಾನೋ ಯೂರಿಯಾ ಬಳಸುವುದರಿಂದ ಅನೇಕ ಉಪಯೋಗಗಳಿದ್ದು, ನ್ಯಾನೋ ಯೂರಿಯಾ ದ್ರಾವಣವು ಚಿಕ್ಕ ಗಾತ್ರದ ಕಣಗಳನ್ನು ಹೊಂದಿರುವ ಕಾರಣ ನ್ಯಾನೋ ಯೂರಿಯಾ ಬಳಸುವುದರಿಂದ ಬೆಳೆಗೆ ಶೇಕಡಾ 80 ರಷ್ಟು ಉಪಯೋಗವಾಗುತ್ತದೆ. ಇದು ಗಿಡಕ್ಕೆ ಬೇಕಾಗಿರುವ ಸಾರಜನಕವನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸುತ್ತದೆ. ಇದರಿಂದ ಉತ್ತಮ ಗಿಡದ ಬೆಳವಣಿಗೆ ಮತ್ತು ಬೇರುಗಳು ಬೆಳವಣಿಗೆಯಾಗುತ್ತದೆ. ಇದು ಸಸ್ಯಗಳೊಳಗಿನ ಸಾರಜನಕ ಮತ್ತು ಇತರ ಪೋಷಕಾಂಶಗಳನ್ನು ತೆಗೆದುಕೊಳ್ಳುವ ಮತ್ತು ಸಂಯೋಜಿಸುವ ಮಾರ್ಗಗಳನ್ನು ಪ್ರಚೋದಿಸುತ್ತದೆ. ಕಟಾವು ಮಾಡಿದ ಬೆಳೆಗಳಲ್ಲಿ ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಿ, ವೆಚ್ಚವನ್ನು ಕಡಿಮೆ ಮಾಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುತ್ತದೆ. ನ್ಯಾನೋ ಯೂರಿಯಾ ಬಳಕೆಯಿಂದ ಸಾಮಾನ್ಯವಾಗಿ ಹರಳು ರೂಪದ ಯೂರಿಯಾ ಬಳಕೆಯನ್ನು ಶೇಕಡಾ 50 ರಷ್ಟು ಕಡಿಮೆ ಮಾಡಬಹುದು. ರೈತರು ಇದನ್ನು ಸುಲಭವಾಗಿ ಶೇಖರಿಸಿ, ಸಾಗಾಣಿಕೆ ಮಾಡಬಹುದು.ಇದು ಮಣ್ಣು, ಗಾಳಿ ಮತ್ತು ನೀರಿನ ಗುಣಮಟ್ಟವನ್ನು ಕಾಪಾಡುವುದರಲ್ಲಿ ಸಹಕರಿಸುತ್ತದೆ. ಒಂದು ಎಕರೆ ಬೆಳೆಗೆ 500 ಎಂ.ಎಲ್ ದ್ರವ ರೂಪದ ನ್ಯಾನೋ ಯೂರಿಯಾ ಸಾಕಾಗುತ್ತದೆ. 500 ಎಂ ಎಲ್ ನ್ಯಾನೋ ಯೋರಿಯಾದ ಬೆಲೆ ರೂ 225/- ಆಗಿದ್ದು, ರೈತ ಭಾಂಧವರು ಹರಳು ರೂಪದ ಯೂರಿಯಾ ಬದಲು ದ್ರವರೂಪದ ನ್ಯಾನೋ ಯೂರಿಯಾ ಬಳಸಬೇಕೆಂದು ಈ ಮೂಲಕ ತಿಳಿಸಿದರು.
ಹೊನ್ನೆನಹಳ್ಳಿ ಗ್ರಾಮದ ರೈತರಾದ ರವೀಂದ್ರ,ರವರು ಮಾತನಾಡಿ ನ್ಯಾನೋ ಯೂರಿಯವನ್ನು ಡ್ರೋನ್ ಮೂಲಕ ಲಘು ಪೋಷಕಾಂಷಗಳು, ವ್ಯವಸ್ಥಿತ ಕೀಟನಾಶಕಗಳನ್ನು ಒಂದರಲ್ಲೆ ಸಿಂಪಡಣೆ ಮಾಡುವುದರಿಂದ ಕಡಿಮೆ ಖರ್ಚು ಹಾಗೂ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರದೇಶವನ್ನು ಸಿಂಪಡಣೆ ಮಾಡುವುದರಿಂದ ರೈತರಿಗೆ ಉಳಿತಾಯ ಹಾಗೂ ಅನೂಕೂಲ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಹೊಸದುರ್ಗ ಇವರನ್ನು ಸಂರ್ಪಕಿಸಲು ಕೋರಿದೆ..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
