ಸಾಹಿತ್ಯ ಸಾಧನೆಯಲ್ಲಿ ದಾಸಶ್ರೇಷ್ಠ ಕನಕ ದಾಸರು
ನಿನ್ನಂತಾಗ ಬೇಕು ಕನಕ ನಿನ್ನಂತಾಗಬೇಕು
ದಾಸಶ್ರೇಷ್ಠರಲ್ಲಿ ಮಹಾನ್ ಪಾಂಡಿತ್ಯದೊಂದಿಗೆ ಅದ್ಬುತ ಶ್ರೇಷ್ಠ ಸಾಹಿತ್ಯವನ್ನು ನಾಡಿಗೆ ನೀಡಿ ಹೋದ ಅದಮ್ಯ ಚೇತನರು ಕಾಗಿನೆಲೆ ಎನ್ನುವ ಕಾವ್ಯನಾಮದಿಂದ ಪ್ರಸಿದ್ಧಿಯಾದವರು ಶ್ರೀ ಕನಕದಾಸರು
ಕನಕದಾಸ ಜಯಂತಿ ಶುಭಾಶಯ ಕೋರುತ್ತಾ
ಸಾಹಿತ್ಯದ ವಿಚಾರವನ್ನ ಮನನ ಮಾಡಿಕೊಳ್ಳೊಣ.
ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ
ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ
ನೀ ದೇಹದೊಳಗೊ, ನಿನ್ನೊಳು ದೇಹವೂ
ಇಂತಹ ಪರಿಹಾರ್ಥಾ ಹಾಗೂ ಸೂಕ್ಷ್ಮತೆಯನ್ನು ತನ್ನನ್ನು ತಾನು ಅರಿಯುವ ಸಾಧನೆ ಕೀರ್ತನೆಯ ಮೂಲಕ ಗೀಚುತ್ತಾ ಜನಮಾನಸದಲ್ಲಿ ನೆಲೆಯೂರಿರುವವರಾಗಿದ್ದಾರೆ
೧೯೬೦ ರಲ್ಲಿ ತೆರೆಕಂಡ ಭಕ್ತಕನಕದಾಸ ಚಲನಚಿತ್ರ ಕಂಡುಕೊಂಡರೆ ಸಾಕು ಈ ವ್ಯಕ್ತಿಯ ವ್ಯಕ್ತಿತ್ವ, ವಿಚಾರಧಾರೆ,ಸಾಧನೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿಯುತ್ತವೆ.
ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಇಂತಿವೆ:
*ಮೋಹನತರಂಗಿಣಿ*
*ನಳಚರಿತ್ರೆ*
*ರಾಮಧಾನ್ಯ ಚರಿತೆ*
*ಹರಿಭಕ್ತಿಸಾರ*
*ನೃಸಿಂಹಸ್ತವ* (ದೊರೆತಿಲ್ಲ)
ಮೋಹನತರಂಗಿಣಿ
ಮೋಹನತರಂಗಿಣಿಯು 42 ಸಂಧಿಗಳಿಂದ ಕೂಡಿದ್ದು ಸಾಂಗತ್ಯದಲ್ಲಿ ರಚಿತವಾಗಿರುವ 2798 ಪದ್ಯಗಳಿವೆ. ಮೋಹನತರಂಗಿಣಿಯಲ್ಲಿ ಕನಕದಾಸರು ಕೃಷ್ಣಚರಿತ್ರೆಯನ್ನು ಹೇಳುತ್ತಾ ತಮ್ಮ ಅಧಿರಾಜ ಕೃಷ್ಣದೇವರಾಯನನ್ನೇ ಕೃಷ್ಣನಿಗೆ ಹೋಲಿಸುತ್ತಾರೆ. ಅವರ ದ್ವಾರಕಾಪುರಿ ಸ್ವಯಂ ವಿಜಯನಗರವೇ ಆಗಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಮೋಹನತರಂಗಿಣಿ ಅಥವಾ ಕೃಷ್ಣಚರಿತೆ ಎಂಬ ಈ ಕಾವ್ಯದಲ್ಲಿ ಕನಕದಾಸರ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳು ಅಚ್ಚಗನ್ನಡದಲ್ಲಿ ನಿರೂಪಿತವಾಗಿವೆ. ದಣ್ಣಾಯಕನಾಗಿ ಕನಕ ಆಗಾಗ್ಗೆ ರಾಜಧಾನಿ ವಿಜಯನಗರಕ್ಕೆ ಹೋಗಬೇಕಾಗಿತ್ತು. ವಿಜಯನಗರ ಸಾಮ್ರಾಜ್ಯದ ರಾಜವೈಭವ, ರಾಜಸಭೆ, ರಾಜಪರಿವಾರದ ಸರಸ ಸುಮ್ಮಾನ, ಶೃಂಗಾರ ಜೀವನ, ಜಲಕ್ರೀಡೆ, ಓಕುಳಿಯಾಟ, ನವರಾತ್ರಿ, ವಿಜಯನಗರದ ಪುರರಚನೆ, ಉದ್ಯಾನವನ, ಪ್ರಜೆಗಳ ವೇಷಭೂಷಣ, ರಾಜ್ಯದ ಯುದ್ಧ ವಿಧಾನ ಇತ್ಯಾದಿಗಳು ಅವನ ಮನಸೂರೆಗೊಂಡಿದ್ದವು. ಕವಿ ಮನಸಿನ ಕನಕ ತನ್ನ ಅನುಭವವನ್ನೆಲ್ಲ ಬರಹ ರೂಪಕ್ಕೆ ತಂದ. ಆ ಬರಹವೇ ಇಂದು ನಮಗೆ ಲಭ್ಯವಿರುವ ಮೋಹನತರಂಗಿಣಿ. ಕನಕನ ಯೌವನ ಕಾಲದಲ್ಲಿ ರಚಿತವಾದ ತರಂಗಿಣಿಯ ಒಡಲಲ್ಲಿ ಯುದ್ಧದ ವರ್ಣನೆಗಳು ಹೆಚ್ಚೆನ್ನಬಹುದು. ಏಕೆಂದರೆ ಕನಕ ಸ್ವತಃ ಕಲಿಯಾಗಿದ್ದವನೇ ತಾನೇ? ಹಂಪಿಯ ಪತನವನ್ನು (೧೫೬೫) ಸಹ ಕನಕ ನೋಡಿದ್ದರು. ಶಂಬರಾಸುರ ವಧೆ, ಬಾಣಾಸುರ ವಧೆ, ಹರಿಹರ ಯುದ್ಧ ಹೀಗೆ ವೀರರಸ, ರೌದ್ರರಸ ಕಾವ್ಯದಲ್ಲಿ ಮೇಳೈಸಿವೆ.
ಸೋಮಸೂರಿಯ ವೀಥಿಯ ಇಕ್ಕೆಗಳಲಿ
ಹೇಮ ನಿರ್ಮಿತ ಸೌಧದೋಳಿ
ರಮಣೀಯತೆವೆತ್ತ ಕಳಸದಂಗಡಿಯಿರ್ದುಂ
ವಾ ಮಹಾ ದ್ವಾರಕಾಪುರದೇ
ಓರಂತೆ ಮರಕಾಲರು ಹಡಗಿನ ವ್ಯವ
ಹಾರದಿ ಗಳಿಸಿದ ಹಣವ
ಭಾರ ಸಂಖ್ಯೆಯಲಿ ತೂಗುವರು ಬೇಡಿದರೆ ಕು
ಬೇರಂಗೆ ಕಡವ ಕೊಡುವರು
ನಳಚರಿತ್ರೆ
ನಳಚರಿತ್ರೆಯು 9 ಸಂಧಿಗಳಿಂದ ಕೂಡಿದ್ದು ಭಾಮಿನೀ ಷಟ್ಪದಿಯಲ್ಲಿ ರಚನೆಯಾಗಿರುವ 481 ಪದ್ಯಗಳಿವೆ. ಮಹಾಭಾರತದಂತಹ ರಾಷ್ಟ್ರ ಮಹಾಕಾವ್ಯಕ್ಕೆ ಪ್ರೇರಣೆಯಾದ ಉಜ್ವಲ ಆರ್ಯೇತರ ಪ್ರೇಮಕಥೆ ನಳ ದಮಯಂತಿಯರ ಕಥೆ. ೧೩ನೇ ಶತಮಾನದ ನಳ ಚಂಪೂವಿಗಿಂತ ಈ ನಳಚರಿತ್ರೆ ಹೃದಯಸ್ಪರ್ಶಿಯಾದ ಚಿತ್ರಣಗಳಿಂದ ಚಿರಂತನ ಪ್ರೇಮದ ಕಥನದಿಂದ ಅಶ್ಲೀಲತೆಯ ಸೋಂಕಿಲ್ಲದ ಶೃಂಗಾರ ವರ್ಣನೆಯಿಂದ ಶೋಭಿಸುತ್ತಾ ಇಂದಿಗೂ ಅತ್ಯಂತ ಜನಪ್ರಿಯವಾಗಿದೆ. ನಳ ಮತ್ತು ದಮಯಂತಿಯರು ಹಂಸದ ಮೂಲಕ ಪ್ರೇಮ ಸಂದೇಶಗಳನ್ನು ಕಳಿಸುವುದು, ಅವರ ಸಂತೋಷ-ಆಮೋದ-ಪ್ರವೋದ ನಂತರದ ಕಷ್ಟಕಾಲ ಹಾಗೂ ಅದರ ನಂತರದ ಪುನರ್ಮಿಲನ ಹೀಗೆ ಎಲ್ಲರಿಗೂ ಈ ಕಥೆ ಚಿರಪರಿಚಿತ. ಕಷ್ಟ ಕಾಲದಲ್ಲಿ ಕಾಡಿನಲ್ಲಿ ಮಲಗಿರುವಾಗ ದಮಯಂತಿಯನ್ನು ಕುರಿತು ನಳ: ಲಲಿತ ಹೇಮದ ತೂಗಮಂಚದ ಹೊಳೆವ ಮೇಲ್ವಾಸಿನಲಿ ಮಲಗು ಲಲನೆಗೀ ವಿಧಿ ಬಂದುದೇ ಹಾ! ಎನುತ ಬಿಸುಸುಯ್ದ (೫-೨) ಹೀಗೆ ನಳಚರಿತ್ರೆಯಲ್ಲಿ ಕರುಣರಸಕ್ಕೇ ಪ್ರಾಧಾನ್ಯತೆ ಇದೆ. ಇನ್ನು ನಳಚರಿತ್ರೆಯಲ್ಲಿನ ಶೃಂಗಾರರಸದ ಬಗ್ಗೆ ಹೇಳುವುದಾದರೆ ಅದು ಪ್ರೌಢಶೃಂಗಾರ ಎನ್ನಬಹುದೇನೋ? ಅಲ್ಲಿ ಮೋಹನ ತರಂಗಿಣಿಯಲ್ಲಿ ಅದು ಕಣ್ಣು ಕುಕ್ಕುವ ಶೃಂಗಾರ, ಆದರೂ ಅದು ಹುಳಿಮಾವಿನಂತೆ ಹಂಚಿ ತಿನ್ನಲಾಗದು. ಮುಕ್ತವಾಗಿ ಚರ್ಚಿಸಲಾಗದು. ನಳಚರಿತ್ರೆಯ ಶೃಂಗಾರವಾದರೆ ಮಲ್ಲಿಗೆ ಮಾವಿನ ಹಾಗೆ, ಮಧುರ ರುಚಿ, ಮಧುರ ಸುವಾಸನೆ.
ರಾಮಧಾನ್ಯಚರಿತೆ
ರಾಮಧಾನ್ಯಚರಿತ್ರೆ ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿರುವ 156 ಪದ್ಯಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ಧನಿಕರ ಆಹಾರಧಾನ್ಯ ಅಕ್ಕಿ ಹಾಗೂ ಕೆಳವರ್ಗದವರ ಆಹಾರಧಾನ್ಯವೆಂದು ಪರಿಭಾವಿಸಲಾಗಿರುವ ರಾಗಿಯ ನಡುವಿನ ಸಂಭಾಷಣೆಯ ಮೂಲಕ ರಾಗಿ ಹೇಗೆ ತನ್ನ ಔನ್ನತ್ಯವನ್ನು ಸಾಬೀತು ಪಡಿಸುತ್ತದೆ ಹಾಗೂ ರಾಮಧಾನ್ಯವೆಂಬ ಹೆಸರು ಪಡೆಯುತ್ತದೆ ಎಂಬುದನ್ನು ನಿರೂಪಿಸಲಾಗಿದೆ. ಇದರಲ್ಲಿ ಯುದ್ಧದ ಸನ್ನಿವೇಶ ಇಲ್ಲವಾದರೂ ವೀರರಸದ ಮಾತುಗಳಿಗೇನೂ ಕೊರತೆಯಿಲ್ಲ. ನುಡಿಗೆ ಹೇಸದ ಭಂಡ ನಿನ್ನೊಳು ಕೊಡುವರೇ ಮಾರುತ್ತರವ ಕಡುಜಡವಲಾ, ನಿನ್ನೊಡನೆ ಮಾತೇಕೆ? ಹೆಣದ ಬಾಯಿಗೆ ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕವಲಾ ಎಲವೂ ನೀನೆಲ್ಲಿಹೆಯೋ ನಿನ್ನಯ ಬಳಗವದು.. ಮುಂತಾದ ಮಾತುಗಳಲ್ಲಿ ಕನಕದಾಸರು ರಾಗಿಯ ನೆಪ ಹಿಡಿದು ತಮ್ಮದೇ ಆತ್ಮಕಥೆಯನ್ನು ಹೇಳುತ್ತಿರುವಂತೆ ತೋರುತ್ತದೆ. ಸಮಾಜದ ಮೇಲ್ವರ್ಗದವರ ಆಹಾರ ಧಾನ್ಯ ಭತ್ತ ಹಾಗೂ ಕೆಳವರ್ಗದವರ ಆಹಾರ ಧಾನ್ಯ ರಾಗಿಯ ನಡುವಿನ ಸಂಭಾಷಣೆಯನ್ನು ನಿರೂಪಿಸುವ ಕನಕದಾಸರ ಸೃಜನಶೀಲತೆ ಅತಿಶಯ. ಒಂದು ರೀತಿಯಲ್ಲಿ ರಾಮಧಾನ್ಯಚರಿತ್ರೆ ಇಂದಿನ ಬಂಡಾಯ ಸಾಹಿತ್ಯದ ಬೇರು, ನವ್ಯೋತ್ತರದ ಸೂರು ಎಂದರೆ ಬಹುಶ: ತಪ್ಪಾಗಲಾರದು.
ಹರಿಭಕ್ತಿಸಾರ
ಹರಿಭಕ್ತಿಸಾರ ೧೧೦ ಭಕ್ತಿಪದ್ಯಗಳಿರುವ ಗ್ರಂಥ. ಭಾಮಿನೀ ಷಟ್ಪದಿಯಲ್ಲಿ ಸರಳಗನ್ನಡದಲ್ಲಿ ರಚಿತವಾಗಿರುವ ಈ ಗ್ರಂಥ ಕನ್ನಡದ ಭಗವದ್ಗೀತೆಯಂತಿದೆ. ಒಟ್ಟಿನಲ್ಲಿ ಕನಕದಾಸರ ಎಲ್ಲ ಕಾವ್ಯಗಳೂ ಕವಿ ಸಹಜವಾದ ವರ್ಣನೆಗಳಿಂದಲೂ ಉಪಮೆಗಳಿಂದಲೂ ಶ್ರೀಮಂತವಾಗಿದ್ದು ಅವರ ಕಾವ್ಯ ಕೌಶಲಕ್ಕೆ ಎಲ್ಲರೂ ಬೆರಗಾಗುವಂತೆ ಮಾಡಿದೆಯೆಂದರೆ ಉತ್ಪ್ರೇಕ್ಷೆಯಲ್ಲ.
ಇವರ ಅನೇಕ ಬರಹಗಳು ಸಂಸ್ಕೃತ , ಇಂಗ್ಲಿಷ್, ತೆಲುಗು ಭಾಷೆಗಳಲ್ಲಿ ತರ್ಜುಮೆ ಗೊಂಡಿರುತ್ತವೆ
ತನ್ನದೇ ಆದ ವೈಚಾರಿಕತೆಯನನು ಬಿಂಬಿಸುವಲ್ಲಿ ಸಾಹಿತ್ಯ ಮೂಲಕ ಪರಿಶ್ರಮ ಪಟ್ಟವರು ಈ ಚೇತನರ ಹಾದಿ ಮಾದರಿಯಾಗಲಿ ಎನ್ನುತ್ತಾ ಅತ್ಯಂತ ಶ್ರದ್ಧಾಪೂರ್ವಕವಾಗಿ ನಮನಸಲ್ಲಿಸುತ್ತೆನೆ.
ಧನ್ಯವಾದಗಳೊಂದಿಗೆ
-ಕಾರ್ತಿಕ ಆಚಾರ್ಯ. ಎಂ.ಕಲ್ಲಹಳ್ಳಿ
ಯುವಸಾಹಿತಿಗಳು.ಸಂಘಟಕರು ವಿಜಯನಗರ..

ವರದಿ. ಪ್ರಕಾಶ್. ಇಟ್ಟಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
