;

ಪೆರಿಯಾರ್ ಮತ್ತು ಪ್ರಸ್ತುತತೆ..!!

ಪೆರಿಯಾರ್ ಮತ್ತು ಪ್ರಸ್ತುತತೆ..!!

ಇಡೀ ದಕ್ಷಿಣ ಭಾರತವೇ ಹಿಂದಿ ಹೇರಿಕೆಯ ವಿರುದ್ಧ ನಿಂತಿದೆ. ಮಹಾರಾಷ್ಟ್ರದಿಂದ ಕೇರಳದವರೆಗೆ,ಕರ್ನಾಟಕದಿಂದ ಬಂಗಾಳದವರೆಗೆ .ಬೆಂಗಾಲಿ, ಮರಾಠಿ, ಮಲೆಯಾಳಂ,ಕನ್ನಡ ,ತೆಲುಗು ಭಾಷಿಕರು ಇದು ತಮ್ಮ ಅಸ್ಮಿತೆಗಾದ ಅಘಾತವೆಂದೇ ಪರಿಗಣಿಸಿದ್ದಾರೆ. ಕೇಂದ್ರದ ವಿರುದ್ಧ ಟೀಕಾಸ್ತ್ರಾ ನಡೆಸುತ್ತಿದ್ದಾರೆ‌.ಅದರಲ್ಲೂ ತಮಿಳುನಾಡಿನ ಜನತೆ ಹಿಂದಿ ಹೇರಿಕೆ ಅಂದಾಕ್ಷಣ ಕೆರಳಿ ಕೆಂಡವಾಗುತ್ತಾರೆ ಅದಕ್ಕೆ ಕಾರಣ ರಾಮಸ್ವಾಮಿ ಪೆರಿಯಾರ್.

ವರ್ತಮಾನದ ರಾಜಕಾರಣ, ಎಲ್ಲಕ್ಕೂ ಧರ್ಮ, ಭಾಷೆ,ದೇಶಪ್ರೇಮ,ರಾಷ್ಟ್ರೀಯತೆಯನ್ನ ಎಳೆದು ತರುತ್ತಿದೆ.ಹಿಂದೂಧರ್ಮದೊಂದಿಗೆ ಹಿಂದಿ ಭಾಷೆಯನ್ನು ಬೆರೆಸುತ್ತಿದೆ. ದೇಶದ ಜನತೆಯನ್ನ ದಿಕ್ಕು ತಪ್ಪಿಸುತ್ತಿದೆ. ಇಂತಹ ಹೊತ್ತಲ್ಲಿ ಸ್ವಾಭಿಮಾನ,ಸ್ವಂತಿಕೆ,ಹೋರಾಟ,ವಿಚಾರ ಕ್ರಾಂತಿ ಎನ್ನುವ ಬಂಡಾಯದ ಗುಣಗಳು ಸಮಾಧಿಯಾಗುತ್ತಿರುವ ಸಂದರ್ಭದಲ್ಲಿ ಪೆರಿಯಾರ್ ಮತ್ತೆ ನೆನಪಾಗುತ್ತಾರೆ.ಪ್ರಸ್ತುತ ವಾಗುತ್ತಾರೆ. ಇಂದು ಅವರ ಜನ್ಮದಿನದ ನೆನಪಿನಲ್ಲಿ ಅವರ ವಿಚಾರಗಳನ್ನ ನೆನೆದು ಎಚ್ಚರಾಗೊಣ!!

ತಮಿಳರ ಸ್ವಾಭಿಮಾನದ ಪ್ರತೀಕವಾದ ದ್ರಾವಿಡ ಚಳುವಳಿಯನ್ನು ಕಟ್ಟಿದ ಮೊದಲ ನೇತಾರ ಪೆರಿಯಾರ್ ರಾಮಸ್ವಾಮಿಯವರು ಸ್ವತಂತ್ರ ಪೂರ್ವ ಮತ್ತು ಸ್ವತಂತ್ರ ನಂತರದ ಕಾಲಘಟ್ಟದಲ್ಲಿ ಬಂದ ಮಹಾನ್ ಸಮಾಜ ಸುಧಾರಕ. ಇನ್ನು ಪೆರಿಯಾರ್ ಎಂಬ ಸ್ಪೂರ್ತಿಯ ಚಿಲುಮೆ ನಮ್ಮನ್ನಗಲಿ ಐವತ್ತು ವರ್ಷಗಳಾದರೂ ಸಹ ಆತ ಹಚ್ಚಿಹೋದ ಕ್ರಾಂತಿಯ ದೀಪವಿನ್ನೂ ದ್ರಾವಿಡ ನಾಡಿನಲ್ಲಿ ಬೆಳಗುತ್ತಲೇ ಇದೆ.

ವೈದಿಕಶಾಹಿ ಬ್ರಾಹ್ಮಣರ ಶೋಷಣೆಯ ವಿರುದ್ಧ ಮೊದಲಾದ ಪೆರಿಯಾರ್ ಅವರ ದನಿಯು ನಿಧಾನಕ್ಕೆ ಸಮಾಜದಲ್ಲಿ ವೈಜ್ಞಾನಿಕ, ವೈಚಾರಿಕ ನೆಲೆಯ ವಿಚಾರಗಳ ಮೂಲಕ ಸಮಾಜದ ಮೌಢ್ಯಗಳನ್ನು ತೊಡೆಯುತ್ತ ಸಾಗಿತು. ದ್ರಾವಿಡರ ರಾಜಕೀಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಲುವಾಗಿ ಸಾಕಷ್ಟು ಶ್ರಮಿಸಿದ ಪೆರಿಯಾರ್ ಅವರು 1939 ರಲ್ಲಿ ನ್ಯಾಯ ಪಕ್ಷದ ಮುಖ್ಯಸ್ಥರಾದರು. 1944 ರಲ್ಲಿ ಈ ಪಕ್ಷವನ್ನು ದ್ರಾವಿಡ ಕಳಗಂ ಎಂಬುದಾಗಿ ಹೆಸರನ್ನು ಬದಲಿಸಲಾಯಿತು. ಈ ಪಕ್ಷವು ಮುಂದೆ ದ್ರಾವಿಡ ಮುನ್ನೇತ್ರ ಕಳಗಂ ಎಂದು ಪ್ರತ್ಯೇಕಗೊಂಡರೂ ಸಹ ದ್ರಾವಿಡರ ಮೂಲ ಆಶಯಗಳು ಅಲ್ಲಿ ಜಾಗೃತವಾಗೇ ಇದ್ದವು.

ಘನತೆಯುತ ಜೀವನ, ಸಮಾನತೆ, ಮಹಿಳಾ ಹಕ್ಕುಗಳು ಮತ್ತು ಜಾತ್ಯಾತೀತ ತತ್ವಗಳನ್ನು ಪ್ರತಿಪಾದಿಸುತ್ತಿದ್ದ ಪೆರಿಯಾರ್ ಅವರು ಶಿಕ್ಷಣವೇ ವಿಮೋಚನೆಯ ಮಾರ್ಗವೆಂದು ಬಲವಾಗಿ ನಂಬಿದ್ದರು. ಅಂಬೇಡ್ಕರ್ ಆದಿಯಾಗಿ ಬಹಳಷ್ಟು ಮಂದಿ ಸಾಮಾಜಿಕ ಸುಧಾರಕರು ನಂಬಿದ್ದ ಈ ಶಿಕ್ಷಣದ ತತ್ವವು ಇಂದಿಗೂ ಸಹ ಸಮಾಜವನ್ನು ವಿಮೋಚನೆಯೆಡೆಗೆ ಕೊಂಡೊಯ್ಯುವ ಜ್ವಲಂತ ಉದಾಹರಣೆಯಾಗಿದೆ.

ರಾಮಸ್ವಾಮಿಯವರು 1919 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗೆ ಸೇರ್ಪಡೆಗೊಂಡು ಭಾರತದ ವಿಮೋಚನೆಯ ಚಳುವಳಿಗಳಿಗಾಗಿ ಹೋರಾಟ ನಡೆಸಿದರು. ಈ ಪೈಕಿ ಖಾದಿ ನೇಯ್ಗೆ ಚಳುವಳಿ, ಅಸ್ಪೃಶ್ಯತೆ ವಿರುದ್ಧದ ಹೋರಾಟ, ವಿದೇಶಿ ವಸ್ತುಗಳ ಬಾಯ್ಕಾಟ್ ಚಳುವಳಿ, ಅಹಸಕಾರ ಚಳುವಳಿಯಲ್ಲಿ ಭಾಗವಹಿಸಿದ್ದ ಇವರು 1922 ರಲ್ಲಿ ಮದ್ರಾಸ್ ಪ್ರಾಂತ್ಯದ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಅದರೆ 1925 ರಲ್ಲಿ ಕಾಂಗ್ರೆಸ್ ಒಂದು ಬ್ರಾಹ್ಮಣರ ಪಕ್ಷವೆಂದು ಪಕ್ಷಕ್ಕೆ ರಾಜೀನಾಮೆ ನೀಡಿ ತಮ್ಮದೇ ಸಿದ್ಧಾಂತಗಳ ಆಧಾರದ ಮೇಲೆ ಪಕ್ಷವನ್ನು ಕಟ್ಟಿದರು.

1923 ರಲ್ಲಿ ಕೇರಳದ ವಿವಿಧ ಸಮುದಾಯಗಳು ದೇವಸ್ಥಾನದೊಳಗೆ ಹೋಗಲು ಅನುವು ಮಾಡಿಕೊಡದ ಬಗ್ಗೆ ಕಾಂಗ್ರೆಸ್ ನಾಯಕರು ದೊಡ್ಡ ಮಟ್ಟದಲ್ಲಿ ದನಿಯೆತ್ತಿದ್ದ ಕಾರಣ ಗಾಂಧಿಯಾದಿಯಾಗಿ ಬಹಳಷ್ಟು ಮಂದಿ ಸ್ಥಳೀಯ ನೇತಾರರು, ಈ ಚಳುವಳಿಗೆ ದೊಡ್ಡ ಮಟ್ಟದಲ್ಲಿ ಬೆಂಬಲ ನೀಡಿದರು. ಈ ಪೈಕಿ ನಾರಾಯಣ ಗುರುಗಳು ಮತ್ತು ಪೆರಿಯಾರ್ ಅವರೂ ಸಹ ದೊಡ್ಡ ಮಟ್ಟದಲ್ಲಿ ಈ ಅಸ್ಪೃಶ್ಯತೆ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಅಂದಿನ ಕೆಟ್ಟ ಪ್ರಭುತ್ವದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಪೆರಿಯಾರ್ ಅವರು ದೊಡ್ಡ ಪ್ರಮಾಣದಲ್ಲಿ ಅಸ್ಪೃಶ್ಯತೆ, ಅಸಮಾನತೆ ಹಾಗೂ ಸಮಾಜದ ಇನ್ನಿತರೆ ಪಿಡುಗುಗಳ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದರು.

1952 ರಲ್ಲಿ ವ್ಯಕ್ತಿ ಗೌರವ ಚಳುವಳಿಯ ಮೂಲಕ ಪ್ರತಿಯೊಬ್ಬ ವ್ಯಕ್ತಿಯ ಘನತೆಯೂ ಅವನ ಹಕ್ಕಾಗಿದ್ದು ಅದನ್ನು ನಾವು ಗೌರವಿಸಬೇಕೆಂದು ಅವರು ನಂಬಿದ್ದು ಇದಕ್ಕೆ ತೊಡಕಾಗಿದ್ದ ಮೌಢ್ಯತೆಗಳ ವಿರುದ್ಧ ಹೋರಾಟ ನಡೆಸಿದ್ದರು.

ಹಿಂದಿ ಹೇರಿಕೆಗೆ ವಿರೋಧ

1937 ರಲ್ಲಿ ಚಕ್ರವರ್ತಿ ರಾಜಗೋಪಾಲಚಾರಿ ಅವರು ಮದ್ರಾಸ್ ಪ್ರಾಂತ್ಯದಲ್ಲಿ ಹಿಂದಿಯನ್ನು ಕಡ್ಡಾಯ ಭಾಷೆಯಾಗಿ ಜಾರಿಗೊಳಿಸಿದರು. ಈ ಬೆಳವಣಿಗೆಯ ಅಪಾಯವನ್ನು ಅರಿತ ಪೆರಿಯಾರ್ ಅವರು ಅದೇ ವರ್ಷ ಎ.ಟಿ.ಪನ್ನೀರ್ ಸೆಲ್ವಂ ಅವರೊಂದಿಗೆ ಸೇರಿ “ತಮಿಳು ನಾಡು ತಮಿಳರದ್ದು” ಎಂಬ ಘೋಷ ವಾಕ್ಯದಡಿ ದೊಡ್ಡ ಮಟ್ಟದ ಪ್ರತಿರೋಧವನ್ನು ಒಡ್ಡಿದರು.

ಹಿಂದಿಯು ತಮಿಳನ್ನು ಶೋಷಣೆಯ ಭಾಷೆಯಾಗಿ ನೋಡುತ್ತದೆ ಎಂಬ ವಿಚಾರವನ್ನು ಪ್ರತಿಪಾದಿಸಿದ ಪೆರಿಯಾರ್ ಅವರು ಪ್ರಾದೇಶಿಕ ಶೋಷಣೆಯನ್ನು ಗಂಭೀರವಾಗಿ ಟೀಕಿಸಿದರು. ಇವರ ಹೋರಾಟದ ಫಲವಾಗಿಯೇ 1938 ರಲ್ಲಿ ಪ್ರಭುತ್ವವು ತಮ್ಮ ಹಿಂದಿ ಕಡ್ಡಾಯ ಭಾಷೆ ಆದೇಶವನ್ನು ಹಿಂದಕ್ಕೆ ತೆಗೆದುಕೊಂಡಿತು.
ಸದಾ ಶೋಷಿತರ ವಿಮೋಚನೆಗಾಗಿ ಶ್ರಮಿಸಿದ್ದ ಪೆರಿಯಾರ್ ಅವರ ಜಯಂತಿಯಾದ ಇಂದು ಅವರ ನೆಲ, ಜಲ ಮತ್ತು ಭಾಷಾ ಪ್ರೇಮದ ಕಾಳಜಿಯನ್ನು ಎಲ್ಲೆಡೆ ಪಸರಿಸುವುದು ನಮ್ಮ ಕರ್ತವ್ಯವಾಗಿದೆ.

ಅಂಕಣ: ಅಜಯ.ಚ
ಹುಗಲೂರು
ಹೂವಿನ ಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;