;

ಐತಿಹಾಸಿಕ ಹಾಗೂ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಕ್ಯಾತೇದೇವರ ವಿಶೇಷ ಆಚರಣೆ…!!!

ಚಳ್ಳಕೆರೆ.
ಐತಿಹಾಸಿಕ ಹಾಗೂ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಕ್ಯಾತೇದೇವರ ಕಳ್ಳೆ ಮುಳ್ಳಿನ ಗುಡಿಯ ಮೇಲಿನ ಕಳಸ ಕೀಳುವ ಜಾತ್ರೆ ಸಡಗರ ಸಂಭ್ರಮ ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಸಂಜೆ ೪-೩೦ ರ ಸುಮಾರಿನಲ್ಲಿ ನಡೆಯಿತು.
ಚನ್ನಮ್ಮ ನಾಗತಿಹಳ್ಳೀ ಗ್ರಾಮದ ಕ್ಯಾತೇ ದೇವರು ಪರ‍್ಲಹಳ್ಳಿ ಗ್ರಾಮದ ವಸಲು ದಿನ್ನೆಯಲ್ಲಿ ಒಂದು ವಾರಗಳಿಂದ ವಿವಿಧ ಪೂಜಾ ಕಾರ್ಯಕ್ರಮದೊಂದಿಗೆ ಬಾರೆಕಳ್ಳೆ ತಂದು ಗುಡಿ ನಿರ್ಮಿಸಿರುತ್ತಾರೆ. ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಳ್ಳೆ ಮುಳ್ಳಿನ ದೇವರ ಗುಡಿಯನ್ನ ಗೊಲ್ಲಸಮುದಾಯದ ಭಕ್ತರ ನಡೆ ಮುಡಿಯಿಂದ ದೇವರ ಕಳಸ ಕೀಳಲು ತಾ ಮುಂದು ನಾಮುಂದು ಎಂದು ಏರಿ ಚೌಳೂರು ಗ್ರಾಮದ ರವಿ ಮೊದಲನೆ ಕಳಸ ಕಿತ್ತು ಸಂಭ್ರಮದಲ್ಲಿ ಗುಡಿಯ ಕೆಳೆಗಿ ಇಳಿದಾಗ ಶಾಸಕ ಟಿ.ರಘುಮೂರ್ತಿ ಮಾಲಾರ್ಪಣೆ ಹಾಕಿ ಸನ್ಮಾನಿಸಿದರು.
ಕಾಡುಗೊಲ್ಲ ಆರಾಧ್ಯ ದೈವವಾದ ಕ್ಯಾತಪ್ಪನ ಪರಿಷೆ ಯಾವುದೇ ಜಾತಿ, ಧರ್ಮ ಬೇಧವಿಲ್ಲದೆ ಇಂದಿಗೂ ಭಾವೈಕ್ಯ ಹಾಗೂ ಸಾಮಾಜಿಕ ಸಾಮರಸ್ಯದ ದ್ಯೂತಕವಾಗಿದೆ. ಈ ಪರಿಷೆಗೆ ಆಂದ್ರಪ್ರದೇಶದ ಅನಂತಪುರ, ರಾಯದುರ್ಗ, ಕಲ್ಯಾಣದುರ್ಗ, ಬಳ್ಳಾರಿ, ಹಾವೇರಿ, ದಾರವಾಡ, ಶಿವಮೊಗ್ಗ, ಮೈಸೂರು, ಬೆಂಗಳೂರು, ಕೋಲಾರ, ತುಮಕೂರು ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ವಿಶಿಷ್ಠಿ ಜಾತ್ರೆಯ ಆಚರಣೆಯನ್ನು ಕಣ್ಣು ತುಂಬಿಸಿಕೊAಡರು.

ವಿಶಿಷ್ಟ ಆಚರಣೆ :
-ಕಾಡುಗೊಲ್ಲ ಬುಡಕಟ್ಟಿನ ಹದಿಮೂರು ಗುಡಿಕಟ್ಟಿನವರು ನವಣೆ ಮತ್ತು ಹುರುಳಿ ಭತ್ತ(ವ್ರತ) ಹಾಗೂ ಮನೆ ಶುದ್ಧೀಕರಿಸಿ ಕೊಳ್ಳುವುದರರೊಂದಿಗೆ ಆಚರಣೆಗಳು ಆರಂಭವಾಗುತ್ತವೆ. ಜಾತ್ರೆ ಮುಗಿಯುವವರೆಗೆ ಹುರುಳಿ, ನವಣೆ ಬಸಳಸುವುದಾಗಲಿ, ಮುಟ್ಟುವುದಾಗಲಿ ಮತ್ತು ನವಣೆ -ಹರುಳಿ ಬೆಳೆದ ಹೊಲದಲ್ಲಿ ಹೋಗದಂತೆ ಕಟ್ಟುನಿಟ್ಟಿನ ವ್ರತವನ್ನು ಇಂದಿಗೂ ಪಾಲಿಸುತ್ತಾರೆ.

ಐತಿಹ್ಯ:
ಕ್ಯಾತಪ್ಪದೇವರು ಕಾಡುಗೊಲ್ಲರಿಗೆ ಒಲಿಯುವ ಮೊದಲು ರೆಡ್ಡಿ ಜನಾಂಗದ ಹೇಮಾರೆಡ್ಡಿ ಮತ್ತು ಭೀಮಾರೆಡ್ಡಿ ರವರಿಗೆ ಒಲಿದಿತ್ತು. ಇದರಿಂದ ರೆಡ್ಡಿಗಳಿಗೆ ಶ್ರೀಮಂತಿಕೆ ಬಂತು. ಆಗ ಅಲಕ್ಷö್ಯದಿಂದ ದೇವರನ್ನು ಹುರುಳಿ-ನವಣೆ ಕಣಜದಲ್ಲಿ ಹಾಕಿ ಮುಚ್ಚಿದರು. ರೆಡ್ಡಿಗಳ ನಿರ್ಲಕ್ಷö್ಯಕ್ಕೆ ಬೇಸತ್ತ ಕ್ಯಾತೇದೇವರು ಕಾಡಿಗೊಲ್ಲರ ದನಗಾಹಿ ಬೊಮ್ಮಲಿಂಗನಿಗೆ ಒಲಿದು ಬಂದು ಗೊಲ್ಲರ ತಾಣದಲ್ಲಿ ನೆಲೆ ನಿಲ್ಲುತ್ತಾನೆ. ಗೊಲ್ಲರು ಇಂದಿಗೂ ಜಾತ್ರೆ ನಡೆಯುವ ಸಂದರ್ಭದಲ್ಲಿ ಹರುಳಿ-ನವಣೆಯ ಕಟ್ಟು ನಿಟ್ಟಿನ ವ್ರತವನ್ನು ಆಚರಿಸುತ್ತಾರೆ. ಕಾರೆ, ಬಾರೆ ಮುಳ್ಳಿನ ಗಿಡಗಳು ಹಾಗೂ ಹತ್ತಿ, ಕಳ್ಳಿ, ಬೇವಿನ (ದೇವರ) ಮರವನ್ನು ಕಡಿದು ನೆಲಕ್ಕೆ ಮುಟ್ಟಿಸದಂತೆ ಜಾತ್ರೆ ನಡೆಯುವ ಸ್ಥಳಕ್ಕೆ ಸಾಗಿಸುತ್ತಾರೆ. ಕ್ಯಾತಪ್ಪದೇವರ ಮೂಲ ನೆಲೆಯಾದ ಚನ್ನಮ್ಮನಾಗತಿಹಳ್ಳಿ ಗ್ರಾಮದ ದೇವರ ಗುಡಿ ಸುತ್ತಲೂ ಕಳ್ಳೆಯ ಬೇಲಿ ಹಾಕುತ್ತಾರೆ.

ಗುಡಿ ನಿರ್ಮಾಣ:-
ಒಕ್ಕಲು ಮಕ್ಕಳು ಸಜ್ಜೆರೊಟ್ಟಿ, ಶೇಂಗಾ ಚಟ್ನಿ, ಅನ್ನ ಮೊಸರಿನ ಬುತ್ತಿ ಕಟ್ಟಿಕೊಂಡು ಗುಡಿ ನಿರ್ಮಿಸಲು ಹೋಗುತ್ತಾರೆ. ಜಾತ್ರೆ ನಡೆಯುವ ಪರ‍್ಲೆಹಳ್ಳಿಯ ವಸತಿ ದಿಬ್ಬದಲ್ಲಿ ಬೆಳಗಿನಜಾವ ಏಳು ಗಂಟೆ ಸುಮಾರಿನಲ್ಲಿ ೧೮-೨೦ ಅಡಿ ಎತ್ತರದ ಬಾರೆ, ಕಾರೆ, ಬಂದ್ರೆ, ತುಗ್ಗಲಿಮೋರು ಮತ್ತು ಎರದ ಕಳ್ಳೆಯಿಂದ ೨೦ ನಿಮಿಷಕ್ಕೆ ದೇವರ ಒಕ್ಕಲ ಮಕ್ಕಳು (ಬೊಮ್ಮನಗೊಲ್ಲರು ಹಾಗೂ ಕೋಣನ ಗೊಲ್ಲರು ) ಕಳ್ಳೆ ಮುಳ್ಳಿನಿಂದ ಗುಡಿ ನಿರ್ಮಿಸಿ ಅದರ ತುದಿಗೆ ಕಂಚಿನ ಪಂಚಕಳಶಗಳನ್ನು ಏರಿಸುತ್ತಾರೆ.
ಚನ್ನಮ್ಮನಾಗತಿಹಳ್ಳಿ ಕ್ಯಾತಪ್ಪದೇವರು, ಪರಿವಾರದ ದೇವರುಗಳಾದ ಬಂಜಗೆರೆ ವೀರಣ್ಣ, ಈರಬಡಕ್ಕ, ಆಂಧ್ರಪ್ರದೇಶ ಕಲ್ಯಾಣದುರ್ಗ ತಾಲ್ಲೂಕಿನ ತಾಳಿ ದೇವರು,ಬತವಿನದೇವರು, ಕೋಣನ ದೇವರು ಸೇರಿದಂತೆ ಎಲ್ಲಾ ಪೆಟ್ಟಿಗೆ ದೈವಗಳನ್ನು ಜಾತ್ರೆ ಜರುಗುವ ವಸತಿ ದಿಬ್ಬದ ಕಳ್ಳೆಮುಳ್ಳಿನ ಬೇಲಿಗುಡಿ ಒಳಗೆ ಪ್ರತಿಷ್ಠಾಪಿಸುತ್ತಾರೆ. ಅಲ್ಲಿ ಮೊದಲಿಗೆ ಗಂಗಾಪೂಜೆ, ಹಾವಿನಗೂಡು, ಕರವಿನಗೂಡು, ಮಜ್ಜನಭಾವಿ, ಹುತ್ತದ, ಕೋಣನ ಪೂಜೆ ಮುಗಿಸಿದ ನಂತರ ಗುಂಡಿ ತೆಗೆದು ಮಧ್ಯರಾತ್ರಿ ಮಡಿಯಿಂದ ಐದು ಜನ ಮುತ್ತೆöÊದೆಯರು ಒನಕೆಯಿಂದ ನವಣೆ ಕುಟ್ಟಿ ದೇವರಿಗೆ ನೈವೇದ್ಯ ಅರ್ಪಿಸಿ, ಭಕ್ತರು ವ್ರತ ಅಳಿಯುತ್ತಾರೆ.
ಚಳ್ಳಕೆರೆ ತಾಲ್ಲೂಕು ಪರ‍್ಲೆಹಳ್ಳಿ ವಸತಿ ದಿಬ್ಬದಲ್ಲಿ ನಡೆಯುವ ಜಾತ್ರೆಗೆ ಬಂದ ಭಕ್ತರು ವಿವಿಧ ಹರಕೆಯನ್ನು ತೀರಿಸುತ್ತಾರೆ. ಜ.೯ ರಂದು ಮದ್ಯಾಹ್ನ ೪.೩೦ಕ್ಕೆ ಸರಿಯಾಗಿ ತಣ್ಣೀರಿನಲ್ಲಿ ಸ್ನಾನ ಮಾಡಿದ ದೇವರ ಒಕ್ಕಲಿನ ಏಳೆಂಟು ಜನ ಈರಗಾರರು ಬರಿ ಮೈ-ಬರಿಗಾಲಲ್ಲಿ ನಾ ಮುಂದು ತಾ ಮುಂದು ಎಂದು ಕೇಕೆ ಹೊಡೆಯುತ್ತ ಕಳ್ಳೆ ಮುಳ್ಳಿನಿಂದ ನಿರ್ಮಿಸಿದ ದೇವರ ಗುಡಿಯನ್ನು ಎದ್ದು ಬಿದ್ದು ಹೊರಳಾಡುತ್ತಾ ಹುರುಪಿನಿಂದ ಗುಡಿ ಮೇಲೆ ಹತ್ತಿ ಕಳಶ ಕೀಳಲು ಕೇಲವೇ ನಿಮಿಷಗಳಲ್ಲಿ ನಡೆದು ಹೋಗುತ್ತದೆ. ಈ ಕ್ರಿಯೆ ನೋಡುಗರಲ್ಲಿ ಆಶ್ಚರ್ಯ ಮೂಡಿಸುತ್ತದೆ..

ವರದಿ. ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;