;

ಹಿ.ಮ.ಬಸವರಾಜ್ ಎಂಬ ಅಕ್ಷರ ಮಾಂತ್ರಿಕ, ಅವರ ಬರವಣಿಗೆಗೆ ಅವರೇ ಸಾಟಿ…!!!

ಆಪ್ತ ವಲಯದಲ್ಲಿ `ಅಜ್ಜ’ರೆಂತಲೂ, ಓದುಗ ವರ್ಗದಲ್ಲಿ `ಹಿ.ಮ.ಬಸವರಾಜ್ ಸರ್’ ಎಂದೇ ಹೆಸರಾದವರು. ನಮ್ಮಿಬ್ಬರ ಒಡನಾಟ ಹೆಚ್ಚುಕಮ್ಮಿ ದಶಕಗಳಿಗೂ ಹೆಚ್ಚಿನದ್ದು. ಇವರು ಕೂಡ್ಲಿಗಿ ವಿ.ಕ ವರದಿಗಾರರು. ನಾನು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುವಾಗ್ಗೆ ಕ್ರೈಂ ಸುದ್ದಿಗಳಿಗೆ ನನಗೆ ಮೊದಲು ಸಂಧಿಸುತ್ತಿದ್ದರು. ಗುಡೇಕೋಟೆಗೆ ಬಂದ ಮೇಲೂ. ನನಗೂ ಲೇಖನಗಳನ್ನು ಬರೆಯುವ ಗೀಳಿದೆ ಎನ್ನುವ ಕಾರಣಕ್ಕೆ ನಮ್ಮ ನಡುವೆ ಒಂದು ಸಲುಗೆ, ಅವಿನಾಭಾವ ಸಂಬಂಧ ಬೆಳೆದು, ಮಾಗಿತ್ತು. ಸಿಕ್ಕಾಗಲೆಲ್ಲ ಮತ್ತೆ ಏನು ಬರಿದ್ದಿದ್ದೀ..? ಎಂದೇ ಮಾತು ಶುರು ಮಾಡುತ್ತಿದ್ದರು. ಆಲಂಗಿಸಿಕೊಳ್ಳುತ್ತಿದ್ದರು. ಹೊಸ ಹೊಸ ವಿಷಯ, ವಿಚಾರಗಳ ಮೇಲೆ ನನ್ನ ಗಮನ ಸೆಳೆಯುತ್ತಿದ್ದರು. ನನ್ನಲ್ಲಿ ನೋಡುವ ದೃಷ್ಟಿಕೋನವನ್ನು ಹಿಗ್ಗಿಸಿದ್ದಲ್ಲದೇ, ಆರ್ಟಿಕಲ್ಸ್ ಪಬ್ಲಿಷ್ ಆದಾಗ ಬೆನ್ನು ತಟ್ಟಿ ‘ಹೀಗೆ ಬರೆಯುತ್ತಲೇ ಇರು’ ಎಂದು ಹುರಿದುಂಬಿಸುತ್ತಿದ್ದರು. ನಾ ಕಳುಹಿಸಿ ಕೊಡುತ್ತಿದ್ದ ಪ್ರತಿ ಸುದ್ದಿಗಳನ್ನು ಪ್ರಕಟಿಸಿ, ಬೆಳೆಸಿದರು. ಹೀಗೆ ವೈಯುಕ್ತಿಕವಾಗಿ ನನಗೆ ಸಾಕಷ್ಟು ಪ್ರೋತ್ಸಾಹ, ಸಲಹೆ, ಮಾರ್ಗದರ್ಶನ ನೀಡುತ್ತಿದ್ದರು.

ಮೊದಮೊದಲು ಅವರು ಕೊಟ್ಟೂರಿನಿಂದ ಕೂಡ್ಲಿಗಿಗೆ ಬಸ್ಸಿಗೆ ಬರುತ್ತಿದ್ದರು. ( ಇತ್ತೀಚೆಗೆ ಕಾರು, ಸ್ಕೂಟಿಯಲ್ಲಿ). ನಾನು ಬಿಡುವು ಇದ್ದರೆ ನನ್ನ ಬೈಕ್ ಲ್ಲಿ ಅವರು ಹೇಳಿದೆಡೆ ಕರೆದೊಯ್ಯುದು ಅವರಲ್ಲಿದ್ದ ಸುದ್ದಿ ಹಸಿವು ತಣಿಸುತ್ತಿದ್ದೆ!.
ಸದಾ ಬಿಚ್ಚು ಮನಸ್ಸು, ಅತ್ಯಾಪ್ತವಾಗಿ ಮಾತನಾಡುತ್ತಿದ್ದರು. . ಆ ಮುಕ್ತ ಮನಸ್ಸೇ ಅವರ ಮೇಲೆ ನನ್ನಲ್ಲಿ ವಿಶೇಷಾಭಿಮಾನ, ಆದರವನ್ನು ಇಟ್ಟುಕೊಳ್ಳಲಿಕ್ಕೆ ಕಾರಣವಾಗಿತು.

ಬರಹದ ಹಿಮಾಲಯದಂತೆ ಇದ್ದ ಹಿ.ಮ.ಬ ಸರಳ, ಸಜ್ಜನಿಕೆಯ ವ್ಯಕ್ತಿ.ಮೂರ್ನಾಲ್ಕು ಕೃತಿಗಳನ್ನು ಬರೆದು ಪ್ರಕಟಿಸಿದ್ದರೂ ಕೂಡ. ಹಿತಮಿತಮೃದು ಭಾಷಿಕರಾಗಿದ್ದ ಹಿ.ಮ.ಬ ರಲ್ಲಿ ಸಮಯ, ಹಾಸ್ಯ ಪ್ರಜ್ಞೆ ಹಾಸುಹೊಕ್ಕಾಗಿತ್ತು. ಸಾಹಿತ್ಯಿಕ ಕುಟುಂಬದ ಕುಡಿ ಹಿ.ಮ.ಬ ರವರು ತಮ್ಮ ಮೊನಚು ಬರಹದಂತೆ ತೀಕ್ಷ್ಣ ಮಾತುಗಾರಿಕೆಯಿಂದ ಜನಮನ ಗೆದ್ದಿದ್ದರು. ಇನ್ನು ಹಿರಿಯರೊಂದಿಗೆ ಹಿರಿಯರಾಗಿ, ಕಿರಿಯರೊಂದಿಗೆ ಕಿರಿಯರಾಗಿ ಬೆರೆಯುತ್ತಿದ್ದರು. ಇವರು ಕೆಲಕಾಲ ಉಪನ್ಯಾಸಕರಾಗಿದ್ದರೆಂದು ಅವರು ಒಮ್ಮೆ ಹೇಳಿದ್ದ ನೆನಪು.

ಇಳಿ ವಯಸ್ಸು, ಪದೇ ಪದೇ ಕಾಡುತ್ತಿದ್ದ ಅನಾರೋಗ್ಯ, ಕೋವಿಡ್ನಲ್ಲಿ ಏಕೈಕ ಪುತ್ರನ ವಿಯೋಗದ ಇವರನ್ನು ಸಾಕಷ್ಟು ಜರ್ಜರಿತಗೊಳಿಸಿತ್ತು. ಆದರೂ ಬಹುಬೇಗ ತಿಬ್ಬಳಿಸಿಕೊಂಡು (ಹಾಗೆ ನಟಿಸುತ್ತಿದ್ದರೋ.?) ಸುದ್ದಿಗಳನ್ನು ಹೊತ್ತು ತರುತ್ತಿದ್ದರು. ಅವರಲ್ಲಿದ್ದ ಬರಹದ ಕೃಷಿ ಮೇಲಿನ ಅದಮ್ಯ ಪ್ರೀತಿ, ಉತ್ಸಾಹ, ಬದ್ಧತೆ ಕಂಡು ದಂಗಾಗಿದ್ದೆ. ವಿಜಯ ಕರ್ನಾಟಕ ಪತ್ರಿಕೆಯ ದಿನನಿತ್ಯದ ಸ್ಥಳೀಯ ಸುದ್ದಿಗಳಲ್ಲಿ ಇವರ ತಲೆಬರಹಗಳು [ಬೈಲೈನ್] ಸ್ಟೋರಿಗಳದ್ದೇ ಸಿಂಹಪಾಲು. ಆ ಪತ್ರಿಕೆಗೊಂದು ಮೆರಗು!. ಹಿ.ಮ.ಬ ರವರ ವಿಶೇಷ ವರದಿಗಳಿಲ್ಲದ ಆ ದಿನದ ವಿ.ಕ ನನಗೆ ಅಕ್ಷರಶಃ ಸಪ್ಪೆ ಅನಿಸುತ್ತಿತ್ತು. ನನ್ನಂತೆ ಅನೇಕ ಸಹೃದಯ ಓದುಗ ಪ್ರಭುಗಳಿಗೂ..

ಒಂದಿಲ್ಲದೊಂದು ಹೊಸತನ್ನು ಜನರಿಗೆ ಹೆಕ್ಕಿ ನೀಡುವಲ್ಲಿ ಸದಾ ಒಂದು ಹೆಜ್ಜೆ ಮುಂದಿರುತ್ತಿದ್ದರು. ತಾಲ್ಲೂಕಿನ ಮೂಲೆ ಮೂಲೆಗಳ ಸುದ್ದಿ, ವಿಶೇಷ ವರದಿಗಳನ್ನು ತಮ್ಮದೇ ಬರವಣಿಗೆ ಶೈಲಿಯಲ್ಲಿ ಇಡಿ ನಾಡಿಗೆ ರುಚಿಕಟ್ಟಾಗಿ ಪರಿಚಯಿಸುತ್ತಿದ್ದರು. ವ್ಯಕ್ತಿಯ ಮುಖ ನೋಡದೇ ಸುದ್ದಿಯ ಉತ್ಕೃಷ್ಟ ತೆ, ಗುಣಮಟ್ಟಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದರು
ಇವರ ಈ ಸ್ವಭಾವ ನನಗೆ ಬಲೂ ಅಚ್ಚುಮೆಚ್ಚು. ಸುದ್ದಿ ಪ್ರಕಟಿಸುವ ವಿಷಯದಲ್ಲಿ ಭೇಧಭಾವ, ತಾರತಮ್ಯ ಮಾಡುತ್ತಿರಲಿಲ್ಲ. ಹೀಗಾಗಿ ತಾಲ್ಲೂಕಿನಲ್ಲಿ ಹಿ.ಮ.ಬ ಅಭಿಮಾನ ಬಳಗ ದೊಡ್ಡದಿದೆ.

ಇನ್ನು ಇವರು ತಮ್ಮ ಪ್ರಖರ, ನಿಷ್ಠುರ ವರದಿಗಳಿಂದ ಜನಸಾಮನ್ಯರ ಮನಗೆದ್ದಂತೆ, ಕೆಲವೊಬ್ಬರ ಕೆಂಗಣ್ಣಿಗೂ ಆಗ್ಗಾಗ್ಗೆ ಗುರಿಯಾಗಿದ್ದರು. ` ವಸ್ತುನಿಷ್ಠವಾಗಿ ಬರೆಯುವ ಕಾಲ ಇದಲ್ಲ..’ ಎಂದು ನೊಂದುಕೊಂಡು ಅನೇಕ ಬಾರಿ ನನ್ನಲ್ಲಿ ಅಳಲು ತೋಡಿಕೊಂಡಿದ್ದರು. ಆ ಸುದ್ದಿ ಪ್ರಕಟವಾದ ಮೇಲೆ ಎದುರಿಸಬೇಕಾದ ಸವಾಲುಗಳ ಅರಿವು ಇದ್ದರೂ ಅದನ್ನು ಬರೆಯುವ ಧೈರ್ಯ ನೋಡಿ `ನಿಮ್ಮಲ್ಲಿಯ ಡಬ್ಬಲ್ ಗುಂಡಿಗೆಗೆ ಸಲಾಂ ಸರ್, ನಿಮ್ಮ ಪತ್ರಿಕಾಧರ್ಮ, ನಿಷ್ಠೆಗೆ ಶರಣು; ಗ್ರೇಟ್ ಬಿಡಿ ಸರ್ ನೀವು ..’ ಎನ್ನುತ್ತಿದ್ದೆ. ಆಡು ಮುಟ್ಟದ ಸೊಪ್ಪಿಲ್ಲವೆಂಬಂತೆ ಹಿ.ಮ.ಬ ಬರೆಯದ ವಿಷಯ ವಸ್ತಗಳಿರಲಿಲ್ಲ. ಕತೆ, ಕವನ, ಕೃಷಿ, ಪರಿಸರ, ಸಾಹಿತ್ಯ,.. ಹೀಗೆ ಎಲ್ಲಾ ಮೊಗ್ಗಲುಗಳಲ್ಲಿ ಬರಹದ ಕೃಷಿಗೈದಿದ್ದರು. ಜಿಲ್ಲಾ ವರದಿಗಾರರಾಗುವ, ಅಷ್ಟೇಕೆ ಸ್ಥಾನಿಕ ಸಂಪಾದಕರಾಗುವ ಅರ್ಹತೆ, ಯೋಗ್ಯತೆ ಅವರಲ್ಲಿತ್ತು.

ಅಜ್ಜನವರನ್ನು ಕಂಡಾಗಲೆಲ್ಲ, ಅವರ ವಿಶೇಷ ಬರಹಗಳನ್ನು ಓದಿದಾಗಲೆಲ್ಲ ಅವರ ಮೇಲೆ ಒಂದು ಈರ್ಕ್ಷೆ ಭಾವ ಬಂದು ಬಿಡುತಿತ್ತು. ಅದು ಮರುಕ್ಷಣ ನನ್ನ ಆಕ್ಟಿವ್ ಮಾಡುತಿತ್ತು. ಮತ್ತಷ್ಟು ಓದು, ಬರಹಗಳ ಹುಚ್ಚಿಗೆ ಹಚ್ಚುತ್ತಿತ್ತು. ಅಷ್ಟೆಲ್ಲ ಕ್ಲೇಶಗಳ ನಡುವೆ‍, ಅವುಗಳನ್ನೆಲ್ಲ ಮೀರಿ ಕ್ರೀಯಾಶೀಲರಾಗಿದ್ದನ್ನು ಕಂಡು ನನಗೆ ನನ್ನ ಬಗ್ಗೆ ನಾಚಿಕೆ ಆಗುತಿತ್ತು.

ಇರಲಿ, ಇವರನ್ನು ಕಳೆದುಕೊಂಡು ಕೇವಲ ಅವರ ಬಂಧು-ಮಿತ್ರರಿಗೆ ಮಾತ್ರ ನಷ್ಟವಾಗಿಲ್ಲ. ಒಬ್ಬ ಕ್ರೀಯಾಶೀಲ, ಸೃಜನಶೀಲ ವರದಿಗಾರರನ್ನು ಕಳೆದುಕೊಂಡು ಪತ್ರಿಕಾ ರಂಗದ ಬೆಳ್ಳಿಗೆರೆಯೊಂದು ಕಳಚಿ, ಇಡಿ ನಾಡಿಗೆ ತುಂಬಲಾರದ ನಷ್ಟ ವಾಗಿದೆ. ಕೂಡ್ಲಿಗಿ ಪತ್ರಿಕಾ ರಂಗ ಅಕ್ಷರಶಃ ಬಡವಾಗಿದೆ. ಬರಹದ ಕೃಷಿಗೈಯುವ ಹಂಬಲದವರಿಗೆ, ಪತ್ರಿಕಾ ರಂಗದಲ್ಲಿರುವ, ಮುಂಬರುವ ಮನಸ್ಸುಗಳಿಗೆ ಹಿ.ಮ.ಬ ರವರ ಬದುಕು-ಬರಹ ಮಾದರಿ.

ಹಿ.ಮ.ಬ ರವರಿಗೆ ಅವರೇ ಸಾಟಿ. ಮತ್ತೊಬ್ಬ ಹಿ.ಮ.ಬ ಭವಿಷ್ಯದಲ್ಲಿ ಹುಟ್ಟಲಿಕ್ಕೆ ಸಾಧ್ಯವಿಲ್ಲ
ಹಿ.ಮ.ಬ ಸರ್, ನೀವು ಮೃತ್ಯು ವಶವಾಗುವುದರೊಂದಿಗೆ ನಮ್ಮನ್ನೂ ಜೀವಂತ ಶವವಾಗಿಸಿಬಿಟ್ಟಿರಿ. ಹೋಗಿ ಬನ್ನಿ ಸರ್, ನಿಮ್ಮ ಬದುಕು, ಬರಹ, ಮಾತುಗಳು ನಮ್ಮಲ್ಲಿ ಅನುಚಣ ಹಸಿರುರಾಗಿರುತ್ತದೆ. ಉಸಿರು ಇರುವವರೆಗೂ ಸದಾ ಪತ್ರಿಕಾ ಹಾಗೂ ಸಾಹಿತ್ಯ ರಂಗ ನಿಮ್ಮ  ಚಿಂತನೆಯ ಬರವಣಿಗೆಯ ಬರಹಕ್ಕೆ ಸದಾ ಚಿರಋಣಿ

 

ವರದಿ. ಸುಪ್ರಸಿದ್ದ ಹವ್ಯಾಸಿ ಬರಹಗಾರರು (ಸ್ವರೂಪ್ ಕೊಟ್ಟೂರ್ )

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;