ಬಾಲನ್ಯಾಯ ಕಾಯ್ದೆ ಉಲ್ಲಂಘನೆ ಶಿಕ್ಷಾರ್ಹ ಅಪರಾಧ : ನ್ಯಾ.ದೇವೇಂದ್ರ ಪಂಡಿತ್
ಕೊಪ್ಪಳ, ನವೆಂಬರ್ : ಬಾಲನ್ಯಾಯ ಕಾಯ್ದೆ-2015ರ ಅನ್ವಯ ಮಗು/ಮಕ್ಕಳನ್ನು ಅನಧಿಕೃತವಾಗಿ ದತ್ತು ಪಡೆಯುವುದು ಅಥವಾ ದತ್ತು ನೀಡುವುದು ಅಪರಾಧ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವೇಂದ್ರ ಪಂಡಿತ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳರವರ ಸಂಯುಕ್ತಾಶ್ರಯದಲ್ಲಿ “ಅಂತರಾಷ್ಟಿಯ ದತ್ತು ಮಾಸಾಚರಣೆ ನವೆಂಬರ್-2022ರ” ಅಂಗವಾಗಿ ಬುಧವಾರದಂದು ನಗರದ ಚಂದ್ರಮುಖಿ ಸ್ಕೂಲ್ ಆಫ್-ನರ್ಸಿಂಗ್ನಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಲನ್ಯಾಯ ಕಾಯ್ದೆ-2015 ಅನ್ನು ಉಲ್ಲಂಘಿಸಿದಲ್ಲಿ ಈ ಅಪರಾಧಕ್ಕೆ ಬಾಲನ್ಯಾಯ ಕಾಯ್ದೆ-2015ರ ಸೆಕ್ಷನ್ 81 ರ ಅನ್ವಯ ಅಪರಾಧವಾಗಿದ್ದು, 1 ಲಕ್ಷ ದಂಡ ಹಾಗೂ 5 ವರ್ಷಗಳವರೆಗೆ ಜೈಲುವಾಸ ವಿಸ್ತರಿಸಬಹುದಾಗಿದೆ. ಇಂತಹ ಪ್ರಕರಣಗಳಲ್ಲಿ ಆಸ್ಪತ್ರೆಯ ಸಿಬ್ಬಂದಿ ಖಾಸಗಿ/ಸರ್ಕಾರಿ/ನರ್ಸಿಂಗ್ ಹೋಂ ಸಿಬ್ಬಂದಿಗಳು ಶಾಮೀಲಾದಲ್ಲಿ ರೂ. 1 ಲಕ್ಷ ರೂಪಾಯಿ ದಂಡ ಹಾಗೂ 7 ವರ್ಷಗಳವರೆಗೆ 7 ಜೈಲುವಾಸ ವಿಧಿಸಬಹುದಾಗಿರುತ್ತದೆ. ಆದ್ದರಿಂದ ಈ ಕುರಿತು ಜಾಗೃತಿಯನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಎಲ್ಲಾ ಮಾಹಿತಿಯನ್ನು ನೀವು ನಿಮ್ಮ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಿ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಮುಖಿ ಸ್ಕೂಲ್ ಆಫ್-ನರ್ಸಿಂಗ್ನ ಆಡಳಿತಾಧಿಕಾರಿ ಬಸಯ್ಯ ಹಿರೇಮಠ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೊಟಗಾರ ಭಾಗವಹಿಸಿದ್ದರು. ರಕ್ಷಣಾಧಿಕಾರಿ(ಅಸಾಂಸ್ಥಿಕ) ಪ್ರಶಾಂತ ರಡ್ಡಿ ದತ್ತು ಪ್ರಕ್ರಿಯೆಗಳ ಕುರಿತು ಮಾಹಿತಿಯನ್ನು ನೀಡಿದರು. ಪ್ರತಿಭಾ ಎಂ. ಕಾಶಿಮಠ ದತ್ತು ಪ್ರಕ್ರಿಯೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಚಂದ್ರಮುಖಿ ಸ್ಕೂಲ್ ಆಫ್-ನರ್ಸಿಂಗ್ನ ಪ್ರಾಂಶುಪಾಲ ಆನಂದ ಹಳ್ಳಿಗುಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು…

ವರದಿ. ಸಂಗೀತ ಕೊಪ್ಪಳ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
