;

ವಕೀಲರ ಹೋರಾಟದ ಫಲವಾಗಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಜೂರು…!!!

ವಕೀಲರ ಹೋರಾಟದ ಫಲವಾಗಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಜೂರು.

ಸಿಂಧನೂರು : ಸ.9.ಹಲವಾರು ವರ್ಷಗಳ ಕಾಲ ವಕೀಲರ ಹೋರಾಟದ ಫಲವಾಗಿ ಸಿಂಧನೂರಿಗೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಜೂರಾಗಿದ್ದು ವಕೀಲರ ಬಹುದಿನಗಳ ಕನಸು ಈ ದಿನ ನನಸಾಗಿದೆ ಎಂದು ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೆ.ಭೀಮನಗೌಡ ಹೇಳಿದರು.

ನಗರದ ಕೋರ್ಟ್ ಅವರಣದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಆಡಳಿತ ಇಲಾಖೆ ಪ್ರಸ್ತಾವನೆಯನ್ನು ಪರಿಶೀಲಿಸಿ ಸಿಂಧನೂರು, ಲಿಂಗಸುಗೂರು ಮತ್ತು ಮಸ್ಕಿ ತಾಲ್ಲೂಕು ವ್ಯಾಪ್ತಿಯನ್ನು ಒಳಗೊಂಡಂತೆ ಹೊಸದಾಗಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ಸ್ಥಾಪಿಸಲು ಬೇಕಾಗುವ ಜಿಲ್ಲಾ ನ್ಯಾಯಾಧೀಶರು, ಶಿರಸ್ತೇದಾರರು, ತೀರ್ಪು ಬರಹಗಾರರು, ಪ್ರಥಮ ದರ್ಜೆ ಸಹಾಯಕರು ತಲಾ ಒಂದು ಹುದ್ದೆ, ದ್ವಿತೀಯ ದರ್ಜೆ ಸಹಾಯಕರು, ಬೇಲಿಫ್ ತಲಾ ಎರಡು, ಪ್ರೋಸಸ್ ಸರ್ವರ್ 4, ಹೊರಗುತ್ತಿಗೆ ಆಧಾರದ ಮೇಲೆ ಬೆರಳಚ್ಚು ಗಾರರು, ಅಟೆಂಡರ್ ತಲಾ ಒಂದು,ಜವಾನರು 2 ಹೀಗೆ ಒಟ್ಟು 16 ಹುದ್ದೆಗಳನ್ನು ಸೃಜಿಸಲು ಆರ್ಥಿಕ ಇಲಾಖೆ ಹಾಗೂ ಹೈಕೋರ್ಟ್ ಒಪ್ಪಿಗೆ ಸೂಚಿಸಿ ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಎಚ್‌.ಆರ್. ಲಲಿತಾ ಸೆ.5 ರಂದು ಆದೇಶಿಸಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ನ್ಯಾಯಾಲಯದ ಉಪಯೋಗ : 10 ಲಕ್ಷ ಮೌಲ್ಯದ ಸಿವಿಲ್ ವ್ಯಾಜ್ಯ ನಿರೀಕ್ಷಣಾ ಜಾಮೀನು, ಪೋಕ್ಸೋ, ಅಟ್ರಾಸಿಟಿ ಹಾಗೂ ಭೂಸ್ವಾಧೀನ ಕಾಯ್ದೆ, 302 ಕೊಲೆ ಯತ್ನ, 307 ಕೊಲೆಗೆ ಸಂಬಂಧಿಸಿದ ಪ್ರಕರಣಗಳನ್ನು ನಡೆಸುವುದು ಸೇರಿದಂತೆ ವಿಶೇಷ ಕಾಯ್ದೆಗಳನ್ನು ಹೊರತುಪಡಿಸಿ ಉಳಿದೆಲ್ಲ ಐಪಿಸಿ ಪ್ರಕರಣಗಳನ್ನು ಇತ್ಯರ್ಥ ಮಾಡುವ ಅಧಿಕಾರ ನ್ಯಾಯಾಲಯ ಹೊಂದಿದೆ. 100 ಕೀ.ಮೀ.ದೂರ ಇರುವ ರಾಯಚೂರಿಗೆ ಅಲೆಯುವುದು ತಪ್ಪಿದೆ. ರಾಜ್ಯದ ಯಾವ ತಾಲ್ಲೂಕು ಮಟ್ಟದಲ್ಲಿಯೂ ಜಿಲ್ಲಾ ಮಟ್ಟದ ನ್ಯಾಯಾಲಯ ಮಂಜೂರಾಗಿಲ್ಲ. ಸಿಂಧನೂರಿನಲ್ಲಿ ಆಗಿರುವುದು ಪ್ರಥಮವಾಗಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಮಂತ್ರಿ ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಮಂತ್ರಿ ಶಂಕರ ಮುನೇನ್ ಕೊಪ್ಪ, ನ್ಯಾಯಾಧೀಶರಾದ ಅಶೋಕ ಕಿಣಗಿ, ಸಚಿನ್ ಮುಗುದುಮ್, ಪ್ರದೀಪ್ ಸಿಂಗ್ ಹೇರೂರು, ಎಸ್. ಎಂ.ಪಾಟೀಲ್, ಮಲ್ಲಿಕಾರ್ಜುನಗೌಡ, ಕುಲಕರ್ಣಿ, ಸಂಸದ ಸಂಗಣ್ಣ ಕರಡಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಶಾಸಕರಾದ ವೆಂಕಟರಾವ್ ನಾಡಗೌಡ, ಆರ್.ಬಸನಗೌಡ ತುರ್ವಿಹಾಳ, ಬಸವರಾಜ ದಡೆಸೂಗೂರು, ವೆಂಕಟಪ್ಪ ನಾಯಕ, ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿ, ಪ್ರತಾಪಗೌಡ ಪಾಟೀಲ್ ಹಾಗೂ ಹಿರಿಯ ವಕೀಲರು ಈ ನ್ಯಾಯಾಲಯದ ಮಂಜೂರಾತಿಗೆ ಸಹಕರಿಸಿದ್ದಾರೆ. ಇವರೆಲ್ಲರ ಸಂಘಟಿತ ಹೋರಾಟದ ಫಲವಾಗಿ ನ್ಯಾಯಾಲಯ ಮಂಜೂರಾಗಿದೆ. ವಿಶೇಷವಾಗಿ ಸಿಂಧನೂರಿನ ಜೆಎಂ ಎಫ್‌ಸಿ ನ್ಯಾಯಾಲಯದಲ್ಲಿ ನ್ಯಾಯಾ ಧೀಶರಾಗಿದ್ದ ವೆಂಕಟೇಶ ನಾಯಕ ಈಗ ಬಡ್ತಿ ಹೊಂದಿ ವಿಧಾನಸೌಧದಲ್ಲಿ ಕಾನೂನು ಇಲಾಖೆಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ನ್ಯಾಯಾಲಯದ ಮಂಜೂರಾತಿಗೆ ಸಿಂಧನೂರಿನಿಂದ ನಿಯೋಗವನ್ನು ಕರೆದು ಕೊಂಡು ಹೋದಾಗಲೆಲ್ಲ ಹೆಚ್ಚಿನ ಮುತುವರ್ಜಿ ವಹಿಸಿದ್ದರು. ಮಂಜೂರಾಗಿರುವ ನ್ಯಾಯಾಲಯ ಕಾರ್ಯನಿರ್ವಹಣೆ ದಿನಾಂಕ ಕುರಿತಂತೆ ಹಿರಿಯರ ಸಲಹೆ ಪಡೆದುಕೊಂಡು ಇಷ್ಟರಲ್ಲಿಯೇ ಮತ್ತೊಂದು ನಿಯೋಗವನ್ನು ಆಡಳಿತಾತ್ಮಕ ನ್ಯಾಯಾಧೀಶರ ಬಳಿ ಕೊಂಡೊಯ್ಯಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ವಕೀಲರಾದ ಜಿ.ಎಸ್‌.ಆರ್. ಕೆ.ರೆಡ್ಡಿ, ಅಬ್ದುಲ್ ಗನಿಸಾಬ, ಎಂ. ಅಮರೇಗೌಡ, ಕೆ.ವೀರನಗೌಡ, ಈರೇಶ ಇಲ್ಲೂರು, ವಕೀಲರ ಸಂಘದ ಕಾರ್ಯದರ್ಶಿ ವೀರೇಶ ಚಿಂಚಿರಿಕಿ, ಖಜಾಂಚಿ ವೀರಭದ್ರಗೌಡ ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;