;

ಬಿಜೆಪಿ ಹೋಗಲಿ; ಬಹುಶಃ ಕಾಂಗ್ರೆಸ್ ನ ಯಾವೊಬ್ಬ ನಾಯಕನೂ ಇದನ್ನು ನಿರೀಕ್ಷಿಸಿರಲಿಲ್ಲ ಅನ್ನಿಸುತ್ತದೆ….!

ಬಿಜೆಪಿ ಹೋಗಲಿ; ಬಹುಶಃ ಕಾಂಗ್ರೆಸ್ ನ ಯಾವೊಬ್ಬ ನಾಯಕನೂ ಇದನ್ನು ನಿರೀಕ್ಷಿಸಿರಲಿಲ್ಲ ಅನ್ನಿಸುತ್ತದೆ….!

 

ಅಷ್ಟೊಂದು ಜನಸ್ತೋಮ ಮತ್ತು ಸಮಾವೇಶದ ಗ್ರ್ಯಾಂಡ್ ಸಕ್ಸಸಿನ ಕತೆ ಹಾಗಿತ್ತು!
ಬಿಜೆಪಿ ಗೆ ಹೋಲಿಸಿದರೆ, ಕಾಂಗ್ರೆಸ್ ಅಂಥಾ ಜೀವನ್ಮರಣದ ಹೋರಾಟ ಅನ್ನಿಸುವ ಕಾರ್ಯಕ್ರಮ ಗಳನ್ನು ಸಂಘಟಿಸಿದ್ದು ಬಹಳ ಕಡಿಮೆಯೇ.

ಬಳ್ಳಾರಿ ಪಾದಯಾತ್ರೆ ಯಂಥ ಕೆಲವೊಂದು ಉದಾಹರಣೆಗಳನ್ನು ಹೊರತುಪಡಿಸಿ. ಇಲ್ಲೇನಿದ್ದರೂ ಸೀನಿಯರ್ ಸರ್ಕಾರಿ ನೌಕರರ ಮರ್ಜಿ. ಒಂದು ಲೆವೆಲಿನ ಪ್ರಯತ್ನಕ್ಕಷ್ಟೇ ಒಬ್ಬೊಬ್ಬರೂ ಸೀಮಿತ.
ಯಾವುದೇ ಪ್ಲಾನನ್ನಾದರೂ ಮೆದುಳಿನ ಮಟ್ಟದಿಂದ ನೆಲದ ಹಂತಕ್ಕೆ ಕಾರ್ಯಗತಗೊಳಿಸಿ ಫಲಿತಾಂಶ ಪಡೆಯಬೇಕೆನ್ನುವ ಕಮಿಟೆಡ್ ಪ್ರಯತ್ನಗಳನ್ನು ಇವರೆಲ್ಲ ಬಿಜೆಪಿಯನ್ನು ನೋಡಿಯೇ ಕಲಿಯುವುದು ಸಾಕಷ್ಟಿದೆ.

ವಾಸ್ತವ ಹೀಗಿರುವಾಗ, ಸಿದ್ಧರಾಮಯ್ಯನವರ ಅಮೃತ ಮಹೋತ್ಸವದ ಅಭೂತಪೂರ್ವ ಯಶಸ್ಸನ್ನು ಹೇಗೆ ವ್ಯಾಖ್ಯಾನಿಸೋಣ? ನನಗೆ ಅನಿಸುವ ಮಟ್ಟಿಗೆ ಇದು ಕಾಂಗ್ರೆಸ್ ಪಾಲಿನ ಬಯಸದೇ ಬಂದ ಭಾಗ್ಯವೆಂಬಂಥಾ ಮಹದ್ಘಟನೆ! ಈಗಾಗಲೇ ಹಲವು ಮಾಧ್ಯಮಗಳು ವಿಶ್ಲೇಷಿಸಿದಂತೆ ಆ ಪಕ್ಷದ ಪ್ರಯತ್ನದಿಂದ ಜನ ಸೇರಿರುವುದಕ್ಕಿಂತಲೂ ಹೆಚ್ಚಾಗಿ ಸ್ವಯಂ ಪ್ರೇರಿತರಾಗಿ ಜನ ಬಂದು ಸೇರಿರುವುದೇ ಜಾಸ್ತಿ.

ಮುಂದೆ ರಾಜಕೀಯವಾಗಿ ಏನೋ ಒಂದು ಜರಗಲಿದೆ ಅಂತ ನಮಗೆ ತೀವ್ರವಾಗಿ ಅನ್ನಿಸುವ ರೀತಿಯ ಚಿತ್ರವಿದು. ಹಾಗಂತ ಅಧಿಕಾರ ಸಿಕ್ಕೇಬಿಟ್ಟಿತು ಅನ್ನುವ ಆತುರದ ನಿರ್ಧಾರದೊಂದಿಗೆ ಕಾಂಗ್ರೆಸ್ ಬೇಕಾಬಿಟ್ಟಿಯಾಗಿ ನಡೆದುಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ ಅನ್ನುವುದನ್ನೂ ಆ ಪಕ್ಷ ನೆನಪಿಡಬೇಕಿದೆ. ಜನ ಏನನ್ನೋ ಬಯಸುತ್ತಿದ್ದಾರೆ ಅನ್ನುವುದರ ತಥ್ಯವನ್ನು ಅರ್ಥೈಸಿಕೊಂಡು ಎಂದಿನ ಒಳಜಗಳ, ಕುರ್ಚಿ ಕದನ, ಒಬ್ಬರ ಸೋಲಿಗೆ ಮತ್ತೊಬ್ಬರು ಸುಪಾರಿ ಕೊಡುವ ಎಂದಿನ ಆತ್ಮಹತ್ಯಾತ್ಮಕ ಆಟಗಳನ್ನು ಬದಿಗಿಟ್ಟು ಪ್ರಾಮಾಣಿಕ ಪ್ರಯತ್ನದೊಂದಿಗೆ ಮುಂದಿನ ಆರೇಳು ತಿಂಗಳು ಕಾರ್ಯಪ್ರವೃತ್ತರಾದರೆ ಮಾತ್ರ ಜನರ ಈ ಮಟ್ಟದ ಸ್ಪಂದನೆಗೆ ಒಂದು ತಾರ್ಕಿಕ ನ್ಯಾಯ ದೊರಕಿಸಿಕೊಟ್ಟಂತಾಗಬಹುದು.

ಖಂಡಿತವಾಗಿಯೂ ಮೊನ್ನೆಯ ಸಮಾವೇಶ ಪಕ್ಷ ಸಂಘಟಿಸಿದುದಾಗಿರಲಿಲ್ಲ. ಕಾಲ ಮತ್ತು ಪರಿಸ್ಥಿತಿ ಅದನ್ನು ‘ಆಗಗೊಟ್ಟಿತು’ ಎಂಬುದನ್ನು ಪ್ರತಿಯೊಬ್ಬರೂ ಗಮನಿಸಬೇಕಿದೆ.

ಪ್ರಸ್ತುತ ರಾಜಕಾರಣದ ಸೂತ್ರಗಳು ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಒಂದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಈ ಹಿಂದಿನಂತೆ ‘ಸರಳ ಬಹುಮತ’ಕ್ಕೆಲ್ಲ ಅಧಿಕಾರ ಹಿಡಿಯಬಲ್ಲ ಕಾಲ ಮತ್ತು ಪರಿಸ್ಥಿತಿ ಈಗಿಲ್ಲ. ಇದು ಟಿ20 ಅಥವಾ ಒನ್‌ಡೇ ಮ್ಯಾಚಿನಲ್ಲಾದ ರೂಪಾಂತರವನ್ನು ಹೋಲುವ ಆಟ. ಸಾಫ್ಟ್ ಟಾರ್ಗೆಟ್ ಅಲ್ಲೂ ಕ್ಷೇಮವಲ್ಲ. ಇಲ್ಲೂ ಕ್ಷೇಮವಲ್ಲ. ಆಪರೇಶನ್ ಕಮಲದಂಥ ವಿನಾಶಕಾರಿ ಸೂತ್ರವೊಂದು ಇಡೀ ದೇಶದ ರಾಜಕೀಯ ಡೀಸೆನ್ಸಿಯನ್ನು ಕೊಂದು ಕೊಳ್ಳಿಯಿಟ್ಟ ಮೇಲೆ ‘ಸರಳ ಬಹುಮತ’ ಅನ್ನುವ ಸಮಾಧಾನಕರ ಬಹುಮಾನಕ್ಕೆ ಯಾವ ಕಿಮ್ಮತ್ತೂ ಉಳಿದಿಲ್ಲ ಈಗ. ಇಲ್ಲಿ ಆಗದಿದ್ದರೆ ಅಲ್ಲಿ ಪ್ರಯತ್ನಿಸಿ ಗೆಲ್ಲುತ್ತೇವೆ ಅನ್ನುವ ಆಡಳಿತ ಪಕ್ಷದ ಪಟ್ಟುಗಳಿಗೆ ಯಾವುದಾದರೂ ದಾರಿಯಿಂದ ಪರಿಹಾರ ಕಂಡುಕೊಳ್ಳದಿದ್ದರೆ ಕಾಂಗ್ರೆಸ್ ಗೆ ಶಾಶ್ವತ ವಿರೋಧ ಪಕ್ಷದ ( ಕಾರ್ಟೂನಿಸ್ಟರ ಪದವಿ ಇದು!) ಪಟ್ಟವಂತೂ ಕಟ್ಟಿಟ್ಟ ಬುತ್ತಿ.

ಸಿದ್ಧರಾಮಯ್ಯ ಅವರ ಹುಟ್ಟು ಹಬ್ಬದ ಕಾರ್ಯಕ್ರಮ ತನ್ನಿಂತಾನೇ ಮಗ್ಗುಲು ಬದಲಾಯಿಸಿ ಮುಂದಿನ ಚುನಾವಣಾ ಪ್ರಚಾರದ ಉದ್ಘಾಟನಾ ಸಮಾರಂಭದಂತಾದ ಈ ಪವಾಡವನ್ನು ಬಹುಶಃ ಕಾಂಗ್ರೆಸ್ ಬಯಸಿಯೇ ರೂಪಿಸಿದ್ದಿರಲಿಕ್ಕಿಲ್ಲ. ಅದು ಕೂಡ ‘ಆಯಿತು’ ಅಷ್ಟೆ! ಕಾಂಗ್ರೆಸ್ ಅದನ್ನೇ ಬಯಸಿ ರೂಪಿಸಿದ್ದಿದ್ದರೆ ಅದರ ಸುಳಿವು ಆಡಳಿತ ಪಕ್ಷಕ್ಕೂ ಸಿಗದೇ ಹೋಗುತ್ತಿರಲಿಲ್ಲ. ಮತ್ತು ಬಿಜೆಪಿ ತನ್ನೆಲ್ಲಾ ಅಧಿಕಾರದ ಪರೋಕ್ಷ ಪಟ್ಟುಗಳನ್ನು ಬಳಸಿ ಒಂದಿಷ್ಟು ವಿಫಲಗೊಳಿಸುವ ಯೋಜನೆಗಳನ್ನೂ ಕಾರ್ಯಗತಗೊಳಿಸದೇ ಬಿಡುತ್ತಿರಲಿಲ್ಲ. ಹಾಗಾಗಿಯೇ ಅದು ಶಾಕ್ ಗೊಳಗಾಯಿತು ಮಾತ್ರವಲ್ಲ. ಸರಿಯಾದ ಪ್ರತಿಕ್ರಿಯೆಯನ್ನು ಈ ಕ್ಷಣದವರೆಗೂ ನೀಡಲಾಗಲಿಲ್ಲ. ನನ್ನದೊಂದು ತಮಾಷೆಯ ಗ್ರಹಿಕೆ ಏನೆಂದರೆ, ಬಹುಶಃ ಕಾಂಗ್ರೆಸ್ಸಿನ ತಥಾಕಥಿತ ತೆರೆಮರೆಯ ಪ್ರಭಾವೀ ನಾಯಕರುಗಳೇ ಇನ್ನೂ ಚೇತರಿಸಿಕೊಂಡಿಲ್ಲ ಎಂಬುದು! ಮತ್ತು ನಾಳೆಯಿಂದ ಕಾಂಗ್ರೆಸ್ ಆಂತರಿಕವಾಗಿ ಯಾವುದಾದರೊಂದು ವಿಭಾಗದಲ್ಲಿ ತೊಂದರೆಗೀಡಾಗಬಹುದೆಂಬ ಸಾಧ್ಯತೆಯಿದ್ದರೆ ಬಹುತೇಕ ಅದು ಈ ವಿಷಯದಲ್ಲೇ! ಕೊಂಡಿಯ ತುತ್ತ ತುದಿಯ ತಿರುವಿನಲ್ಲಿ ಏನು ನಡೆಯುತ್ತದೆ ಎಂಬ ಅಂಶವನ್ನು ಕಾಂಗ್ರೆಸ್ ಹೈಕಮಾಂಡ್ ಇನ್ನಾದರೂ ಎಚ್ಚರಿಕೆಯಿಂದ ಗ್ರಹಿಸಲು ಪ್ರಯತ್ನಿಸಬೇಕು.

ಒಂದು ಬಹುಮುಖ್ಯ ಟಿಪ್ಪಣಿಯೆಂದರೆ, ಸದ್ಯದ ಕಾಲ ಮತ್ತು ಪರಿಸ್ಥಿತಿ ಕೈ ಪಾಳಯಕ್ಕೆ ಒಂದಿಷ್ಟು ಆಶಾದಾಯಕವಾಗಿರಬಹುದು. ಆದರೆ ತೀವ್ರವಾಗಿ ಎದುರೇಟು ಕೊಡಬಲ್ಲ ಮತ್ತು ಎಂಥ ಯೋಜನೆಯನ್ನೂ ಸುಲಭವಾಗಿ ಕಾರ್ಯಗತಗೊಳಿಸಬಲ್ಲ ಅಧಿಕಾರದ ಅವಕಾಶ ಮತ್ತು ಸಾಮರ್ಥ್ಯವನ್ನು ಹೊಂದಿರುವ ಬಿಜೆಪಿಯೆದುರು ಎದ್ದು ನಿಲ್ಲಬೇಕಿದ್ದರೆ ಒಂದಿಷ್ಟೂ ಮೈಮರೆಯದ, ಸ್ವಯಂಕೃತ ಅಪರಾಧಗಳೆಂಬ ತನ್ನ ಹಳೇ ಚಾಳಿಯನ್ನು ಮುಂದುವರಿಸದ ದೃಢ ಸಂಕಲ್ಪವನ್ನು ಆ ಪಕ್ಷ ಹೊಂದಬೇಕಿದೆ.

ಒನ್ಸ್ ಅಗೇನ್, ಹತ್ತು ಓವರ್‌ಗಳಲ್ಲಿ ನೂರಿಪ್ಪತ್ತು ರನ್ ಬಾರಿಸಿದ ಮಾತ್ರಕ್ಕೆ ಆ ತಂಡ ಗೆಲ್ಲಬೇಕಾಗಿಲ್ಲ. ಓವರ್‌ಗಳು ಇನ್ನೂ ನಲವತ್ತಿದೆ ಮತ್ತು ಅದು ಹಲವು ಸಂಭವನೀಯತೆಗಳ ಸಾಕ್ಷಿಗಾಗಿ ಕಾದಿವೆ ಎಂಬುದು ಕಾಂಗ್ರೆಸ್ ಗೆ ಅರ್ಥವಾದಷ್ಟೂ ಆ ಪಕ್ಷ ಹಗುರ.

ವರದಿ.ಪ್ರತಾಪ್ ಛಲವಾದಿ
ಹರಪನಹಳ್ಳಿ ತಾಲ್ಲೂಕು ದಲಿತ ವಿದ್ಯಾರ್ಥಿ ಪರಿಷತ್ ಸಂಚಾಲಕರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend