ಬಿಜೆಪಿ ಸರ್ಕಾರದ ಆಡಳಿತದಲ್ಲಿ ಪರಿಶಿಷ್ಟರು ಅನಾಥ ಶಿಶುಗಳಾಗಿದ್ದಾರೆ: ಆರ್. ಧ್ರುವನಾರಾಯಣ್
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದ್ದು, ದಲಿತರು ಅನಾಥ ಶಿಶುಗಳಂತಾಗಿದ್ದಾರೆ. ಬಿಜೆಪಿ ಸರ್ಕಾರದಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಆಗುತ್ತಿದ್ದರೂ ಬಿಜೆಪಿಯ ದಲಿತ ನಾಯಕರು ಈ ಅನ್ಯಾಯ ವಿರುದ್ಧ ಧ್ವನಿ ಎತ್ತುತ್ತಿಲ್ಲ ಯಾಕೆ? ಇಂತಹವರಿಗೆ ಕಾಂಗ್ರೆಸ್ ವಿರುದ್ಧ ಮಾತನಾಡುವ ನೈತಿಕತೆ ಇದೆಯೇ?’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಈ ವಿಚಾರ ಪ್ರಸ್ತಾಪಿಸಿದ ಅವರು, ‘ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದಲಿತರು, ಪರಿಶಿಷ್ಟರ ಹಿತಸಕ್ತಿ ಬಗ್ಗೆ ಗಮನವಹಿಸದೇ ನಿರ್ಲಕ್ಷ ವಹಿಸಿದೆ. ಆ ಮೂಲಕ ಈ ವರ್ಗದವರನ್ನು ಅನಾಥ ಶಿಶುಗಳಾಗಿ ಮಾಡಿದ್ದಾರೆ. ಬಿಜೆಪಿಯಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ನಾಯಕರು, ಶಾಸಕರು ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡುತ್ತಾ, ತಮಗೆ ತಾವೇ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಗೂ ಸ್ವಾಭಿಮಾನ ಇರಬೇಕು. ಸ್ವಾಭಿಮಾನ ಇಲ್ಲದವನ ಬದುಕು ಶೂನ್ಯ ಎಂದು ಅಂಬೇಡ್ಕರ್ ಅವರು ಹೇಳುತ್ತಾರೆ. ಈ ರೀತಿ ಬಿಜೆಪಿಯ ದಲಿತ ನಾಯಕರು ಕೈಗೊಂಬೆಗಳಂತೆ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಉದಾಹರಣೆ ಛಲವಾದಿ ನಾರಾಯಣ ಸ್ವಾಮಿ ಅವರ ಕೈಯಲ್ಲಿ ಚಡ್ಡಿ ಹೊರಿಸಿದ್ದಾರೆ. ಅವರಿಗೆ ದಲಿತರು, ಶೋಷಿತರ ಬಗ್ಗೆ ಕಾಳಜಿ ಇದ್ದರೆ ಈ ಸರ್ಕಾರದ ಅನ್ಯಾಯದ ವಿರುದ್ಧ ಹೋರಾಡಬೇಕಿತ್ತು.
2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಜನಸಂಖ್ಯೆ ಅನುಗುಣವಾಗಿ ಅನುದಾನ ನೀಡಲು ಎಸ್ ಸಿ ಪಿ ಟಿಸ್ ಪಿ ಕಾಯ್ದೆ ತಂದರು. ಆಮೂಲಕ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಪ್ರಮಾಣ 24.1% ರಷ್ಟಿತ್ತು. ಅದರ ಆಧಾರದ ಮೇಲೆ ರಾಜ್ಯ ಬಜೆಟ್ ಗಾತ್ರದ ಶೇ.24.1ರಷ್ಟು ಅನುದಾನ ನೀಡಲು ತೀರ್ಮಾನಿಸಿತು. ಈ ರೀತಿ ನೀಡಲಾದ ಅನುದಾನ ಬಳಸಿಕೊಳ್ಳದಿದ್ದರೆ ಅದಕ್ಕೆ ಸಂಬಂಧಿಸಿದ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲು ಈ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಬಿಜೆಪಿ ಸರ್ಕಾರ 2012-13ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಪರಿಶಿಷ್ಟರ ಕಲ್ಯಾಣಕ್ಕೆ 7200ಕೋಟಿ ರೂ. ಮಾತ್ರ ಅನುದಾನ ನೀಡಿತ್ತು. 2013-14ನೇ ಸಾಲಿನ ಬಜೆಟ್ ನಲ್ಲಿ ಕಾಂಗ್ರೆಸ್ ಸರ್ಕಾರ ಪರಿಶಿಷ್ಟರ ಕಲ್ಯಾಣಕ್ಕೆ 8616 ಕೋಟಿ ರೂ. ನೀಡಿತು. ಈ ಕಾಯ್ದೆ ಜಾರಿಯಾದ ನಂತರ 2014-15ನೇ ಸಾಲಿನಲ್ಲಿ 15,834 ಕೋಟಿ ರೂ. ಕೊಟ್ಟರೆ, 2015-16ನೇ ಸಾಲಿನಲ್ಲಿ 16,356 ಕೋಟಿ ರೂ., 2016-17ನೇ ಸಾಲಿನಲ್ಲಿ 19,884 ಕೋಟಿ ರೂ., 2017-18ನೇ ಸಾಲಿನಲ್ಲಿ 27,840 ಕೋಟಿ ರೂ., 2018-19ನೇ ಸಾಲಿನಲ್ಲಿ 29,691 ಕೋಟಿ ರೂ. ಅನುದಾನವನ್ನು ನೀಡಿತ್ತು. ಹೀಗೆ ಕಾಂಗ್ರೆಸ್ ಸರ್ಕಾರ ಪ್ರತಿ ವರ್ಷ ಬಜೆಟ್ ಗಾತ್ರ ಹೆಚ್ಚಾದಂತೆ ಪರಿಶಿಷ್ಟರ ಕಲ್ಯಾಣಕ್ಕೆ ಹೆಚ್ಚಿನ ಅನುದಾನವನ್ನು ನೀಡಿತ್ತು.
ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಜೆಟ್ ಗಾತ್ರ ಹೆಚ್ಚಾದರೂ ಅನುದಾನ ಮಾತ್ರ ಹೆಚ್ಚಾಗಲಿಲ್ಲ. ಬದಲಿಗೆ ಕಡಿಮೆಯಾಗಿದೆ. 2019-20ನೇ ಸಾಲಿನಲ್ಲಿ 27,558 ಕೋಟಿ ರೂ. 2020-21ನೇ ಸಾಲಿನಲ್ಲಿ 25,378 ಕೋಟಿ ರೂ. ಹಾಗೂ 2021-22ನೇ ಸಾಲಿನಲ್ಲಿ 26,695 ಕೋಟಿ ರೂ. ಮಾತ್ರ ನೀಡಿದೆ.
ಇನ್ನು 2008-2013ರವರೆಗೆ ಬಿಜೆಪಿ ಸರ್ಕಾರ ಪರಿಶಿಷ್ಟರ ಕಲ್ಯಾಣಕ್ಕೆ 22261 ಕೋಟಿ ರೂ. ನೀಡಿದರೆ 2013-2018ರ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಪರಿಶಿಷ್ಟರ ಕಲ್ಯಾಣಕ್ಕೆ 88,395 ಕೋಟಿ ರೂ. ಅನುದಾನ ಕೊಟ್ಟಿದೆ. ಇನ್ನು ಸಮಾಜ ಕಲ್ಯಾಣ ಇಲಾಖೆಗೆ ಬಿಜೆಪಿ ಸರ್ಕಾರ (2008-2013) 9541 ಕೋಟಿ ರೂ. ಕೊಟ್ಟರೆ, ಕಾಂಗ್ರೆಸ್ ಸರ್ಕಾರ (2013-2018) 23,798 ಕೋಟಿ ರೂ. ನೀಡಿದೆ.
ಇಷ್ಟೆಲ್ಲಾ ಅನ್ಯಾಯದ ಬಗ್ಗೆ ಸೊಲ್ಲೆತ್ತದ ಬಿಜೆಪಿಯ ದಲಿತ ಮಂತ್ರಿ ಹಾಗೂ ಶಾಸಕರಿಗೆ ಕಾಂಗ್ರೆಸ್ ಬಗ್ಗೆ ಟೀಕೆ ಮಾಡುವ ಯಾವ ನೈತಿಕತೆ ಇದೆ. ನಿಮಗೆ ತಾಕತ್ತಿದ್ದರೆ ಪರಿಶಿಷ್ಟರ ಕಲ್ಯಾಣಕ್ಕೆ ಅನುದಾನ ಬಿಡುಗಡೆ ಮಾಡಿ. ಅನುದಾನ ಕಡಿಮೆ ಮಾಡಿದರೂ ಬಾಯಿ ಬಿಚ್ಚದೆ ಅವರ ಕೈಗೊಂಬೆಯಾಗಿದ್ದೀರಿ.
ಈ ಕಾಯ್ದೆ ಅಡಿಯಲ್ಲಿ ಕೊಟ್ಟಿರುವ ಅನುದಾನವನ್ನು ಬೇರೆ ಕೆಲಸಗಳಿಗೆ ಬಳಸಿಕೊಂಡಿದ್ದಾರೆ. ಈ ರೀತಿ ಸುಮಾರು 7 ಸಾವಿರ ಕೋಟಿ ಹಣವನ್ನು ಬೇರೆ ಕೆಲಸಗಳಿಗೆ ವರ್ಗಾಯಿಸಲಾಗಿದೆ. ಈ ರೀತಿ ಮಾಡಿದ ಅಧಿಕಾರಿಗಳ ವಿರುದ್ಧ ಕಾನೂನು ಪ್ರಕಾರ ಶಿಕ್ಷೆ ನೀಡಬೇಕು. ಎಸ್ ಸಿಪಿ ಟಿಎಸ್ ಪಿ ಕಾಯ್ದೆಯಲ್ಲಿ ಈ ರೀತಿ ಪರಿಶಿಷ್ಟರ ಅದಾನ ಬೇರೆ ಕೆಲಸಕ್ಕೆ ಬಳಸಿಕೊಂಡರೆ 6 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದು.
ಈ ಅನುದಾನದಲ್ಲಿ 40% ಸರ್ಕಾರ ಕಮಿಷನ್ ಪಡೆಯುತ್ತಿದೆ. ಇದಕ್ಕೆ ಉದಾಹರಣೆ ಸಮಾಜ ಕಲ್ಯಾಣ ಇಲಾಖೆಯ ಗಂಗಾ ಕಲ್ಯಾಣ ಯೋಜನೆ ಹಗರಣ. ಈ ಹಗರಣದಲ್ಲಿ ಪ್ರಾಥಮಿಕ ತನಿಖೆಯಲ್ಲಿ ತಪ್ಪು ಕಂಡುಬಂದಿದ್ದು ಬೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಅಮಾನತು ಮಾಡಲಾಗಿದೆ. ಅಕ್ರಮ ನಡೆಯದಿದ್ದರೆ ಅವರನ್ನು ಅಣಾನತು ಮಾಡಿದ್ದು ಯಾಕೆ? ಇನ್ನು ಸಚಿವ ಶ್ರೀನಿವಾಸ ಪೂಜಾರಿ ಅವರು ತಮ್ಮ ಇಲಾಖೆಯಲ್ಲಿ ಪಾರದರ್ಶಕತೆ ಇದೆ ಎಂದು ಹೇಳಿಕೊಳ್ಳುತ್ತಾರೆ. ನಿಮ್ಮ ಸರ್ಕಾರದ ಮಂತ್ರಿಗಳು ಬಡವರಿಗೆ ಕೊಟ್ಟ ಹಣವನ್ನು ಲೂಟಿ ಮಾಡುತ್ತಿದ್ದಾರೆ.
ಇನ್ನು ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ಕಾಂಗ್ರೆಸ್ 750ರಿಂದ 1400 ರೂ.ಗೆ ಏರಿಸಿತ್ತು. ನಂತರ ಬಿಜೆಪಿ ಸರ್ಕಾರ ಅದನ್ನು 850ಕ್ಕೆ ಇಳಿಸಿದೆ.
ಇದೇ ರೀತಿ ಹಲವು ಯೋಜನೆ ಕೈಬಿಟ್ಟಿದ್ದು, ಸಬ್ಸಿಡಿಗಳನ್ನು ನಿಲ್ಲಿಸಿವೆ. ನಿಗಮಗಳ ಅನುದಾನ ಕಡಿಮೆ ಮಾಡಲಾಗಿದೆ. ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿದೆ.
ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ 2013-14ನೇ ಸಾಲಿನಿಂದ 2017-18ನೇ ಸಾಲಿನವರೆಗೂ 3258 ಕೋಟಿ ರೂ. ಅದಾನ ನೀಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ 2019-20ರಲ್ಲಿ 257 ಕೋಟಿ ರೂ. ಹಾಗೂ 2020-21ನೇ ಸಾಲಿನಲ್ಲಿ ಕೇವಲ 59.24 ಕೋಟಿ ಮಾತ್ರ ಅದಾನ ನೀಡಿದೆ. ಕರ್ನಾಟಕ ಸಫಾಯಿ ಅಭಿವೃದ್ಧಿ ನಿಗಮ, ಬೋವಿ ಅಭಿವೃದ್ಧಿ ನಿಗಮ, ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮಗಳ ಅನುದಾನದಲ್ಲೂ ಕಡಿತ ಮಾಡಿದೆ.
ಈ ಸರ್ಕಾರ ಪರಿಶಿಷ್ಟರ ಕಲ್ಯಾಣ ಮಾಡುವುದೇ? ದಲಿತ ನಾಯಕರು ಇದರ ವಿರುದ್ಧ ಮಾತನಾಡಬೇಕು. ಪಠ್ಯ ಪುಸ್ತಕ ವಿಚಾರದಲ್ಲಿ ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂಬ ಅಂಶ ಕೈಬಿಟ್ಟಾಗಲೂ ಧ್ವನಿ ಎತ್ತಲಿಲ್ಲ. ಬಿಜೆಪಿ ಸರ್ಕಾರ ಬಜೆಟ್ ಗಾತ್ರದಲ್ಲಿ ಜನಸಂಖ್ಯೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ.
ನಾಗಮೋಹನ್ ದಾಸ್ ಅವರ ವರದಿ ಬಂದಿದ್ದಾಗ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 24 ತಾಸುಗಳಲ್ಲಿ ಈ ವರದಿ ಜಾರಿಗೆ ತರಲಾಗುವುದು. ಇದನ್ನು ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ರಾಮುಲು ಅವರು ತಿಳಿಸಿದ್ದರು. ಆದರೆ ರಾಮುಲು ಅವರು ಎಲ್ಲಿದ್ದಾರೆ? ಸ್ವಾಮೀಜಿಗಳು ಹಲವು ತಿಂಗಳಿನಿಂದ ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ಶೇ.24.1ರಷ್ಟು ಅನುದಾನ ನೀಡುವುದರಲ್ಲೂ ವಿಫಲವಾಗಿದ್ದು, ಮೀಸಲಾತಿ ಜಾರಿಗೆ ತರುವ ವಿಚಾರದಲ್ಲೂ ಸರ್ಕಾರ ವಿಫಲವಾಗಿದೆ. ಹೀಗಾಗಿ ಕೂಡಲೇ ಈ ವರದಿ ಜಾರಿಗೊಳಿಸಬೇಕು.’
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈ ವರದಿ ಜಾರಿಗೆ ತರಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಮ್ಮ ಸರ್ಕಾರ ಬಂದಮೇಲೆ ಖಂಡಿತವಾಗಿಯೂ ನಾಗಮೋಹನ್ ದಾಸ್ ಅವರ ವರದಿ ಜಾರಿ ಮಾಡುತ್ತೇವೆ. ಈಗ ಅನುದಾನ, ಕಾರ್ಯಕ್ರಮದಲ್ಲಿ 24%ರಷ್ಟು ನೀಡಲಾಗುತ್ತಿದೆ. ಇನ್ನು ಕೇಂದ್ರ ಸರ್ಕಾರದಲ್ಲಿ ಮೀಸಲಾತಿ ನೀಡಲಾಗಿದೆ. ಆದರೆ ರಾಜ್ಯದಲ್ಲಿ ಮೀಸಲಾತಿಯಲ್ಲಿ ಇನ್ನು ಜಾರಿಯಾಗಿಲ್ಲ. ಇದನ್ನು ಜಾರಿ ಮಾಡುವಂತೆ ನಾಗಮೋಹನ್ ದಾಸ್ ವರದಿ ಶಿಫಾರಸ್ಸು ಮಾಡಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಹೆಚ್ಚಿನ ಮೀಸಲಾತಿ ಇದ್ದು, ದೇಶದಲ್ಲೇ ಅತಿಹೆಚ್ಚು ಜಾತಿಗಳು ಈ ವರ್ಗದಲ್ಲಿ ಇರುವುದು ಕರ್ನಾಟಕ ರಾಜ್ಯದಲ್ಲಿ’ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ಜನ್ಮದಿನ ಕಾರ್ಯಕ್ರಮ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈ ಕಾರ್ಯಕ್ರಮ ಆಯೋಜಿಸಲು ಒಂದು ಸಮಿತಿಯನ್ನು ಮಾಡಿದ್ದು, ಈ ಸಮಿತಿಯಲ್ಲಿ ಇರುವವರೆಲ್ಲರೂ ಕಾಂಗ್ರೆಸ್ ನಾಯಕರೇ ಆಗಿದ್ದಾರೆ. ಈ ಸಮಿತಿಯು ಈ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಇದುವರೆಗೂ ಕೆಪಿಸಿಸಿ ವತಿಯಿಂದ ಯಾವುದೇ ನಾಯಕ ಜನ್ಮದಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿಲ್ಲ. ಸಿದ್ದರಾಮಯ್ಯ ಅವರೇ ನಮ್ಮ ನಾಯಕರಿಗೆ ಆಙ್ವಾನ ನೀಡಿದ್ದಾರೆ. ನಾವೆಲ್ಲರೂ ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನದಿಂದ ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ. ಸಿದ್ದರಾಮಯ್ಯ ಅವರು ನಮ್ಮ ಪ್ರಬಲ ನಾಯಕರಾಗಿದ್ದು. ಅವರ 75ನೇ ಜನ್ಮದಿನವನ್ನು ನಾವೆಲ್ಲರೂ ಸಂತೋಷವಾಗಿ ಆಚರಿಸುತ್ತಿದ್ದೇವೆ’ ಎಂದು ತಿಳಿಸಿದರು
ಸಿದ್ದರಾಮೋತ್ಸವ ನಂತರ ಕಾಂಗ್ರೆಸ್ ಇಬ್ಭಾಗವಾಗುತ್ತದೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿಯವರು ಮೊದಲು ತಮ್ಮ ಮನೆಯ ಸ್ಥಿತಿ ನೋಡಿಕೊಳ್ಳಲಿ. ಯತ್ನಾಳ್ ಅವರು 2500 ಕೋಟಿ ಕೊಟ್ಟರೆ ಮುಖ್ಯಮಂತ್ರಿ ಆಗಬಹುದು. 100 ಕೋಟಿ ಕೊಟ್ಟು ಒಬ್ಬರು ಸಚಿವರಾಗಿದ್ದಾರೆ ಎಂದು ಹೇಳಿದ್ದಾರೆ. 15 ದಿನಗಳ ಹಿಂದೆ ವಿಜಯೇಂದ್ರ ಅವರ ವಿರುದ್ಧ ಹೇಳಿಕೆ ಕೊಟ್ಟರು. ಏವರು ಮಾರಿಷಿಯಸ್ ನಲ್ಲಿ ಆಶ್ತಿ ಮಾಡಿದ್ದಾರೆ ಎಂದರು. ಅತ್ಯಂತ ಭ್ರಷ್ಟ ಸರ್ಕಾರ ಇದಾಗಿದೆ. ನಿಮ್ಮಲ್ಲಿ ಹುಳುಕು ಇಟ್ಟುಕೊಂಡು ನಮ್ಮ ಪಕ್ಷದ ವಿಚಾರ ಯಾಕೆ ಮಾತನಾಡುತ್ತೀರಿ? ನಮ್ಮ ಪಕ್ಷದಲ್ಲಿ ಅಧ್ಯಕ್ಷರಾದ ಶಿವಕುಮಾರ್ ಅವರು ಸಂಘಟನಾ ಚತುರರು, ಮತ್ತೊಬ್ಬರು ಸಿದ್ಧರಾಮಯ್ಯ ಅವರು ಉತ್ತಮ ಆಡಳಿತಗಾರ, ಇನ್ನು ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರೆ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಪಕ್ಷ ಸಾಗುತ್ತಿದೆ. ಪಕ್ಷದ ಪ್ರದರ್ಶನ ಉತ್ತಮವಾಗಿದೆ. ಬಿಜೆಪಿಯವರಿಗೆ ಅಸೂಯೆ ಭಯ. ಅವರಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರನ್ನು ಕಂಡರೆ ಭಯ, ಹೊಟ್ಟೆಕಿಚ್ಚು. ಹೊಟ್ಟೆಕಿಚ್ಚಿಗೆ ಮದ್ದಿಲ್ಲ. ಇದ್ದಿದ್ದರೆ ನಾನೇ ನೀಡುತ್ತಿದೆ. ಇತ್ತೀಚೆಗೆ ನಡೆದ ಪರಿಷತ್ ಚುನಾವಣೆ ಫಲಿತಾಂಶವನ್ನೇ ನೋಡಿ ಮೈಸೂರಿನ ಇತಿಹಾಸದಲ್ಲಿ ಕಾಂಗ್ರೆಸ್ ಗೆದ್ದಿರಲಿಲ್ಲ, ಬೆಳಗಾವಿಯಲ್ಲೂ ಗೆದ್ದಿರಲಿಲ್ಲ. ಪ್ರಜ್ಞಾವಂತ ಪದವಿದಾರರು ನಮಗೆ ಮತ ಹಾಕಿದ್ದಾರೆ. ಬಿಜೆಪಿಯವರ ದುರಾಡಳಿತದಿಂದ ಜನ ಬೇಸತ್ತು ನಮಗೆ ಮತ ಹಾಕಿದ್ದಾರೆ. ಇದನ್ನು ಮುಚ್ಚಿಕೊಳ್ಳಲು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ನೀವು ಜನಾದೇಶದಿಂದ ಅಧಿಕಾರಕ್ಕೆ ಬರದಿದ್ದರೂ ಆಪರೇಷನ್ ಕಮಲದ ಮೂಲಕ ಅಧಿಕಾರ ಪಡೆದಿದ್ದು, ಸರಿಯಾಗಿ ಕೆಲಸ ಮಾಡಿ. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಸರ್ಕಾರದ ಎಲ್ಲಾ ಇಲಾಖೆ ಅಕ್ರಮಗಳಿಂದ ತುಂಬಿವೆ. ಆಡಳಿತದ ಬಗ್ಗೆ ಚರ್ಚೆ ಮಾಡಿ ಜೋಷಿ ಅವರೇ. ನೀವು ಸಂಸದರಾಗಿದ್ದು, ಕೇಂದ್ರದಿಂದ ಕಡಿತವಾಗಿರುವ ಅನುದಾನಗಳ ಬಗ್ಗೆ ಚರ್ಚೆ ಮಾಡಿ. ಪರಿಶಿಷ್ಟರಿಗೆ ಕೇಂದ್ರದ ಅನುದಾನ ಬಿಡುಗಡೆಯಲ್ಲೂ ಅನ್ಯಾಯವಾಗಿದೆ. ನೀವು ಮಂತ್ರಿಯಾಗಿ ಅನುದಾನ ಬಿಡುಗಡೆ ಮಾಡಿಸಿ. ಪರಿಶಿಷ್ಟರನ್ನು ಉದ್ದಿಮೆದಾರರನ್ನಾಗಿ ಮಾಡುತ್ತೇವೆ ಎಂದು ನಾರಾಯಣಸ್ವಾಮಿ ಅವರು ಹೇಳಿದ್ದಾರೆ. ಉದ್ದಿಮೆದಾರರನ್ನು ಮಾಡಲು ಯೋಜನೆ ಎಲ್ಲಿದೆ? ಮೊದಲು ಯೋಜನೆ ರೂಪಿಸಿ ನಂತರ ಮಾತನಾಡಿ. ನೀವು ಕಾಯಕದ ಮೂಲಕ ಮಾತನಾಡಿ. ಕೇವಲ ಬಾಯಿಮಾತಿನಲ್ಲೇ ಕಾಲಕಳೆಯಬೇಡಿ. ನೀವು ಮಾತಿನ ಶೂರರು, ಕಾಂಗ್ರೆಸ್ ನಾಯಕರ ಬಗ್ಗೆ, ವ್ಯಕ್ತಿಗತ ದಾಳಿ ಮಾಡುವುದನ್ನು ಬಿಟ್ಟು ಕೆಲಸ ಮಾಡಿ’ ಎಂದು ಹರಿಹಾಯ್ದರೆ…

ವರದಿ. ಪ್ರತಾಪ್. ಸಿ. ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
