: ತಾಲೂಕಿನ ಕಾನನಕಟ್ಟೆ ಗ್ರಾಮದಲ್ಲಿ ಸೋಮವಾರ ವಿದ್ಯುತ್ ಸ್ಪರ್ಶದಿಂದ ಯುವಕ ಬಲಿಯಾಗಿದ್ದಾನೆ. ಮೃತ ಯುವಕನ ವಿಶ್ವನಾಥ್ (೨೪) ಎಂದು ತಿಳಿದು ಬಂದಿದೆ.
ಸೋಮವಾರ ಬೆಳಿಗ್ಗೆ ಕಾನನ ಕಟ್ಟೆ ಗ್ರಾಮದ ಹೊಸಮನೆ ಮಲ್ಲಿಕಾರ್ಜುನಪ್ಪ ಎಂಬುವರ ಮಗ ಚೇತನ್ ಅವರ ಜಮೀನಿನಲ್ಲಿ ವಿದ್ಯುತ್ ಕಂಬದ ಟಿಸಿ ಲೈನ್ ಬಿದ್ದಿದ್ದನ್ನು ಕಂಬಕ್ಕೆ ಕಟ್ಟಲು ವಿಶ್ವನಾಥನನ್ನು ಕರೆದೊಯ್ದು ವಿದ್ಯುತ್ ಕಂಬವನ್ನು ಹತ್ತಿ ಟಿಸಿ ಲೈನ್ ಕಟ್ಟುತ್ತಿರುವಾಗ ಕಂಬದಲ್ಲಿದ್ದ ವಿದ್ಯುತ್ ಮೃತ ವಿಶ್ವನಾಥ್ ಅವರ ಎಡಗೈಗೆ ತಗುಲಿ ಕಂಬದಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಜಮೀನಿನ ಮಾಲೀಕ ಚೇತನ್ ಮುಂಜಾಗೃತೆಯಿಲ್ಲದೇ ವಿದ್ಯುತ್ ಕಂಬಕ್ಕೆ ವಿಶ್ವನಾಥ್ ಅವರನ್ನು ಹತ್ತಿಸಿದ್ದು ಈ ಅವಘಡಕ್ಕೆ ಕಾರಣ ಎಂದು ಜಗಳೂರು ಪೊಲೀಸ್ ಠಾಣೆಗೆ ಮೃತ ವಿಶ್ವನಾಥ್ ಅವರ ತಂದೆ ಈರಬೊಮ್ಮಯ್ಯ ದೂರು ನೀಡಿದ್ದಾರೆ.
ಪಿಎಸ್ಐ ವಿರುದ್ಧ ಶಾಸಕ ಎಸ್ವಿಆರ್ ಗರಂ
ವಿಶ್ವನಾಥ್ ಮೃತಪಟ್ಟು ೬ ಗಂಟೆಯಾದರೂ ಸ್ಥಳದಿಂದ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸದೇ ಸ್ಥಳ ಮಹಜರ್ ಮತ್ತು ಕಾನೂನು ಪ್ರಕ್ರಿಯೆಗಳ ನೆಪಹೇಳಿ ಸರಿಯಾಗಿ ದೂರು ಕೊಡಿ, ಕಾರಣ ಕೊಡಿ, ಘಟನೆ ಹೇಗಾಯ್ತು? ಎನ್ನುತ್ತಲೇ ವಿಳಂಬ ಮಾಡಿದ ಜಗಳೂರು ಪಿಎಸ್ಐ ಮಹೇಶ್ ಹೊಸಪೇಟೆ ಅವರಿಗೆ ಶಾಸಕ ಎಸ್.ವಿ.ರಾಮಚಂದ್ರ ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡರು.
ಕಾನೂನು ಪ್ರಕ್ರಿಯೆ ವಿಳಂಬ ಮಾಡುತ್ತಿದ್ದಾರೆ ಎಂದು ಈ ಸಂಬಂಧ ಗ್ರಾಮಸ್ಥರು ಶಾಸಕ ರಾಮಚಂದ್ರ ಅವರಿಗೆ ಈ ವಿಷಯ ತಿಳಿಸುತ್ತಿದ್ದಂತೆ ಸಿಟ್ಟಿಗೆದ್ದ ಶಾಸಕರು ಮೊಬೈಲ್ನಲ್ಲೇ ತರಾಟಗೆ ತೆಗೆದುಕೊಂಡರು. ತಕ್ಷಣವೇ ಕಾರಣ ಹೇಳದೇ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ಜಗಳೂರು ಸಿಪಿಐಗೆ ಆದೇಶ ನೀಡಿದ ನಂತರ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರಿಗೂ ಕರೆ ಮಾಡಿ ಈ ಘಟನೆಯ ಬಗ್ಗೆ ಶಾಸಕ ಎಸ್.ವಿ.ರಾಮಚಂದ್ರ ಮಾಹಿತಿ ನೀಡಿ ಬೇಸರ ವ್ಯಕ್ತಪಡಿಸಿದರು. ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು…

ವರದಿ. ಸಂದೀಪ್. ಸಿ. ಎಂ. ಹೊಳೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
