ತಿಂಥಿಣಿ ಮೋಯಿನುದ್ದೀನ್ – ಮೌನೇಶ್ವರ ಕ್ಷೇತ್ರದಲ್ಲಿ ಸಾಂಸ್ಕೃತಿಕ ಪ್ರಯೋಗ ಮತ್ತು ಪ್ರತಿರೋಧ ಕಾರ್ಯಕ್ರಮದಲ್ಲಿ ಭಾಗವಹಿಸಿ – ಎಂ ಗಂಗಾಧರ್.
ಸಿಂಧನೂರು : ಕೋಮು ಸಾಮರಸ್ಯವನ್ನು ಹಾಳು ಮಾಡುವ ಶಕ್ತಿಗಳು ದೇಶದ ಮೂಲ ಜನ ಸಂಸ್ಕೃತಿ, ಶ್ರಮ ಸಂಸ್ಕೃತಿಯನ್ನು ವ್ಯವಸ್ಥಿತವಾಗಿ ಹತ್ತಿಕ್ಕುತ್ತಿವೆ. ಹೊಸ ಸಾಂಸ್ಕೃತಿಕ ಚಳುವಳಿಯನ್ನು ಕಟ್ಟುವ ಮೂಲಕ ದೇಶದ ಸಂಸ್ಕೃತಿಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ.
ಈ ನಿಟ್ಟಿನಲ್ಲಿ ದಕ್ಷಿಣ ಕಾಶಿಯಾದ ತಿಂಥಿಣಿ ಮೋಯಿನುದ್ದೀನ್-ಮೌನೇಶ್ವರ ಶ್ರೀಕ್ಷೇತ್ರದಲ್ಲಿ ಸಾಂಸ್ಕೃತಿಕ ಪ್ರಯೋಗ ಮತ್ತು ಸಾಂಸ್ಕೃತಿಕ ಪ್ರತಿರೋಧ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ ಎಂದು ಜೈಭೀಮ್-ಲಾಲ್ ಸಲಾಮ್ ಕಲಾಮಂಡಳಿಯ ಅಧ್ಯಕ್ಷ ಎಂ.ಗಂಗಾಧರ ಮನವಿ ಮಾಡಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ಪ್ಯಾಸಿಸಂ ಸರ್ವಾಧಿಕಾರಿ ಪ್ರವೃತ್ತಿಯಿಂದಾಗಿ ದೇಶದಲ್ಲಿ ಒಂದು ಬಗೆಯ ಭಯದ, ದ್ವೇಷದ ವಾತಾವರಣ ನಿರ್ಮಾಣವಾಗಿದೆ. ಸಂವಿಧಾನದ ಆಶಯಗಳು ಮೂಲೆಗುಂಪಾಗಿ ಪ್ರಜಾಪ್ರಭುತ್ವವೇ ನೆಲಕಚ್ಚಿ ದೇಶವೇ ಅರಾಜಕತೆಯಲ್ಲಿ ತಾಂಡವವಾಡುತ್ತಿದೆ. ಇದರ ವಿರುದ್ಧ ನಮ್ಮ ಇವರೆಗಿನ ಹೋರಾಟಗಳ ಸಿದ್ಧ ಮಾದರಿಗಳು ಪ್ಯಾಸಿಸಂ ವಿರುದ್ಧ ಕೋಮು ಸಾಮರಸ್ಯ ಹಾಳು ಮಾಡುವವರ ವಿರುದ್ಧ ಸಾಮರಸ್ಯ ಬದುಕಿಗಾಗಿ ದೇಶದ ಮೂಲ ಸಂಸ್ಕೃತಿ ಉಳಿವಿಗಾಗಿ ಹೋರಾಟಕ್ಕೆ ಮುಂದಾದಾಗ ನಮ್ಮಲ್ಲೇ ಇರುವ ಕೇಲವು ಪಟ್ಟಭದ್ರ, ಅವಕಾಶವಾದಿಗಳಿಂದ ಹೋರಾಟ ಯಶಸ್ವಿಯಾಗದೆ ಪ್ಯಾಸಿಸಂ ವಿರುದ್ಧ ಪ್ರತಿರೋಧ ಒಡ್ಡುವಷ್ಟು ಶಕ್ತವಾಗಿಲ್ಲ. ಸಾಮಾಜಿಕ ಸೌಹಾರ್ದ ಬಯಸುವ ಮಾತು, ನಡೆ, ನುಡಿಗಳು ಜನರೊಟ್ಟಿಗೆ ವಿಶ್ವಾಸಾರ್ಹತೆ ಗಳಿಸಬೇಕಾದ ತುರ್ತು ಅಗತ್ಯವಿದೆ.
ಜೊತೆಗೆ ಡಿಜಿಟಲೀಕರಣದ ಹೆಸರಿನಲ್ಲಿ ದೇಶದ ಮೂಲ ಸಂಸ್ಕೃತಿಗಳಾದ, ಜಾನಪದ, ತತ್ವಪದ, ಗೀಗೀ ಪದ, ಶೋಭಾನೆ ಹಾಡುಗಳು, ಡೋಳ್ಳಿನ ಹಾಡು, ಯಕ್ಷಗಾನ, ಬಯಲಾಟ, ಬೀಸುವ ಹಾಡು, ಕುಟ್ಟುವ ಹಾಡು, ಗೊಂದಲಿಗರ ಹಾಡು ಸೇರಿದಂತೆ ಇತರೆ ಪ್ರಕಾರಗಳ ಶ್ರಮಜೀವಿಗಳ ಸಂಸ್ಕೃತಿ ನಸಿಶಿ ಹೋಗುತ್ತಿದ್ದು ಈ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸಲು ಸಾಂಸ್ಕೃತಿಕ ಚಳುವಳಿಯನ್ನು ಮತ್ತೆ ಹೊಸ ರೂಪದಲ್ಲಿ, ಹೊಸ ದೃಷ್ಟಿಕೋನದಲ್ಲಿ ಕಟ್ಟಬೇಕಾಗಿದೆ. ಇದಕ್ಕಾಗಿ ಮೇ 14ರಿಂದ 3 ದಿನಗಳ ಕಾಲ ದಕ್ಷಿಣ ಕಾಶಿ ಎಂದೇ ಪ್ರಸಿದ್ದಿಯಾದ ಯಾದಗೀರ ಜಿಲ್ಲೆಯ ಸುರುಪುರ ತಾಲೂಕಿನ ತಿಂಥಿಣಿ ಮೌನೇಶ್ವರದಲ್ಲಿ ಸಾಂಸ್ಕೃತಿಕ ಪ್ರಯೋಗ ಮತ್ತು ಸಾಂಸ್ಕೃತಿಕ ಪ್ರತಿರೋಧ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ಎಲ್ಲಾ ಬಗೆಯ ಕಲಾವಿದರು ಮೂರು ದಿನಗಳ ಕಾಲ ನಡೆಯುವ ಸಮಾವೇಶದಲ್ಲಿ ಭಾಗವಹಿಸಿ ದೇಶದ ಶ್ರಮ ಸಂಸ್ಕೃತಿಯ ಉಳಿವಿಗಾಗಿ ಹಾಡು ಬರೆಯುವ, ರಾಗ ಸಂಯೋಜನೆ ಮಾಡುವ, ಕಲಿಯುವ, ನಾಟಕ ಪ್ರದರ್ಶನ ಮಾಡುವ ಎಲ್ಲಾ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
