ಸಿಂಧನೂರಿನಲ್ಲಿ ಬಹುತ್ವ ಭಾರತೀಯರ ಭಾವೈಕ್ಯತಾ ಸಮಾವೇಶ : ಯಶಸ್ವಿ
ಸಿಂಧನೂರು : ಭಾರತದ ಹಲವು ಮಹನೀಯರು ಸಾರಿದ ಶಾಂತಿಯ ಸಂದೇಶ ಸಮಾನತೆಯ ಸಂದೇಶ ಒಪ್ಪಿ ಅಪ್ಪಿಕೊಂಡು ವಿಶ್ವದಾದ್ಯಂತ ಬುದ್ದ ಬಸವ ಹಾಗೂ ಅಂಬೇಡ್ಕರ್ ಪುತ್ಥಳಿ ನಿರ್ಮಿಸಿ, ಅಲ್ಲಿಯ ಜನತೆಗೆ ಮಹನೀರು ಸಾರಿದ ಸಂದೇಶವನ್ನು ಸಾರುತ್ತಿದ್ದಾರೆ. ಆದರೆ ಬಹು ಸಂಸ್ಕೃತಿ ನಾಡಿನಲ್ಲಿ ಮತೀಯವಾದಿ, ಕೋಮುವಾದಿಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಗೌರವ ಕುಗ್ಗುತ್ತಿದೆ ಎಂದು ಪರಮಪೂಜ್ಯ ಶ್ರೀ ಬಸವಪ್ರಭು ಮಹಾಸ್ವಾಮಿ ಬಸವಕಲ್ಯಾಣ ಮಹಾಮನಿ ಕಳವಳ ವ್ಯಕ್ತಪಡಿಸಿದರು.
ಈ ಕುರಿತು ನಗರದ ಎಪಿಎಂಸಿ ಮೈದಾನದಲ್ಲಿ ದಲಿತ ಹಿಂದುಳಿದ ಅಲ್ಪಸಂಖ್ಯಾತ ಪ್ರಗತಿಪರ ಒಕ್ಕೂಟದಿಂದ ಹಮ್ಮಿಕೊಂಡ ಭಾವೈಕ್ಯತಾ ಸಮಾವೇಶದಲ್ಲಿ ದಿವ್ಯ ಸಾನಿದ್ಯವನ್ನು ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಾದ್ಯಂತ ಭಾವೈಕ್ಯತೆ ಸಾರುವ ಸಮಾವೇಶಗಳು ರಾಜಕೀಯ ರಹಿತವಾಗಿ ಹೆಚ್ಚು ಹೆಚ್ಚಾಗಿ ನಡೆಸಿ ಕೋಮು ಸಾಮರಸ್ಯವನ್ನು ಕಾಪಾಡುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕನ ಕರ್ತವ್ಯ. ಇಂತಹ ಸಮಾವೇಶವನ್ನು ಹಮ್ಮಿಕೊಂಡಾಗ ಜಾತ್ಯಾತೀತ ಮುಖವಾಡ ಹೊಂದಿದ ರಾಜಿಕೀಯ ಪಕ್ಷಗಳ ಮುಖಂಡರು ವ್ಯವಸ್ಥಿತವಾಗಿ ತಮ್ಮ ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಜನರನ್ನು ಸಮಾವೇಶದಲ್ಲಿ ಪಾಲ್ಗೊಳ್ಳದಂತೆ ನೋಡಿಕೊಳ್ಳುತ್ತಾರೆ. ಕಾರಣವಿಷ್ಟೇ ಬೆಳಿಗ್ಗೆ ಒಂದು ಪಕ್ಷದಲ್ಲಿದ್ದರೆ ಸಂಜೆಯಾಗುತಿದ್ದಂತೆ ಇನ್ನೊಂದು ಪಕ್ಷ ಸೇರುವ ಇವರಿಗೆ ಯಾವುದೇ ಸಿದ್ದಾಂತ ಬದ್ದತೆ ಸಂವಿಧಾನದ ಬಗ್ಗೆ ಗೌರವ ಕಾಳಜಿ ಅಳವಡಿಸಿಕೊಳ್ಳದಿರುವುದೇ ಇದಕ್ಕೇಲ್ಲಾ ಕಾರಣ. ಯಾರು ಏನೇ ಕುತಂತ್ರ ಮಾಡಿದರೂ ಒಕ್ಕೂಟವು ಹಮ್ಮಿಕೊಂಡಿರುವ ಕಾರ್ಯವು ಮಾತ್ರ ಅತ್ಯಂತ ಶ್ಲಾಘನೀಯ. ಇದನ್ನು ಯಾವುದೇ ಕಾರಣಕ್ಕೂ ನಿಲ್ಲಿಸದೆ ಬಂದಷ್ಟು ಜನರಿಗೆ ಜಾಗೃತಗೊಳಿಸುವಲ್ಲಿ ಮುಂದಾಗಬೇಕಾಗಿರುವುದು ಒಕ್ಕೂಟದ ಕರ್ತವ್ಯವಾಗಿದೆ ಎಂದು ಹೇಳಿದರು.
ನಂತರ ಶಿವ ಸುಂದರ್ ಮಾತನಾಡಿ ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದ ಭಾರತಕ್ಕೆ ಬಹುಜನರು, ಶ್ರಮಿಕರು, ಕೂಲಿಕಾರ್ಮಿಕರಿಂದ ಸ್ವಾತಂತ್ರ್ಯ ದೊರಕಿದೆ. ಸಂಘ ಪರಿವಾರದವರು ಸ್ವಾತಂತ್ರಕ್ಕಾಗಿ ಎಂದಿಗೂ ಹೋರಾಡಿಲ್ಲ ಆರ್ಎಸ್ಎಸ್ನವರು ಬ್ರಿಟಿಷರ ಗುಲಾಮಗಿರಿ ಮಾಡಿ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು ಬಂದಿದ್ದಾರೆ. ಮುಸ್ಲಿಮರಿಂದ ಕೊಲ್ಲಲ್ಪಟ್ಟರೆ ಹಿಂದೂವಿನ ಕೊಲೆ ಎನ್ನುತ್ತಾರೆ. ಆದರೆ ಆರ್ಎಸ್ಎಸ್ನಿಂದ ಕೊಲ್ಲಲ್ಪಟ್ಟರೆ ಹಿಂದೂ ಅಲ್ಲ ಎನ್ನುತ್ತಾರೆ. ಬಿಜೆಪಿ ತನ್ನ ವೈಫಲ್ಯ ಮಾರೆಮಾಚಲು ಹಿಜಾಬ್, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ, ಹಲಾಲ್-ಜಟ್ಕಾ, ಅಜಾನ್ ನಿಷೇಧದ ಮೂಲಕ ಮುಸ್ಲಿಂ ಧರ್ಮದವರನ್ನು ಟಾರ್ಗೆಟ್ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಠಿಸಿ ಸಾಮರಸ್ಯ ಹಾಳು ಮಾಡುರುವುದು ಕಳವಳಕಾರಿ ಸಂಗತಿ. ಜಾನುವಾರು ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವ ಮೂಲಕ ರಾಜ್ಯ ಸರ್ಕಾರವೇ ಆರ್ಎಸ್ಎಸ್ ಗೂಂಡಾಗಳಿಗೆ ಮುಸ್ಲಿಮರ ಮೇಲೆ ಹಲ್ಲೆವೆಸಲು ಶಾಸನಬದ್ಧ ಹಕ್ಕು ನೀಡಿದೆ ಎಂದು ದೂರಿದರು.
ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಮಾತನಾಡಿ ಹಣ, ಅಧಿಕಾರ, ವ್ಯಾಪಾರ ಬಲದಿಂದ ಸೌಹರ್ದಾತೆ ಹಾಳು ಮಾಡಿ ದೊಡ್ಡ ಭಯೋತ್ಪಾದನೆ ಬಿತ್ತಲಾಗುತ್ತಿದೆ. ಹಿಂದೂ ಧರ್ಮದ ಹೆಸರಿನಲ್ಲಿ ಮುಸ್ಲಿಮರ ನರಮೇಧಕ್ಕೆ ಸಂಚು ನಡೆದಿದೆ. ಇದಕ್ಕೆ ಎಸ್ಸಿ, ಎಸ್ಟಿ, ಹಿಂದುಳಿದ ಯುವಕರ ತಲೆಯಲ್ಲಿ ಹಿಂದೂತ್ವ ಅಫೀಮು ಊಟಬಡಿಸಿ ತಯಾರು ಮಾಡಿದ್ದಾರೆ.
ಹೀಗಾಗಿ ನಮ್ಮ ಮಕ್ಕಳನ್ನು ರಕ್ಷಣೆ ಮಾಡಿಕೊಳ್ಳಬೇಕಾದರೆ ಗ್ರಾಮ ಮಟ್ಟದಲ್ಲಿ ಸಂವಿಧಾನದ ಮಹತ್ವ ಮತ್ತು ಆರ್ಎಸ್ಎಸ್ ಒಳತಂತ್ರದ ಕುರಿತು ಅರಿವು ಮೂಡಿಸಬೇಕು. ಜನರು ಇದ್ದಲ್ಲಿಗೆ ಹೋಗಿ ಚಳವಳಿ ಕಟ್ಟುವ ಅನಿವಾರ್ಯತೆಯಿದೆ. ಜೊತೆಗೆ ಸಿಂಧನೂರಿನಲ್ಲಿ ಒಂದೇ ನಾಣ್ಯದ ಎರಡು ಮುಖಗಳಾದ ಹಂಪನಗೌಡ ಬಾದರ್ಲಿ ಹಾಗೂ ವೆಂಕಟರಾವ್ ನಾಡಗೌಡ ಭಾವೈಕ್ಯತಾ ಸಮಾವೇಶವನ್ನು ಹತ್ತಿಕ್ಕಲು ತಮ್ಮ ಪಕ್ಷದ ರಾಜಕೀಯ ದುರೀಣರನ್ನು ಗಾಂಧಿನಗರಕ್ಕೆ ಕರೆಯಿಸಿದ್ದಾರೆ. ಅದರಲ್ಲಿ ದೇವೆಗೌಡರಿಗೆ ಸಿದ್ದಾಂತವಿಲ್ಲ ತಲೆಬುಡ ಮೊದಲೇ ಸರಿಯಿಲ್ಲ. ತಮ್ಮ ರಾಜಕೀಯ ಲಾಭಕ್ಕಾಗಿ ರಾಜಕೀಯ ರಹಿತವಾಗಿ ನಡೆಯುತ್ತಿರುವ ಸಮಾವೇಶದಲ್ಲಿ ಜನರು ಪಾಲ್ಗೊಳ್ಳದಂತೆ ವ್ಯವಸ್ಥಿತಿ ಪಿತೂರಿ ನಡೆಸಲಾಗಿದೆ. ಮುಂದಿನ ದಿನ-ಮಾನಗಳಲ್ಲಿ ಒಂದೇ ನಾಣ್ಯದ ಎರಡು ಮುಖಗಳ ರಾಜಕೀಯವನ್ನು ತಾಲೂಕಿನಲ್ಲಿ ಅಂತ್ಯಗೊಳಿಸುವುದಕ್ಕೆ ಜನತೆ ಪಣತೊಡಬೇಕೆಂದು ಕರೆ ನೀಡಿದರು. ನಂತರ ಚಿಂತಕಿ ಕೆ.ಷರೀಫಾ ಮಾತನಾಡಿದರು.

ಈ ಸಂದರ್ಭದಲ್ಲಿ ಡಾ.ಬಾಬು ಜಗಜೀವನ್ರಾಂ ಪ್ರಶಸ್ತಿ ಪುರಸ್ಕೃತ ಸಿ.ದಾನಪ್ಪ ನಿಲೋಗಲ್ರನ್ನು ಸನ್ಮಾನಿಸಲಾಯಿತು. ಲಬೀದ್ ಶಾಫೀ, ಡಿ.ಎಚ್.ಪೂಜಾರ್, ಹೆಚ್.ಎನ್.ಬಡಿಗೇರ, ಖಾದರ ಸುಭಾನಿ, ಜೆ.ಭಾರದ್ವಾಜ, ವೆಂಕೋಬ ನಾಯಕ, ಮರಿಯಪ್ಪ ಬಿಎಸ್ಪಿ, ಹಂಸರಾಜ, ಡಾ: ರಾಮಣ್ಣ ಗೋನ್ವಾರ, ಅಮೀನಪಾಷಾ ದಿದ್ದಗಿ, ನಾರಾಯಣ ಬೆಳಗುರ್ಕಿ, ನಿಡಿಗೋಳ ಮಾನವಧರ್ಮ ಪೀಠದ ಸೂಫಿ ಶರಣ, ಬಾಲಸ್ವಾಮಿ ಕೊಡ್ಲಿ, ವಿವಿಧ ಸಮಾಜಗಳ ಅಧ್ಯಕ್ಷರು ವೇದಿಕೆಯಲ್ಲಿದ್ದರು. ಜೈಭೀಮ್-ಲಾಲ್ ಸಲಾಮ್ ಕಲಾಮಂಡಳಿಯಿಂದ ಸೌಹಾರ್ದತಾ ಗೀತೆಗಳನ್ನು ಹಾಡಿದರು. ಪ್ರಧಾನ ಸಂಚಾಲಕ ಎಂ.ಗಂಗಾಧರ್,ತಿಮ್ಮಣ್ಣ ರಾಮತ್ನಾಳ, ನಿರುಪಾದೆಪ್ಪ ಗುಡಿಹಾಳ,ಜೆ.ರಾಯಪ್ಪ, ವಿಜಯಕುಮಾರ,ದವಲಸಾಬ ದೊಡ್ಡಮನಿ, ಮಾಬುಸಾಬ ಬೆಳ್ಳಟ್ಟಿ, ಅಲ್ಲಮಪ್ರಭು ಪೂಜಾರ್ ಅನೇಕರು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
