ಪ್ರಸ್ತುತ ವರ್ಷದ ಬಸ್ ಪಾಸ್ ಅನ್ನು ಉಚಿತವಾಗಿ ಒದಗಿಸಲು ಆಗ್ರಹಿಸಿ ಸಾರಿಗೆ ಸಚಿವರಿಗೆ ಮನವಿ.
ಇಂದು AIDSO ವಿದ್ಯಾರ್ಥಿ ಸಂಘಟನೆಯ ನೀಯೊಗಯಿಂದ ಪ್ರಸ್ತುತ ವರ್ಷದ ಬಸ್ ಪಾಸ್ ಅನ್ನು ಉಚಿತವಾಗಿ ಒದಗಿಸಬೇಕೆಂದು ಮಾನ್ಯ ಸಾರಿಗೆ ಸಚಿವರಾದ ಶ್ರೀ ಬಿ. ಶ್ರೀ ರಾಮುಲು ಮನವಿ ಸಲ್ಲಿಸಲಾಯಿತು.

ನಿಮಗೆ ತಿಳಿದಿರುವಂತೆ ಹಿಂದಿನ ವರ್ಷದ ವಿದ್ಯಾರ್ಥಿ ಬಸ್ ಪಾಸ್‌ನ ವಿಸ್ತರಣೆಯ ಅವಧಿ ಮುಗಿದಿದೆ. ಆದರೆ ಇನ್ನೂ ಕೆಲವು ಕೋರ್ಸ್ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿವೆ, ಮತ್ತೆ ಕೆಲವು ಕೋರ್ಸ್ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗಿದೆ. ವಿದ್ಯಾರ್ಥಿಗಳು ಈಗ ತಮ್ಮ ಹಳ್ಳಿ – ಊರುಗಳಿಂದ ಶಾಲಾ-ಕಾಲೇಜಿಗೆ ಬರಬೇಕಾದರೆ ಬಸ್ ಟಿಕಟ್‌ನ ದರ ಪಾವತಿಸಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಬಹಳಷ್ಟು ದೂರದ ಕಿ.ಮೀ ಪ್ರಯಾಣ ಮಾಡುವ ವಿದ್ಯಾರ್ಥಿಗಳಿಗೆ ಬಹುಮುಖ್ಯವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಟಿಕೆಟ್ ದರ ಹೊರೆಯಾಗಿ ಪರಿಣಮಿಸಿದೆ. ಕಳೆದ ಒಂದೂವರೆ ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕ ಜನರ ಜೀವನವನ್ನು ಅತ್ಯಂತ ದುರ್ಭರಗೊಳಿಸಿದೆ. ಅಸಂಖ್ಯಾತ ಜನ ಬಡ ಕುಟುಂಬಕ್ಕೆ ಸೇರಿದವರು ಜೀವನೋಪಾಯಕ್ಕಾಗಿ ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುವ ಸಂದರ್ಭ ಉಂಟಾಗಿದೆ ಮತ್ತು ಇವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರದ ಸೌಲಭ್ಯವನ್ನು ಅವಲಂಬಿಸಿರುತ್ತಾರೆ. ಕಳೆದ ವರ್ಷ ವಿದ್ಯಾರ್ಥಿಗಳು ಪಡೆದಿದ್ದ ವಾರ್ಷಿಕ ಬಸ್‌ಪಾಸ್ ಸಂಪೂರ್ಣವಾಗಿ ಉಪಯೋಗವಾಗಿಲ್ಲ ಎಂಬುದು ತಮಗೆ ತಿಳಿದಿದೆ. ಕೊರೋನ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಲಾಕ್‌ಡೌನ್ ಆದ ಪರಿಣಾಮ ಬಹುಪಾಲು ಶಾಲಾ-ಕಾಲೇಜಿಗೆ ರಜೆ ಘೋಷಣೆಯಾಗಿದ್ದು, ಆಫ್‌ಲೈನ್ ತರಗತಿಗಳು ನಡೆದಿಲ್ಲ. ಈ ಕಾರಣದಿಂದಾಗಿ, ವರ್ಷದ ಮೊದಲಲ್ಲೇ ಸಂಪೂರ್ಣ ಬಸ್‌ಪಾಸ್ ದರ ಪಾವತಿಸಿದ್ದರೂ, ವಾರ್ಷಿಕ ಬಸ್‌ಪಾಸ್ ಸುಮಾರು ಅರ್ಧವರ್ಷಕ್ಕೂ ಹೆಚ್ಚಾಗಿ ಬಳಕೆ ಆಗಿಲ್ಲ. ಈಗ ಮತ್ತೊಮ್ಮೆ ವಿದ್ಯಾರ್ಥಿಗಳು ವಾರ್ಷಿಕ ಬಸ್‌ಪಾಸ್‌ನ ಸಂಪೂರ್ಣ ವೆಚ್ಚ ಭರಿಸಿ ಪಡೆಯಬೇಕಾದಲ್ಲಿ, ಅವರ ಮೇಲೆ ಅತ್ಯಂತ ಹೊರೆ ಬೀಳುತ್ತದೆ. ಈಗಾಗಲೇ ಆರ್ಥಿಕವಾಗಿ ಕುಗ್ಗಿರುವ ಕುಟುಂಬಗಳಿಗೆ ಈ ವೆಚ್ಚ ಮತ್ತಷ್ಟು ಹೊರೆಯನ್ನು ತರುತ್ತದೆ.

ಮತ್ತೊಂದೆಡೆ ಕೆಲ ವರ್ಷಗಳ ಹಿಂದೆ ವಿದ್ಯಾರ್ಥಿಗಳು ನೇರವಾಗಿ ಡಿಪೋದಿಂದಲೇ ಪಾಸ್‌ಗಳನ್ನು ಪಡೆಯುತ್ತಿದ್ದರು. ಆಗ ಅರ್ಜಿ ಸಲ್ಲಿಸಿದ ತಕ್ಷಣವೇ ಪಾಸ್ ವಿತರಣೆಯಾಗುತ್ತಿತ್ತು. ನಂತರ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಕಾಲೇಜುಗಳಗೆ ಬಂದು ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಪಡೆದು ಮರುದಿನ ಪಾಸ್ ವಿತರಿಸುವ ವ್ಯವಸ್ಥೆ ಮಾಡಲಾಯಿತು. ಅಲ್ಲದೇ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ತರಲಾಗಿದ್ದು ವಿನಾಕಾರಣ ಹೆಚ್ಚುವರಿ ಹಂತದಂತಾಗಿದೆ. ಅಲ್ಲದೇ ಪ್ರಸ್ತುತ ವರ್ಷದಿಂದ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಕಾಲೇಜುಗಳಿಗೆ ಬಾರದ ಕಾರಣ ಕಾಲೇಜಿನ ಬೋಧಕ ವರ್ಗವೇ ವಿದ್ಯಾರ್ಥಿಗಳಿಂದ ಅರ್ಜಿ ಪಡೆದು ಡಿಪೋಗೆ ಸಲ್ಲಿಸುವ ಕೆಲಸ ಮಾಡಬೇಕಾಗುತ್ತಿದೆ. ಕಾಲೇಜುಗಳಿಂದ ಅರ್ಜಿ ಸಲ್ಲಿಸಿ ಒಂದು ವಾರ/ಹತ್ತು ದಿನಗಳ ಕಾಲ ಡಿಪೋ ಕಡೆಯಿಂದ ವಿಳಂಬವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ವಿದ್ಯಾರ್ಥಿಗಳ ವಿದ್ಯಾಭ್ಯಾಸವನ್ನು ಮತ್ತು ಅವರ ಆರ್ಥಿಕ ಸ್ಥಿತಿಗತಿಗಳನ್ನು ತಮ್ಮ ಗಮನದಲ್ಲಿ ಇರಿಸಿಕೊಂಡು, ಪ್ರಸ್ತುತ ವರ್ಷದ ಬಸ್‌ಪಾಸ್ ಅನ್ನು ಉಚಿತ ಮಾಡಬೇಕೆಂದು ಕೋರಿಕೊಳ್ಳುತ್ತೇವೆ. ಹಾಗೂ ಅರ್ಜಿ ಸಲ್ಲಿಸಿದ ನಂತರ ಒಂದು ದಿನವೂ ವಿಳಂಬ ಮಾಡದೇ ವಿದ್ಯಾರ್ಥಿಗಳ ಬಸ್ ಪಾಸ್ ಅನ್ನು ತಕ್ಷಣವೇ ವಿತರಿಸಬೇಕೆಂದು ರಾಜ್ಯದ ವಿದ್ಯಾರ್ಥಿಗಳ ಪರವಾಗಿ AIDSO ಜಿಲ್ಲಾ ಅಧ್ಯಕ್ಷರಾದ ಗುರಳ್ಳಿರಾಜ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಜೆ.ಸೌಮ್ಯ ಅವರು ಮನವಿ ಮಾಡಿಕೊಂಡರು.
ಬೇಡಿಕೆಗಳು :
೧. ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಸ್ತುತ ಶೈಕ್ಷಣಿಕ ವರ್ಷದ ಬಸ್‌ಪಾಸ್ ಅನ್ನು ಉಚಿತವಾಗಿ ನೀಡಿರಿ. ಈಗಾಗಲೇ ಶುಲ್ಕ ಪಾವತಿಸಿ ಪಾಸ್ ಪಡೆದಿರುವ ವಿದ್ಯಾರ್ಥಿಗಳಿಗೆ ಶುಲ್ಕವನ್ನು ಮರುಪಾವತಿ ಮಾಡಿ.
೨. ಅಲ್ಲಿಯವರೆಗೂ ಹಿಂದಿನ ವರ್ಷದ ಪಾಸ್ ಅಥವಾ ಶಾಲಾ-ಕಾಲೇಜಿನ ಗುರುತಿನ ಚೀಟಿಯೊಂದಿಗೆ ಪ್ರಯಾಣಿಸಲು ಅನುಮತಿ ನೀಡಿ.
೩. ವಿದ್ಯಾರ್ಥಿಗಳಿಗೆ ಬಸ್ ಡಿಪೋದಲ್ಲಿಯೇ ಪಾಸ್ ವಿತರಿಸುವ ವ್ಯವಸ್ಥೆ ಕಲ್ಪಿಸಿ.
೪. ವಿಳಂಬ ಮಾಡದೇ ಅರ್ಜಿ ಸಲ್ಲಿಸಿದ ತಕ್ಷಣವೇ ವಿದ್ಯಾರ್ಥಿಗಳ ಬಸ್‌ಪಾಸ್‌ನ್ನು ವಿತರಿಸಿ.ಎಂಬುದನ್ನು ಸಾರಿಗೆ ಸಚಿವರಿಗೆ ಮನವರಿಕೆ ಮಾಡುವ ಮೂಲಕ ಮನವಿ ಸಲ್ಲಿಸಲಾಯಿತು…

ವರದಿ.ಎಂ. ಎಲ್. ವೆಂಕಟೇಶ್ ಬಳ್ಳಾರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
