ಗ್ರಾಮೀಣ ಭಾಗದಲ್ಲಿ ಜೋಕುಮಾರನ ಹಬ್ಬ ವಿಶಿಷ್ಟಪೂರ್ಣ
ಓಯ್ ಬಸಕ್ಕ ಬಾರಮ್ಮ ಜೋಕಪ್ಪ ಊರಾಡಕ ಬಂದಾನ ,ಕಪ್ ತಗಳಲ್ಲೇನು ತಡಿ ತಡಿ ಬಂದೇ ಬೆಣ್ಣಿ ತರ್ತಿನಿ ತಡಿಯವ್ವಾ ರೊಟ್ಟಿ ತರ್ತೇನ ನಾಡ್ದ ಚೆರ್ಗಾ ಹೊಡೆಕ ಬೇಕಲ್ಲ ಕಪ್ ತಗಣನ ಬೇ ಯಕ್ಕಾ ನೀನು ಬಾ……ಹೀಗೆಲ್ಲ ಮಾತುಗಳು ಜೋಕುಮಾರ ಊರಾಡಲಿಕ್ಕೆ ಬಂದಾಗ ಹಳ್ಳಿ ಓಣಿಗಳಲ್ಲಿ ಮಾತಾಡುವ ಮಾತುಗಳು
ಗ್ರಾಮೀಣ ಭಾಗದಲ್ಲಿ ಈ ಹಬ್ಬವನ್ನು ಬಹು ವಿಶೇಷವಾಗಿ ಆಚರಿಸುತ್ತಾರೆ
ಮನೆಮನೆಗೆ ಬುಟ್ಟಿಯಲ್ಲಿ ಜೋಕುಮಾರನ ಹಾಡ ಹಾಡಿ ಬಾಯಿಗೆ ಬೆಣ್ಣೆ ಮೆತ್ತಿ ತಕ್ಕಂತಹಾಡು ಹಾಡಿ ತಲೆಮೇಲೆ ಹೊತ್ತು ತಿರುಗುವುದು ನಂತರ ವಿಶೇಷವಾಗಿ ಬಿಳಿಜೋಳದ ಬುತ್ತಿ ತರತರಹದ ಅಡುಗೆ ಮೂರ್ನಾಲ್ಕು ತರಹದ ರೊಟ್ಟಿ ಬಂಧು ಬಳಗವನ್ನು ಕರೆಸಿ ಹೊಲದಲ್ಲಿ ಹೋಗಿ ಚರಗಾ ಹೊಡ್ಕೊಂಡು ಅಲ್ಲಿ ಊಟ ಮಾಡುನ ಸವಿ ವಾವ್ ಅದ್ಬುತ ಬಿಡಿ ಹಾಗಾದ್ರೆ ಆ ಹಬ್ಬದ ವಿಶೇಷ ಪೂರ್ವ ಕಥೆ ತಿಳಿಯಬೇಕಲ್ವೇ ಬನ್ನಿ ಇಲ್ಲಿಯವರೆಗೂ ಹೇಗೆ ಓದಿದ್ರೋ ಹಾಗೇ ಇದೊಂದು ಲೇಖನ ಓದ್ಕೊಂಡ್ ಬರ್ರಲಾ
ಕಥೆ:
1.ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಹುಟ್ಟಿದ ಜೋಕುಮಾರ “ಜೋಕ” ಎಂಬ ಮುನಿಯ ಮಗನೆಂದೂ, ಜೇಷ್ಠಾ ದೇವಿಯ ಮಗನೆಂದೂ ಹೇಳಲಾಗುತ್ತಿದೆ. ಹುಟ್ಟಿದೊಡನೆ ಆತ ತನ್ನ ಕಾಮುಕ ಪ್ರವೃತ್ತಿಯಿಂದ ಊರವರಿಗೆಲ್ಲ ಹೊರೆಯಾಗಿ ಹೋಗುತ್ತಾನೆ.
2. ಆತನು ಶಿವನ ಗಣಗಲ್ಲಿರುವವನು, ಆತ ಗಣಪತಿಯೊಂದಿಗೆ ಬರುವನು ಆದರೆ ಆತನಿಗೆ 7 ದಿನಗಳ ಆಯಸ್ಸು ಹೀಗೆ ಅನೇಕ ಕಥೆಗಳಿವೆ.
3.ಒಮ್ಮೆ ಮಳೆಹೋಗಿ ಬೆಳೆ ಒಣಗುತ್ತದೆ. ಆಗ ಜೋಕುಮಾರ ತನ್ನಕುದುರೆ ಏರಿ ಹೊಲಗದ್ದೆಗಳಲ್ಲಿ ಸಂಚರಿಸುತ್ತಾನೆ. ಅವನು ತನ್ನ ಮೇಲು ಹೊದಿಕೆ ಒಮ್ಮೆ ಜೋರಾಗಿ ಆಕಾಶಕ್ಕೆ ಬೀಸಿದಾಗ ಮೋಡಗಳು ಮಳೆ ಸುರಿಸುತ್ತವೆ ಎಂಬ ಕಥೆಯಲ್ಲಿ ಉಲ್ಲೇಖವಾಗಿದೆ.
4.ಜೀವಿತ ಏಳು ದಿನಗಳಲ್ಲಿ ಏಳು ಅವತಾರ ಪಡೆದು ಸ್ತ್ರೀಯರನ್ನುಮೋಹಿಸುತ್ತಾನೆ. ಒಮ್ಮೆ ಮಡಿವಾಳರ ಯುವತಿ ಅವಳನ್ನು ಇಷ್ಟಪಡುತ್ತಾಳೆ. ಜೋಕುಮಾರನನ್ನು ಸಹಿಸದ ಆ ಯುವತಿ ತಂದೆ ಜೋಕುಮಾರನ ತಲೆ ಕತ್ತರಿಸಿ ನದಿಗೆ ಬಿಸಾಡುತ್ತಾನೆ. ಆ ತಲೆಯು ಒಬ್ಬಬೆಸ್ತರಿಗೆ ಸಿಗುತ್ತದೆ. ತಮ್ಮ ಬೆಳೆಗಳನ್ನು ರಕ್ಷಿಸಿ ನಮ್ಮ ಬದುಕಿಗೆ ಆಧಾರವಾದ ಜೋಕುಮಾರನ ತಲೆಯನ್ನು ಊರಿಗೆ ತಂದು ಊರವರೆಲ್ಲ ಸೇರಿ ಜೋಕುಮಾರನಿಗೆ ಪೂಜೆ ಸಲ್ಲಿಸಿದರು ಎಂದು ಕಥೆಯಲ್ಲಿ ಇವನನ್ನು ವರ್ಣಿಸಲಾಗುತ್ತದೆ.
ಮೂರ್ತಿ ನಿರ್ಮಾಣ:
ಇಂಥ ಜೋಕುಮಾರ ಹುಟ್ಟುವುದು ವಿಶ್ವಕರ್ಮರ ಮನೆಯಲ್ಲಿ. ಮಣ್ಣಿನಿಂದ ತಿದ್ದಿ, ತೀಡಿದ ಅತ್ಯಂತ ಚೆಲುವಿನಿಂದ ಕೂಡಿದ ಮೂರ್ತಿ ಇದಾಗಿರುತ್ತದೆ. ಮೂರ್ತಿ ಮಾಡಿದವರಿಗೆ ಕೊಡಬೇಕಾದ ಗೌರವ ಧನದೊಂದಿಗೆ ಎಲೆ. ಅಡಿಕೆ, ಉಲುಪಿ (ಹಿಟ್ಟು, ಬೇಳೆ, ಬೆಲ್ಲ, ಅಕ್ಕಿ) ಕೊಟ್ಟು ಪೂಜಿಸಿ ಬುಟ್ಟಿಯಲ್ಲಿಟ್ಟುಕೊಂಡು ಮೊದಲು ಗೌಡರ ಮನೆಗೆ ತರುತ್ತಾರೆ. ಗೌಡರ ಮನೆಯಲ್ಲಿ ಪೂಜೆಯಾದನಂತರ ಅವರು ಕೊಡುವ ಬಿಳಿ ಬಟ್ಟೆಯನ್ನು ಜೋಕುಮಾರನಿಗೆ ಹೊದಿಸಿ ಬೆಣ್ಣೆಯನ್ನು ಬಾಯಿಗೆ ಸವರಿ ಏಳು ದಿನಗಳ ಕಾಲ ಊರಿನ ಪ್ರತಿ ಮನೆಮನೆಗೂ ಜೋಕುಮಾರನನ್ನು ಕರೆದುಕೊಂಡು ಹೋಗುತ್ತಾರೆ.
ಮೆರವಣಿಗೆ:
ವಾಲ್ಮೆಕಿ ಜನಾಂಗದ, ಕೋಲಕಾರ, ಕಬ್ಬಲಿಗರ, ಅಂಬಿಗರ ಜನಾಂಗದ ಮಹಿಳೆಯರೇ ಹೆಚ್ಚಾಗಿ ಈ ಜೋಕುಮಾರನನ್ನು ಹೊತ್ತು ತಿರುಗುವ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಪ್ರತಿ ಮನೆಗೆ ಹೋದಾಗ ಕಟ್ಟೆಯ ಮೇಲೆ ಜೋಕುಮಾರನನ್ನು ಇಟ್ಟು ಆತನಿಗೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಾರೆ. ಆ ಹಾಡುಗಳಲ್ಲಿ ಆತನ ಜನನ, ಉಡಾಳತನ, ಆತನ ಕೊಲೆ, ನಂತರದಲ್ಲಿ “ಅಡ್ಡಡ್ಡ ಮಳೆಯಾಗಿ, ಗೊಡ್ಡೆಮ್ಮೆ ಹೈನಾಗಿ” ಎಲ್ಲವೂ ಬರುತ್ತವೆ. ಮನೆಯವರು ಕೊಡುವ ಜೋಳಕ್ಕೆ ಪ್ರತಿಯಾಗಿ ಮೊರದಲ್ಲಿ ಐದಾರು ಕಾಳು ಜೋಳ, ಬೇವಿನ ಸೊಪ್ಪು, ಒಂದಿಷ್ಟು ನುಚ್ಚನ್ನು ಇಡುತ್ತಾರೆ. ಜೋಳದ ಕಾಳನ್ನು, ಬೇವಿನ ಸೊಪ್ಪನ್ನು ಕಾಳಿನ ಸಂಗ್ರಹದಲ್ಲಿ ಹಾಕುತ್ತಾರೆ. ಹೀಗೆ ಮಾಡುವುದರಿಂದ ಪೈರುಗಳು ಹುಲುಸಾಗುತ್ತವೆ. ಧಾನ್ಯಗಳಿಗೆ ಹುಳು ಬಾಧೆ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ರೈತರ ನಂಬಿಕೆ.
ಶಾಪ (ಚವತಿ ಚಂದ್ರನ ರೀತಿ)
ಮಧ್ಯರಾತ್ರಿಯನಂತರವೇ ಜೋಕು ಮಾರನನ್ನು ಹೊತ್ತು ಕೇರಿಗೆ ಕರೆತರುತ್ತಾರೆ. ಕೇರಿಯ ಚಾವಡಿಯಲ್ಲೊಬ್ಬ ಬೆನ್ನು ಹಿಂದಕ್ಕೆ ಮಾಡಿಯೇ ಜೋಕುಮಾರನ ಬುಟ್ಟಿಯನ್ನು ತೆಗೆದುಕೊಳ್ಳುತ್ತಾನೆ. ಇಲ್ಲಿಯೂ ಬುಟ್ಟಿ ಕೊಡುವವ, ತೆಗೆದುಕೊಳ್ಳುವವ ಪರಸ್ಪರ ಒಬ್ಬರ ಮುಖವನ್ನು ಇನ್ನೊಬ್ಬರು ನೋಡುವಂತಿಲ್ಲ. ನಂತರ ಬುಟ್ಟಿಯಲ್ಲಿದ್ದ ಕಡುಬುಗಳನ್ನು ತೆಗೆಯುತ್ತಾರೆ. ಅದೇ ಸಮಯದಲ್ಲಿ ಚಾವಡಿ ಕಟ್ಟೆಯ ಮೇಲೆ ಜೋಕುಮಾರನ ಬುಟ್ಟಿಯ ಸಮೀಪ ಬಾರಿ ಮುಳ್ಳಿನ ಕಂಟಿಯನ್ನಿಟ್ಟಿರುತ್ತಾರೆ.
ಸಾವು (ಆಚರಣೆ ಕಡೆಯ ಕ್ಷಣ, ಹಲವು ವೈವಿಧ್ಯಮಯ ಆಚರಣೆ)
ವೇಶ್ಯೆಯರು ಚಾವಡಿಯಲ್ಲಿಟ್ಟಿರುವ ಜೋಕುಮಾರನ ಬುಟ್ಟಿಯ ಸುತ್ತಲೂ ಸುತ್ತುತ್ತಿರಬೇಕಾದರೆ ಪಕ್ಕದಲ್ಲಿರಿಸಲಾಗಿರುವ ಮುಳ್ಳಿನ ಕಂಟಿ ಅವರ ಸೀರೆಗೆ ಸಿಕ್ಕಿ ಜಗ್ಗಿದಾಗ “ಜೋಕುಮಾರ ನಮ್ಮನ್ನು ಹಿಡಿದುಕೊಳ್ಳಲು ಬಂದ, ನಮ್ಮ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ” ಎಂದು ಭೂಮ್ಯಾಕಾಶ ಬಿರಿಯುವಂತೆ ಬಾಯಿ ಮಾಡತೊಡಗುತ್ತಾರೆ. ಅದನ್ನು ಕೇಳಿದವರೆಲ್ಲ ಓಡಿ ಬಂದು ಜೋಕುಮಾರನನ್ನು ಒಣಕೆಯಿಂದ ಹಿಗ್ಗಾಮುಗ್ಗಾ ಥಳಿಸಿ ಕೊಂದು ಹಾಕುತ್ತಾರೆ.
ಜೋಕುಮಾರ ತನ್ನ ಹುಟ್ಟಿನ ನಂತರದ ಏಳನೇ ದಿನ ಹರಿಜನ ಕೇರಿಗೆ ಹೋಗಿ ತನ್ನ ಕೀಟಲೆಯಿಂದ ಮಾತಂಗಿಯರ ಕೈಗೆ ಸಿಕ್ಕು ಕಣ್ಣು ಕಿತ್ತಿಸಿಕೊಳ್ಳುತ್ತಾನೆ. ಮರಳಿ ಕಣ್ಣು ಕಳೆದುಕೊಂಡು ಕೇರಿಗೆ ಬಂದ ಜೋಕುಮಾರನನ್ನು ಹಿರಿಯರೊಬ್ಬರು ಒನಕೆಯಿಂದ ಆತನ ತಲೆ ಕುಟ್ಟಿ ರಾತ್ರಿ ಪಟ್ಟಣದ ಜಾಪಾನ್ ತೋಟದಲ್ಲಿ ಬಾವಿಯಲ್ಲಿ ಎಸೆಯುವುದು ಸಂಪ್ರದಾಯ.
ಕೊನೆಯ ದಿನ ಗುರುತಿಸಿದ ಮನೆಯಲ್ಲಿ ಜೋಕುಮಾರನ ಮೂರ್ತಿಗೆ ಚೂರಿ ಹಾಕುವರು. ನಂತರ ಜೋಕುಮಾರ ಸತ್ತನೆಂದು ಅಗಸರ ಬಂಡೆ ಅಡಿ ಮಣ್ಣಿನಲ್ಲಿ ಹೂತು ಹಾಕಿ ಬರುವರು. ಹೀಗೆ ಹೂತಿಡುವ ಸಂದರ್ಭದಲ್ಲಿ ವಿಧಿ ವಿಧಾನಗಳಿವೆ. ನಂತರ ಸಂಚರಿಸಿದ ಸಂದರ್ಭದಲ್ಲಿ ದೊರೆತ ಧಾನ್ಯಗಳಿಂದ ಅಡುಗೆ ಮಾಡಿ ಸಾಮೂಹಿಕ ಭೋಜನ ಮಾಡುವರು.
ಆತನ ಅಳಲು(ಶ್ರಾದ್ಧಾ)
ಹೀಗೆ ಏಳು ದಿನ ಬದುಕುವ ಜೋಕಪ್ಪ ಏಳನೇ ದಿನ ಸಾಯುತ್ತಾನೆ. ಅಂದೇ ಅಳಲು-ಅಂಬಲಿ ಎಂಬ ವಿಶಿಷ್ಟ ಆಚರಣೆ ಹೊಲಗಳಲ್ಲಿ ನಡೆಯುತ್ತದೆ. ರೊಟ್ಟಿ-ಬುತ್ತಿ ಕಟ್ಟಿಕೊಂಡು ಹೊಲಗಳಿಗೆ ಹೊಗಿ ಭೂತಾಯಿಯ ಪೂಜೆ ಮಾಡಿ ಮನೆಮಂದಿಯೆಲ್ಲಾ ಸೇರಿ ಉಂಡುಬರುವುದು ಸಂಪ್ರದಾಯ. ಅಷ್ಟೇ ಅಲ್ಲ ಈ ಅಳಲಿನಲ್ಲಿ ಹೊಸಬಟ್ಟೆ ಉಡುವಂತಿಲ್ಲ, ಒಡವೆ-ವಾಹನ ಖರೀದಿಸುವಂತಿಲ್ಲ, ಶುಭಕಾರ್ಯ ಮಾಡುವಂತಿಲ್ಲ ಎಂಬುದು ಜನಪದರ ಸ್ವಯಂಘೋಷಿತ ಸಂವಿಧಾನ.
ಜೋಕುಮಾರನ ಮರೆಯುವುದು:
ಜೋಕುಮಾರನ ಮರಣದ ನಂತರ ಅಗಸರು ಬಟ್ಟೆ ಒಗೆಯುವ ಹಳ್ಳದ ದಂಡೆಗೋ, ಕೆರೆಯ ಸಮೀಪವೋ, ನದಿ ದಂಡೆಗೋ ಒಯ್ದು ಬಿಸಾಕುತ್ತಾರೆ. ಜೋಕುಮಾರನು ಸತ್ತ ಸುದ್ದಿ ತಿಳಿದ ನಂತರವೇ ಏಳು ದಿನಗಳ ಕಾಲ ಜೋಕುಮಾರನನ್ನು ಹೊತ್ತು ತಿರುಗಿದ ಮಹಿಳೆಯರು ತಲೆಗೆ ನೀರು ಹಾಕಿಕೊಂಡು ಸ್ನಾನ ಮಾಡುತ್ತಾರೆ. ಆ ಮೇಲೆ ಮೂರು ದಿನಗಳ ಕಾಲ ಊರಿನ ಯಾವ ಮಡಿವಾಳರೂ ಬಟ್ಟೆಗಳನ್ನು ಒಗೆಯುವಂತಿಲ್ಲ. ಜೋಕುಮಾರನನ್ನು ಬಿಸಾಕಿದ ಸ್ಥಳದಲ್ಲಿ ಕಲ್ಲಿಟ್ಟು ಪೂಜಿಸಿ ಎಡೆ ತೋರಿಸಿ “ದಿನ” ಮಾಡಿ ಮುಗಿಸಿ ತಮ್ಮ ಕಾಯಕ ಪ್ರಾರಂಭಿಸುತ್ತಾರೆ.
ಹಾಡು:
ಅಡ್ಡಡ್ಡ ಮಳೆ ಬಂದು, ದೊಡ್ಡ ದೊಡ್ಡ ಕೆರೆ ತುಂಬಿ, ಗೊಡ್ಡಗಳೆಲ್ಲ ಹೈನಾಗಿ ಜೋಕುಮಾರ, ಜೋಕುಮಾರ…
ಜೋಕುಮಾರ…. ಮಡಿವಾಳ ಕೇರಿ ಹೊಕ್ಕಾನ ಜೋಕುಮಾರ ಮುಡಿತುಂಬಾ ಹೂವ ಮುಡಿದಂತ ಚೆಲುವಿನ ತನ್ನ ಮಡಿಯಂದಾ ಜೋಕಮಾರ.
ಸಂಗ್ರಹ
ಕಾರ್ತಿಕ ಆಚಾರ್ಯ.ಕೆ
ಅರೆ ವೈದ್ಯಕೀಯ ವಿದ್ಯಾರ್ಥಿ
ಎಂ.ಕಲ್ಲಹಳ್ಳಿ.

ವರದಿ. ಪ್ರಕಾಶ್, ಇಟ್ಟಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
