ಶಾಂತಿಯುತ ಹಾಗೂ ನಿಷ್ಪಕ್ಷಪಾತ ಚುನಾವಣೆಗೆ ಸಿದ್ದತೆ: ಹೆಚ್.ಎಸ್.ಕೀರ್ತನಾ
ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಂತಿಯುತ, ಪಾರದರ್ಶಕ ಹಾಗೂ ನಿಷ್ಪಕ್ಷಪಾತ ಚುನಾವಣೆ ನಡೆಸಲು ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹೆಚ್.ಎಸ್.ಕೀರ್ತನಾ ಅವರು ತಿಳಿಸಿದರು.
ಅವರು ಇಂದು ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದರು.
ಏ.13 ರಂದು ವಿಧಾನಸಭೆ ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು , ನಾಮಪತ್ರ ಸಲ್ಲಿಕೆಗೆ ಏ.20 ಕೊನೆಯ ದಿನಾಂವಾಗಿರುತ್ತದೆ. ಏ.21 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏ.24 ಉಮೇದುವಾರಿಕೆ ಹಿಂಪಡೆಯಲು ಕಡೇ ದಿನ. ಮೇ 10 ರಂದು ಮತದಾನ ನಡೆಯಲಿದೆ. ಮೇ 13 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ ಎಂದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 2,16,494 ಮತದಾರರಿದ್ದು, ಅವರಲ್ಲಿ 1,06,122 ಪುರುಷರು, 1,10,339 ಮಹಿಳಾ ಮತದಾರರು ಹಾಗೂ 33 ತೃತೀಯ ಲಿಂಗಿ ಮತದಾರರಿದ್ದಾರೆ. ಈ ಬಾರಿ 18 ವರ್ಷ ತುಂಬಿದ 2421ಜನರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ.
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 254 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಈ ಪೈಕಿ ನಗರ ಪ್ರದೇಶದಲ್ಲಿ 113, ಗ್ರಮೀಣ ಪ್ರದೇಶದಲ್ಲಿ 141 ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದರು.
ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಬಂಧ
20 ಮಂದಿ ಸೆಕ್ಟರ್ ಆಫೀಸರ್, 5 SST ತಂಡ 4 FST ತಂಡ, 2 VST ತಂಡ, 1 VVT ತಂಡ ನಿಯೋಜಿಸಲಾಗಿದೆ ಎಂದರು.
ಮಹಿಳೆಯರೆ ನಿರ್ವಹಿಸುವ 2-ಸಖಿ ಮತಗಟ್ಟೆ, ವಿಕಲಚೇತನರು ನಿರ್ವಹಿಸುವ -1 ಮತಗಟ್ಟೆ, 5 – ಎಥ್ನಿಕ್ ಮತಗಟ್ಟೆ ಹಾಗೂ 2-ಯುವ ಮತದಾರರ ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮವಹಿಸಲಾಗಿದೆ
ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2 ‘ಸಖಿ’ ಮತಗಟ್ಟೆ, ವಿಕಲಚೇತನ ಮತದಾರರಿಗೆ 1, ಎಥ್ನಿಕ್ ಮತಗಟ್ಟೆ5 ಮತ್ತು ಹೆಚ್ಚು ಯುವ ಮತದಾರಿರುವ ಕಡೆ 2 ಯುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ, 80 ವರ್ಷ ಮೇಲ್ಪಟ್ಟ ಮತ್ತು ವಿಕಲಚೇತರಿಗೆ ಅಂಚೆ ಮೂಲಕ ಮತಚಲಾಯಿಸಲು ಅವಕಾಶ ನೀಡಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ವಯಸ್ಸಾದವರಿಗೆ ವಿಶೇಷ ಚೇತನ ಮತದಾರರಿಗೆ ವೀಲ್ ಚೇರ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಎಲ್ಲಾದರೂ ಉಲ್ಲಂಘನೆಯಾಗುತ್ತಿದ್ದರೆ ಸಾರ್ವಜನಿಕರು ಸಿ-ವಿಜಿಲ್ ಆ್ಯಪ್ ಮೂಲಕ ದೂರು ದಾಖಲಿಸಬಹುದು. ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಕ್ರಮ ವಹಿಸುತ್ತಾರೆ ಎಂದರು.
ಮತಗಟ್ಟೆಗಳಲ್ಲಿ ಮತದಾರರಿಗೆ ಯಾವುದೇ ರೀತಿಯ ತೊಂದರೆಯಾಗದoತೆ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಪುರುಷ ಹಾಗೂ ಮಹಿಳಾ ಮತದಾರರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಅಗತ್ಯ ಕ್ರಮ ವಹಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ವಿಜಯಕುಮಾರ್ ಉಪಸ್ಥಿತರಿದ್ದರು…

ವರದಿ. ಸುರೇಶ್. ಕೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
