;

ಶುಭಕ್ರತ್ ಸಂವತ್ಸರದ ಆಗಮನಕ್ಕೆ ಪ್ರಕೃತಿ ನಾಕವನ್ನೇ ನಾಚಿಸುವಂತಾಗಿದೆ!!

ಶುಭಕ್ರತ್ ಸಂವತ್ಸರದ ಆಗಮನಕ್ಕೆ ಪ್ರಕೃತಿ ನಾಕವನ್ನೇ ನಾಚಿಸುವಂತಾಗಿದೆ!!
(ಹಬ್ಬಗಳ ಅನಾವರಣಕ್ಕೆ ಯುಗಾದಿಯೇ ನೆಲೆಗಟ್ಟು)

ಶರಣು ಶರಣಾರ್ಥಿ ಮತ್ತೊಂದು ವಿಶೇಷ ಚಿಂತನೆಯೊಂದಿಗೆ ಮತ್ತೆ ನಿಮ್ಮ ಮುಂದೆ …..ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ. ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ
ಹೊಂಗೆ ಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತ್ತಿದೆ, ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯು ತರುತಿದೆ
ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ, ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೋ
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ….ದ.ರಾ ಬೇಂದ್ರೆ ಅವರ ಈ ಕವಿತೆ ಸುಪ್ರಸಿದ್ಧವಾದದ್ದು… ಹೊಸ ವರ್ಷ, ಹೊಸ ನಿರೀಕ್ಷೆಗಳ ಜೊತೆ ಯುಗಾದಿ ಹಬ್ಬ ಮತ್ತೆ ಬಂದಿದೆ. ಹಿಂದೂ ಪಂಚಾಂಗದ ಪ್ರಕಾರ ಯುಗಾದಿಯಿಂದಲೇ ಹೊಸ ವರ್ಷದ ಮೊದಲ ದಿನ ಆರಂಭವಾಗುತ್ತದೆ. ಹೊಸದಾದ ಪ್ರಕೃತಿ ನಳನಳಿಸುವ ಗಿಡಮರಬಳ್ಳಿಗಳು ಪ್ರಕೃತಿಮಾತೆ ಅಲಂಕೃತಳಾಗೀ ಧರೆಗಿಳಿದ್ದಾಳೆಗೋ ಎನ್ನುವಂತಾಗಿಬಿಡುತ್ತದೆ ಹಾಗಾದ್ರೆ ಬನ್ನಿ ಆ ವಿಶೇಷ ಪರ್ವದ ವಿಶೇಷತೆಯ ಬಗ್ಗೆ ಒಂದಿಷ್ಟು ಚಿಂತನೆಗೈಯೋಣ.

ಇಂದಿನಿಂದ ಶುಭಕ್ರತ್ ಸಂವತ್ಸರ ಪ್ರಾರಂಭ ಸನಾತನ ಆಚರಣಾ ವಿಧಿಯನ್ನು ಅನುಸರಿಸುವ ಪ್ರತಿಯೋರ್ವರಿಗೂ ಈ ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. “ಯುಗಾದಿ” ಪದದ ಉತ್ಪತ್ತಿ “ಯುಗ+ಆದಿ” – ಹೊಸ ಯುಗದ ಆರಂಭ ಎಂದು.

ಯುಗಾದಿಯನ್ನು ಬ್ರಹ್ಮಾಂಡದ ಸೃಷ್ಟಿಯ ಮೊದಲ ದಿನ ಎನ್ನುವ ನಂಬಿಕೆಯಿದೆ. 12 ನೇ ಶತಮಾನದಲ್ಲಿ ಪ್ರಸಿದ್ಧ ಭಾರತೀಯ ಗಣಿತಜ್ಞ ಭಾಸ್ಕರಾಚಾರ್ಯರ ಖಗೋಳ ಲೆಕ್ಕಾಚಾರವು ಸೂರ್ಯೋದಯದಿಂದ ಯುಗಾದಿಯ ದಿನವನ್ನು ಹೊಸ ವರ್ಷದ ಆರಂಭ, ಹೊಸ ತಿಂಗಳು ಮತ್ತು ಹೊಸ ದಿನವೆಂದು ನಿರ್ಧರಿಸಿದರು. ಚೈತ್ರದ ಪ್ರಕಾಶಮಾನವಾದ ಹದಿನೈದನೆಯ ಮುಂಜಾನೆ ಶ್ರೀ ಕೃಷ್ಣನ ನಿರ್ಯಾಣವನ್ನು ಪ್ರಾರಂಭಿಸದನು ಎಂದು ಹೇಳಲಾಗುತ್ತದೆ. ಈ ದಿನ ಕಲಿಯುಗದ ಆರಂಭವನ್ನು ಸೂಚಿಸುತ್ತದೆ. ಆದ್ದರಿಂದ ಯುಗಾದಿಯನ್ನು ಕಲಿಯುಗದ ಆರಂಭ ಎಂಬುದು ನಂಬಿಕೆ.

#ಯುಗಾದಿಯ ದಿನದಂದು ಜನರು ನಡೆಸುವ ಕೆಲವು ಆಚರಣೆಗಳು.

ಯುಗಾದಿಯ ದಿನದಂದು ಜನರು ಬೆಳಿಗ್ಗೆ ಸೂರ್ಯೋದಕ್ಕೂ ಮುನ್ನವೇ ಏಳುತ್ತಾರೆ ಮತ್ತು ಹರಳೆಣ್ಣೆಯನ್ನು ತಲೆಗೆ ಹಾಕಿ ಸ್ನಾನ ಮಾಡುತ್ತಾರೆ. ಹಾಗಾದ್ರೆ ಜನರು ಹರಳೆಣ್ಣೆ ತಲೆಗೆ ಸವರಿಕೊಂಡು ಸ್ನಾನ ಮಾಡುವುದರ ಹಿಂದಿರುವ ಕಾರಣವೇನು? ಖಂಡಿತವಾಗ್ಲೂ ಇದಕ್ಕೊಂದು ವೈಜ್ಞಾನಿಕ ಕಾರಣವಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆ ಕಾರಣವೇನು ಎಂಬ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.
ಭೂಮಿಯ ಉತ್ತರ ಗೋಳಾರ್ಧವು ಸೂರ್ಯನ ಅತ್ಯುನ್ನತ ಶಕ್ತಿಯನ್ನು ಪಡೆದುಕೊಳ್ಳುವುದರಿಂದಾಗಿ ಆ ಹೆಚ್ಚಿನ ತಾಪಮಾನವನ್ನು ಮನುಷ್ಯನಿಗೆ ಸ್ವಲ್ಪ ಅನಾನುಕೂಲವಾಗಿರುತ್ತದೆ.ಅದೇ ಕಾರಣಕ್ಕೆ ನಾವು ಹರಳೆಣ್ಣೆಯಂತಹ ಕೂಲಿಂಗ್ ಏಜೆಂಟ್ ನ್ನು ಬಳಕೆ ಮಾಡಬೇಕಾಗುತ್ತದೆ. ವರ್ಷದ ಶಾಖದ ದಿನಗಳನ್ನು ಕಳೆಯುವುದಕ್ಕೆ ದೇಹವನ್ನು ಸಜ್ಜುಗೊಳಿಸುವ ಒಂದು ಪ್ರಕ್ರಿಯೆ ಇದಾಗಿದ್ದು ಯುಗಾದಿಯು ಇದರ ಪ್ರಾರಂಭವಾಗಿದೆ.
ಇದಾದ ನಂತರ ಜನರು ತಾಜಾ ಮಾವಿನ ಎಲೆಗಳಿಂದ ಮನೆಯ ಮುಂಭಾಗವನ್ನು ಅಲಂಕರಿಸುತ್ತಾರೆ. ಇದಕ್ಕೂ ಕೂಡ ವೈಜ್ಞಾನಿಕ ಕಾರಣವಿದೆ. ಹೀಗೆ ತಾಜಾ ಮಾವಿನ ಎಲೆಗಳನ್ನು ಮನೆಯ ಮುಂಭಾಗದಲ್ಲಿ ಹಾಕುವುದರಿಂದಾಗಿ ತಾಜಾ ಗಾಳಿ ಮನೆಯೊಳಗೆ ಪ್ರವೇಶಿಸುತ್ತದೆ ಮತ್ತು ಇದು ತಂಪಾದ ಅನುಭವವನ್ನು ಮನೆಯೊಳಗೆ ನೀಡುತ್ತದೆ.
ಜನರು ಹೊಸ ಬಟ್ಟೆಗಳನ್ನು ತೊಡುತ್ತಾರೆ ಯಾಕೆಂದರೆ ಇದರಿಂದ ಅವರೊಳಗೊಂದು ಹೊಸತನದ ಭಾವನೆ ಹುಟ್ಟುತ್ತದೆ.

#ಯುಗಾದಿ ದಿನದಂದು ಮಾಡುವ ಇತರೆ ಆಚರಣೆಗಳು.

ತುಪ್ಪದಲ್ಲಿ ಪ್ರತಿಫಲನ: ಯುಗಾದಿ ದಿನದಂದು ಕರಗಿಸಿದ ತುಪ್ಪವನ್ನು ಒಂದು ಬೌಲ್ ನಲ್ಲಿ ಹಾಕಿ ಮುಖವನ್ನು ನೋಡಿಕೊಳ್ಳುವ ಪದ್ದತಿ ಕೆಲವು ಕಡೆಗಳಲ್ಲಿ ರೂಢಿಯಲ್ಲಿದೆ.
ಎಣ್ಣೆ(ಆಯಿಲ್) ಶಾಸ್ತ್ರ: ಕುಟುಂಬದ ಹಿರಿಯ ಮಹಿಳೆಯು ಕುಟುಂಬದ ಕಿರಿಯ ಸದಸ್ಯರಿಗೆ ಕುಂಕುಮ ಹಚ್ಚಿ ಆರತಿ ಎತ್ತುವ ಪದ್ದತಿ ರೂಢಿಯಲ್ಲಿದೆ.
ಅಭ್ಯಂಗ: ಕುಟುಂಬದ ಎಲ್ಲಾ ಸದಸ್ಯರು ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದು ಹಬ್ಬದ ದಿನದಂದು ರೂಢಿಯಲ್ಲಿರುವ ಶಾಸ್ತ್ರಗಳಲ್ಲಿ ಒಂದೆನಿಸಿದೆ.
ಹೊಸ ಬಟ್ಟೆಗಳು: ಕುಟುಂಬದ ಎಲ್ಲಾ ಸದಸ್ಯರು ಹೊಸ ಬಟ್ಟೆಗಳನ್ನು ಧರಿಸುವುದು.
ದೇವರಿಗೆ ಅಭ್ಯಂಗ ಸ್ನಾನ: ದೇವರ ಪ್ರತಿಮೆಗಳಿಗೆ ಎಣ್ಣೆಯ ಅಭ್ಯಂಗ ಸ್ನಾನ ಮಾಡಲಾಗುತ್ತದೆ.
ಹೂವುಗಳು: ಬೇವು, ಮಾವು ಮತ್ತು ಹುಣಸೆ ಹೂವುಗಳನ್ನು ದೇವರಿಗೆ ಸಮರ್ಪಿಸಲಾಗುತ್ತದೆ.
ಪೂಜೆ: ಅಭಿಷೇಕ, ಅಲಂಕಾರ, ನೈವೇದ್ಯ ಮತ್ತು ಮಂಗಳಾರತಿಯನ್ನು ಹಂತಹಂತವಾಗಿ ಮಾಡುವ ಮೂಲಕ ಪೂಜಾ ವಿಧಾನವನ್ನು ನೆರವೇರಿಸಲಾಗುತ್ತದೆ.
ಪಂಚಾಂಗ ಪೂಜೆ: ದೇವರನ್ನು ಪ್ರಾರ್ಥೆನೆಗೈದ ನಂತರ ಹೊಸ ಸಂವತ್ಸರಕ್ಕಾಗಿ ಅಥವಾ ಹೊಸ ವರ್ಷಕ್ಕಾಗಿ ಹೊಸ ಪಂಚಾಂಗ ಶ್ರವಣ ಮತ್ತು ಅದರ ಪೂಜಾ ಕೈಂಕರ್ಯವನ್ನು ಕೈಗೊಳ್ಳಲಾಗುತ್ತದೆ.
ಗುಡಿ ಅಥವಾ ಇಂದ್ರ ತಾಜಾ ಪೂಜೆ: ಇಂದ್ರ ತಾಜಾ ಪೂಜೆಯನ್ನು ನಡೆಸಲಾಗುತ್ತದೆ.
ಮುಂಭಾಗದ ಬಾಗಿಲಿಗೆ ಅಲಂಕಾರ: ಕೆಮ್ಮಣ್ಣು( ಕೆಂಪು ಮಣ್ಣು) , ರಂಗೋಲಿ ಮತ್ತು ಮಾವಿನ ಎಲೆಗಳಿಂದ ಬಾಗಿಲಿನ ಮುಂಭಾಗವನ್ನು ಅಲಂಕರಿಸುವುದು. ಕೆಲವೊಮ್ಮೆ ಬೇವಿನ ಎಲೆಗಳನ್ನು ಕೂಡ ಬಳಸಲಾಗುತ್ತದೆ.
ಬೇವು ಬೆಲ್ಲ: ಹಬ್ಬದಲ್ಲಿ ಬೆಲ್ಲ ಮತ್ತು ಬೇವನ್ನು ಸೇವಿಸುವುದೆಂದರೆ ಸಿಹಿ ಮತ್ತು ಕಹಿ ಘಟನೆಗಳೆರಡನ್ನೂ ಕೂಡ ಜೀವನದಲ್ಲಿ ಸಮಾನ ದೃಷ್ಟಿಯಲ್ಲಿ ಎದುರಿಸುವಿಕೆ ಎಂದರ್ಥ.
ಊಟ: ದೇವರಿಗೆ ಊಟವನ್ನು ತಯಾರಿಸಿ ನೇವೇದ್ಯ ಮಾಡಿ ನಂತರ ಪ್ರಸಾದದ ರೂಪದಲ್ಲಿ ಆ ಊಟವನ್ನು ಸೇವಿಸುವುದು.
ದೇವಸ್ಥಾನಕ್ಕೆ ಭೇಟಿ ನೀಡುವುದು: ದೇವಸ್ಥಾನಗಳಿಗೆ ಭೇಟಿ ನೀಡುವುದು ಮತ್ತು ದೇವರಿಗೆ ಸರ್ವವೂ ಒಳಿತಾಗಳಿ ಎಂದು ಪ್ರಾರ್ಥಿಸುವುದು.
ಯುಗಾದಿ ಹಬ್ಬದಲ್ಲಿ ಬೇವುಬೆಲ್ಲ ಮಿಶ್ರಣವನ್ನು ಸೇವಿಸುವಾಗ ಹೇಳಬೇಕಿರುವ ಸ್ತೋತ್ರ

| |ಶತಾಯುರ್ ವಜ್ರ ದೇಹಾಯ. ಸರ್ವ ಸಂಪತ್ ಕರಾಯಚ. ಸರ್ವಾ ರಿಷ್ಟ ವಿನಾಶಾಯ, ನಿಂಬಕಂ ದಲ ಭಕ್ಷಣಂ|l

ಮೇಲಿನ ಶ್ಲೋಕದ ಅರ್ಥವೇನೆಂದರೆ

“ನನ್ನ ದೇಹವು ವಜ್ರದಂತೆ ನೂರು ವರ್ಷಕ್ಕೂ ಅಧಿಕ ಅವಧಿಗಾಗಿ ಹೆಚ್ಚು ಶಕ್ತಿಯುತವಾಗಲಿ.; ಓ ದೇವರೆ ನನಗೆ ಸಂಪತ್ತು ಮತ್ತು ಸಮೃದ್ಧಿಯನ್ನು ಕರುಣಿಸು.ಈ ಪ್ರಾರ್ಥನೆಯ ಮೂಲಕ ವಿಶ್ವದಲ್ಲಿರುವ ಎಲ್ಲಾ ಕೆಟ್ಟದ್ದನ್ನು ನಾಶಗೊಳಿಸು. ಅದಕ್ಕಾಗಿ ನಾನು ಈ ಕಹಿಬೇವು ಮತ್ತು ಬೆಲ್ಲವನ್ನು ಸೇವಿಸುತ್ತಿದ್ದೇನೆ”

ಜೀವನ ಅನ್ನುವುದು ಸಿಹಿ ಮತ್ತು ಕಹಿಯ ಮಿಶ್ರಣವಾಗಿದೆ. ಈ ಏರಿಳಿತವನ್ನು ನಿಭಾಯಿಸಲು ನಾನು ಕಲಿಯುತ್ತೇನೆ.
ಇದರ ಆಂತರಿಕ ಮಹತ್ವವೆಂದರೆ ಜೀವನವು ಒಳ್ಳೆಯದು ಮತ್ತು ಕೆಟ್ಟದು, ಸಂತೋಷ ಮತ್ತು ದುಃಖ, ಯಶಸ್ಸು ಮತ್ತು ನಿರಾಶೆಯ ಮಿಶ್ರಣವಾಗಿದೆ ಮತ್ತು ಇವುಗಳೆಲ್ಲವನ್ನೂ ಒಂದೇ ರೀತಿ ಪರಿಗಣಿಸಬೇಕು.
ಎಲ್ಲಾ ಅನುಭವವನ್ನು ನಾನು ಸಮಾನ ದೃಷ್ಟಿಯಲ್ಲಿ ಪರಿಗಣಿಸುತ್ತೇನೆ
ಪ್ರತಿಯೊಬ್ಬರೂ ಕೂಡ ಈ ವರ್ಷದಲ್ಲಿ ಏನಾಗುತ್ತದೆಯೋ ಅದನ್ನು ಶಾಂತವಾಗಿ ಎದುರಿಸಲು ನಿರ್ಧರಿಸಬೇಕು,ಅದನ್ನು ಉತ್ತಮ ಅನುಗ್ರಹದಿಂದ ಸ್ವೀಕರಿಸಬೇಕು, ಪ್ರತಿಯೊಂದನ್ನು ಕೂಡ ಪ್ರತಿಯೊಬ್ಬರ ಒಳಿತಿಗೆಂದು ಪರಿಗಣಿಸಬೇಕು.
ಪುರುಷರು ದುಃಖ, ಸಂತೋಷ,ಯಶಸ್ಸು ಮತ್ತು ವೈಫಲ್ಯವನ್ನು ಮೀರಿ ನಿಲ್ಲಬೇಕು.ಯುಗಾದಿಯಂತಹ ಶುಭ ದಿನವನ್ನು ನಮ್ಮ ಜೀವನವನ್ನು ಬದಲಾಯಿಸುವ ಮತ್ತು ನಮ್ಮೆಲ್ಲಾ ಕೆಟ್ಟ ಗುಣಗಳನ್ನು ತ್ಯಜಿಸುವ ಮೂಲಕ ನಮ್ಮ ನಡವಳಿಕೆಯಲ್ಲಿ ಬದಲಾವಣೆಯ ನಿರ್ಣಯ ಕೈಗೊಳ್ಳುವುದಕ್ಕೆ ಬಳಸಬೇಕು.

ಹೌದು ಸನಾತನ ಧರ್ಮದ ಆಚರಣೆಗಳು ವಿಶಿಷ್ಟ ಹಾಗೂ ವೈಶಿಷ್ಟ್ಯ ಪೂರ್ಣವೇ ಆಗಿವೆ ಆಧ್ಯಾತ್ಮಿಕತೆಯನ್ನು ಆಧರಿಸಿದ ಆಚರಣೆಗಳು ಸಹ ವೈಜ್ಞಾನಿಕವಾಗಿಯೂ ಸ್ವೀಕರಿಸುವ ಆಚರಣೆಯೂ ಸಹ ಆಗಿವೆ
ಈ ಅರ್ಥಪೂರ್ಣ ಹಬ್ಬವು ಪ್ರಕೃತಿಯಲ್ಲಿಷ್ಟೇ ಹೊಸತನದಂತೆ ಆಗದೆ ತಮ್ಮೆಲ್ಲರ ಬದುಕಿನಲ್ಲಿ ಹೊಸತನವ ತರಲಿಹೊಸಭಾವ ಚಿಗುರಲಿ,ನವಭಾವ-ನವಜೀವ,ಎನ್ನುವಂತೆ ಸಕಲರೆದೆಯಲಿ ನವಿನತೆ ಮೂಡಿ ಬದುಕು ಬಂಗಾರವಾಗಲಿ ಭಗವಂತ ಮಂಗಲವನ್ನುಂಟುಮಾಡಲಿ ಎನ್ನುತ್ತಾ ನನ್ನ ಒಂದಿಷ್ಟು ಚಿಂತನೆಯ ಪೂರವನ್ನು ಅರ್ಪಿಸುತ್ತಿದ್ದೆನೆ ಇಲ್ಲಿಯವರೆಗೂ ನೀಡಿದ ಪ್ರೀತಿ,ಅಭಿಮಾನ,ಪ್ರೋತ್ಸಾಹ ಹೀಗೆ ಇರಲಿ ಶರಣು ಶರಣಾರ್ಥಿ..

ವರದಿ. ಪ್ರಕಾಶ್, ಇಟ್ಟಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend