ನಗರಸಭೆ ಬಳಿ ಭೀಕರ ಅಪಘಾತ: ಡಿವೈಡರ್ ಗೆ ಗುದ್ದಿದ ಮರಳು ತುಂಬಿದ ಟಿಪ್ಪರ್ ಲಾರಿ !
ಸಿಂಧನೂರು : ರಾಯಚೂರು ರಸ್ತೆಯ ಸಿಂಧನೂರು ತಾಲೂಕಿನ ನಗರಸಭೆ ಮುಂಭಾಗದಲ್ಲಿ ರಾಯಲ್ಟಿ ಇಲ್ಲದೆ ಮರಳು ತುಂಬಿದ ಟಿಪ್ಪರ್ ಮಾನ್ವಿಯ ಲೋಕೇಶ ಸೇರಿದೆ ಎಂಬಲಾದ ಕೆಎ 36 ಬಿ 7453 ಅಕ್ರಮ ಮರಳು ತುಂಬಿಕೊಂಡು ಲಾರಿಯೊಂದು ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಮಾನ್ವಿ ಕಡೆಯಿಂದ ಸಿಂಧನೂರುಗೆ ಮರಳು ತುಂಬಿಕೊಂಡು ಚಲಿಸುತ್ತಿದ್ದ ಲಾರಿ ಇದಾಗಿದ್ದು ಇಂದು ಬೆಳಗಿನ ಜಾವ ಸುಮಾರು 4 :00 ರಿಂದ 5:00 ರ ಸಮಯದಲ್ಲಿ ಈ ಘಟನೆ ನಡೆದಿದೆ. ಲಾರಿಯಲ್ಲಿದ್ದ ಚಾಲಕ ಪರಾರಿಯಾಗಿದ್ದು ಎಂದು ತಿಳಿದುಬಂದಿದೆ.ಚಾಲಕ ನಿದ್ದೆ ಮಂಪರಿನಲ್ಲಿ ಅತೀ ವೇಗವಾಗಿ ಇದ್ದುದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳದಲ್ಲಿದ್ದ ಸ್ಥಳೀಯರು ತಿಳಿಸಿದ್ದಾರೆ.
ತಾಲ್ಲೂಕಿನಾದ್ಯಂತ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಇದಕ್ಕೆ ಅಂಕುಶ ಹಾಕುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆಂದು ಸಾರ್ವಜನಿಕರು ದೂರಿದ್ದಾರೆ.
ಎಲ್ಲೆಡೆ ಅಕ್ರಮದ್ದೇ ಕಾರುಬಾರು ಮರಳು ದಂಧೆಯು ತಾಲೂಕಿನಾದ್ಯಂತ ಎಗ್ಗಿಲ್ಲದೇ ನಡೆಯುತ್ತಿದ್ದು, ಪೊಲೀಸರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
ರಾತ್ರಿ ಪೂರಾ ದಂಧೆ : ಅಕ್ರಮ ಮರಳು ಸಾಗಾಟ ರಾತ್ರಿ ಪೂರ್ತಿ ನಡೆಯುತ್ತದೆ.ಬೆಳಗಾಗುವಷ್ಟರಲ್ಲಿ ಎಲ್ಲವೂ ನಿಂತು ಹೋಗಿ ಏನೂ ಆಗಿಲ್ಲವೆಂಬಂತೆ ಪರಿಸ್ಥಿತಿ ನೆಲೆಸುತ್ತಿದೆ. ಈ ದಂಧೆ ಪೊಲೀಸರ ಕೃಪಾಶೀರ್ವಾದದಿಂದಲೇ ನಡೆಯುತ್ತಿದೆ ಎಂಬ ಅನುಮಾನ ಜನರದ್ದು.
ಲಾರಿ, ಟ್ರಾಕ್ಟರ್ ಆರ್ಭಟ: ರಾತ್ರಿ ವೇಳೆ ಓಡಾಟ ನಡೆಸುವವರಿಗೆ ಲಾರಿ ಮತ್ತು ಟ್ರಾಕ್ಟರ್ಗಳ ಆರ್ಭಟ ಕಾಣಿಸುತ್ತದೆ. ಜನರಿಗೆ ಎಲ್ಲೆಂದರಲ್ಲಿ ಕಾಣ ಸಿಗುವ ಮರಳು ತುಂಬಿದ ಲಾರಿ ಮತ್ತು ಟ್ರಾಕ್ಟರ್ಗಳು ಪೊಲೀಸರ ಕಣ್ಣಿಗೆ ಏಕೆ ಬೀಳುವುದಿಲ್ಲ ಎಂಬ ಅಚ್ಚರಿ ಜನರದ್ದು.

ಬರಿದಾದ ಭೂ ತಾಯಿ ಒಡಲು: ಮರಳು ದಂಧೆಯಿಂದ ಅನೇಕ ದುಷ್ಪರಿಣಾಮಗಳು ಉಂಟಾಗುತ್ತಿದ್ದು, ಭೂಮಿಯನ್ನು ಆಳವಾಗಿ ಬಗೆದಿರುವುದರಿಂದ ಕೃಷಿ ಭೂಮಿ ಬರಡು ಭೂಮಿಯಾಗಿ ಮಾರ್ಪಾಡು ಹೊಂದುತ್ತಿದೆ.
ಮರಳ ದೋಚುವುದರಿಂದ ನೀರಿನ ಮೂಲಗಳು ಬರಿದಾಗುತ್ತಿವೆ. ಹೀಗಾದರೆ ಕುಡಿಯಲು ನೀರಿಗೆ ಎಲ್ಲಿ ಹೋಗುವುದು ಎಂಬ ಚಿಂತೆ ಜನರದ್ದು.
ತಡೆಯೋರು ಯಾರು?: ಜನರನ್ನು ಕೊನೆಯದಾಗಿ ಕಾಡುತ್ತಿರುವ ಪ್ರಶ್ನೆ ಎಂದರೆ, ಈ ಅಕ್ರಮವನ್ನು ತಡೆಯೋರು ಯಾರು ಎಂಬುದು. ಗಣಿ ಮತ್ತು ಭೂಗರ್ಭ ಶಾಸ್ತ್ರ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹೀಗೆ ಅಕ್ರಮ ತಡೆಯಬೇಕಾದವರೆಲ್ಲರೂ ದಂಧೆಕೋರರ ಜತೆ ಕೈಜೋಡಿಸಿರುವ ಶಂಕೆ ಇದೆ. ಇದಕ್ಕೆ ಅಕ್ರಮ ರಾಜಾರೋಷವಾಗಿ ನಡೆಯುತ್ತಿರುವುದೇ ಸಾಕ್ಷಿ.

ಅಧಿಕಾರಿಗಳಿಗೆ ಜೀವಭಯ: ಜಿಲ್ಲೆಯ ಮೇಲಾದಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ಹೇಳುತ್ತಾರೆ.ಅಕ್ರಮ ದಂಧೆಗೆ ಕೇವಲ ಅಧಿಕಾರಿಗಳನ್ನು ದೂರಿದರೆ ಪ್ರಯೋಜನವಿಲ್ಲ. ಅವರೂ ನಮ್ಮಂತೆ ಮನುಷ್ಯರು. ಅಕ್ರಮ ದಂಧೆ ತಡೆಯಲು ಹೋದರೆ ಅವರ ಜೀವಕ್ಕೆ ಅಪಾಯ ಇದೆ ಎನ್ನುತ್ತಾರೆ ಕೆಲವರು ಬುದ್ದಿಜೀವಿಗಳು.ಸರಕಾರ ಕೂಡ ಪ್ರಭಾವಿಗಳ ಪರ ವಹಿಸುವುದರಿಂದ ಅಧಿಕಾರಿಗಳು ಎಲ್ಲವೂ ಕಂಡರೂ ಕಾಣದಂತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಲು ಹೋದರೆ ಅವರಿಗೆ ಪ್ರಭಾವಿಗಳು ಕರೆ ಮಾಡುತ್ತಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಈಗಲಾದರೂ ಕಡಿವಾಣ ಹಾಕುವವರೇ ಕಾದು ನೋಡಬೇಕಾಗಿದೆ.
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
