ಮನೋವಿಜ್ಞಾನ 3
ವಿಶ್ಲೇಷಣೆ : ಯೋಗೀಶ್ ಮಾಸ್ಟರ್
ವರ್ತನೆಗಳ ವ್ಯಸನ
ನೀವೇ ಪರೀಕ್ಷಿಸಿಕೊಳ್ಳಿ
ಹಠಾತ್ ಪ್ರವೃತ್ತಿಯು ನಮ್ಮಲ್ಲಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಿಕೊಂಡರೆ, ನಮ್ಮ ಮಕ್ಕಳಲ್ಲಿ ಗುರುತಿಸಲು ಸಾಧ್ಯ ಮತ್ತು ಅವರಲ್ಲಿ ಕಾಣ ಬರುವ ಪ್ರವೃತ್ತಿಯನ್ನು ಶಮನಗೊಳಿಸುವ ಪ್ರಯತ್ನವನ್ನು ಮಾಡಬಹುದು. ಬಹಳಷ್ಟು ಸಂದರ್ಭಗಳಲ್ಲಿ ಮಕ್ಕಳ ಸಮಸ್ಯೆಯನ್ನು ನಿವಾರಿಸಲು ದೊಡ್ಡವರು ವಿಫಲವಾಗುವ ಕಾರಣವೇನೆಂದರೆ, ಆ ಸಮಸ್ಯೆಯ ಮೂಲವನ್ನು ಗುರುತಿಸಲು ವಿಫಲವಾಗುವುದು ಮತ್ತು ತಮ್ಮಲ್ಲಿರುವ ಸಮಸ್ಯೆಯ ಮೂಲವನ್ನು ಗುರುತಿಸಿಕೊಳ್ಳಲು ಒಪ್ಪದಿರುವುದು.
ವ್ಯಕ್ತಿಗತ ಸಂಬಂಧಗಳಲ್ಲಿ, ಕುಟುಂಬಗಳಲ್ಲಿ, ಸಾಮಾಜಿಕ ಸಂಪರ್ಕಗಳಲ್ಲಿ ಮತ್ತು ತಮ್ಮದೇ ಮಾನಸಿಕ ಮತ್ತು ಭಾವನಾತ್ಮಕ ನೆಲೆಗಳಲ್ಲಿ ಹಠಾತ್ ಪ್ರವೃತ್ತಿಯ ಸಮಸ್ಯೆಯು ಬಹಳ ಗಂಭೀರ ಪರಿಣಾಮಗಳನ್ನು ಉಂಟುಮಾಡುವುದರಿಂದ ಅದರ ಬಗ್ಗೆ ಇಷ್ಟು ಗಂಭೀರವಾಗಿ ಪರಿಗಣಿಸಲೇಬೇಕಿದೆ. ಮಕ್ಕಳಲ್ಲಿ ಕಂಡು ಬರುವ ಹಠಾತ್ ಪ್ರವೃತ್ತಿಯ ವರ್ತನೆಗಳನ್ನು ಬಾಲ್ಯದಲ್ಲಿಯೇ ಸರಿಪಡಿಸಲೇಬೇಕಿದೆ.
ಪೈರೋಮೇನಿಯಾ ಅಥವಾ ಕಿಚ್ಚು ಹಚ್ಚುವ ಹುಚ್ಚು: ಉದ್ದೇಶಪೂರ್ವಕವಾಗಿ ವಸ್ತುಗಳಿಗೆ ಬೆಂಕಿ ಇಟ್ಟು ಅಥವಾ ಉರಿಯುತ್ತಿರುವ ಬೆಂಕಿಗೆ ವಸ್ತುಗಳನ್ನು ಹಾಕುತ್ತಾ ಖುಷಿಪಡುವುದು. ಇನ್ನೂ ಕೆಲವರಿಗೆ ತಮಗಿರುವ ಆಗ್ರಹ ಅಥವಾ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ವಸ್ತುಗಳನ್ನು ಸುಡುತ್ತಾ ಕೂರುವುದು. ಕ್ಯಾಂಪ್ ಫೈಯರ್ ನಲ್ಲಿ ಅಥವಾ ಇನ್ನೇಲ್ಲೋ ಯಾವುದೇ ವಸ್ತುಗಳಿಗೆ ತೊಂದರೆಯಾಗದಂತೆ ಅಥವಾ ಚಳಿ ಕಾಯಿಸಿಕೊಳ್ಳಲು ಕಿಚ್ಚು ಹಚ್ಚಿದ್ದು, ಸಾಧಾರಣವಾಗಿ ಉರಿಯುತ್ತಿರುವ ಬೆಂಕಿಯನ್ನು ನೋಡಿ ಖುಷಿಪಡುವ ರಸಿಕತೆಯು ಬೇರೆ ಉಂಟು. ನರ್ತಿಸುವಂತೆ ಕಾಣುತ್ತಿರುವ ಜ್ವಾಲೆಯನ್ನು ನೋಡುತ್ತಾ ರಸಾನುಭೂತಿಯ ಆನಂದ ಪಡೆಯುವುದಕ್ಕೂ, ಉನ್ಮತ್ತರಂತೆ ವಸ್ತುಗಳಿಗೆ ಬೆಂಕಿ ಇಡುವ ಕಿಚ್ಚು ಹಚ್ಚುವ ಹುಚ್ಚಿಗೂ ವ್ಯತ್ಯಾಸವಿದೆ. ಅದೇ ರೀತಿಯಲ್ಲಿ ಪರರ ಆಸ್ತಿಪಾಸ್ತಿಗಳಿಗೆ ಅಸೂಯೆಯಿಂದ, ಕೋಪದಿಂದ, ಸೇಡು ತೀರಿಸಿಕೊಳ್ಳುವ ಸಲುವಾಗಿ ಬೆಂಕಿ ಇಡುವುದೂ ಕೂಡಾ ಪೈರೋಮೇನಿಯಾ ಅಲ್ಲ. ಅದನ್ನು ಆರ್ಸನ್ ಎಂದು ಕರೆಯುತ್ತಾರೆ. ಅದು ಅವರ ಕೋಪ ಮತ್ತು ಆವೇಶದ ಪ್ರತಿಫಲವಾಗಿರುತ್ತದೆ. ಆದರೆ, ಪೈರೋಮೇನಿಯಾ ಒಂದು ಬಗೆಯ ಉನ್ಮತ್ತತೆ. ಬೆಂಕಿ ಹಚ್ಚಿ ಖುಷಿ ಪಡೆಯುವುದು ಅಥವಾ ಮಾನಸಿಕವಾಗಿ ಹಗುರವಾದಂತೆ ಭಾವಿಸುವುದು. ಗಲಭೆಗಳ ಸಮಯದಲ್ಲಿ ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚುವವರು ಎರಡೂ ಬಗೆಯಲ್ಲಿ ಇರಬಹುದು. ಒಂದು ಪೈರೋಮೇನಿಯಾ ಅಂದರೆ ಉನ್ಮತ್ತತೆಯಿಂದ ಕಿಚ್ಚು ಹಚ್ಚುವ ಹುಚ್ಚಿನವರು ಮತ್ತೊಂದು ಆರ್ಸನ್ ಅಂದರೆ ಆಕ್ರೋಶ ಅಥವಾ ಆಗ್ರಹದಿಂದ ಬೆಂಕಿಹಚ್ಚುವವರು. ಈ ಎರಡೂ ಕೂಡಾ ಮಾನಸಿಕ ಸಮಸ್ಯೆಗಳೇ.
ಅನಿಯಂತ್ರಿತ ಕಾಮುಕತನ ಅಥವಾ ಕಂಪಸ್ಲಿವ್ ಸೆಕ್ಸಶುಯಲ್ ಬಿಹೇವಿಯರ್: ತಮ್ಮ ಕಾಮುಕತೆಯ ಆಲೋಚನೆಗಳನ್ನು ಮತ್ತು ವರ್ತನೆಗಳನ್ನು ನಿಯಂತ್ರಿಸಿಕೊಳ್ಳಲಾಗದೇ ಲೈಂಗಿಕತೆಯ ಸುತ್ತಲೂ ಗಿರಿಕಿ ಹೊಡೆಯುವ ಚಟುವಟಿಕೆಗಳನ್ನು ಮಾಡುವುದು.
ಮಿತಿ ಮೀರಿದ ಹಸ್ತಮೈಥುನ: ಲೈಂಗಿಕ ಆನಂದವನ್ನು ಪಡೆಯುವುದರಲ್ಲಿ ಆಗಾಗ ಹಸ್ತಮೈಥುನ ಮಾಡಿಕೊಳ್ಳುವುದು ಸಹಜ. ಆದರೆ ಹಸ್ತಮೈಥುನವು ಇಲ್ಲದೇ ಇದ್ದರೆ ಆಗುವುದಿಲ್ಲ ಎನ್ನುವಂತೆ ವರ್ತಿಸುವುದು ಕಂಪಸ್ಲಿವ್ ಡಿಸಾರ್ಡರ್ ಆಯಾಮಕ್ಕೆ ಬರುವುದು. ಕೆಲವರಿಗೆ ಹಸ್ತಮೈಥುನವು ನಿದ್ರೆಯ ಗುಳಿಗೆಯಂತೆ ಕೆಲಸ ಮಾಡುತ್ತದೆ. ಕೆಲವು ಮಕ್ಕಳಲ್ಲಿಯೂ ಪ್ರಾರಂಭಿಕ ಹಂತವಾಗಿ ಕೆಲವು ಲಕ್ಷಣಗಳನ್ನು ತೋರುವುದು. ಮಗುವು ಅನಗತ್ಯವಾಗಿ ತನ್ನ ಜನನೇಂದ್ರಿಯವನ್ನು ಮುಟ್ಟಿಕೊಳ್ಳುತ್ತಿರುವುದು, ಅದರೊಂದಿಗೆ ಸದಾ ಆಡುತ್ತಿರುವುದು ಕಂಡು ಬಂದರೆ ಬೇರೆ ಕಡೆಗೆ ಗಮನ ಸೆಳೆದು ಕೈಗಳನ್ನು ಬಳಸುವಂತಹ ಇನ್ನಾವುದಾದರೂ ಆಸಕ್ತಿಯ ಕೆಲಸದ ಕಡೆಗೆ ಅಥವಾ ಆಟದ ಕಡೆಗೆ ಹೊರಳಿಸಬೇಕು. ಆದರೆ, ಅದನ್ನು ಮುಟ್ಟಿಕೊಳ್ಳಬೇಡ, ಅಲ್ಲಾಡಿಸುತ್ತಿರಬೇಡ ಅಥವಾ ಅದರೊಂದಿಗೆ ಆಟ ಆಡಬೇಡ ಎಂದು ಮಗುವನ್ನು ಗದರಿಸಬಾರದು. ಏಕೆಂದರೆ, ಆಗ ಅದು ತನ್ನ ಆಸೆಯ ಉತ್ಕಟತೆಯನ್ನು ಒತ್ತಾಯ ಪೂರ್ವಕವಾಗಿ ತಡೆದುಕೊಳ್ಳಬಹುದು. ಆದರೆ ನಂತರ ಹಿರಿಯರು ಇಲ್ಲದಿರುವಾಗ ಹೆಚ್ಚಿನ ಉತ್ಕಟತೆಯಲ್ಲಿ ಮತ್ತು ಚುರುಕಾದ ಚಟುವಟಿಕೆಯಲ್ಲಿ ತೊಡಗಬಹುದು.
ಪ್ರಾಮಿಸ್ಕ್ಯುಟಿ: ತಮ್ಮ ಲೈಂಗಿಕತೆಯ ಉತ್ಕಟ ವಾಂಛೆಯನ್ನು ತೀರಿಸಿಕೊಳ್ಳಲು ಯಾರಂದರೆ ಅವರೊಂದಿಗೆ ಸಂಪರ್ಕ ಬೆಳೆಸುವುದು. ಅತಿ ಹೆಚ್ಚು ಲೈಂಗಿಕ ಸಂಗಾತಿಗಳನ್ನು ಹೊಂದುವುದು. ತನ್ನ ಲೈಂಗಿಕ ತೃಷೆಯನ್ನು ತಣಿಸಿಕೊಳ್ಳಲು ಯಾರಾದರೂ ಸರಿಯೇ, ಅವರು ಹೇಗಿದ್ದರೂ ಸರಿಯೇ, ಅವರನ್ನು ಹೊಂದುವಂತಹ ಕಾಮಾತುರವನ್ನು ತೋರಿಸುವುದಕ್ಕೆ ಪ್ರಾಮಿಸ್ಕ್ಯುಟಿ ಎನ್ನುತ್ತಾರೆ. ಅವರು ಬುದ್ಧಿಮಾಂದ್ಯರನ್ನು, ಭಿಕ್ಷುಕರನ್ನು, ಅಂಗವಿಕಲರನ್ನು ಕೂಡಾ ಬಿಡಲಾರರು. ಇದೊಂದು ಮನೋಲೈಂಗಿಕ ಸಮಸ್ಯೆ.
ಕಾಮೋತ್ತೇಜಕ ಚಿತ್ರಗಳ ವೀಕ್ಷಣೆ: ಪೆÇೀರ್ನೋಗ್ರಾಫಿ ಅಥವಾ ಕಾಮೋತ್ತೇಜಕ ಚಿತ್ರಗಳ ಅತಿಯಾದ ವೀಕ್ಷಣೆಯೂ ಕೂಡಾ ಮನೋಲೈಂಗಿಕ ಸಮಸ್ಯೆಯೇ ಆಗಿರುತ್ತದೆ. ಎಲ್ಲೆಂದರಲ್ಲಿ ಪೆÇೀರ್ನ್ ಚಿತ್ರಗಳನ್ನು ಅಥವಾ ವಿಡಿಯೋಗಳನ್ನು ನೋಡುತ್ತಿರುವುದು, ಅದನ್ನು ನೋಡದೆಯೇ ಇರಲಾಗದಂತೆ ಉನ್ಮತ್ತರಾಗಿ ವರ್ತಿಸುವುದು ಇದೇ ಸಮಸ್ಯೆಗಳ ಸಾಲಲ್ಲಿ ಬರುವುದು.
ಪ್ರದರ್ಶನ ಕಾಮ: ಎಕ್ಸಿಬಿಷನಿಸಂ ಅಥವಾ ಪ್ರದರ್ಶನ ಕಾಮವೂ ಕೂಡಾ ಹಠಾತ್ ಪ್ರವೃತ್ತಿಯ ಮುಂದುವರಿಕೆಯ ಮನೋಲೈಂಗಿಕ ಸಮಸ್ಯೆಯಾಗಿರುತ್ತದೆ. ಪತ್ರಿಕೆಗಳಲ್ಲಿ ಇಂತಹ ಸುದ್ಧಿಗಳು ಆಗಾಗ್ಗೆ ವರದಿಯಾಗುತ್ತಿರುತ್ತದೆ. ರಸ್ತೆಯಲ್ಲಿ ಅಥವಾ ವಾಹನಗಳಲ್ಲಿ ಪ್ರಯಾಣಿಸುವಾಗ ಕೆಲವರು ತಮ್ಮ ಜನನೇಂದ್ರಿಯವನ್ನು ತೋರಿಸಿ ಅಸಭ್ಯವಾಗಿ ವರ್ತಿಸಿದರು ಎಂದು. ಕೆಲವೊಮ್ಮೆ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಜನನೇಂದ್ರಿಯವನ್ನು ತೋರಿಸುವುದು ಅಥವಾ ಹಸ್ತಮೈಥುನ ಮಾಡಿಕೊಳ್ಳುವುದು, ಇತ್ಯಾದಿ. ಇಂತಹ ಮನೋಲೈಂಗಿಕ ಸಮಸ್ಯೆ ಇರುವವರಿಗೆ ಶಿಕ್ಷೆಗಿಂತ ಶಿಕ್ಷಣ ಅಗತ್ಯವಿರುತ್ತದೆ. ನಮಗೆ ಅದು ಅಸಭ್ಯ. ಆದರೆ ಅವರಿಗೆ ಅದು ತಮ್ಮ ವರ್ತನೆಗಳನ್ನು ನಿಯಂತ್ರಿಸಿಕೊಳ್ಳಲಾಗದಂತಹ ಹಠಾತ್ ಪ್ರವೃತ್ತಿಯ ಸಮಸ್ಯೆ.
ವೋಯೇರಿಸಮ್ ಅಥವಾ ಇಣುಕುಕಾಮ: ಈ ವರ್ತನೆಯ ಬಗೆ ಏನೆಂದರೆ, ಇತರರ ನಗ್ನತೆಯನ್ನುಕದ್ದು ಮುಚ್ಚಿ ನೋಡುವುದು, ಅಥವಾ ಇಣುಕುತ್ತಿರುವುದು. ಇದು ಮಕ್ಕಳಿಂದಲೇ ಗಮನಿಸಬಹುದು. ಯಾರಾದರೂ ಸ್ನಾನ ಮಾಡುತ್ತಿದ್ದರೆ ಅಥವಾ ಬಟ್ಟೆ ಬದಲಿಸುತ್ತಿದ್ದರೆ, ಕಿಟಕಿಯಿಂದ, ಕೀ ರಂಧ್ರದಿಂದ, ಮುಚ್ಚಿದ ಬಾಗಿಲ ಕೆಳಗಿನ ಸಂದಿಯಿಂದ ಇಣುಕಿ ನೋಡುವುದು. ಅಂತಹ ಪ್ರವೃತ್ತಿಯನ್ನು ಶಮನ ಮಾಡದಿದ್ದರೆ, ಅದು ಮುಂದುವರಿದು ಇತರರು ಮಾಡುವ ಲೈಂಗಿಕ ಕ್ರಿಯೆಯನ್ನು ಕದ್ದು ನೋಡುವ ಸಾಹಸ ಮಾಡುವರು. ಸಾರ್ವಜನಿಕ ಉದ್ಯಾನವನದ ನಿರ್ಜನ ಮೂಲೆಗಳಲ್ಲಿ ಪ್ರೇಮಿಗಳು ಅಥವಾ ಕಾಮಿಗಳು ಸರಸದಲ್ಲಿ ತೊಡಗಿದ್ದರೆ, ಅದನ್ನು ಕದ್ದು ನೋಡುವ ಅಥವಾ ಕಾದು ನೋಡುವ ಮಂದಿಯನ್ನು ಸಾಮಾನ್ಯವಾಗಿ ಕಾಣುತ್ತೇವೆ. ಈ ವ್ಯಕ್ತಿಗಳು ವೋಯೆರಿಸಮ್ ಅಥವಾ ಇಣುಕುಕಾಮ ಇರುವವರು.
ಫೆಟಿಶಸ್ ಅಥವಾ ವಸ್ತುಕಾಮ: ಈ ಸಮಸ್ಯೆ ಏನೆಂದರೆ, ಯಾವುದಾದರೂ ವಸ್ತುಗಳ ಕುರಿತು ತಮ್ಮ ಉತ್ಕಟ ಕಾಮುಕಾಭಿಲಾಶೆಯನ್ನು ಹೊಂದುವುದು. ಅದು ದೇಹದ ಯಾವುದಾದರೂ ಒಂದು ಅಂಗದ ಆಕರ್ಷಣೆಯಾಗಿರಬಹುದು. ವಸ್ತುಗಳಾಗಿರಲೂಬಹುದು. ಸಾಧಾರಣವಾದ ದೃಷ್ಟಿಯಲ್ಲಿ ನೋಡಿದರೆ ಆ ವಸ್ತುವು ಅಥವಾ ಆ ದೇಹಾಂಗವು ಕಾಮುಕತೆಯನ್ನು ಬಿಂಬಿಸದೇ ಇರಬಹುದು. ಆದರೆ ವಸ್ತುಕಾಮದ ಸಮಸ್ಯೆ ಇರುವವರಿಗೆ ಅದು ಲೈಂಗಿಕವಾಗಿ ವಿಶೇಷ ಆಕಷರ್ಣೆಯಾಗಿರುತ್ತದೆ. ಒಳ ಉಡುಪುಗಳು, ಅಥವಾ ಹೊರಗಿನ ಉಡುಪುಗಳೂ ಕೂಡಾ, ಬಟ್ಟೆಯ ಮಾದರಿ, ಇನ್ನಿತರ ವಸ್ತುಗಳು ಕೂಡಾ ಅವರ ಲೈಂಗಿಕಾರ್ಷಣೆಯಾಗಿರುತ್ತದೆ. ಮಕ್ಕಳು ಕೆಲವು ವಸ್ತುಗಳನ್ನು ಅಥವಾ ದೇಹದ ಅಂಗಗಳನ್ನು ಉನ್ಮತ್ತತೆಯಲ್ಲಿ ಮುಟ್ಟುತ್ತಿದ್ದರೆ ಅಥವಾ ತಮ್ಮ ದೇಹಕ್ಕೆ ಬೇಕೆಂದೇ ತಾಗಿಸಿಕೊಳ್ಳುತ್ತಿದ್ದರೆ, ಅಸಾಧಾರಣವಾಗಿ ವಸ್ತುವಿಗೆ ಆಕರ್ಶಿತವಾಗುತ್ತಿದ್ದಾರೆ ಎಂದರೆ ಅದನ್ನು ಹಠಾತ್ ಪ್ರವೃತ್ತಿಯ ಒಂದು ಭಾಗವಾಗಿ ಪರಿಗಣಿಸಬೇಕು ಮತ್ತು ಚಿಕಿತ್ಸೆಯ ದೃಷ್ಟಿಯಲ್ಲಿ ಎಚ್ಚೆತ್ತುಕೊಳ್ಳಬೇಕು.
ಅನಿಯಂತ್ರಿತವಾಗಿ ಸ್ಫೋಟಗೊಳ್ಳುವ, ಕೂಗಾಡುವ, ವಸ್ತುಗಳನ್ನು ಬಿಸಾಡುವ ವರ್ತನೆಗಳ ಮತ್ತೊಂದು ಆಯಾಮಗಳೇ ಇವುಗಳೂ ಕೂಡಾ. ಹಠಾತ್ ಪ್ರವೃತ್ತಿ ಬಹಳಷ್ಟು ಮಂದಿಗಳಲ್ಲಿ ಕಾಣುತ್ತಿರುತ್ತದೆ. ಮಕ್ಕಳಲ್ಲೇ ಗುರುತಿಸಿ ಚಿಕಿತ್ಸಕವಾಗಿ ಎಚ್ಚೆತ್ತುಕೊಂಡರೆ ಮಕ್ಕಳಿಗೂ ಒಳಿತು, ಅವರು ಮುಂದೆ ವಯಸ್ಕರಾದಾಗ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಹಾಗೆಯೇ ಕುಂಟುಂಬದವರಿಗೂ, ಅವರ ಜೊತೆ ಸಂಬಂಧ ಹೊಂದಿರುವವರಿಗೂ ಒಳ್ಳೆಯದು. ಸಾಮಾಜಿಕ ಸಂಪರ್ಕಗಳಲ್ಲಿಯೂ ಕೂಡಾ ಅವರು ಸಮಸ್ಯೆ ಇಲ್ಲದೇ ಇರಲು ಸಾಧ್ಯ…

ವರದಿ. ಅಜಯ್, ಚ, ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
