ಉದ್ಯಮಗಳನ್ನು ನಡೆಸುವುದು ಸರ್ಕಾರದ ಕೆಲಸವಲ್ಲ, ಇನ್ನೂ 100 ಸರ್ಕಾರಿ ಉದ್ಯಮಗಳು ಖಾಸಗೀಕರಣವಾಗಲಿದೆ; ಮೋದಿ
ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ 100 ಉದ್ಯಮಗಳನ್ನು ಖಾಸಗೀಕರಣಗೊಳಿಸುವ ಮೂಲಕ 2.5 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಉದ್ಯಮಗಳನ್ನು ನಡೆಸುವುದು ಸರ್ಕಾರದ ಕೆಲಸವಲ್ಲ, ಇನ್ನೂ 100 ಸರ್ಕಾರಿ ಉದ್ಯಮಗಳು ಖಾಸಗೀಕರಣವಾಗಲಿದೆ; ಮೋದಿ
“ಸರ್ಕಾರ ಯಾವುದೇ ವ್ಯವಹಾರ ಅಥವಾ ಉದ್ಯಮ ನಡೆಸಬೇಕು, ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಹಾಗೆಯೇ ಮುಂದುವರೆಸಬೇಕು ಎಂಬದೇನಿಲ್ಲ. ಉದ್ಯಮಗಳು ಮತ್ತು ವ್ಯವಹಾರಗಳಿಗೆ ಬೆಂಬಲ ನೀಡುವುದು ಸರ್ಕಾರದ ಕರ್ತವ್ಯವೇ ಹೊರತು ನಾವೇ ಉದ್ಯಮವನ್ನು ನಡೆಸುವುದಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ದೇಶದ ಇನ್ನೂ 100ಕ್ಕೂ ಅಧಿಕ ಸರ್ಕಾರಿ ಉದ್ಯಮಗಳು ಖಾಸಗೀಕರಣಗೊಳ್ಳಲಿವೆ” ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ವಲಯದ ಉದ್ಯಮಗಳ (ಪಿಎಸ್ಯು) ಹೂಡಿಕೆ ಮತ್ತು ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಒತ್ತು ನೀಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
2021ನೇ ಸಾಲಿನ ಬಜೆಟ್ನಲ್ಲಿ ಪ್ರಸ್ತಾಪಿಸಿರುವ ಹಲವು ಸುಧಾರಣಾ ಕ್ರಮಗಳು ಮತ್ತು ಹೂಡಿಕೆ-ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ ಖಾಸಗೀಕರಣ ಕುರಿತಾದ ವೆಬಿನಾರ್ನಲ್ಲಿ ಇಂದು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, “ವ್ಯಾಪಾರ ವ್ಯವಹಾರಕ್ಕೆ ಬೆಂಬಲ ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯ. ಆದರೆ ಕೇಂದ್ರ ಸರ್ಕಾರವೇ ನೇರವಾಗಿ ವ್ಯಾಪಾರ ವಹಿವಾಟು ನಡೆಸಬೇಕು, ಕಂಪನಿ ನಡೆಸಬೇಕು ಎನ್ನುವ ಅವಶ್ಯಕತೆ ಇಲ್ಲ.
ಈ ಹಿಂದೆ ಕಾಲದ ಅಗತ್ಯಕ್ಕೆ ತಕ್ಕಂತೆ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಸ್ಥಾಪಿಸಲಾಗಿತ್ತು, ಜೊತೆಗೆ ಅವುಗಳನ್ನು ಸ್ಥಾಪಿಸಿದ ಉದ್ದೇಶವೂ ವಿಭಿನ್ನವಾಗಿತ್ತು. 50-60 ವರ್ಷಗಳಷ್ಟು ಹಳೆಯ ಕಾಯ್ದೆಗಳನ್ನು ಈಗ ಸುಧಾರಣೆ ಮಾಡಲು ಸಾಧ್ಯವಿದೆ. ನಾವು ಈಗ ಸುಧಾರಣೆಯನ್ನು ತರುತ್ತಿದ್ದೇವೆ. ಹಾಗಾಗಿ ಸಾರ್ವಜನಿಕರ ಹಣವನ್ನು ಎಚ್ಚರಿಕೆಯಿಂದ ಖರ್ಚು ಮಾಡಲು ನಾವು ಆದ್ಯತೆ ನೀಡಿದ್ದೇವೆ” ಎಂದು ಹೇಳಿದ್ದಾರೆ.
“ಕೇಂದ್ರ ಸರ್ಕಾರಿ ಸ್ವಾಮ್ಯದ 4 ಪ್ರಮುಖ ಕ್ಷೇತ್ರಗಳ ಕಂಪನಿಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿರುವ ಸುಮಾರು 100 ಕಂಪನಿಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ” ಎಂದು ಪ್ರಧಾನಿ ಮೋದಿ ಈ ವೇಳೆ ಮಾಹಿತಿ ನೀಡಿದ್ದಾರೆ.
“ಹಲವು ವರ್ಷಗಳಿಂದ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಕೇಂದ್ರ ಸರ್ಕಾರ ನಡೆಸಿಕೊಂಡು ಬಂದಿದೆ ಎಂಬ ಮಾತ್ರಕ್ಕೆ ನಾವು ಅದನ್ನು ಮುಂದುವರೆಸಬೇಕು ಎಂದೇನಿಲ್ಲ. ಸಮಾಜದ ಕಲ್ಯಾಣ ಮತ್ತು ದೇಶದ ಜನತೆಗೆ ಸಂಬಂಧಿಸಿದ ನೀತಿ ನಿಯಮಗಳ ಮೇಲೆ ಮಾತ್ರ ಸರ್ಕಾರದ ಗಮನ ಇರಬೇಕು. ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಅಧಿಕಾರಿಗಳು ತಮ್ಮ ಸಾಮರ್ಥ್ಯವನ್ನು ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ವ್ಯವಹಾರ ಮಾಡಲು ವಿನಿಯೋಗಿಸುತ್ತಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
“ಹಲವು ಸರ್ಕಾರಿ ಸ್ವಾಮ್ಯದ ಕಂಪನಿಗಳು ನಷ್ಟದಲ್ಲಿವೆ. ಹಲವು ಕಂಪನಿಗಳಿಗೆ ಜನರ ಹಣದಿಂದ ಬೆಂಬಲ ನೀಡಬೇಕಾದ ಸ್ಥಿತಿ ಇದೆ. ಹಲವು ವರ್ಷಗಳ ಹಿಂದೆ ಯಾರದೋ ಪ್ರಿಯ ಯೋಜನೆಯಾದ ಈ ಕಂಪನಿಗಳನ್ನು ಜನರ ಹಣದಿಂದ ನಡೆಸಬೇಕಾದ ಅವಶ್ಯಕತೆ ಇಲ್ಲ. ಕೇಂದ್ರ ಸರ್ಕಾರ ವ್ಯವಹಾರ ನಡೆಸಲು ಬಯಸುವುದಿಲ್ಲ. ಸರ್ಕಾರ ಖಾಸಗೀಕರಣ ಮಾಡಿದಾಗ ಖಾಸಗಿ ಕಂಪನಿಗಳು ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ. ಖಾಸಗಿ ಕಂಪನಿಗಳು ಬಂಡವಾಳವನ್ನು ತರುತ್ತವೆ ಮತ್ತು ವಿಶ್ವದರ್ಜೆಯ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತವೆ ಮತ್ತು ಹೆಚ್ಚು ಹೆಚ್ಚು ಉದ್ಯೋಗವನ್ನು ಒದಗಿಸುತ್ತವೆ” ಎಂದು ಸ್ಪಷ್ಟನೆ ನೀಡಿದರು.
ದೇಶದ ಪ್ರಧಾನಿ ಮೋದಿ ಓರ್ವ ದಂಗಾಬಾಜ್ ಮತ್ತು ರಾಕ್ಷಸ; ಸಿಎಂ ಮಮತಾ ಬ್ಯಾನರ್ಜಿ ಆಕ್ರೋಶ
“ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ 100 ಉದ್ಯಮಗಳನ್ನು ಖಾಸಗೀಕರಣಗೊಳಿಸುವ ಮೂಲಕ 2.5 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿ ಹೊಂದಿದೆ. ಖಾಸಗೀಕರಣ ಪ್ರಕ್ರಿಯೆಯಿಂದ ಸಂಗ್ರಹವಾಗುವ ಹಣವನ್ನು ಗ್ರಾಮೀಣ ಭಾಗದಲ್ಲಿ ರಸ್ತೆ ಅಭಿವೃದ್ಧಿಗೆ, ಸ್ವಚ್ಛ ಕುಡಿಯುವ ನೀರು ಪೂರೈಕೆಗೆ ಮತ್ತು ಎಲ್ಲರಿಗೂ ಸೂರು ಕಲ್ಪಿಸಿಕೊಡುವ ಯೋಜನೆಗಳಲ್ಲಿ ವಿನಿಯೋಗಿಸುತ್ತೇವೆ ” ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಅಧಿಕಾರ ಬಂದಾಗಿನಿಂದಲೂ ಅನೇಕ ಸಾರ್ವಜನಿಕ ಉದ್ಯಮಗಳು ಖಾಸಗೀಕರಣಗೊಳ್ಳುತ್ತಿವೆ. ಈ ಹಿಂದೆ ಎಲ್ಐಸಿಯಲ್ಲಿ ಖಾಸಗಿ ಹೂಡಿಕೆ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇತ್ತೀಚೆಗೆ ವಿಮಾನ ನಿಲ್ದಾಣ ಮತ್ತು ರೈಲುಗಳನ್ನು ಖಾಸಗೀಕರಣಗೊಳಿಸಲಾಗಿತ್ತು. ನರೇಂದ್ರ ಮೋದಿ ಸರ್ಕಾರದ ಈ ನಿರ್ಧಾರಗಳ ವಿರುದ್ಧ ಮೊದಲಿನಿಂದಲೂ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಲೇ ಇದೆ. ಸರ್ಕಾರಿ ಸ್ವಾಮ್ಯದಲ್ಲಿರುವ ಮತ್ತು ಹೆಚ್ಚು ಲಾಭ ಗಳಿಸುತ್ತಿರುವ ಬಹುತೇಕ ಉದ್ಯಮಗಳನ್ನು ಖಾಸಗಿಯವರಿಗೆ ಮಾರಲಾಗಿದೆ ಎಂದು ಈವರೆಗೆ ಹಲವು ಅರ್ಥಶಾಸ್ತ್ರಜ್ಞರು ಸಹ ಆರೋಪಿಸುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮಾತ್ರ ತನ್ನ ಹೊಸ ಆರ್ಥಿಕ ನೀತಿಯನ್ನು ಹಿಂಬಾಲಿಸುವ ಮೂಲಕ ಖಾಸಗೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಲೇ ಇದೆ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
