;

ಆಶಾ ಕಾರ್ಯಕರ್ತೆಯರಿಂದ ಮಹಿಳಾ ದಿನಾಚರಣೆಯಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು…!!!

ವರದಿ. ಎಂ, ಎಲ್. ವೆಂಕಟೇಶ್

ಬಳ್ಳಾರಿ, ಮಾ.೮: ಬಳ್ಳಾರಿಯಲ್ಲಿ ಇಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಅಂತರರಾಷ್ಟಿಯ ಮಹಿಳಾ ದಿನಾಚರಣೆಯ ಅಂಗವಾಗಿ ಪ್ರತಿಭಟನಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಎಐಎಂಎಸ್‌ಎಸ್‌ನ ಜಿಲ್ಲಾಧ್ಯಕ್ಷರಾದ ಶ್ರೀಮತಿ ಶಾಂತಾ ರವರು ಮಾತನಾಡುತ್ತಾ, ೧೯೦೮ರಲ್ಲಿ ಅಮೇರಿಕಾದಲ್ಲಿ ಸಿದ್ದ ಉಡುಪುಗಳ ಕಾರ್ಖಾನೆಗಳಲ್ಲಿ ದುಡಿಯುವ ಸುಮಾರು ೨೦ ರಿಂದ ೩೦ ಸಾವಿರ ಮಹಿಳಾ ಕಾರ್ಮಿಕರು ಕೊರೆಯುವ ಚಳಿಯನ್ನು ಲೆಕ್ಕಿಸದೆ, ಉತ್ತಮ ದುಡಿಯುವ ಪರಿಸ್ಥಿತಿಗೆ ಒತ್ತಾಯಿಸಿ, ಸತತವಾಗಿ ಹದಿಮೂರು ವಾರಗಳ ಕಾಲ ಹೋರಾಟ ನಡೆಸಿ, ರಕ್ತಹರಿಸಿದರು, ಅನೇಕರು ಹುತಾತ್ಮರಾದರು. ನಂತರ ೮ ಘಂಟೆಗಳ ದುಡಿಮೆಯ ಅವಧಿ, ಉತ್ತಮ ದುಡಿಯುವ ಪರಿಸ್ಥಿತಿ, ಹೆರಿಗೆ ರಜೆ ಇತ್ಯಾದಿ ಹಕ್ಕುಗಳನ್ನು ಪಡೆದರು. ಈ ಹೋರಾಟದಿಂದ ಸ್ಫೂರ್ತಿ ಪಡೆದು, ಇಡೀ ವಿಶ್ವದಾದ್ಯಂತ ಇನ್ನೂ ಅನೇಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು, ಸಮಾಜವಾದಿ ನಾಯಕಿಯಾದ ಕ್ಲಾರಜೆಟ್ಕಿನ್ ರವರು ಮಾರ್ಚ್ ೮ನ್ನು ಮಹಿಳಾ ದಿನವಾಗಿ ಆಚರಿಸಬೇಕೆಂದು ೧೯೧೦ರಲ್ಲಿ ಡೆನ್ಮಾರ್ಕ್ನ ಕೊಪೆನ್‌ಹೆಗೆನ್‌ನಲ್ಲಿ ನಡೆದ ಅಂತರರಾಷ್ಟಿಯ ಸಮಾಜವಾದಿ ಮಹಿಳಾ ಸಮ್ಮೇಳನದಲ್ಲಿ ಕರೆ ನೀಡಿದರು. ಅಂದಿನಿoದ ಇಂದಿನವರೆಗೂ ವಿಶ್ವದಾದ್ಯಂತ ಮಹಿಳೆಯರು ಈ ದಿನವನ್ನು ಹೋರಾಟದ ದಿನವನ್ನಾಗಿ ಆಚರಿಸುತ್ತಿದ್ದಾರೆ, ಈ ದಿನವನ್ನು ಹೋರಾಟ ಸಂಕಲ್ಪ ದಿನವನ್ನಾಗಿ ಆಚರಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಭಾಷಣಕಾರರಾದ ಎಐಎಂಎಸ್‌ಎಸ್‌ನ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಎಂ.ಎನ್.ಮoಜುಳ ರವರು ಮಾತನಾಡುತ್ತಾ, ಮತ್ತೊಂದೆಡೆ ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳು ದೇಶದಾದ್ಯಂತ ಹೆಚ್ಚಾಗಿವೆ. ಆದರೆ ದುರಂತವೆoದರೆ ಅಪರಾಧಿಗಳಿಗೆ ಶಿಕ್ಷೆಯಾಗುತ್ತಿಲ್ಲ, ಅಪರಾಧಿಗಳಿಗೆ ಜನಪ್ರತಿನಿಧಿಗಳಿಂದ, ಆಡಳಿತಾಂಗದಿoದ ಶ್ರೀರಕ್ಷೆ ದೊರೆಯುತ್ತಿದೆ! ಉತ್ತರಪ್ರದೇಶದ ಹತ್ರಾಸ್ ಘಟನೆಯಲ್ಲಿ ಸಾಕ್ಷಿಯನ್ನೇ ನಾಶ ಮಾಡಲು, ನೊಂದ ಮಹಿಳೆ ಹಾಗೂ ಆಕೆಯ ಕುಟುಂಬದ ಮೇಲೆಯೇ ದೋಷಾರೋಪಣೆ ಮಾಡಿದ ಯತ್ನಗಳು ನಮ್ಮ ಮನಸ್ಸಿನಿಂದ ಇನ್ನೂ ಮರೆಯಾಗದ ಸಂದರ್ಭದಲ್ಲೇ ಇನ್ನೂ ಅನೇಕ ಅಂತಹ ಘಟನೆಗಳು ವರದಿಯಾಗುತ್ತಿರುವುದು ಅತ್ಯಂತ ಖೇದಕರ ಎಂದರು.
ದೇಶದ ಪರಿಸ್ಥಿತಿಯು ಇಷ್ಟು ಗಂಭೀರವಾಗಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ೩ ಕೃಷಿ ನೀತಿಗಳು ಹಾಗೂ ವಿದ್ಯುಚ್ಛಕ್ತಿ ಮಸೂದೆ ೨೦೨೦ ಅತ್ಯಂತ ರೈತ ವಿರೋಧಿಯಾಗಿದ್ದು, ಜೀವ ವಿರೋಧಿಯಾಗಿದ್ದು ಇದರ ವಿರುದ್ಧ ಲಕ್ಷಾಂತರ ರೈತರು ದೆಹಲಿಯ ಗಡಿ ಭಾಗಗಳಲ್ಲಿ ಸುಮಾರು ೧೦೦ ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಜಾರಿಗೊಳಿಸುತ್ತಿರುವ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಯು ಆಹಾರ ಸಾಮಗ್ರಿಗಳ ಕೃತಕ ಅಭಾವವನ್ನು ಸೃಷ್ಟಿಸಿ, ಬಡ ಜನತೆಗೆ ಆಹಾರ ಪದಾರ್ಥಗಳು ಕೈಗೆಟುಕದಂತೆ ಮಾಡಿ ಉಳ್ಳವರಿಗಷ್ಟೇ ಆಹಾರ ಎನ್ನುವಂತಹ ಪರಿಸ್ಥಿತಿ ನಿರ್ಮಿಸುತ್ತದೆ. ಒಟ್ಟಾರೆ ಈ ೩ ಕಾಯ್ದೆಗಳ ಅನುಷ್ಠಾನದಿಂದ ರೈತರು ತಮ್ಮ ಭೂಮಿ ಕಳೆದುಕೊಂಡು ದೊಡ್ಡ ಕಾರ್ಪೊರೇಟ್ ಮನೆತನಗಳ ಅಡಿಯಲ್ಲಿ ಗುಲಾಮರಂತೆ ಬದುಕಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಸಮಾಜದ ಅರ್ಧ ಭಾಗವಾದ ಮಹಿಳೆಯರು ಈ ಎಲ್ಲಾ ಜನವಿರೋಧಿ ನೀತಿಗಳ ಬಲಿಪಶುಗಳಾಗಿ ಅವರ ಜೀವನ ಅತ್ಯಂತ ಸಂಕಷ್ಟಮಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಯುಟಿಯುಸಿಯ ಜಿಲ್ಲಾ ಕಾರ್ಯದರ್ಶಿ ಎ.ದೇವದಾಸ್ ಅವರು ಮಾತನಾಡುತ್ತಾ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇಡೀ ದೇಶದಾದ್ಯಂತ, ಮಹಿಳೆಯರು ಮತ್ತು ಕಾರ್ಮಿಕರು ಹೋರಾಟ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ಬಂಡವಾಳ ಶಾಹಿ ವ್ಯವಸ್ಥೆಯನ್ನು ಕಿತ್ತು ಹಾಕಿ ಸಮಾಜವಾದವನ್ನು ಸ್ಥಾಪಿಸಬೇಕಾಗಿದೆ, ಈ ಸಂದರ್ಭದಲ್ಲಿ ಇಡೀ ದೇಶದ ಜನತೆ ಈ ಹೋರಾಟದ ಸ್ಪೂರ್ತಿಯನ್ನು ಪಡೆದು ವ್ಯವಸ್ಥೆ ಬದಲಾಯಿಸುವಲ್ಲಿ ಸಜ್ಜಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯ ಅಧ್ಯಕ್ಷತೆಯನ್ನು ಎಐಎಂಎಸ್‌ಎಸ್‌ನ ಜಿಲ್ಲಾ ಕಾರ್ಯದರ್ಶಿ ಈಶ್ವರಿ ವಹಿಸಿಕೊಂಡಿದ್ದರು. ಪ್ರತಿಭಟನೆಯಲ್ಲಿ ಪದ್ಮಾ, ಗಿರಿಜ, ಮಂಜುಳ, ಅಹಲ್ಯ, ವಿದ್ಯಾ, ಮಲ್ಲಮ್ಮ, ಕುಲ್ಸುಂ, ಗಾದಿಲಿಂಗಮ್ಮ ಸೇರಿದಂತೆ ಇತರೆ ಮಹಿಳೆಯರು ಭಾಗವಹಿಸಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;