ವರದಿ. ಮಂಜುನಾಥ್,ಎಚ್

ಚಿತ್ರದುರ್ಗ: ಮೊಳಕಾಲ್ಮೂರು/ ಬರೋಬ್ಬರಿ ಎರಡು ತಿಂಗಳಿನಿಂದ ತಾಲೂಕು ತಹಸೀಲ್ದಾರ್ ಹುದ್ದೆ ಖಾಲಿಯಾಗಿ ಕಂದಾಯ ಇಲಾಖೆ ಕೆಲಸ ಕಾರ್ಯಗಳು ಕುಂಟುತ್ತಾ ಸಾಗಿವೆ..! ಹೌದು, ನವೆಂಬರ್ 30ರಂದು ಕರ್ತವ್ಯದಲ್ಲಿದ್ದ ತಹಸೀಲ್ದಾರ್ ಮಲ್ಲಿಕಾರ್ಜುನ್ ಮೇಲೆ ಎಸಿಬಿ ದಾಳಿ ನಡೆದ ಹಿನ್ನೆಲೆಯಲ್ಲಿ ಈ ಹುದ್ದೆ ಖಾಲಿಯಾಗಿತ್ತು. ನೆರೆಯ ಚಳ್ಳಕೆರೆ ತಹಸೀಲ್ದಾರ್ ಅವರನ್ನು ಇಲ್ಲಿಗೆ ನಿಯೋಜಿಸಿದ್ದರೂ ಅಲ್ಲಿನ ತಹಸೀಲ್ದಾರ್ ಇಲ್ಲಿಗೆ ಬಂದು ಪ್ರತಿ ದಿನವೂ ಕೆಲಸ ನಿರ್ವಹಿಸುವುದು ಕಷ್ಟ ಸಾಧ್ಯವಾದ್ದರಿಂದ
ನಾನಾ ಕೆಲಸಗಳು ನೆನಗುದಿಗೆ ಬಿದ್ದಿವೆ. ಕಂದಾಯ ಇಲಾಖೆಯ ಸಿಬ್ಬಂದಿ ಜಾತಿ ಆದಾಯ ಪ್ರಮಾಣ ಪತ್ರ, ಅಂಗವಿಕಲ ವೇತನ, ವೃದ್ಧಾಪ್ಯ ವೇತನದ ಕಡತಗಳು ಸೇರಿದಂತೆ ಇನ್ನಿತರೆ ಎಲ್ಲ ಅಗತ್ಯ ಕಡತಗಳನ್ನು ಪ್ರತಿ ಬಾರಿಯೂ ನೆರೆಯ ಚಳ್ಳಕೆರೆಗೆ ಕೊಂಡೊಯ್ದು ತಹಸೀಲ್ದಾರ್ ಅವರಿಂದ ಸಹಿ ಪಡೆದು ವಾಪಾಸಾಗುತ್ತಿದ್ದಾರೆ.
ಪಟ್ಟಣದ ವಾರದ ಸಂತೆಯ ಬುಧವಾರ ಚುನಾವಣಾ ಶಾಖೆ ಸಹಿ ಪಡೆಯಲು ನೆರೆಯ ಚಳ್ಳಕೆರೆ ಪ್ರಭಾರ ತಹಸೀಲ್ದಾರ್ ಬಳಿ ಹೋಗಿದ್ದಾರೆ. ನಿಮ್ಮ ದಾಖಲೆಯ ಪತ್ರವೂ ಅದರೊಂದಿಗೆ ಕೊಂಡೊಯ್ದಿರಬಹುದು, ಅವರು ಮಧ್ಯಾಹ್ನದ ನಂತರ ಬರಲಿದ್ದಾರೆ, ಆಗೊಮ್ಮೆ ಕಚೇರಿಗೆ ಬಂದೋಗಿ ಎಂದು ಕಚೇರಿಗೆ ಆಗಮಿಸಿದ್ದ ಆಪೇಕ್ಷಿತರಿಗೆ ಸಿಬ್ಬಂದಿಯೊಬ್ಬ ಉತ್ತರ ನೀಡುತ್ತಿದ್ದದ್ದು ಪತ್ರಿಕೆ ಗಮನಕ್ಕೆ ಬಂತು. ಕಳೆದ ಗ್ರಾಪಂ ಚುನಾವಣೆಯನ್ನು ನಾವು ಪ್ರಭಾರ ತಹಸೀಲ್ದಾರ್ ನೇತೃತ್ವದಲ್ಲಿಯೇ ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಆದರೆ ಕಚೇರಿಗೆ ಪ್ರತಿ ದಿನವೂ ನಾನಾ ಕೆಲಸಗಳಿಗೆ ಬಂದೋಗುವ ಜನರಿಗೆ ಉತ್ತರ ಕೊಡಲು ಸಾಧ್ಯವಾಗುತ್ತಿಲ್ಲ. ಅನೇಕ ಕೆಲಸಗಳು ಇಂದಿಗೂ ನೆನಗುದಿಗೆ ಬಿದ್ದಿವೆ ಎನ್ನುತ್ತಾರೆ ಕಚೇರಿ ಸಿಬ್ಬಂದಿ. ಅನೇಕ ತುರ್ತು ಕೆಲಸಗಳಿಗೆ ತಹಸೀಲ್ದಾರ್ ಅವಶ್ಯಕತೆ ಇರುತ್ತದೆ. ಆದರೆ ಇಲ್ಲಿನ ತಹಸೀಲ್ದಾರ್ ಹುದ್ದೆ ಕಳೆದ ಎರಡು ತಿಂಗಳಿನಿಂದಲೂ ಖಾಲಿ ಇದ್ದರೂ ಈ ಹುದ್ದೆ ಭರ್ತಿ ಮಾಡಿಸುವತ್ತ ಜನ ಪ್ರತಿನಿಧಿಗಳು ಆಸಕ್ತಿ ತೋರದಿರುವುದು ನಿಜಕ್ಕೂ ಸೋಜಿಗದ
ಸಂಗತಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
