;

ಜಿ,ಪಂ,ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಗರದಿಂದ ಗ್ರಾಮೀಣ ಭಾಗಕ್ಕೆ ಮದ್ಯದಂಗಡಿಗಳನ್ನು ವರ್ಗಾವಣೆ ಮಾಡಬೇಡಿ ಸಚಿವರ ಸೂಚನೆ…!!!

ವರದಿ. ಶಶಿಕುಮಾರ್ ಚಳ್ಳಕೆರೆ

ಜಿ.ಪಂ. ತ್ರೈಮಾಸಿಕ ಕೆಡಿಪಿ ಸಭೆ
ನಗರದಿಂದ ಗ್ರಾಮೀಣ ಭಾಗಕ್ಕೆ ಮದ್ಯದಂಗಡಿಗಳನ್ನು ವರ್ಗಾವಣೆ ಮಾಡಬೇಡಿ: ಸಚಿವರಾದ ಬಿ.ಶ್ರೀರಾಮುಲು ಸೂಚನೆ
ಚಿತ್ರದುರ್ಗ, ಜನವರಿ16:
ನಗರ ಪ್ರದೇಶದಿಂದ ಗ್ರಾಮೀಣ ಭಾಗಕ್ಕೆ ಮದ್ಯದಂಗಡಿಗಳನ್ನು ವರ್ಗಾವಣೆ ಮಾಡಬೇಡಿ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ 2020-21ನೇ ಸಾಲಿನ ಡಿಸೆಂಬರ್ ಅಂತ್ಯದ ತ್ರೈಮಾಸಿಕ ಕೆಡಿಪಿ (ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳು) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ ಪ್ರದೇಶದಿಂದ ಚಳ್ಳಕೆರೆ ಹಾಗೂ ಮೊಳಕಾಲ್ಮುರಿನ ತಾಲ್ಲೂಕಿನ ನೆರೆಯ ಆಂಧ್ರಪ್ರದೇಶದ ಗಡಿಭಾಗದ ಗ್ರಾಮಗಳಿಗೆ ಮದ್ಯದಂಗಡಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ಕಡಿಮೆ ಜನಸಂಖ್ಯೆ ಇರುವ ಒಂದು ಗ್ರಾಮಕ್ಕೆ ಎರಡರಿಂದ ಮೂರು ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಜನಪ್ರತಿನಿಧಿಗಳು ಹಾಗೂ ಗ್ರಾಮಗಳ ಜನರು ವಿರೋಧ ಮಾಡಿದರೂ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಅಬಕಾರಿ ಅಧಿಕಾರಿಗಳಿಗೆ ಸಚಿವರು ಪ್ರಶ್ನಿಸಿದರು.
ಆಂಧ್ರದ ಗಡಿಭಾಗದಲ್ಲಿ ಮದ್ಯದಂಗಡಿಗಳನ್ನು ತೆರೆಯುವಂತೆ ಹೊಸದಾಗಿ 35 ಅರ್ಜಿಗಳು ಬಂದಿವೆ. ಹೊಸದಾಗಿ ಯಾವುದೇ ಮದ್ಯದಂಗಡಿಗಳಿಗೆ ಅನುಮತಿ ನೀಡಬಾರದು. ಜೊತೆಗೆ ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಗಳಿಗೆ ಮದ್ಯದಂಗಡಿಗಳನ್ನು ವರ್ಗಾವಣೆ ಮಾಡಬಾರದು. ಈ ಕುರಿತು ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದು ಸಚಿವರು ಸೂಚನೆ ನೀಡಿದರು.  ತಪ್ಪೆಸಗಿದ ಅಬಕಾರಿ ಉಪ ಆಯುಕ್ತರ ಮೇಲೆ ಶಿಸ್ತುಕ್ರಮ ಕೈಗೊಂಡು, ಕಡ್ಡಾಯ ರಜೆಯ ಮೇಲೆ ತೆರಳಬೇಕು ಎಂದು ಸಭೆ ತೀರ್ಮಾನಿಸಿತು.
ಜಿ.ಪಂ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಯವರ ಇಎಸ್‍ಐ ಮತ್ತು ಪಿ.ಎಫ್ ಹಣ ದುರುಪಯೋಗದ ಕುರಿತು ಯಾವ ಕ್ರಮಕೈಗೊಳ್ಳಲಾಗಿದೆ ಎಂಬ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹಮದ್ ಮುಬೀನ್ ಈ ವಿಷಯದ ಕುರಿತಂತೆ ರಶ್ಮಿ ಕಂಪ್ಯೂಟರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದಕ್ಕೆ ಸಂಬಂಧಪಟ್ಟಂತೆ ಸಂಸ್ಥೆಯವರು ಉಚ್ಛ ನ್ಯಾಯಾಲಯದಲ್ಲಿ ಸ್ಟೇ ಪಡೆಯಲು ಪ್ರಕರಣ ದಾಖಲು ಮಾಡಿದ್ದು, ಅದರಂತೆ ಉಚ್ಛ ನ್ಯಾಯಾಲವು 6 ವಾರದೊಳಗೆ ರೂ.18 ಲಕ್ಷ ಜಮಾ ಮಾಡಲು ಆದೇಶಿಸಿರುವ ಹಿನ್ನಲೆಯಲ್ಲಿ ಸಂಸ್ಥೆಯವರು ರೂ.18 ಲಕ್ಷ ವನ್ನು ಡಿಡಿ ಮೂಲಕ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹಮದ್ ಮುಬೀನ್ ಸಭೆಗೆ ಮಾಹಿತಿ ನೀಡಿದರು.
ಶಾಲೆಗಳಿಗೆ ಕಾಯಕಲ್ಪ ಕೊಡಿ: ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗಳ ಕಾಂಪೌಂಡ್ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶಾಲಾ ಕಾಂಪೌಂಡ್ ನಿರ್ಮಾಣಗೊಳ್ಳಬೇಕು. ಕಾಮಗಾರಿ ನಿರ್ಮಾಣದಲ್ಲಿ 60:40 ಅನುಪಾತದ ಕಾರಣಕ್ಕಾಗಿ ಶಾಲಾ ಕಾಂಪೌಂಡ್ ನಿರ್ಮಾಣದ ಕಾಮಗಾರಿ ಕೈಬಿಡಕೂಡದು. ಪ್ರತಿ ವರ್ಷವೂ ನಿರಂತರವಾಗಿ ಕಾಮಗಾರಿಕೈಗೊಂಡು ಪ್ರತಿ ಶಾಲೆಗೂ ಕಾಂಪೌಂಡ್ ನಿರ್ಮಾಣ ಮಾಡಬೇಕು ಎಂದು ಸಂಸದ ಎ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಬಾರ್ಡ್, ಡಿಎಂಎಫ್, ಸಿಎಸ್‍ಆರ್, ರಾಜ್ಯವಲಯ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಅನುದಾನ ಬಳಸಿಕೊಂಡು ಶಾಲಾ ಕೊಠಡಿ ನಿರ್ಮಾಣ ಮಾಡಬೇಕು. ಕೋವಿಡ್ ಹಿನ್ನಲೆಯಲ್ಲಿ ಕಳೆದ 9 ತಿಂಗಳಿಂದ ಶಾಲೆಗಳು ತೆರೆಯದಿರುವುದರಿಂದ ಶಾಲೆಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಹಾಗಾಗಿ ಶಾಲೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಂಸದರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ, ರಾಜ್ಯದ 50 ಕಡೆಗಳಲ್ಲಿ 6ನೇ ತರಗತಿಯಿಂದ 12ನೇ ತರಗತಿವರೆಗೆ ಕೇಂದ್ರಿಯ ಶಿಕ್ಷಣ ಮಾದರಿಯಲ್ಲಿ ಶಿಕ್ಷಣ ನೀಡಬೇಕು ಎಂದು ಉದ್ದೇಶಿಸಲಾಗಿದೆ.

ಮಕ್ಕಳ ಸಂಖ್ಯೆ ಹೆಚ್ಚಾಗಿರುವ, ವಿಶಾಲವಾದ ಜಾಗ ಇರುವ ಜಿಲ್ಲೆಯ ಯಾವುದಾದರೂ ಒಂದು ಪಂಚಾಯಿತಿ ಹೆಸರನ್ನು ಆಯ್ಕೆ ಮಾಡಿಕೊಡಿ, ಶಿಕ್ಷಣ ಸಚಿವರೊಂದಿಗೆ ಮಾತನಾಡಿ, ಒಂದು ಪಂಚಾಯಿತಿಯನ್ನು ಮಾದರಿ ಶಾಲೆ ಮಾಡೋಣ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.
ಸಭೆಯಲ್ಲಿ ಸಂಸದ ಎ.ನಾರಾಯಣಸ್ವಾಮಿ, ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಟಿ.ರಘುಮೂರ್ತಿ, ಗೂಳಿಹಟ್ಟಿ ಡಿ.ಶೇಖರ್, ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‍ಬಾಬು, ಉಪಾಧ್ಯಕ್ಷೆ  ವಿಜಯಲಕ್ಷ್ಮಿ ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ತ್ರಿವೇಣಿ ಶಿವಪ್ರಸಾದ್ ಗೌಡ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ನಂದಿನಿದೇವಿ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *