ಮೊಟ್ಟಮೊದಲ ಬಾರಿಗೆ ಸಂಡೂರಿನಲ್ಲಿ ಅ 17 ಮತ್ತು 18ರಂದು ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆ.
ಕಾಶಪ್ಪ ಸಂಡೂರು ತಾಲೂಕು ವರದಿಗಾರರು… ಸಂಡೂರು, ಆ.22: ಸಂಡೂರು ಪಟ್ಟಣದ ಬಿಕೆಜಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ವತಿಯಿಂದ ಅಕ್ಟೋಬರ್ 17 ಮತ್ತು 18ರಂದು ರಾಷ್ಟ್ರಮಟ್ಟದ ಚೆಸ್ ಪಂದ್ಯಾವಳಿಯನ್ನು ಆಯೋಜಿಸಲು ಸಿದ್ಧತೆ ನಡೆಸಲಾಗುತ್ತಿದೆ.
ಪಂದ್ಯಾವಳಿಯ ಪೂರ್ವಭಾವಿಯಾಗಿ ಶನಿವಾರ (ಆ.22) ಬಿಕೆಜಿ ಸಂಸ್ಥೆಯಲ್ಲಿ ಸಭೆ ಆಯೋಜಿಸಲಾಗಿತ್ತು. ದೇಶದ ವಿವಿಧ ಭಾಗಗಳಿಂದ ಚೆಸ್ ಆಟಗಾರರು ಭಾಗವಹಿಸುವ ನಿರೀಕ್ಷೆಯಿದ್ದು, ಪಂದ್ಯಾವಳಿಯಲ್ಲಿ ವಿಜೇತರಿಗೆ ಒಟ್ಟು ₹2 ಲಕ್ಷ ನಗದು ಬಹುಮಾನ ಸೇರಿದಂತೆ ವಿವಿಧ ವಿಭಾಗಗಳಲ್ಲಿ 77 ಬಹುಮಾನಗಳನ್ನು ನೀಡಲು ಸಂಸ್ಥೆ ಮುಂದಾಗಿದೆ.
ಪಂದ್ಯಾವಳಿಗೆ ಆಗಮಿಸುವ ಆಟಗಾರರಿಗೆ ಬಿಕೆಜಿ ಸಂಸ್ಥೆಯ ವತಿಯಿಂದ ಉಚಿತ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಲಾಯಿತು. ಗ್ರಾಮೀಣ ಹಾಗೂ ಸಣ್ಣ ಪಟ್ಟಣಗಳ ಪ್ರತಿಭಾವಂತ ಚೆಸ್ ಆಟಗಾರರಿಗೆ ರಾಷ್ಟ್ರಮಟ್ಟದ ವೇದಿಕೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಇದು ಉತ್ತಮ ಅವಕಾಶವಾಗಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬಿಕೆಜಿ ಸಂಸ್ಥೆಯ ನಾಗನಗೌಡ ಅವರು, “ಚದುರಂಗವು ಬುದ್ಧಿವಂತಿಕೆ, ಏಕಾಗ್ರತೆ ಮತ್ತು ತಂತ್ರಗಾರಿಕೆಯನ್ನು ಬೆಳೆಸುವ ಆಟವಾಗಿದೆ. ಈ ಹಿಂದೆ ಇಂತಹ ರಾಷ್ಟ್ರಮಟ್ಟದ ಚೆಸ್ ಪಂದ್ಯಾವಳಿಗಳು ದೊಡ್ಡ ಪಟ್ಟಣಗಳು ಹಾಗೂ ನಗರಗಳಿಗೆ ಸೀಮಿತವಾಗಿದ್ದವು. ಇದೀಗ ಸಂಡೂರಿನಲ್ಲೇ ರಾಷ್ಟ್ರಮಟ್ಟದ ಪಂದ್ಯಾವಳಿ ನಡೆಯುತ್ತಿರುವುದು ಸಂತಸದ ಹಾಗೂ ಉತ್ತಮ ಬೆಳವಣಿಗೆಯಾಗಿದೆ” ಎಂದರು.
“ಇದರಿಂದ ಹಳ್ಳಿಗಾಡಿನ ಹಾಗೂ ಗ್ರಾಮೀಣ ಪ್ರದೇಶಗಳ ಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸಿ ತಮ್ಮ ಚೆಸ್ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ದೊರೆಯಲಿದೆ. ಪ್ರತಿಭಾವಂತ ಆಟಗಾರರಿಗೆ ಉತ್ತಮ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ. ವಿಜೇತರಿಗೆ ₹2 ಲಕ್ಷ ನಗದು ಬಹುಮಾನ ಸೇರಿದಂತೆ ಒಟ್ಟು 77 ಟ್ರೋಫಿಗಳ ಬಹುಮಾನಗಳನ್ನು ನೀಡಲಾಗುವುದು. ಅಲ್ಲದೆ, ಪಂದ್ಯಾವಳಿಗೆ ಆಗಮಿಸುವ ಆಟಗಾರರಿಗೆ ಸಂಸ್ಥೆಯ ವತಿಯಿಂದ ಊಟ ಮತ್ತು ವಸತಿ ಸೌಲಭ್ಯವನ್ನು ಉಚಿತವಾಗಿ ಒದಗಿಸಲಾಗುವುದು”ಎಂದು ಅವರು ತಿಳಿಸಿದರು.
ಸಂಡೂರಿನಲ್ಲಿ ಮೊದಲ ಬಾರಿಗೆ ನಡೆಯಲಿರುವ ಈ ರಾಷ್ಟ್ರಮಟ್ಟದ ಚೆಸ್ ಪಂದ್ಯಾವಳಿಯು ಸ್ಥಳೀಯ ಮಕ್ಕಳಲ್ಲಿ ಚದುರಂಗದ ಬಗ್ಗೆ ಆಸಕ್ತಿ ಹೆಚ್ಚಿಸುವುದರ ಜೊತೆಗೆ, ಗ್ರಾಮೀಣ ಪ್ರತಿಭೆಗಳಿಗೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಸಿದ್ಧತೆಗಳು, ಆಟಗಾರರಿಗೆ ಕಲ್ಪಿಸಬೇಕಾದ ಮೂಲಸೌಕರ್ಯ ಹಾಗೂ ವಿವಿಧ ವ್ಯವಸ್ಥೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ..
ರೋಟರಿ ಕ್ಲಬ್ ಅಧ್ಯಕ್ಷರು ಬಿಜಾಪುರ ಚೆಸ್ ಅಸೋಸಿಯೇಷನ್,
ಧಾರವಾಡ ಚೆಸ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ,
ಮುಖ್ಯ ಅಧಿಕಾರಿ – ಇಂಟರ್ನ್ಯಾಷನಲ್,
ಪ್ರಾಂಪ್ಟ್ ಜಡ್ಜ್ ಶಿವಮೊಗ್ಗ ಚೆಸ್ ಅಕಾಡೆಮಿ,
ಬಳ್ಳಾರಿ ಚೆಸ್ ಅಸೋಸಿಯೇಷನ್ ಅಧ್ಯಕ್ಷರು ಡಾ. ಬಿ.ಹೆಚ್. ವಿನಾಯಕನಾಯಕ್,
ಸಂಡೂರು ರೋಟರಿ ಕ್ಲಬ್ ಕಾರ್ಯದರ್ಶಿ ಸೋಮಣ್ಣ ಗೌಡ,
ರೋಟರಿ ಕ್ಲಬ್ ಆಫ್ ಬಳ್ಳಾರಿ – ಹೊಸ ಶಾಖೆ ಕಾರ್ಯದರ್ಶಿ,
ವಿಜಯ ಚೆಸ್ ಅಕಾಡೆಮಿ ಅಧ್ಯಕ್ಷರು – ರಾಮೇಶ್ವರಿ, ನಂಜನ ಗೌಡ – ಟ್ರಸ್ಟಿ (BKG)
ಕೆ.ವಿ. ಮೋಹನ್ ರಾವ್ – ಪ್ರಿನ್ಸಿಪಲ್, BKG,
ಡಾ. ಕ್ರಾಂತಿ ಕುಮಾರ್ – ವೈಸ್ ಪ್ರಿನ್ಸಿಪಲ್, BKG,.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
