ಯಾರದ್ದೋ ದುಡ್ಡು ಯಾರದ್ದೋ ಜಾತ್ರೆ!
ರಸ್ತೆಯೋ ಅಥವಾ ಸಾವಿನ ಗುಂಡಿಯೋ? ಸಾರ್ವಜನಿಕರ ಆಕ್ರೋಶ
ಯಾದಗಿರಿ: ನಗರದಿಂದ ಬಿಜಾಪುರ, ಹೈದ್ರಾಬಾದ್ ಹಾಗೂ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಸೃಷ್ಟಿಯಾಗಿರುವ ಈ ಬೃಹತ್ ಗುಂಡಿಯನ್ನು ಕಂಡರೆ, ಇದು ರಸ್ತೆಯೋ ಅಥವಾ ಸಾರ್ವಜನಿಕರನ್ನು ಬಲಿಪಡೆಯಲು ತೋಡಿರುವ ಹಳ್ಳವೋ ಎಂಬ ಅನುಮಾನ ಕಾಡುತ್ತಿದೆ.
ಹದಗೆಟ್ಟ ವ್ಯವಸ್ಥೆ – ನಾಲಾಯಕ್ ಆಡಳಿತ:
ಈ ರಸ್ತೆಯಲ್ಲಿ ಗುಂಡಿ ತೋಡಿದ ಆ ಮಹಾನುಭಾವ “ಪುಣ್ಯಾತ್ಮ” ಯಾರೋ ಗೊತ್ತಿಲ್ಲ, ಆದರೆ ಅದನ್ನು ಮುಚ್ಚುವ ನಾಟಕ ಮಾತ್ರ ನಿರಂತರವಾಗಿ ನಡೆಯುತ್ತಿದೆ. ಒಂದು ವಾರ ರಿಪೇರಿ ಮಾಡುವುದು, ಮರುದಿನವೇ ಅದು ಮೊದಲಿನಂತಾಗುವುದು – ಇದು ಇಂದಿನ ವ್ಯವಸ್ಥೆಯ ಹಣೆಬರಹ. ಇದನ್ನು ನೋಡುತ್ತಿದ್ದರೆ “ಆಡೋಣ ಬಾ, ಕೆಡಿಸೋಣ ಬಾ” ಎಂಬ ಗಾದೆ ಮಾತು ಈ ರಸ್ತೆ ಕಾಮಗಾರಿಗೆ ಅನ್ವಯಿಸಿದಂತಿದೆ.
ಅಧಿಕಾರಿಗಳೇ, ಜನಪ್ರತಿನಿಧಿಗಳೇ ಎಚ್ಚರ!
ಸಾರ್ವಜನಿಕರ ತೆರಿಗೆ ಹಣದಲ್ಲಿ ಮೋಜು ಮಾಡುತ್ತಿರುವ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಸಾಮಾನ್ಯ ಜನರ ನೋವು ಅರ್ಥವಾಗುತ್ತಿಲ್ಲ. “ಯಾರದ್ದೋ ದುಡ್ಡು, ಯಾರದ್ದೋ ಜಾತ್ರೆ” ಎಂಬಂತೆ ವರ್ತಿಸುತ್ತಿರುವ ಇವರಿಗೆ, ತಮ್ಮ ಸ್ವಂತ ಮನೆಯ ಹಣ ಖರ್ಚಾಗುತ್ತಿದ್ದರೆ ಬಹುಶಃ ನೋವಿನ ಅರಿವಾಗುತ್ತಿತ್ತೇನೋ?
ಈ ಅಪಾಯಕಾರಿ ಗುಂಡಿಯಲ್ಲಿ ಬಿದ್ದು ಯಾರಾದರೂ ಪ್ರಾಣ ಕಳೆದುಕೊಂಡರೆ ಅಥವಾ ಕೈ-ಕಾಲು ಮುರಿದುಕೊಂಡು ಅಂಗವಿಕಲರಾದರೆ, ಅದಕ್ಕೆ ಈ ಭಾಗದ ನಾಲಾಯಕ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೇ ನೇರ ಹೊಣೆ.
ಒಂದೇ ವಾರದಲ್ಲಿ ಕಿತ್ತುಹೋಗುವ ಕಾಮಗಾರಿ ಮಾಡುವ ಗುತ್ತಿಗೆದಾರರಿಗೆ ಯಾವ ಮಾನದಂಡದ ಮೇಲೆ ಹಣ ಪಾವತಿಸಲಾಗುತ್ತಿದೆ?
ಕಮಿಷನ್ ದಂಧೆಯಲ್ಲಿ ಮುಳುಗಿರುವ ಅಧಿಕಾರಿಗಳಿಗೆ ಜನರ ಜೀವಕ್ಕಿಂತ ಹಣವೇ ದೊಡ್ಡದಾಯಿತೇ?
ಪ್ರತಿ ಬಾರಿ ತೇಪೆ ಹಚ್ಚುವ ಬದಲು ವೈಜ್ಞಾನಿಕವಾಗಿ ರಸ್ತೆ ದುರಸ್ತಿ ಮಾಡಲು ಇವರಿಗೆ ಇರುವ ಅಡ್ಡಿಯಾದರೂ ಏನು?
ಇನ್ನಾದರೂ ಕುಂಭಕರ್ಣ ನಿದ್ರೆಯಿಂದ ಎಚ್ಚೆತ್ತುಕೊಂಡು ಈ ಗುಂಡಿಯನ್ನು ಶಾಶ್ವತವಾಗಿ ಮುಚ್ಚದಿದ್ದರೆ, ಮುಂಬರುವ ದಿನಗಳಲ್ಲಿ ಸಾರ್ವಜನಿಕರು ಬೀದಿಗಿಳಿದು ತಕ್ಕ ಪಾಠ ಕಲಿಸುವುದು ಖಚಿತ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
