;

ಎಸ್ಸೆಸ್ಸೆಲ್ಸಿ ಪರೀಕ್ಷೆ: ಸಾಧಕ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತನಿಂದ ಸನ್ಮಾನ…!!!

ಎಸ್ಸೆಸ್ಸೆಲ್ಸಿ ಪರೀಕ್ಷೆ: ಸಾಧಕ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತನಿಂದ ಸನ್ಮಾನ

ಕೊಪ್ಪಳ : 2022-23ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕೊಪ್ಪಳ ಜಿಲ್ಲೆಗೆ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್‌ನಿಂದ ವಿಶೇಷವಾದ ಸನ್ಮಾನವು ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮೇ 11ರಂದು ನಡೆಯಿತು. ಹಿರಿಯ ಅಧಿಕಾರಿಗಳು ತಮ್ಮ ಮಕ್ಕಳಿಗೆ ಸನ್ಮಾನಿಸುವುದನ್ನು ಕಂಡು ಮಕ್ಕಳ ಪಾಲಕರು ಭಾವುಕರಾದರು. ತಮ್ಮ ಮಕ್ಕಳಿಗೆ ಓದಲು ಪ್ರೇರೇಪಣೆ ನೀಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದರು. 625 ಅಂಕಗಳಿಗೆ 623 ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಿಟ್ಟಿಸಿದ ಸರ್ಕಾರಿ ಶಾಲೆ ವಿದ್ಯಾರ್ಥಿ ಯಲಬುರ್ಗಾ ತಾಲೂಕಿನ ಬಳೂಟಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕಾರ್ತಿಕ್ ಬಿ.ಎನ್., 625 ಅಂಕಗಳಿಗೆ 621 ಅಂಕಗಳನ್ನು ಗಳಿಸಿ ಜಿಲ್ಲೆಗೆ ಎರಡನೇ ಸ್ಥಾನ ಗಳಿಸಿದ ಕುಷ್ಟಗಿಯ ಕ್ರೈಸ್ತ್ ಕಿಂಗ್ ಪ್ರೌಢಶಾಲೆಯ ವಿದ್ಯಾರ್ಥಿನಿ ಅಮೃತ ಬಳಿಗಾರ ಮತ್ತು 625ಕ್ಕೆ 620 ಅಂಕಗಳನ್ನು ಪಡೆದ ಜಿಲ್ಲೆಗೆ ತೃತೀಯ ಸ್ಥಾನ ಪಡೆದ ಕುಷ್ಟಗಿ ತಾಲೂಕಿನ ಎಸ್‌ಎಫ್‌ಎಸ್ ಪ್ರೌಢಶಾಲೆಯ ವಿದ್ಯಾರ್ಥಿ ಅನ್ವರ್ ಹುಸೇನ್ ಮತ್ತು ಸಂಕಷ್ಟದ ಪರಿಸ್ಥಿತಿಯಲ್ಲಿ ಬಾಲಮಂದಿರ ಸೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಬಾಲಮಂದಿರದಿಂದ ಆರೈಕೆ ಮತ್ತು ಪೋಷಣೆಯಲ್ಲಿದ್ದು ಉತ್ತಮವಾಗಿ ಓದಿ 625ಕ್ಕೆ 577 ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ತೋರಿದ ಅಳವಂಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಹುಲಿಗೆಮ್ಮೆ ತಂದೆ ಉದಯ ಅವರನ್ನು ಜಿಲ್ಲಾಡಳಿತ ಭವನಕ್ಕೆ ಆಹ್ವಾನಿಸಿ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ಪಾಂಡೆಯ ಅವರು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಪ್ರಮಾಣ ಪತ್ರ ವಿತರಿಸಿ, ಗೌರವಿಸಿ ಅಭಿನಂದಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಈ ಬಾರಿಯ ಫಲಿತಾಂಶದಲ್ಲಿ ಜಿಲ್ಲೆಯ ರ‍್ಯಾಂಕಿಂಗ್ ಸ್ಥಾನವು ಉತ್ತಮವಾಗಿದೆ. ಶಿಸ್ತುಬದ್ಧವಾದ ಕ್ರಿಯಾಯೋಜನೆ ಸಿದ್ಧಪಡಿಸಿಕೊಂಡು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತು ಎಲ್ಲ ಶಿಕ್ಷಕರು ಹಾಗೂ ಸಿಬ್ಬಂದಿ ಪ್ರಯತ್ನಿಸಿದ್ದರಿಂದ ಮತ್ತು ಶಿಕ್ಷಕರು ವಿದ್ಯಾರ್ಥಿಗಳಿಗೆ ಮೊಟಿವೇಶನ್ ಮಾಡಿದ್ದರಿಂದ ಫಲಿತಾಂಶ ಸುಧಾರಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು. ಶಾಲೆಗೆ ಸೇರಿದ ಮೇಲೆ ಮೊದಲನೇಯದಾಗಿ ಎದುರಿಸುವ ಮಹತ್ವದ ಪರೀಕ್ಷೆ ಎಸ್ಸೆಸ್ಸೆಲ್ಸಿ ಆಗಿರುತ್ತದೆ. ಈ ಹಂತದಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ತೋರಿದ ಸಾಧನೆಯು ಮುಂದಿನ ಹಂತಗಳಲ್ಲಿ ಸಹಾಯಕ್ಕೆ ಬರುತ್ತದೆ. ನಿಮ್ಮ ನಿಮ್ಮ ಸಾಮರ್ತ್ಯಕ್ಕೆ ತಕ್ಕಂತೆ ಸೂಕ್ತವಾಗುವ ಕೋರ್ಸನ್ನು ಆಯ್ಕೆ ಮಾಡಿಕೊಂಡು ಸರಿಯಾಗಿ ಅಧ್ಯಯನ ಮಾಡಬೇಕು. ಸಾಧನೆ ಇಲ್ಲಿಗೆ ನಿಲ್ಲಬಾರದು. ನಿರಂತರ ಮುಂದುವರೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಸಹ ಎಸ್ಸೆಸ್ಸೆಲ್ಸಿ ಇರಲಿ ಯಾವುದೇ ಪರೀಕ್ಷೆ ಇರಲಿ ಸಾಧನೆ ತೋರಬಹುದು ಎಂಬುದಕ್ಕೆ ಕೊಪ್ಪಳ ಜಿಲ್ಲೆಗೆ ಮೊದಲನೇ ಸ್ಥಾನ ಪಡೆದ ಸರ್ಕಾರಿ ಶಾಲೆಯ ವಿದ್ಯಾರ್ಥಿ ಕಾರ್ತಿಕ್ ಬಿ ಎನ್ ಸಾಕ್ಷಿಯಾಗಿದ್ದಾನೆ. ಜಿಲ್ಲೆಯ ಇನ್ನುಳಿದ ವಿದ್ಯಾರ್ಥಿಗಳಿಗೆ ಸಹ ಸ್ಫೂರ್ತಿಯಾಗಲಿ ಎನ್ನುವುದಕ್ಕಾಗಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುತ್ತಿರುವುದಾಗಿ ಹೇಳಿದರು.ವಿದ್ಯಾರ್ಥಿಗಳ ಸಾಧನೆಯ ಹಿಂದೆ ಪಾಲಕರ ಮತ್ತು ಶಿಕ್ಷಕರ ಪ್ರಯತ್ನ ಮತ್ತು ಪ್ರೋತ್ಸಾಹವು ಸಹ ಅಡಗಿದ್ದು ಸಾಧನೆ ತೋರಿದ ಈ ವಿದ್ಯಾರ್ಥಿಗಳ ಪಾಲಕರು ಮತ್ತು ಸರಿಯಾಗಿ ಮಾರ್ಗದರ್ಶನ ಮಾಡಿದ ಶಿಕ್ಷಕರಿಗೆ ತಾವು ಅಭಿನಂದಿಸುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಪಾಂಡೆಯ ಅವರು ಮಾತನಾಡಿ, ಸತತ ಅಧ್ಯಯನ ಮತ್ತು ನಿರ್ದಿಷ್ಟ ಗುರಿ ಇದ್ದಲ್ಲಿ ಸಾಧನೆ ತೋರಲು ಸಾಧ್ಯವಿದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನ ಮಾಡಬೇಕು. ವೇಳಾಪಟ್ಟಿ ಹಾಕಿಕೊಂಡು ನಿಯಮಿತವಾಗಿ ಓದಿದಲ್ಲಿ ಸರಳವಾಗಿ ಸಾಧನೆ ತೋರಬಹುದಾಗಿದೆ ಎಂದು ತಿಳಿಸಿದರು. ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಫಲಿತಾಂಶ ದಾಖಲಾಗಿದೆ. ಇದಕ್ಕಾಗಿ ಶ್ರಮಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎಂ.ಎ.ರಡ್ಡೇರ್ ಹಾಗೂ ಅವರ ತಂಡದವರು ಮತ್ತು ಎಲ್ಲ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದನಾರ್ಹರು ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎಂ.ಎ.ರಡ್ಡೇರ್ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯ ಒಟ್ಟಾರೆ ಫಲಿತಾಂಶವು ಶೇಕಡಾ 90.27 ರಷ್ಟಾಗಿದ್ದು, ಕಳೆದ ಸಾಲಿಗಿಂತ ಶೇ.3.25ರಷ್ಟು ಹೆಚ್ಚಳವಾಗಿದೆ ಹಾಗೂ ರಾಜ್ಯದಲ್ಲಿ 15ನೇ ಕ್ರಮಾಂಕದ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಾಧಕ ವಿದ್ಯಾರ್ಥಿಗಳನ್ನು ಜಿಲ್ಲಾಡಳಿತ ಭವನಕ್ಕೆ ಆಹ್ವಾನಿಸಿ ಸನ್ಮಾನಿಸಿದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಯತ್ ಸಿಇಓ ಅವರಿಗೆ ಶಿಕ್ಷಣ ಇಲಾಖೆ ಮತ್ತು ಎಲ್ಲ ಶಿಕ್ಷಕ ವೃಂದದ ಪರವಾಗಿ ಅಭಿನಂದಿಸುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿನಿ ಹುಲಿಗೆಮ್ಮ ಮಾತನಾಡಿ, ನಮ್ಮ ಶಾಲೆಯಲ್ಲಿ ಎಲ್ಲ ಶಿಕ್ಷಕರು ತಂದೆಯ ಸ್ಥಾನದಲ್ಲಿ ನಿಂತು ಓದಲು ಸಹಕಾರ ನೀಡಿದ್ದಕ್ಕೆ ನನಗೆ ಹೆಚ್ಚಿನ ಅಂಕಗಳನ್ನು ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು.


ನಾನು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇನೆ ಎನ್ನುವುದೇ ನನಗೆ ಮೊದಲ ಖುಷಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಕಷ್ಟಪಟ್ಟು ಓದಿ ಹೆಚ್ಚು ಅಂಕ ಪಡೆದವರೇ ಆಯ್ಕೆಯಾಗಿ ಸರ್ಕಾರಿ ಶಾಲೆಗೆ ಶಿಕ್ಷಕರಾಗಿ ಬಂದಿರುತ್ತಾರೆ. ಈ ಕಾರಣಕ್ಕೆ ಸರ್ಕಾರಿ ಶಾಲೆಯಲ್ಲಿ ನನಗೆ ಉತ್ತಮ ಮಾರ್ಗದರ್ಶನ ಸಿಕ್ಕು ನನಗೆ ಹೆಚ್ಚು ಅಂಕ ಪಡೆಯಲು ಸಾಧ್ಯವಾಯಿತು ಎಂದು ವಿದ್ಯಾರ್ಥಿ ಕಾರ್ತಿಕ ಬಿ.ಎನ್. ತಿಳಿಸಿದನು.ನಮ್ಮ ಮನೆಯಲ್ಲಿ ಪುಸ್ತಕಗಳು ಮತ್ತು ಓದಿನ ವಾತಾವರಣವಿದೆ. ಸಾಹಿತ್ಯದ ವಿದ್ಯಾರ್ಥಿನಿಯಂತಿರುವ, ಲೇಖಕಿಯಾಗಿರುವ ನನ್ನ ತಾಯಿಯೇ ನನ್ನ ಸಾಧನೆಗೆ ಸ್ಫೂರ್ತಿಯಾಗಿದ್ದಾಳೆ. ಶಾಲೆಯಲ್ಲಿ ಶಿಕ್ಷಕರು ಮತ್ತು ಮನೆಯಲ್ಲಿ ಪಾಲಕರು ಸರಿಯಾದ ಮಾರ್ಗದರ್ಶನ ಮಾಡಿದ್ದರಿಂದ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯವಾಯಿತು ಎಂದು ವಿದ್ಯಾರ್ಥಿ ಅನ್ವರ್ ಹುಸೇನ್ ತಿಳಿಸಿದನು.
ಮನೆಯಲ್ಲಿ ಪಾಲಕರಾಗಲಿ ಮತ್ತು ಶಾಲೆಯಲ್ಲಿ ಶಿಕ್ಷಕರಾಗಲಿ ನನಗೆ ಯಾವತ್ತು ಡಿಮೋಟೀವ್ ಮಾಡಿಲ್ಲ. ಎಲ್ಲರೂ ಸದಾಕಾಲ ನನಗೆ ಓದಲು ಹೇಳಿದ್ದರಿಂದ ಮತ್ತು ಧೈರ್ಯ ಹೇಳಿದ್ದರಿಂದ ನನಗೆ ಪರೀಕ್ಷೆಯಲ್ಲಿ ಸರಳವಾಗಿ ಹೆಚ್ಚಿನ ಅಂಕ ಪಡೆಯಲು ಸಾಧ್ಯವಾಯಿತು ಎಂದು ವಿದ್ಯಾರ್ಥಿನಿ ಅಮೃತಾ ಬಳಿಗಾರ ತಿಳಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಪದ್ಮಾವತಿ ಜಿ., ಜಿಲ್ಲಾ ಖಜಾನೆಯ ಉಪ ನಿರ್ದೇಶಕರಾದ ಎಂ.ಮೆಹಬೂಬಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ಯೋಜನಾ ಸಮನ್ವಯಾಧಿಕಾರಿ ಉಮೇಶ ಪೂಜಾರ, ಶಿಕ್ಷಣಾಧಿಕಾರಿ ಸರಸ್ವತಿ ಕನವಳ್ಳಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿನಿ ಕೋಟಗಾರ, ಮಕ್ಕಳ ರಕ್ಷಣಾಧಿಕಾರಿ ಸುಮಲತಾ ಆಕಳವಾಡಿ, ಸಖಿ ಒನ್ ಸ್ಟಾಪ್ ಸೆಂಟರನ ಆಡಳಿತಾಧಿಕಾರಿ ಯಮುನಾ ಬೆಸ್ತಾರ ಹಾಗೂ ಇತರರು ಇದ್ದರು. ಬಾಲಕರ ಬಾಲಮಂದಿರ ಮತ್ತು ಬಾಲಕಿಯರ ಬಾಲಮಂದಿರದ ಅಧೀಕ್ಷಕರು ಹಾಗೂ ಇನ್ನೀತರರು ಇದ್ದರು…

ವರದಿ. ಸಂಗೀತ ಪಾಟೀಲ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *