ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನ:
ಬೊಮ್ಮಸಾಗರ ತಾಂಡಾಕ್ಕೆ ಜಿಲ್ಲಾಧಿಕಾರಿಗಳ ಭೇಟಿ
ಕೊಪ್ಪಳ : ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನದ ಅಂಗವಾಗಿ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಡಿಸೆಂಬರ್ 17ರಂದು ಕನಕಗಿರಿ ತಾಲೂಕಿನ ಬೊಮ್ಮಸಾಗರ ತಾಂಡಾಕ್ಕೆ ಭೇಟಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಧಿಕಾರಿಗಳಾದ ಬಿ.ಫೌಜಿಯಾ ತರುನ್ನುಮ್ ಅವರ ಸಮ್ಮುಖದಲ್ಲಿ ಬೆಳಗ್ಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಸಿಗೆ ನೀರು ಹಾಕುವ ಮೂಲಕ ಜಿಲ್ಲಾಧಿಕಾರಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಗ್ರಾಮದ ಶಾಲಾ ಆವರಣದಲ್ಲಿ ಅಡುಗೆ ಕೋಣೆ ಕಟ್ಟಡಕ್ಕೆ ಮತ್ತು ಶೌಚಾಲಯ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ಜನತೆಗೆ ತಲುಪಿಸುವ ವಿವಿಧ ಇಲಾಖೆಗಳ ಪ್ರದರ್ಶನ ಮಳಿಗೆಗಳಿಗೆ ಚಾಲನೆ ನೀಡಿದರು. ನಂತರ ಗ್ರಾಮಸ್ಥರ ಮನವಿ ಮೇರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಬಸ್ ಸೌಕರ್ಯಕ್ಕೆ ಚಾಲನೆ ನೀಡಿದರು.
ಬಳಿಕ ಜಿಲ್ಲಾಧಿಕಾರಿಗಳು, ಗ್ರಾಮ ಸಂಚಾರ ಕೈಗೊಂಡರು. ಈ ವೇಳೆ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಆಹಾರ ಧಾನ್ಯ ಸೇರಿದಂತೆ ಮಕ್ಕಳಿಗೆ ನೀಡುವ ಸೌಕರ್ಯಗಳ ಬಗ್ಗೆ ಖದ್ದು ಪರಿಶೀಲಿಸಿದರು.
ಬಳಿಕ ಜಿಲ್ಲಾಧಿಕಾರಿಗಳು, ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿದರು. ಸರ್ಕಾರದ ಹನಿ ನೀರಾವರಿ ಯೋಜನೆಯ ಸಹಾಯ ಪಡೆದು ಉತ್ತಮ ಬೆಳೆ ತೆಗೆಯುತ್ತಿರುವ ಗ್ರಾಮದ ಕೇಶಪ್ಪ ತಂದೆ ಈರಪ್ಪ ಅವರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಜಿಲ್ಲಾಧಿಕಾರಿಗಳು ಗ್ರಾಮದ ಕೃಷ್ಣಪ್ಪ ರಾಠೋಡ್ ತೋಟಕ್ಕೆ ತೆರಳಿದರು. ಅತ್ಯುತ್ತಮವಾಗಿ ತೋಟಗಾರಿಕಾ ಬೆಳೆ ತೆಗೆದ ಕೃಷ್ಣಪ್ಪ ರಾಠೋಡ್ ಅವರ ಯಶೋಗಾಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಾನು ವಸತಿ ನಿಲಯದ ಹಿಂದಿನ ವಿದ್ಯಾರ್ಥಿಯಾಗಿದ್ದು, ಪಿಎಂಕೆಎಸ್ವೈ ಮತ್ತು ನರೇಗಾ ಯೋಜನೆಯಡಿ ತೋಟಗಾರಿಕಾ ಇಲಾಖೆಯಿಂದ ಧನಸಹಾಯ ಪಡೆದು ಗುಲಾಬಿ ಹೂ ಕೃಷಿ ಮಾಡಿದ್ದನ್ನು ಮತ್ತು ಸಿಎಚ್ಡಿ ಯೋಜನೆಯಡಿ ಬದನೆಕಾಯಿ ಬೆಳೆದಿರುವುದನ್ನು ಜಿಲ್ಲಾಧಿಕಾರಿಗಳಿಗೆ ವಿವರಿಸಿದರು. ತೋಟಗಾರಿಕಾ ಇಲಾಖೆಯಿಂದ ತಮಗೆ ಉತ್ತಮ ರೀತಿಯ ಸಹಾಯಧನ ಸಿಕ್ಕಿದೆ ಎಂದು ತಿಳಿಸಿದರು.
ಶಾಲೆಗೆ ಭೇಟಿ: ಇದೆ ವೇಳೆ ಜಿಲ್ಲಾಧಿಕಾರಿಗಳು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲಾ ಮಕ್ಕಳೊಂದಿಗೆ ಆಪ್ತವಾಗಿ ಮಾತನಾಡಿದರು. ಮಕ್ಕಳಿಗೆ ಬಿಸಿ ಊಟ ಸೇರಿದಂತೆ ಇನ್ನಿತರ ಸೌಲಭ್ಯಗಳ ಬಗ್ಗೆ ಶಾಲಾ ಶಿಕ್ಷಕರಿಂದ ಮಾಹಿತಿ ಪಡೆದರು.

ಅರ್ಜಿ ಸ್ವೀಕಾರಕ್ಕೆ ವ್ಯವಸ್ಥೆ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಲು ಶಾಲಾ ಆವರಣದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಗಣಕಯಂತ್ರಗಳ ವ್ಯವಸ್ಥೆ ಮಾಡಲಾಗಿತ್ತು, ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023ರ ಬಗ್ಗೆ ಇದೆ ವೇಳೆ ಮಾಹಿತಿ ನೀಡಲಾಯಿತು.
ಗಮನ ಸೆಳೆದ ಮಳಿಗೆಗಳು: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನ ಹಿನ್ನೆಲೆಯಲ್ಲಿ ತಾಲೂಕು ಪಂಚಾಯತ್ ಕನಕಗಿರಿಯಿಂದ ನರೇಗಾ ಮಾಹಿತಿ ಕೇಂದ್ರ, ಸಾಮಾಜಿಕ ಅರಣ್ಯ ವಲಯ ಮತ್ತು ಪ್ರಾದೇಶಿಕ ಅರಣ್ಯ ವಲಯ ಗಂಗಾವತಿ, ಶಿಶು ಅಭಿವೃದ್ಧಿ ಯೋಜನೆ ಗಂಗಾವತಿ, ಪಶುಪಾಲನಾ ಇಲಾಖೆ ಕನಕಗಿರಿ, ತೋಟಗಾರಿಕಾ ಇಲಾಖೆ ಗಂಗಾವತಿ ಮತ್ತು ಕೃಷಿ ಇಲಾಖೆ ಕನಕಗಿರಿ ಮತ್ತು ಗ್ರಾಮ ಒನ್ ಕೇಂದ್ರ ಸಮಾಜ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಗಂಗಾವತಿ ಇವರಿಂದ ಸರ್ಕಾರದ ವಿವಿಧ ಯೋಜನೆಯಗಳ ಮಾಹಿತಿಯ ಫಲಕಗಳ ಪ್ರದರ್ಶನ ಮಳಿಗೆಗಳನ್ನು ಹಾಕಲಾಗಿತ್ತು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ, ತಹಸೀಲ್ದಾರರಾದ ಧನಂಜಯ ಎಂ., ತಾಪಂ ಇಓ ಚಂದ್ರಶೇಖರ ಕಂದಕೂರ, ಪಿಡಿಓ ನಾಗೇಶ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು…

ವರದಿ. ಮಂಜುನಾಥ್, ದೊಡ್ಡಮನಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
