ಗ್ರಾಮೀಣ ಭಾಗದ ಮಕ್ಕಳು ಸ್ಪರ್ಧಾತ್ಮಕ ಜಗತ್ತಿಗೆ ಬೇಗ ತೆರೆದುಕೊಳ್ಳಬೇಕು: ಸಿದ್ದಪ್ಪ ಕೂಕನಪಳ್ಳಿ
ಹೊಳಲು: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅತ್ಯಂತ ಪ್ರತಿಭಾಶಾಲಿಗಳಾಗಿದ್ದು, ಸ್ಪರ್ಧಾತ್ಮಕ ಜಗತ್ತಿಗೆ ಬೇಗ ತೆರೆದುಕೊಳ್ಳಬೇಕು ಎಂದು ಇಲ್ಲಿನ ಸ್ವಾಮಿ ವಿವೇಕಾನಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸಿದ್ದಪ್ಪ ಕೂಕನಪಳ್ಳಿ ಸಲಹೆ ನೀಡಿದರು. ಅವರು ಇಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಒಂದು ದಿನದ ಇಂಗ್ಲಿಷ್ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಕಠಿಣ ಎನಿಸಿರುವ ಇಂಗ್ಲಿಷ್ ವಿಷಯದ ಕಾರ್ಯಾಗಾರವನ್ನು ಕಳೆದ ಎರಡು ವರ್ಷಗಳಿಂದ ನಮ್ಮ ಕಾಲೇಜಿನಲ್ಲಿ ಆಯೋಜಿಸುತ್ತಿದ್ದು, ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಜೊತೆಗೆ ಮಾಗಳ ಮತ್ತು ಹಿರೇಹಡಗಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳೂ ಭಾಗವಹಿಸುತ್ತಿರುವುದು ಸಂತೋಷದ ವಿಷಯ, ನೀವೆಲ್ಲ ಈ ಕಾರ್ಯಾಗಾರದ ಉಪಯೋಗ ಪಡೆದು ಉತ್ತಮ ಫಲಿತಾಂಶ ನಿಮ್ಮದಾಗಿಸಿಕೊಳ್ಳಿ ಎಂದು ಆಶಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಎಮ್ಮಿಗನೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ಕೆ. ಧರ್ಮಪ್ಪ ಮಾತನಾಡಿ, ಇಂಗ್ಲಿಷ್ ಕಠಿಣ ಎಂಬ ಭ್ರಮೆಯನ್ನು ನಾವೇ ಹುಟ್ಟಿಸಿಕೊಂಡು ನಮ್ಮನ್ನ ನಾವು ಸ್ಪರ್ಧಾತ್ಮಕ ಜಗತ್ತಿನಿಂದ ದೂರಮಾಡಿಕೊಂಡಿದ್ದೇವೆ, ಶ್ರಮ ಹಾಕಿದರೆ ಯಾವ ವಿಷಯವೂ ಕಠಿಣವಲ್ಲ ಎಂದರು. ಜೊತೆಗೆ ಅವರು ಸತತ 4 ತಾಸುಗಳ ಕಾಲ ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯದ ವ್ಯಾಕರಣ ಭಾಗವನ್ನು ವಿದ್ಯಾರ್ಥಿಗಳಿಗೆ ಪರೀಕ್ಷಾ ದೃಷ್ಟಿಯಿಂದ ಸುಲಭ ಮಾಡಿಕೊಳ್ಳುವ ತಂತ್ರಗಳನ್ನು ಹೇಳಿಕೊಟ್ಟರು.
ಕಾರ್ಯಕ್ರಮದಲ್ಲಿ ಹೊಳಲು ಕಾಲೇಜಿನ ಉಪನ್ಯಾಸಕರಾದ ಸಣ್ಣನೀಲಪ್ಪ, ಮಲ್ಲಯ್ಯ ಎಚ್ ವೈ, ವೀರೇಶ್, ಕಾರ್ಯಕ್ರಮ ಸಂಯೋಜಕ ಪರಶುರಾಮ ನಾಗೋಜಿ, ನಿವೃತ್ತ ಶಿಕ್ಷಕ ಜಗ್ಗಿನ್, ಹಿರೇಹಡಗಲಿ ಕಾಲೇಜಿನ ಪ್ರಾಚಾರ್ಯ ಕೆ. ಮೂಗಪ್ಪ, ಉಪನ್ಯಾಸಕ ಕೆ. ಪ್ರಕಾಶ್, ಮಾಗಳ ಕಾಲೇಜಿನ ಉಪನ್ಯಾಸರಾದ ರೇವಣಸಿದ್ಧಪ್ಪ, ತಾರಾಸಿಂಗ್ ಹಾಗೂ ಮೂರು ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು…

ವರದಿ. ಅಜಯ್ ಛಲವಾದಿ ಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
