ಕಲ್ಯಾಣ ಕರ್ನಾಟಕದಲ್ಲಿನ ಅಪೌಷ್ಠಿಕತೆ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು
ಡಾ. ಗಿರೀಶ ದಿಲೀ..ಬೇರೆ ಜಿಲ್ಲೆಗಳಿಗೆ ಹೋಲಿಸಿದಾಗ ಹೆಚ್ಚಾಗಿ ಅಪೌಷ್ಠಿಕತೆ ಕಂಡು ಬರುವುದು ಕಲ್ಯಾಣ ಕರ್ನಾಟಕ ಭಾಗದಲ್ಲಿ, ಹಾಗಾಗಿ ಎಲ್ಲರೂ ನಮ್ಮ ಭಾಗದಿಂದ ಅಪೌಷ್ಠ್ಟಿಕತೆ ನಿರ್ಮೂಲನೆಗೊಳಿಸಲು ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ದಿಲೀಪ ಬದೋಲೆ ಅವರು ಕರೆ ನೀಡಿದರು.
ಶನಿವಾರದಂದು ನಗರದ ರಾಜ್ಯ ಮಹಿಳಾ ನಿಲಯದ ಸರಕಾರಿ ಬಾಲಕಿಯರ ಬಾಲ ಮಂದಿರ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ, ಕಲಬುರಗಿ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪೋಷಣಾ ಮಾಸಚರಣೆ ಹಾಗೂ ಮಾತೃವಂದನಾ ಸಪ್ತಾಹ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಗರ್ಭಧಾರಣೆಯಿಂದ ಹಿಡಿದು ಶಿಶು ಮತ್ತು ತಾಯಂದಿರು 100 ದಿನಗಳ ಕಾಲ ಉತ್ತಮ ಪೌಷ್ಠಿಕ ಆಹಾರ ಸೇವನೆ ಮಾಡುವುದು. ರಕ್ತ ಹೀನತೆ, ಅತಿಸಾರ ಭೇದಿ ತಡೆಗಟ್ಟುವುದು, ಪೌಷ್ಠಿಕ ಆಹಾರ ಪೂರೈಕೆ ಮಾಡುವುದರ ಮೂಲಕ ತಾಯಿ ಮತ್ತು ಶಿಶುವಿನ ಉತ್ತಮ ಆರೋಗ್ಯ ಕಾಪಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಪೌಷ್ಠಿಕತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸೆಪ್ಟೆಂಬರ್ 1 ರಿಂದ 30 ರವರೆಗೆ ರಾಷ್ಟ್ರೀಯ ಪೋಷಣ್ ಮಾಸಾಚರಣೆ ನಡೆಯುತ್ತಿದ್ದು, ನಿಯಮಿತ ಪೌಷ್ಠಿಕ ಆಹಾರ ನೀಡುವುದು ಹಾಗೂ 5 ವರ್ಷದೊಳಗಿನ ಮಕ್ಕಳಿಗೆ ಸಾಂಕ್ರಾಮಿಕ ರೋಗ ತಡೆಗಟ್ಟಲು ಲಸಿಕೆ ಹಾಕಿಸುವುದು ಬಹು ಮುಖ್ಯವಾದ ಕಾರ್ಯವಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಈ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ತಾಯಿ-ಮಗುವನ್ನು ರಕ್ಷಿಸಿ ಮರಣ ಪ್ರಮಾಣ ಕಡಿಮೆ ಮಾಡಬೇಕೆಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನವೀನಕುಮಾರ. ಯು ಅಧ್ಯಕ್ಷತೆ ವಹಿಸಿ ಮಾತನಾಡಿ, ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಲ್ಲಿ ಕಂಡುಬರುವ ಅಪೌಷ್ಠಿಕತೆಯ ಕೊರತೆ ನಿವಾರಿಸಲು ಸರ್ಕಾರ ತಾಯಿ ಮತ್ತು ಮಕ್ಕಳ ಆರೈಕೆಗಾಗಿ ಪೋಷಣಾ ಮಾಸಾಚರಣೆ ಮುಂತಾದ ಯೋಜನೆಗಳನ್ನು ಜಾರಿ ಮಾಡಿದ್ದು, ಇವುಗಳ ಸದುಪಯೋಗವನ್ನು ಫಲಾನುಭವಿಗಳು ಪಡೆದುಕೊಂಡಾಗ ಮಾತ್ರ ಯೋಜನೆಗಳು ಜಾರಿ ತಂದಿದಕ್ಕೆ ಪ್ರಯೋಜನವಾಗುತ್ತದೆ ಎಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಅಧಿಕಾರಿ ಡಾ. ರಾಜಶೇಖರ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಲು ಪ್ರತಿಯೊಬ್ಬರಿಗೂ ಪೌಷ್ಠಿಕ ಆಹಾರದ ಅಗತ್ಯವಿದೆ. ಬಹಳಷ್ಟು ಮಕ್ಕಳಲ್ಲಿ ಅಪೌಷ್ಠಿಕತೆ ಕೊರತೆ ಕಂಡು ಬರುತ್ತಿದ್ದು, ಇದರಿಂದ ಸಾವು-ನೋವುಗಳನ್ನು ನಿಯಂತ್ರಿಸಲು ಸರಕಾರ ಅಪೌಷ್ಠಿಕತೆ ನಿವಾರಣೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನವೂ ಒಂದಾಗಿದೆ. ಇದನ್ನು ಎಲ್ಲರೂ ತಮ್ಮ-ತಮ್ಮ ಮನೆಯ ಸಮಸ್ಯೆ ಎಂದು ಭಾವಿಸಿ ನಿವಾರಿಸಲು ಕೈಜೋಡಿಸಬೇಕು ಎಂದರು. ಆಯುಷ್ ಇಲಾಖೆ ಜಿಲ್ಲಾ ಅಧಿಕಾರಿ ಡಾ. ಗಿರಿಜಾ ಎಸ್.ಯು ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇದಕ್ಕೂ ಮೊದಲು ಪೋಷಣೆ ಮಾಸಾಚರಣೆಯ ಅಂಗವಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ದಿಲೀಪ ಬದೋಲೆ ಅವರು ಅಭಿಯಾನಕ್ಕೆ ಚಾಲನೆ ನೀಡಿದರು.
ಇದೇ ವೇಳೆ ರಾಷ್ಟ್ರೀಯ ಪೋಷಣ್ ಮಾಸಾಚರಣೆ 2022 ಸೆಪ್ಟೆಂಬರ್ 1ರಿಂದ 30ರ ವರೆಗೆ ಅಪೌಷ್ಠಿಕತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪೋಷಣ ಅಭಿಯಾನದ ಕರಪತ್ರಗಳನ್ನು ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಅನೀತಾ, ಸುಧಾರಾಣಿ, ಸಾನಿಕಾ, ಸ್ವಪ್ನಾ, ಭಾಗ್ಯಶ್ರೀ ಹಾಗೂ ಅಂಬಿಕಾ ಈ 5 ಜನ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಸಂಘದ ಜಿಲ್ಲಾ ಅಧ್ಯಕ್ಷೆ ಮಲ್ಲಮ್ಮ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ನಗರ) ಭೀಮರಾಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ಡಿ.ಕೆ ರಾಜರತ್ನ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಮುರುಗೇಶ ಗುಣಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಿರಿಯ ಮೇಲ್ವಿಚಾರಕಿ ಆರತಿ ಮಾಲಿ ಪಾಟೀಲ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿ ಮಹಿಳೆಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು…

ವರದಿ. ಬಸಯ್ಯ ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
