ಬೆಂಗಳೂರು, ಮೇ 19- ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಎಂದಿನಂತೆ ಬಾಲಕಿಯರೇ ಈ ಬಾರಿಯೂ ಮೇಲುಗೈ ಸಾಸಿದ್ದು, ಶೇ.85.63ರಷ್ಟು ಫಲಿತಾಂಶ ಬಂದಿದೆ.ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಫಲಿತಾಂಶದಲ್ಲಿ ಮುಂದಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಲ್ಲಿ ಪೂರ್ಣ ಪ್ರಮಾಣದ ಪರೀಕ್ಷೆ ನಡೆಸಲು ಸಾಧ್ಯವಾಗಿರಲಿಲ್ಲ.
ಆದರೂ ಸಹ ಈ ಬಾರಿ ಪೂರ್ಣ ಪ್ರಮಾಣದ ಪರೀಕ್ಷೆ ನಡೆಸಿದ್ದು, 8,73,859 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, 8,53,436 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇ.85.63ರಷ್ಟು ಫಲಿತಾಂಶ ಬಂದಿದೆ. ಕಳೆದ 10 ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚು ಫಲಿತಾಂಶ ಬಂದಿದೆ.
145 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ. ಇದರಲ್ಲಿ ಸರ್ಕಾರಿ ಶಾಲೆಯ 21 ವಿದ್ಯಾರ್ಥಿಗಳು, ಅನುದಾನಿತ 8 ವಿದ್ಯಾರ್ಥಿಗಳು ಹಾಗೂ ಅನುದಾನ ರಹಿತ 116 ವಿದ್ಯಾರ್ಥಿಗಳು ಸೇರಿದ್ದಾರೆ.309 ವಿದ್ಯಾರ್ಥಿಗಳು 624 ಅಂಕಗಳನ್ನು ಪಡೆದಿದ್ದರೆ, 422 ವಿದ್ಯಾರ್ಥಿಗಳು 623 ಅಂಕ ಪಡೆದವರಾಗಿದ್ದಾರೆ. 615 ವಿದ್ಯಾರ್ಥಿಗಳು 622 ಅಂಕಗಳಿಸಿದ್ದಾರೆ. 706 ವಿದ್ಯಾರ್ಥಿಗಳು 621 ಅಂಕ ಪಡೆದಿದ್ದು, 773 ವಿದ್ಯಾರ್ಥಿಗಳು 620 ಅಂಕ ಗಳಿಸಿದ್ದಾರೆ.
ಶಿಕ್ಷಣ ಗುಣಾತ್ಮಕ ಫಲಿತಾಂಶವನ್ನು ಈ ಬಾರಿ ಗ್ರೇಡ್ ಆಧಾರದ ಮೇಲೆ ನೀಡಲಾಗಿದ್ದು, 34 ಶೈಕ್ಷಣಿಕ ಜಿಲ್ಲೆಗಳ ಪೈಕಿ ಬೆಂಗಳೂರು ದಕ್ಷಿಣ, ಯಾದಗಿರಿ ಜಿಲ್ಲೆಗಳು ಫಲಿತಾಂಶ ಬಿ ಗ್ರೇಡ್ ಪಡೆದಿದ್ದು, ಉಳಿದ 32 ಜಿಲ್ಲೆಗಳು ಎ ಗ್ರೇಡ್ ಪಡೆದಿವೆ.ಬಾಲಕಿಯರು ಮೇಲುಗೈ ಸಾಸಿದ್ದು, 4,12,334 ವಿದ್ಯಾರ್ಥಿನಿಯರಲ್ಲಿ 3,72,278 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಶೇ.90.29ರಷ್ಟು ಫಲಿತಾಂಶ ಬಂದಿದೆ. 4,41,099 ಬಾಲಕರು ಪರೀಕ್ಷೆಗೆ ಹಾಜರಾಗಿದ್ದು, 3,68,602 ಬಾಲಕರು ಉತ್ತೀರ್ಣರಾಗಿ ಶೇ.81.30ಯಷ್ಟು ಫಲಿತಾಂಶ ಪಡೆದಿದ್ದಾರೆ.
ಅನುದಾನ ರಹಿತ ಶಾಲೆಗಳ ಫಲಿತಾಂಶ ಶೇ.92.29ರಷ್ಟಿದ್ದು, ಅನುದಾನಿತ ಶಾಲೆಗಳ ಫಲಿತಾಂಶ 87.84ರಷ್ಟಿದೆ. ಸರ್ಕಾರಿ ಶಾಲೆಗಳ ಫಲಿತಾಂಶ ಶೇ.88ರಷ್ಟಿದೆ.ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ 4,28,385 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಶೇ.91.32ರಷ್ಟು ಫಲಿತಾಂಶ ಬಂದಿದೆ. ನಗರ ಪ್ರದೇಶದಲ್ಲಿ 2,92,946 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇ.86.64ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ.
ಪ್ರಥಮ ಭಾಷೆಯಲ್ಲಿ 19,225 ವಿದ್ಯಾರ್ಥಿಗಳು, ದ್ವಿತೀಯ ಭಾಷೆಯಲ್ಲಿ 13,458 ವಿದ್ಯಾರ್ಥಿಗಳು, ತೃತೀಯ ಭಾಷೆಯಲ್ಲಿ 43,126 ವಿದ್ಯಾರ್ಥಿಗಳು, ಗಣಿತದಲ್ಲಿ 13,683 ವಿದ್ಯಾರ್ಥಿಗಳು, ವಿಜ್ಞಾನದಲ್ಲಿ 6,592, ಸಮಾಜ ವಿಜ್ಞಾನದಲ್ಲಿ 50,782 ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳಿಸಿದ್ದಾರೆ ಎಂದು ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ…

ವರದಿ, ಮುಕ್ಕಣ್ಣ ಹುಲಿಗುಡ್ಡ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
