;

ಬಳ್ಳಾರಿಯಲ್ಲಿ ವಿಶ್ವ ಶ್ರವಣ ದಿನ ಆಚರಣೆ ಶ್ರವಣದೋಷ ನಿವಾರಣೆಗೆ ವ್ಯಾಪಕ ಕ್ರಮ:ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ…!!!

ಬಳ್ಳಾರಿಯಲ್ಲಿ ವಿಶ್ವ ಶ್ರವಣ ದಿನ ಆಚರಣೆ
ಶ್ರವಣದೋಷ ನಿವಾರಣೆಗೆ ವ್ಯಾಪಕ ಕ್ರಮ:ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ
ಬಳ್ಳಾರಿ,: ಆರೋಗ್ಯವಂತ ವ್ಯಕ್ತಿಯ ಕಾರ್ಯ ಚಟುವಟಿಕೆಗಳಲ್ಲಿ ಶ್ರವಣ ಬಹಳಷ್ಟು ಪ್ರಮುಖವಾಗಿದ್ದು ಈ ದಿಶೆಯಲ್ಲಿ ಶ್ರವಣ ದೋಷ ನಿವಾರಣೆಗೆ ವ್ಯಾಪಕ ಕ್ರಮ ಕೈಗೊಳ್ಳಲಾಗುತ್ತಿದೆ.ಜೀವನವಿಡೀ ಕೇಳಿಸಿಕೊಳ್ಳಲು ಜಾಗೃತಿಯಿಂದ ಆಲಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಸ್ಪತ್ರೆಯ ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಅವರು ಹೇಳಿದರು.
ವಿಶ್ವ ಶ್ರವಣ ದಿನಾಚರಣೆ ನಿಮಿತ್ತ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾ ಶ್ರವಣದೋಷ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲಾಸ್ಪತ್ರೆ ಅವರಣದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಶ್ರವಣ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಿವಿ ಮತ್ತು ಶ್ರವಣ ಆರೈಕೆಯ ಮಾಹಿತಿ ತಿಳಿದುಕೊಂಡು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಈಗಾಗಲೇ ಶ್ರವಣದೋಷ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಶ್ರವಣ ಆರೈಕೆಯ ಮಾಹಿತಿ ಕುರಿತು ಆರೋಗ್ಯ ಇಲಾಖೆಯ ಸಿಬ್ಬಂದಿ, ಶಾಲಾ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇನ್ನೀತರರಿಗೆ ತರಬೇತಿ ನೀಡಲಾಗಿದೆ ಎಂದರು.
ಸಾಮಾನ್ಯವಾಗಿ ಕಿವುಡತನಕ್ಕೆ ನವಜಾತ ಶಿಶುಗಳಲ್ಲಿ ಕೌಟಿಂಬಿಕ ಹಿನ್ನೆಲೆ, ಗರ್ಭಾವಸ್ಥೆಯಲ್ಲಿನ ಸೋಂಕುಗಳು, ದಿನ ತುಂಬುವ ಮುನ್ನ ಜನಸಿದ್ದು, ಜನನದ ಸಮಯದಲ್ಲಿ ಆಮ್ಲಜನಕದ ಕೊರತೆ, ಜನನದ ನಂತರ ತೀವ್ರ ಕಾಮಾಲೆ ಕಾರಣವಾಗಿದೆ ಎಂದರು.
ಮಕ್ಕಳು ಮತ್ತು ವಯಸ್ಕರಲ್ಲಿ ಮೆನಿಂಜಜೈಟಿಸ್, ದಡಾರ, ಗದಗಟ್ಟು ಅಥವಾ ಕಿವಿಯ ಸೋಂಕುಗಳು, ಕೆಲವು ಔಷಧಿಗಳನ್ನು ಬಳಸುವುದರಿಂದ, ತಲೆ ಅಥವಾ ಕಿವಿಗೆ ಗಾಯ, ಯಾವುದೇ ಸನ್ನಿವೇಶದಲ್ಲಿ ಜೋರಾಗಿ ಶಬ್ದಗಳಿಗೆ ಒಳಗೊಳ್ಳುವುದು., ಅಸುರಕ್ಷಿತ ಮಟ್ಟದಲ್ಲಿ ವೈಯುಕ್ತಿಕ ಆಡಿಯೋ ಸಾಧನಗಳ ಮೂಲಕ ಕೇಳುತ್ತಿದ್ದರೆ, ಕಿಬಿಯ ಮೇಣ ಅಥವಾ ಬೇಡದ ವಸ್ತುವನ್ನು ಕಿವಿಯಲ್ಲಿ ಹಾಕಿಕೊಂಡಿದ್ದರೆ ಹಾಗೂ ಹಿರಿಯ ನಾಗರಿಕರಲ್ಲಿ ಸಾಮಾನ್ಯ ವಯಸ್ಸಾದ ಪ್ರಕ್ರಿಯೆ, ಯಾವುದೇ ಸನ್ನಿವೇಶದಲ್ಲಿ ಜೋರಾದ ಶಬ್ಧಗಳಿಗೆ ಒಳಗೊಳ್ಳುವುದು, ತೀವ್ರ ರಕ್ತದೊತ್ತಡ, ಮಧುಮೇಹ, ಕೆಲವು ಔಷಧಿಗಳನ್ನು ಬಳಸುವುದರಿಂದ ಕಿವುಡುತನ ಉಂಟಾಗಬಹುದು ಎಂದು ಹೇಳಿದರು.
ಕಿವುಡುತನವನ್ನು ತಪ್ಪಿಸಬೇಕೆಂದರೇ ಯಾವುದೇ ವಸ್ತುವನ್ನು ಕಿವಿಯೊಳಗೆ ಹಾಕಬಾರದು, ಗದ್ದಲದ ಸ್ಥಳಗಳಲ್ಲಿ ಕಿವಿಕವಚವನ್ನು ಬಳಸಬೇಕು, ಕಿವಿಯಲ್ಲಿ ತೊಂದರೆ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ, ನೀವು ತೆಗೆದುಕೊಳ್ಳುವ ಔಷಧಿಗಳು ನಿಮ್ಮ ಕಿವಿಯ ಮೇಲೆ ಪರಿಣಾಮ ಬೀಳುವುದೇ ಎಂದು ವೈದ್ಯರಿಂದ ತಿಳಿದುಕೊಳ್ಳಿ, ನೀವು ಕಿವಿಯ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಸಿಕೊಳ್ಳಿ, ಸೂಚಿಸಿದ ಶ್ರವಣ ಯಂತ್ರಗಳನ್ನೇ ಬಳಸಬೇಕು ಎಂದರು.
ಮಗುವಿನ ಆರೈಕೆಯಲ್ಲಿ ಮಕ್ಕಳಿಗೆ ಕಿವಿಯೊಳಗೆ ಯಾವುದೇ ವಸ್ತುವನ್ನು ಹಾಕಿಕೊಳ್ಳಬಾರದೆಂದು ತಿಳಿಸಿ ಹೇಳಬೇಕು, ನಿಮ್ಮ ಮಗುವಿಗೆ ಕಿವಿ ನೋವು ಅಥವಾ ಕಿವಿ ಸೋರುವುದು ಅಥವಾ ಕಿವಿ ಮುಚ್ಚಿದೆ ಎಂದು ಕಂಡುಬಂದರೆ ತಕ್ಷಣವೇ ನಿಮ್ಮ ಮಗುವನ್ನು ವೈದ್ಯರ ಬಳಿ ಪರೀಕ್ಷಿಸಿ, ನಿಮ್ಮ ಮಕ್ಕಳನ್ನು ಕೊಳಕು ನೀರಿನಲ್ಲಿ ಈಜಲು ಬಿಡಬೇಡಿ, ಮಗುವಿನ ಕಿವಿಯ ಮೇಲೆ ಹೊಡೆಯಬೇಡಿ, ಜೋರಾದ ಶಬ್ಧದಿಂದ ಮಗುವನ್ನು ದೂರವಿಡಿ, ಸುರಕ್ಷಿತ ಆಡಿಯೋ ಡಿವೈಸ್ ಮೂಲಕ ಕೇಳುವಂತೆ ಮಕ್ಕಳಿಗೆ ತಿಳಿ ಹೇಳಬೇಕು ಎಂದು ಅವರು ಹೇಳಿದರು.
ಶ್ರವಣ ಆರೈಕೆಯ ಬಗ್ಗೆ ತಿಳಿದುಕೊಳ್ಳಿ:ಕಿವಿ ಮತ್ತು ಶ್ರವಣ ಆರೈಕೆಯ ಮಾಹಿತಿ ಬಗ್ಗೆ ತಿಳಿದುಕೊಳ್ಳಿ ಮತ್ತು ಈ ಮಾಹಿತಿಯನ್ನು ಸಮುದಾಯದಲ್ಲಿ ತಿಳಿಸಿ, ಕಿವಿಯ ಆರೈಕೆಯ ಸೇವೆಗಳು ಎಲ್ಲಿದೆ ಎಂಬುದನ್ನು ತಿಳಿದುಕೊಂಡು ಅದನ್ನು ಸಮುದಾಯಕ್ಕೆ ತಿಳಿಸುವ ಕೆಲಸ ಸಮುದಾಯ ಕಾರ್ಯಕರ್ತರು ಮಾಡಬೇಕು ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು ಹಾಗು ಎನ್‍ಪಿಪಿಸಿಡಿ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ.ಪೂರ್ಣಿಮಾ ಕಟ್ಟಿಮನಿ ಅವರು ಹೇಳಿದರು.
ಕಿವಿಯ ನೋವು ಕಂಡು ಬಂದ ಜನರಿಗೆ, ಅವರು ವೈದ್ಯರನ್ನು ಸಂಪರ್ಕಿಸಲು ತಿಳಿಸಿ, ಶ್ರವಣ ಯಂತ್ರದ ಬಳಕೆಯ ಬಗ್ಗೆ ಜನರಿಗೆ ತಿಳಿಹೇಳಿ, ಶ್ರವಣ ದೋಷವುಳ್ಳ ವ್ಯಕ್ತಿಗಳಿಗೆ ಸನ್ನೆ ಭಾಷೆಯನ್ನು ಬಳಸಲು ಪ್ರೋತ್ಸಾಹಿಸಿ ಹಾಗೂ ಸಹಾಯ ಗುಂಪುಗಳನ್ನು ಆಯೋಜಿಸಲು ಸಹಕರಿಸಬೇಕು ಎಂದರು.


ಪಠ್ಯದ ಕಡೆ ಗಮನಕೊಡದಿದ್ದರೇ ಶ್ರವಣ ಪರೀಕ್ಷೆ ಮಾಡಿಸಲು ತಿಳಿಸಿ: ಮಕ್ಕಳು ಶಾಲೆಯಲ್ಲಿ ಪಠ್ಯದ ಕಡೆಗೆ ಗಮನಕೊಡದಿದ್ದರೆ ಆ ಮಗುವಿಗೆ ಶ್ರವಣ ಪರೀಕ್ಷೆಯನ್ನು ಮಾಡಿಸಲು ಶಿಕ್ಷಕರು ಸೂಚಿಸಬೇಕು ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು ಹಾಗು ಎನ್‍ಪಿಪಿಸಿಡಿ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ.ಪೂರ್ಣಿಮಾ ಕಟ್ಟಿಮನಿ ಅವರು ಹೇಳಿದರು.
ಮಕ್ಕಳಿಗೆ ಕಿವಿಯ ಆರೈಕೆಯ ಶಿಕ್ಷಣ ನೀಡಿ ಕಿವಿಗಳಲ್ಲಿ ಯಾವುದೇ ವಸ್ತುವನ್ನು ಅಳವಡಿಸುವುದರಿಂದ ಹಾಗೂ ಜೋರಾದ ಶಬ್ಧದೊಂದಿಗೆ ಸಂಗೀತವನ್ನು ಆಲಿಸುವುದರಿಂದ ಆಗಬಹುದಾದ ಅನಾಹತದ ಬಗ್ಗೆ ತಿಳಿವಳಿಕೆ ನೀಡಿ. ಮಗುವಿಗೆ ಕಿವಿಯ ಮೇಲೆ ಹೊಡೆಯಬೇಡಿ ಇದರಿಂದ ಮಗುವಿನ ಶ್ರವಣ ಶಕ್ತಿ ಕುಂದಬಹುದು. ಕಿವಿಯಲ್ಲಿ ನೋವು ಹಾಗೂ ಕಿವಿಯಲ್ಲಿ ಸೋರಿಕೆ ಕಂಡು ಬಂದರೆ ತಕ್ಷಣವೇ ವೈದ್ಯರ ಬಳಿ ಸೂಚಿಸಬೇಕು ಎಂದು ಅವರು ವಿವರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ಮರಿಯಂಬಿ ವಿ.ಕೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿಗಳಾದ ಡಾ.ಇಂದ್ರಾಣಿ, ಜಿಲ್ಲಾ ಕುಷ್ಟರೋಗ ನಿಯಂತ್ರಣ ಅಧಿಕಾರಿಗಳಾದ ಡಾ.ವೀರೆಂದ್ರ ಕುಮಾರ್,
ಕಿವಿ, ಮೂಗು, ಗಂಟಲು ತಜ್ಞರಾದ ಡಾ.ಅನಿಲ್ ರೆಡ್ಡಿ, ಮಕ್ಕಳ ತಜ್ಞರಾದ ಡಾ.ಬಸವಪ್ರಭು, ಶುಶ್ರೂಷಕ ಅಧೀಕ್ಷಕರಾದ ರಾಜೇಶ್ವರಿ, ಆಡಳಿತ ಅಧಿಕಾರಿಗಳಾದ ದೇಸಾಯಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಈಶ್ವರ ದಾಸಪ್ಪನವರ್, ಎಎಸ್‍ಓ ಡಾ ರಾಘವೇಂದ್ರ ಶಾನಭೋಗರ, ಆಡಿಯೋಲಾಜಿಷ್ಟ್ ಶರಣ್ಯ, ಕಿರಣ ಕುಮಾರ್ ಅವರು ಸೇರಿದಂತೆ ಇಲಾಖೆ ಸಿಬ್ಬಂದಿಯವರು ಹಾಗೂ ಸಾರ್ವಜನಿಕರು ಹಾಜರಿದ್ದರು…

ವರದಿ. ವಿರೇಶ್, ಹಳೇಕೋಟೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *