ವಾಮ ಮಾರ್ಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟು ಹೆಸರು ತರುವಂತಹ ವ್ಯಕ್ತಿಗಳನ್ನು ಹೈಕಮಾಂಡ್ ಪಕ್ಷದಿಂದಲೇ ವಜಾಗೊಳಿಸಿ -ಪಂಪನಗೌಡ ಬಾದರ್ಲಿ.
ಸಿಂಧನೂರು: ನಗರದಲ್ಲಿ ಕೆಪಿಸಿಸಿ ಆದೇಶದ ಮೇರೆಗೆ ನಡೆಯುತ್ತಿರುವ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಬೋಗಸ್ ಸಾಧನೆ ತೋರಿಸಿ, ವಾಮಮಾರ್ಗದಲ್ಲಿ ಪಕ್ಷಕ್ಕೆ ಕೆಟ್ಟು ಹೆಸರು ತರುತ್ತಿರುವ ವ್ಯಕ್ತಿಗಳನ್ನು ಹೈಕಮಾಂಡ್ ಪಕ್ಷದಿಂದಲೇ ವಜಾಗೊಳಿಸಬೇಕು ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಪಂಪನಗೌಡ ಬಾದರ್ಲಿ ಒತ್ತಾಯಿಸಿದರು.
ನಗರದ ಅನ್ನದಾನೇಶ್ವರ ಕಲ್ಯಾಣಮಂಟಪದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕೆಪಿಸಿಸಿ ನಿಯಮದ ಪ್ರಕಾರ ಈಗಾಗಲೇ ಬ್ಲಾಕ್ ಕಾಂಗ್ರೆಸ್ ನೋಂದಣಿ ಅಭಿಯಾನ ನಡೆಸಿದೆ. ಆದರೆ, ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ ಹೆಸರೇಳಿಕೊಂಡು ಕೆಲವು ಯುವಕರು ಬೋಗಸ್ ನೋಂದಣಿಯನ್ನು ಆರಂಭಿಸಿದ್ದು, ಗಮನಕ್ಕೆ ಬಂದಿದೆ. ಪಕ್ಷಕ್ಕೆ ಕೆಟ್ಟು ಹೆಸರು ತರುವಂತಹ ಕೆಲಸವನ್ನು ನಾವು ಖಂಡಿಸುತ್ತೇವೆ ಎಂದರು.
ಬೋಗಸ್ ಮಾಡಿದ್ದು ನಿಜ: ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಳ್ಳಿಯ ಬನ್ನಿಗೌಡ ಮಾತನಾಡಿ, ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಚಿದಾನಂದರಾಯಡು ಅವರು ನಮ್ಮನ್ನು ಕಳುಹಿಸಿದ್ದು, ಬಸನಗೌಡ ಬಾದರ್ಲಿ ಪರವಾಗಿ ಸಿಂಧನೂರು ತಾಲೂಕಿನಲ್ಲಿ ಮತದಾರರ ಪಟ್ಟಿ ಹಿಡಿದು ನೋಂದಣಿ ಮಾಡಿಸಲು ಹೇಳಿದ್ದರು. ನಾವು ಬೋಗಸ್ ರೀತಿಯಲ್ಲಿ ನೊಂದಣಿ ಮಾಡಿದ್ದು, ನಿಜ. ನಾನೊಬ್ಬನೇ ಅಲ್ಲ; ಪ್ರತಿ ಗ್ರಾಮದಲ್ಲೂ ಐದಾರು ಜನರನ್ನು ನಿಯೋಜಿಸಿದ್ದಾರೆ. ನಾವು ತಾಲೂಕಿನಲ್ಲಿ 500 ರಿಂದ 1000 ಜನ ಇದ್ದು ನಮಗೆ ದಿನಕ್ಕೆ 500 ರೂ.ಕೂಲಿ ಕೊಡುವುದಾಗಿ ಹೇಳಿದ್ದು, ಸಕ್ರ್ಯೂಟ್ ಹೌಸ್‍ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿದ್ದರು. ನಾನು ಮಾಡಿದ್ದು, ತಪ್ಪೆಂದು ಗೊತ್ತಾಗಿದೆ. ಆದರೆ, ಬಾಬುಗೌಡ ಬಾದರ್ಲಿ ಅವರು ನಮ್ಮನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನಮಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ. ಊಟ, ಉಪಾಹಾರ ಕೊಟ್ಟು,ನಡೆದಿರುವ ಸತ್ಯ ಹೇಳಲು ತಿಳಿಸಿದ್ದಾರೆ ಎಂದರು.
ಈ ಸಂಭಂದ ಪೋಲಿಸ್ ನವರ ಮುಂದೆ ಹೇಳಿಕೆ ಕೊಟ್ಟಿದ್ದಾರೆ.
ಹೈಕಮಾಂಡ್‍ಗೆ ದೂರು:ಸಾಕ್ಷಿ ಸಮೇತ ಬೋಗಸ್ ಸದಸ್ಯತ್ವ ಅಭಿಯಾನ ನಡೆಸಿ, ನಾಯಕರ ದಿಕ್ಕು ತಪ್ಪಿಸುವ ಈ ಬೆಳವಣಿಗೆ ಕುರಿತು ಹೈಕಮಾಂಡ್‍ಗೆ ದೂರು ಸಲ್ಲಿಸಲಾಗುವುದು ಎಂದು ಪಂಪನಗೌಡ ಬಾದರ್ಲಿ ಹೇಳಿದರು. ಈಗಾಗಲೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ವೀಕ್ಷಕರ ಗಮನಕ್ಕೆ ತರಲಾಗಿದೆ. ಯಾವುದೇ ಕೊಠಡಿಯಲ್ಲಿ ಕುಳಿತು ಬೋಗಸ್ ಮೊಬೈಲ್ ನಂಬರ್ ಕೊಟ್ಟು, ಮುಂದಿನ ದಿನಗಳಲ್ಲಿ ಪಕ್ಷವನ್ನು ಹಳ್ಳ ಹಿಡಿಸುವ ಇಂತಹ ಪ್ರಯತ್ನಗಳನ್ನು ನಾವು ಒಪ್ಪುವುದಿಲ್ಲ ಎಂದರು.
ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಉಪಾಧ್ಯಕ್ಷ ಮುರ್ತುಜಾ ಹುಸೇನ್, ನಗರಸಭೆ ಮಾಜಿ ಅಧ್ಯಕ್ಷ ಜಾಫರ್ ಜಾಹಗೀರದಾರ್, ಜಿ.ಪಂ.ಮಾಜಿ ಸದಸ್ಯರಾದ ಬಾಬುಗೌಡ ಬಾದರ್ಲಿ, ಬಸವರಾಜ್ ಹಿರೇಗೌಡರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿಮಲಿಕ್, ಪ್ರಧಾನ ಕಾರ್ಯದರ್ಶಿ ಅನಿಲ್‍ಕುಮಾರ್.ವೈ, ಮುಖಂಡರಾದ ಪ್ರಭುರಾಜ್ ಕರ್ಪೂರಮಠ, ಛತ್ರಪ್ಪ ಕುರುಕುಂದಿ, ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ ಸೇರಿದಂತೆ ಅನೇಕರು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
