ಉಕ್ರೇನ್ ಬಸ್ಸಿನಲ್ಲಿಯೇ ಇಪ್ಪತ್ತು ಗಂಟೆ ಪಯಣ
ಕುಡಿಯಲು ನೀರಿಲ್ಲ ಊಟವಂತೂ ಇಲ್ಲವೆ ಇಲ್ಲ
ಚಿತ್ರದುರ್ಗ: ಕಳೆದ ಇಪ್ಪತ್ತು ಗಂಟೆಯಿಂದ ಬಸ್ಸಿನಲ್ಲಿ ಪ್ರಯಾಣ. ಕುಡಿಯಲು ನೀರಿಲ್ಲ ತಿನ್ನಲು ಊಟ ಉಪಹಾರ ಇಲ್ಲ. ಒಂದು ಬಾಟಲಿ ತಂಪುಪಾನೀಯವೇ ಈಗ ಜೀವ ಉಳಿಸುವ ಔಷಧ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಶೇಖರ್ ಅವರ ಪುತ್ರಿ ಶಕ್ತಿಶ್ರೀ ಇದೀಗ ಉಕ್ರೇನ್ನಲ್ಲಿ ಸಿಲುಕಿದ್ದು ಇಡೀ ಕುಟುಂಬದಲ್ಲಿ ಆತಂಕ ಮನೆ ಮಾಡಿದೆ.
ಉಕ್ರೇನ್ನ ಝಪೋರಿಝಯಾ ರಾಜ್ಯದ ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ಶಕ್ತಿಶ್ರೀ ಉಕ್ರೇನ್ ರಷ್ಯಾ ಯುದ್ದದ ಮಾಹಿತಿ ಬಂದ ತಕ್ಷಣ ಅಲ್ಲಿಂದ ಬರಲು ಸಿದ್ದತೆ ಮಾಡಿಕೊಂಡರು. ಬುಧವಾರ ರಾತ್ರಿಯೇ ವಿದ್ಯಾರ್ಥಿನಿಯಲದಿಂದ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ರಾತ್ರಿ ೧೦ ಗಂಟೆಯ ಸುಮಾರಿಗೆ ಬಸ್ಸಿನಲ್ಲಿ ಬೋರಿ ಸ್ಪಿಲ್ ಇಂಟರ್ನ್ಯಾಷನಲ್ ಏರ್ಪೋರ್ಟ್ಗೆ ಹೊರಟರು. ಗುರುವಾರ ಬೆಳಿಗ್ಗೆ ಚೆಕ್ಕಿಂಗ್ ಆಗುವ ಮುನ್ನವೇ ಬಾಂಬ್ ಸ್ಪೋಟವಾದ ಹಿನ್ನೆಲೆಯಲ್ಲಿ ಬಂದ ಬಸ್ಸಿನಲ್ಲಿ ವಾಪಾಸ್ ಕಳುಹಿಸಲಾಗಿದೆ.
ಗುರುವಾರ ಬೆಳಿಗ್ಗೆ ೭.೩೦ರ ಸುಮಾರಿಗೆ ಹೊರಟ ಬಸ್ ಇನ್ನೂ ಹಾಸ್ಟೆಲ್ ತಲುಪಿಲ್ಲ. ಸುಮಾರು ೪೫೦ ಕಿ.ಮೀ. ದೂರದ ಮಾರ್ಗ ಮಧ್ಯದಲ್ಲಿ ವಿಪರೀತ ಟ್ರಾಪಿಕ್ ಜಾಮ್ ಆಗಿದ್ದು ಸತತ ಇಪ್ಪತ್ತು ಗಂಟೆ ಪ್ರಯಾಣದಲ್ಲಿಯೆ ಮಗಳು ಇದ್ದಾಳೆ ಎಂದು ತಂದೆ ಶೇಖರ್ ಕಣ್ಣಿರಿಟ್ಟರು. ಕೇವಲ ಮೂರು ತಿಂಗಳ ಹಿಂದೆ ಅಷ್ಟೆ ಉಕ್ರೇನ್ಗೆ ಕಳುಹಿಸಲಾಗಿತ್ತು. ಅಲ್ಲಿ ಕಡಿಮೆ ಶುಲ್ಕ ಎಂಬ ಕಾರಣಕ್ಕಾಗಿ ಸೇರಿಸಲಾಗಿತ್ತು. ಇದೀಗ ಮಗಳು ಸುರಕ್ಷಿತವಾಗಿ ಬರುತ್ತಾಳೋ ಇಲ್ಲವೆ ಎಂಬ ಭಯ ಆವರಿಸಿದೆ ಎಂದರು.
ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದು ಪೊಲೀಸರು ಬಸ್ಸಿನಿಂದ ಕೆಳಗೆ ಇಳಿಯಲು ಬಿಡುತ್ತಿಲ್ಲ. ಬಸ್ಸಿನಲ್ಲಿಯೇ ಇಪ್ಪತ್ತು ಗಂಟೆಗಳ ಪ್ರಯಾಣ ಇನ್ನೂ ವಿದ್ಯಾರ್ಥಿನಿಲಯಕ್ಕೆ ತಲುಪಿಲ್ಲ. ಕುಡಿಯಲು ನೀರು ಸಿಗುತ್ತಿಲ್ಲ. ಬಸ್ಸಿನಲ್ಲಿರುವರು ಪೆಪ್ಸಿ, ಸೆವೆನ್ಅಪ್ ಹಾಗೂ ತಂಪು ಪಾನೀಯಗಳನ್ನು ಚಿನ್ನದಂತೆ ಬಳಕೆ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಯಾರಿಗೂ ಬರಬಾರದಾಗಿತ್ತು ಎಂದು ಶೇಖರ್ ಅವರು ದುಖಿಸಿದರು.
ಸದ್ಯಕ್ಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಲಯದಲ್ಲಿಯೇ ಆಶ್ರಯ ಪಡೆಯುವಂತೆ ಅಧಿಕಾರಿಗಳು ಮಗಳಿಗೆ ತಿಳಿಸಿದ್ದಾರೆ. ಅಲ್ಲಿಂದ ಸುರಕ್ಷಿತವಾಗಿ ಭಾರತಕ್ಕೆ ಕರೆಸಿಕೊಡಬೇಕು. ಮಗಳು ಬಂದ ಮೇಲೆ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಸಮಾಲೋಚನೆ ಮಾಡಲಾಗುವುದು. ಮೊದಲು ಮನೆಗೆ ಮಗಳು ಬರಲಿ ಎಂದು ಶೇಖರ್ ಹೇಳಿದರು…

ವರದಿ.ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
