;

ಮೊಳಕಾಲ್ಮೂರು ಅಂಚೆ ಕಚೇರಿಗಿಲ್ಲ ಸ್ವಂತ ಕಟ್ಟಡ ಭಾಗ್ಯ; ಮೇಲಂತಸ್ತಿನ ಬಾಡಿಗೆ, ಗ್ರಾಹಕರಿಗೆ ತೀವ್ರ ತೊಂದರೆ.!

ಮೊಳಕಾಲ್ಮೂರು ಅಂಚೆ ಕಚೇರಿಗಿಲ್ಲ ಸ್ವಂತ ಕಟ್ಟಡ ಭಾಗ್ಯ; ಮೇಲಂತಸ್ತಿನ ಬಾಡಿಗೆ, ಗ್ರಾಹಕರಿಗೆ ತೀವ್ರ ತೊಂದರೆ.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಲ್ಲೂಕು ಅಂಚೆ ಕಚೇರಿಗೆ ಸ್ವಂತ ಕಟ್ಟಡವಿಲ್ಲದೇ ಮೇಲಂತಸ್ತಿನ ಬಾಡಿಗೆ ಕಟ್ಟಡವೊಂದರಲ್ಲಿ ಕಚೇರಿ ಕಾರ್ಯ ನಿರ್ವಹಿಸುತ್ತಿರುವ ಕಾರಣ ಗ್ರಾಹಕರಿಗೆ ತೀವ್ರ ತೊಂದರೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಲವು ದಶಕಗಳಿಂದ ಕಚೇರಿ ಬಾಡಿಗೆ ಕಟ್ಟಡದಲ್ಲಿ ನಿರ್ವಹಿಸುತ್ತಿದೆ. ಈ ಹಿಂದೆ ತಾಲ್ಲೂಕು ಪಂಚಾಯಿತಿ ಮುಂಭಾಗದಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಮುಂಭಾಗದಲ್ಲಿ ಇದು ಇತ್ತು. ಐದು ವರ್ಷಗಳ ಹಿಂದೆ ಪಿಎಲ್‌ಡಿ ಬ್ಯಾಂಕ್ ಮುಂಭಾಗದಲ್ಲಿರುವ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಅದೂ ಪ್ರಥಮ ಅಂತಸ್ತಿನ ಕಟ್ಟಡಕ್ಕೆ.

ಸಾಮಾನ್ಯವಾಗಿ ಅಂಚೆ ಕಚೇರಿಗೆ ವೃದ್ಧರು, ಅಂಗವಿಕಲರು ಸೇರಿದಂತೆ ವಿವಿಧ ಸಾಮಾಜಿಕ ಪಿಂಚಣಿ ಯೋಜನೆ ಫಲಾನುಭವಿಗಳು ಹೆಚ್ಚು ಬರುತ್ತಾರೆ. ಆದರೆ ಕಚೇರಿ ಪ್ರಥಮ ಅಂತಸ್ತಿನಲ್ಲಿರುವ ಕಾರಣ ವೃದ್ಧರು, ಅಂಗವಿಕಲರು ಹತ್ತಿಕೊಂಡು ಹೋಗಲು ಸಾಧ್ಯವಾಗದೇ ಕಚೇರಿ ಮುಂಭಾಗದಲ್ಲಿ ಸಿಬ್ಬಂದಿಗಾಗಿ ಕಾಯುತ್ತ ಕುಳಿತುಕೊಳ್ಳಬೇಕಿದೆ. ಸಿಬ್ಬಂದಿ ಕೆಳಗಡೆ ಬಂದು ವಿಚಾರಿಸುವ ತನಕ ಕಾಯುವ ಅನಿವಾರ್ಯತೆ ಎದುರಾಗಿದೆ. ಅನೇಕ ಬಾರಿ ಸಿಬ್ಬಂದಿ ಕೆಳಗಡೆ ಬಂದು ವಿಚಾರಿಸುವುದಿಲ್ಲ. ಆಗ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ಹೋಗುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತ ವೆಡ್ಸ್ ಗಂಗಾಧರ್‌ ಹೇಳಿದರು. ನಿತ್ಯ ನೂರಾರು ಗ್ರಾಹಕರು ಬಂದು ಹೋಗುತ್ತಾರೆ. ಕಚೇರಿ ಎದುರು ಸ್ಪಷ್ಟವಾಗಿ ಫಲಕ ಸಹ ಹಾಕಿಲ್ಲ. ಹೊಸಬರು ಕೇಳಿಕೊಂಡು ಕಚೇರಿಗೆ ಬರಬೇಕಿದೆ. ಇದೇ ದಾರಿಯಲ್ಲಿ ಸಮಾಜ ಕಲ್ಯಾಣ ಇಲಾಖೆ, ತಹಶೀಲ್ದಾರ್ ಅವರ ವಸತಿಗೃಹ, ಪೊಲೀಸ್ ಕಚೇರಿ, ಸಿಬ್ಬಂದಿ ಗೃಹ, ಸರ್ಕಾರಿ ಕಚೇರಿಗಳಿವೆ. ಇಲ್ಲಿ ವೃದ್ಧರು, ಅಂಗವಿಕಲರು ಕಚೇರಿ ಎದುರು ಪಿಂಚಣಿಗೆ ಕಾಯುತ್ತ ಕುಳಿತಿರುದನ್ನು ನೋಡಿಯೂ ಸ್ವಂತ ಕಟ್ಟಡದ ಬಗ್ಗೆ ಚಕಾರ ಎತ್ತದಿರುವುದು ಅಚ್ಚರಿ ಸಂಗತಿ ಎಂದು ಹೇಳಿದರು.

ಸ್ವಂತ ಕಟ್ಟಡ ನಿರ್ಮಿಸಲು ಪಟ್ಟಣ ಪಂಚಾಯಿತಿಯು ಪೊಲೀಸ್ ಕಚೇರಿ ಹಿಂಭಾಗದಲ್ಲಿ ವಿಶಾಲವಾದ ನಿವೇಶನ ಮಂಜೂರು ಮಾಡಿ ವರ್ಷಗಳು ಕಳೆದಿದೆ. ನಿವೇಶನ ಮುಂಭಾಗದಲ್ಲಿ ‘ಇದು ಅಂಚೆ ಕಚೇರಿಗೆ ಸೇರಿದ ಸ್ಥಳ’ ಎಂದು ಇಲಾಖೆ ಫಲಕ ಹಾಕಿಕೊಂಡಿದೆ. ಆದರೆ ಸ್ವಂತ ಕಟ್ಟಡ ನಿರ್ಮಿಸಬೇಕು ಎಂಬ ಬೇಡಿಕೆಗೆ ಮಾತ್ರ ಸ್ಪಂದಿಸುತ್ತಿಲ್ಲ. ಹಿರಿಯ ಅಧಿಕಾರಿಗಳು ‘ನಮ್ಮ ಕೈಯಲ್ಲಿ ಏನಿದೆ..?’ ಎಂದು ಹೇಳುತ್ತ ಸಮಯ ತಳ್ಳುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಸ್ವಂತ ಕಟ್ಟಡ ನಿರ್ಮಾಣ ಬಗ್ಗೆ ಸಚಿವ ಎ. ನಾರಾಯಣಸ್ವಾಮಿ ಅವರ ಗಮನಕ್ಕೆ ಸಹ ತರಲಾಗಿತ್ತು. ಸಮಸ್ಯೆ ಗಮನದಲ್ಲಿದೆ, ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಕಾರ್ಯರೂಪಕ್ಕೆ ಬಂದಿಲ್ಲ. ಇನ್ನಾದರೂ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎನ್ನುವುದು ಬೇಡಿಕೆಯಾಗಿದೆ….

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;