ಹೊಸದೊಂದು ಕಾಣ್ಕೆಗೆ ಬೆಳಕಿನ ಸ್ಪರ್ಶವಾಗಲಿ
ದೀಪಾವಳಿ ವಿಶೇಷ ಸಂಚಿಕೆ
ಅಸತೋಮಾ ಸದ್ಗಮಯಾ, ತಮಸೋ ಮಾ ಜ್ಯೋತಿರ್ಗಮಯ, ಬೆಳಕಿನ ಹಬ್ಬ ದೀಪಾವಳಿ, ನಮ್ಮ ಜೀವನದ ಕಷ್ಟಗಳನ್ನು ಹೊಡೆದೋಡಿಸಿ ಬೆಳಕನ್ನು ಕಂಡು ಸಂಭ್ರಮಿಸುವಂತಹ ವಿಶೇಷ ಹಬ್ಬ.
ದೀಪಾವಳಿ ಎನ್ನುವುದು ವಿಶೇಷವಾಗಿ ಋತು ಉತ್ಸವ. ನಮ್ಮ ಸನಾತನ ಧರ್ಮದಲ್ಲಿರುವ ಎಲ್ಲಾ ಹಬ್ಬಗಳನ್ನು ಋತುಗಳನ್ನು, ಪ್ರಕೃತಿಯಲ್ಲಿನ ಬದಲಾವಣೆ, ಮಾಸಗಳು, ತಿಥಿಗಳ ಬದಲಾವಣೆಗಳಿಗೆ ಹೊಂದಿಕೊಂಡು ಅದಕ್ಕೆ ತಕ್ಕಂತೆ ಆಚರಿಸುತ್ತೇವೆ. ಹೀಗಾಗಿ ನಾವು ಆಚರಿಸುವ ಪ್ರತಿಯೊಂದು ಹಬ್ಬವೂ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುತ್ತದೆ. ಪ್ರಕೃತಿಯಲ್ಲಿ ನಾವು ಲಕ್ಷ್ಮಿ ದೇವಿಯನ್ನು ಕಾಣುತ್ತೇವೆ. ನಾವು ಯಾವುದೇ ಪ್ರದೇಶದಲ್ಲಿ ಜೀವಿಸುತ್ತಿರಲಿ, ಆಯಾ ಪರಿಸರದಲ್ಲಿ ಪ್ರಕೃತಿಯಲ್ಲಿ ಆಗುವ ಬದಲಾವಣೆಯನ್ನು ಭಗವಂತನ ಕೃಪೆ, ಲಕ್ಷ್ಮಿಯ ಲೀಲಾವಿಲಾಸ ಎಂದು ಭಾವಿಸಿ ನಾವು ಋತುಗಳ ಹಬ್ಬವನ್ನು ಆಚರಿಸುತ್ತೇವೆ.
ಇಲ್ಲಿ ಮನುಷ್ಯನಲ್ಲಿರುವ ಅಂಧಕಾರ, ಅಜ್ಞಾನ, ಬುದ್ಧಿ, ಆಚಾರ, ವಿಚಾರಗಳಿಗೆ ಅಂಟಿಕೊಂಡಿರುವಂತಹ ಕತ್ತಲೆಯನ್ನು ಹೋಗಲಾಡಿಸುವಂತಹದ್ದು ಎಂಬರ್ಥ ಕೂಡ ಇದೆ. ಜೀವನದ, ಮನದ ಎಲ್ಲಾ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಲು ದೀಪ ಬೆಳಗುತ್ತೇವೆ.
ದೀಪಾವಳಿ ಹಬ್ಬ ಎಂದ ತಕ್ಷಣ ಕಣ್ಣಮುಂದೆ ಬರುವುದು ದೀಪ, ಹಣತೆ, ಬೆಳಕು. ನಾವು ಪ್ರತಿನಿತ್ಯ ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ದೀಪ ಬೆಳಗುತ್ತೇವೆ, ದೀಪಾವಳಿ ಹಬ್ಬದಲ್ಲಿ ಹಣತೆ, ದೀಪ, ಬೆಳಕಿಗೆ ಬಹಳ ಪ್ರಾಮುಖ್ಯತೆ ಏಕೆ ಎಂದು ನೋಡಿದರೆ, ನಮ್ಮ ಸಂಸ್ಕೃತಿಯಲ್ಲಿ ದೀಪ ಬೆಳಗುವ ಮೂಲಕವೇ ಯಾವುದೇ ಕೆಲಸವನ್ನು ಆರಂಭಿಸುವುದು. ನಂದಾದೀಪವನ್ನು ಹಚ್ಚಿ ಪೂಜೆ ಪ್ರಾರಂಭಿಸುತ್ತೇವೆ. ದೀಪಗಳನ್ನೇ ಇಟ್ಟು ದೀಪದಿಂದಲೇ ಬೆಳಗುತ್ತೇವೆ, ಇಲ್ಲಿ ಲಕ್ಷ್ಮಿ ದೇವಿಯನ್ನು ನಮ್ಮ ಜೀವನ ವೃದ್ಧಿಯ, ಬೆಳಕಿನ ಸಂಕೇತವಾಗಿ ಕಾಣುತ್ತೇವೆ.
ವೇದಗಳ ಕಾಲದಲ್ಲಿ, ಎಲ್ಲವೂ ಕೂಡ ಋತೋತ್ಸವಗಳೇ, ದೀಪಾವಳಿಗೆ ಯಕ್ಷರಾತ್ರಿ ಎಂದು ಕರೆಯುತ್ತೇವೆ, ವೇದದಲ್ಲಿ ಬರುವ ಶ್ರೀಸೂಕ್ತದಲ್ಲಿ ಮಣಿನಾಸಹ ಎಂಬುದಿದೆ, ಅಂದರೆ ಲಕ್ಷ್ಮಿಯನ್ನು ಇಲ್ಲಿ ಯಕ್ಷನ ತಂಗಿಯಾಗಿ ಕಾಣಲಾಗುತ್ತದೆ. ಯಕ್ಷರು ನಮಗೆ ಹಣವನ್ನು ಕೊಡುವಂತವರು.ರಾತ್ರಿ ಕಾಲದಲ್ಲಿ ಯಕ್ಷರನ್ನು ಪೂಜೆ ಮಾಡಲಾಗುತ್ತದೆ. ಕುಬೇರ ಯಕ್ಷರ ಅಧಿಪತಿ. ಕುಬೇರನನ್ನು ಮತ್ತು ಅವನ ತಂಗಿಯಾದ ಲಕ್ಷ್ಮಿ ಇವರಿಬ್ಬರನ್ನು ಪೂಜಿಸಿ ಧನಸಂಪತ್ತಿನೊಂದಿಗೆ ಬಾ ಎಂದು ಭಕ್ತಿಯಿಂದ ಆರಾಧಿಸುತ್ತೇವೆ ಎನ್ನುತ್ತಾರೆ
……
ನರಕ ಚತುರ್ದಶಿ: ನರಕ ಚತುರ್ದಶಿಯನ್ನು ಚೋಟಾ ದೀಪಾವಳಿ ಎಂದು ಕರೆಯುತ್ತಾರೆ. ನವೆಂಬರ್ 6 ರಂದು ಈ ಹಬ್ಬವನ್ನು ಆಚರಿಸುತ್ತಾರೆ. ಶ್ರೀಕೃಷ್ಣನು ನರಕಾಸುರನನ್ನು ಕೊಂದ ನೆನಪನ್ನು ಈ ಹಬ್ಬ ತರುತ್ತದೆ. ನರಕಾಸುರನನ್ನು ಆಶ್ವಯುಜ ಕೃಷ್ಣ ಚತುರ್ದಶಿಯ ಕತ್ತಲೆಯಲ್ಲಿ ಕೃಷ್ಣ ಸಂಹಾರ ಮಾಡುತ್ತಾನೆ. ಈ ಹಬ್ಬದಂದು ಸಿಹಿ ತಿನುಸುಗಳನ್ನು ಖರೀದಿಸಿ ಕುಟುಂಬದವರಿಗೆ, ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ಹಂಚುತ್ತಾರೆ. ಸಿಹಿ ತಯಾರಿಸುವವರು ನರಕ ಚತುರ್ದಶಿದಂದು ಹೆಚ್ಚು ಸಮಯ ಕೆಲಸ ಮಾಡುತ್ತಾರೆ.
ದೀಪಾವಳಿಯಂದು ಲಕ್ಷ್ಮಿ ಪೂಜೆ ಮಾಡುತ್ತಾರೆ. ಲಕ್ಷ್ಮೀ ಎಂದರೆ ಕೇವಲ ಧನಾಧಿದೇವತೆ ಎಂಬ ಪ್ರತೀತಿಯಿದೆ. ಲಕ್ಷ್ಮೀ ಕೇವಲ ಧನಲಕ್ಷ್ಮೀ ಮಾತ್ರವಲ್ಲ. ಸಕಲ ಶ್ರೇಯಸ್ಸುಗಳಿಗೆ ಲಕ್ಷ್ಮೀ ಕಾರಣ ಎಂದು ಹೇಳುತ್ತಾರೆ. ಈ ಹಬ್ಬದಂದು ಎಲ್ಲರೂ ತಮ್ಮ ಕುಟುಂಬದವರೊಂದಿಗೆ ಸೇರಿ ಒಬ್ಬರಿಗೊಬ್ಬರು ಸಿಹಿ ಹಂಚಿ ಉಡುಗೊರೆ ನೀಡುತ್ತಾರೆ.
ದೀಪಾವಳಿಯ ನಂತರದ ದಿನ ಗೋ ಪೂಜೆ ಮಾಡುತ್ತಾರೆ. ಈ ದಿನದಂದು ಗೋವುಗಳನ್ನು ಅಲಂಕರಿಸಿ, ಹಾಲು ಹಿಡಿಯುವ ಪಾತ್ರೆ, ಕುಡಗೋಲುಗಳನ್ನು ಪೂಜಿಸಿ, ಗೋಶಾಲೆಯನ್ನು ದೀಪದಿಂದ ಬೆಳಗಿ, ಹಸುಗಳಿಗೆ ಅಕ್ಕಿ, ಬೆಲ್ಲ, ತಿಂಡಿ ತಿನಿಸುಗಳನ್ನು ನೀಡುತ್ತಾರೆ. ಉತ್ತರ ಭಾರತದಲ್ಲಿ ಅಥವಾ ಕೆಲವರ ಸಂಪ್ರದಾಯದಲ್ಲಿ ಈ ದಿನದಂದು ಪತಿ ತಮ್ಮ ಪತ್ನಿಯರಿಗೆ ಉಡುಗೊರೆ ನೀಡುತ್ತಾರೆ. ಅಲ್ಲದೇ ಹೊಸದಾಗಿ ಮದುವೆಯಾದ ಜೋಡಿಯನ್ನು ಮನೆಗೆ ಔತಣಕ್ಕೆ ಕರೆದು ಉಡುಗೊರೆ ನೀಡಲಾಗುತ್ತದೆ.
ಇನ್ನೂ ವೈಶಿಷ್ಟ್ಯ ವಾಗಿ ವಿಶೇಷವಾಗಿ ವಿವಿಧ ಭಾಗಗಳಲ್ಲಿ ಆಚರಿಸಲ್ಪಡುತ್ತದೆ ಎಲ್ಲರ ಬಾಳಿನಲ್ಲಿ ದೀಪಾವಳಿ ಹೊಸ ಬಾಳು ಸಕಾರಾತ್ಮಕ ಹೊಸ ಭಾವನೆಗಳು ಮೂಡಲಿ ಮನೆಗಳಲ್ಲಿಯೂ ಜ್ಞಾನದ ಬೆಳಕು ಹರಿಯಲಿ ಮತ್ತೊಮ್ಮೆ ಶುಭಾಶಯಗಳು
-ಕಾರ್ತಿಕ ಆಚಾರ್ಯ ಎಂ.ಕಲ್ಲಹಳ್ಳಿ
ಯುವ ಸಾಹಿತಿ.ನಿರೂಪಕ,
ವಿಜಯನಗರ ಜಿಲ್ಲೆ..

ವರದಿ.ಪ್ರಕಾಶ್, ಇಟ್ಟಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
