ರಾಜ್ಯದಲ್ಲಿ ಮತ್ತೊಂದು ದಲಿತ ದೌರ್ಜನ್ಯ: ಬೆಳ್ಳಂಬೆಳಗ್ಗೆ ದಲಿತರ ಗುಡಿಸಲುಗಳನ್ನು ಧ್ವಂಸ ಮಾಡಿದ ಅಧಿಕಾರಿಗಳು.
ಮುಧೋಳ: ಮುಧೋಳದ ಹಿರಿಕೇರಿ ದುರ್ಗಾದೇವಿ ದೇವಸ್ಥಾನದ ಸಮೀಪ ದಲಿತ ಸಮುದಾಯವು ಕಳೆದ 36 ವರ್ಷಗಳಿಂದ ವಾಸವಾಗಿದೆ. ಆದರೆ ನಿನ್ನೆ ಏಕಾಏಕಿ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು ಬಡ ದಲಿತರ ಗುಡಿಸಲುಗಳನ್ನು ತೆರವು ಮಾಡಿದ್ದು, ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಗುಡಿಸಲು ತೆರವಿಗೂ ಮೊದಲು ಅಧಿಕಾರಿಗಳು ಯಾವುದೇ ನೋಟಿಸ್ ಕೂಡ ನೀಡಿಲ್ಲ, ಪರ್ಯಾಯ ವ್ಯವಸ್ಥೆ ಕೂಡ ಮಾಡಿಲ್ಲ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದು, ಅಧಿಕಾರಿಗಳ ಬೆಳಗ್ಗಿನ ಜಾವ 5 ಗಂಟೆಯ ಸುಮಾರಿಗೆ ಏಕಾಏಕಿ ಗುಡಿಸಲುಗಳ ಮೇಲೆ ದಾಳಿ ನಡೆಸಿ ಗುಡಿಸಲುಗಳನ್ನು ಧ್ವಂಸ ಮಾಡಿದ್ದಾರೆ. ಇದರಿಂದಾಗಿ ಇಲ್ಲಿ ವಾಸಿಸುತ್ತಿದ್ದವರು ಬೀದಿಗೆ ಬರುವಂತಾಗಿದೆ.
ಗುಡಿಸಲು ತೆರವಿನಿಂದಾಗಿ ಇಲ್ಲಿ ವಾಸಿಸುತ್ತಿದ್ದ ಕುಟುಂಬಗಳಲ್ಲಿರುವ ಮಕ್ಕಳು. ಮಹಿಳೆಯರು, ಬಾಣಂತಿಯರು, ಅಶಕ್ತ ಹಿರಿಯರು ರಸ್ತೆಯಲ್ಲಿ ಜೀವಿಸುವಂತಾಗಿದೆ. ಈ ಘಟನೆಯ ಮಾಹಿತಿ ತಿಳಿದ ಭೀಮ್ ಆರ್ಮಿ ಸಂಘಟನೆ ಇದೀಗ ಇಲ್ಲಿನ ನಿವಾಸಿಗಳ ಪರವಾಗಿ ಧ್ವನಿಯೆತ್ತಿದೆ.
ಈ ಘಟನೆಯ ಬಗ್ಗೆ ಉಪ ವಿಭಾಗಾಧಿಕಾರಿಯ ಗಮನಕ್ಕೆ ತಂದಾಗ ಅವರು, ಇದನ್ನು ಪರಿಶೀಲಿಸುತ್ತೇನೆ ಎಂದು ಹೇಳಿ ಬಳಿಕ ಉಡಾಫೆಯ ಮಾತುಗಳನ್ನಾಡಿದ್ದಾರೆ ಎಂದು ಭೀಮ್ ಆರ್ಮಿ ಆರೋಪಿಸಿದೆ. ಈ ಸಂಬಂಧ ಇಂದು ಪ್ರತಿಭಟನೆ ನಡೆಸಿದ ಭೀಮ್ ಆರ್ಮಿ ಇಲ್ಲಿನ ನಿವಾಸಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದೆ. ಪ್ರತಿಭಟನೆಯಲ್ಲಿ ಭೀಮ್ ಆರ್ಮಿಯ ಲವಿತ್ ಮೇತ್ರಿ, ಅನೀಲ ಬರಗಿ,ಶಿವಾನಂದ ಮ್ಯಾಗೇರಿ, ಚನ್ನಗಿರಿ ತಳಗಡೆ, ಯಲ್ಲಪ್ಪ ಹೆಗಡೆ, ಮುಜ್ಜು ಅನ್ನೋಜಿ ಮೊದಲಾದ ಮುಖಂಡರು ಭಾಗವಹಿಸಿ ಘಟನೆಯನ್ನು ಖಂಡಿಸಿದ್ದಾರೆ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
