ದೇಶದಲ್ಲೇ ಮೊದಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಕರ್ನಾಟಕ ರಾಜ್ಯ!!
ಇಡೀ ದೇಶದಲ್ಲಿಯೇ ಎಲ್ಲ ರಾಜ್ಯಗಳಿಗಿಂತ ಮೊದಲು ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸೋಮವಾರ ಅಧಿಕೃತವಾಗಿ ಜಾರಿಗೆ ತರಲಾಯಿತು. ಅದರೊಂದಿಗೆ ರಾಜ್ಯವು ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಂದು ಹಂತದ ಹೆಜ್ಜೆ ಇಟ್ಟಂತಾಗಿದೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನವದೆಹಲಿಯಿಂದ ವರ್ಚುಯಲ್ ವೇದಿಕೆ ಮೂಲಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಹಸಿರು ನಿಶಾನೆ ತೋರಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಶಿಕ್ಷಣ ನೀತಿಯಡಿ ಕಲಿಕೆಗೆ ಉನ್ನತ ಶಿಕ್ಷಣ ವಿಭಾಗದಲ್ಲಿ ಇಂದಿನಿಂದಲೇ ವಿದ್ಯಾರ್ಥಿಗಳ ದಾಖಲಾತಿಗೆ ಚಾಲನೆ ನೀಡಿದರು. ಜೊತೆಗೆ “ಈ ಬಾರಿ ಮೊದಲ ವರ್ಷದ ಪದವಿಗೆ ದಾಖಲಾಗುವ ಎಲ್ಲ ವಿದ್ಯಾರ್ಥಿಗಳಿಗೂ ಸರಕಾರವೇ ಉಚಿತವಾಗಿ ಟ್ಯಾಬ್ಲೆಟ್, ಪಿಸಿಗಳನ್ನು ನೀಡಲಿದೆ” ಎಂದು ಘೋಷಣೆ ಮಾಡಿದರು.
ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಚಾಲನೆ ಕೊಟ್ಟು ಮಾತನಾಡಿದ ಧರ್ಮೆಂದ್ರ ಪ್ರಧಾನ್, ‘ನಮ್ಮ ದೇಶದ ಎಲ್ಲ ರಾಜ್ಯಗಳ ಪೈಕಿ ಎಲ್ಲರಿಗಿಂತ ಮೊದಲೇ ಕರ್ನಾಟಕ ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತಂದಿದೆ. ಇದು ರಾಜ್ಯದ ದಿಕ್ಕನ್ನೇ ಬದಲಿಸುತ್ತದೆ’ ಎಂದರು.
ಇಂದಿನಿಂದ ವಿದ್ಯಾರ್ಥಿಗಳ ದಾಖಲಾತಿ
ಶಿಕ್ಷಣ ನೀತಿ ಜಾರಿಗೆ ಬಂದ ಬೆನ್ನಲ್ಲೇ ಉನ್ನತ ಶಿಕ್ಷಣಕ್ಕೆ ನೂತನ ವಿದ್ಯಾರ್ಥಿಗಳನ್ನು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ದಾಖಲು ಮಾಡಿಕೊಳ್ಳುವ ಪ್ರಕ್ರಿಯೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಅದರನ್ವಯ ಅಕ್ಟೋಬರ್ 1ರಿಂದ ಪದವಿ ಮೊದಲ ವರ್ಷದ ತರಗತಿಗಳು ಆರಂಭವಾಗಲಿವೆ ಎಂದು ವಿವರಿಸಿದರು.
‘ಇಡೀ ದೇಶದಲ್ಲಿಯೇ ಶಿಕ್ಷಣ ನೀತಿಯನ್ನು ಎಲ್ಲರಿಗಿಂತ ಮೊದಲೇ ಜಾರಿ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಡಿಜಿಟಲ್ ಕಲಿಕೆಯನ್ನು ಉತ್ತೇಜಿಸಲು, ಅಂತರ್ಜಾಲದಿಂದ ಪ್ರತಿ ಹಳ್ಳಿಯನ್ನು ಬೆಸೆಯಲು ಕಟಿಬದ್ಧವಾಗಿದ್ದೇವೆ. ಅದಕ್ಕಾಗಿ ‘ಹೊಸ ಡಿಜಿಟಲ್ ಪಾಲಸಿ’ ಜಾರಿಗೆ ತರುತ್ತೇವೆ ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದರು.
ಏಕಿಕೃತ ಕಾಲೇಜು ನಿರ್ವಹಣಾ ವ್ಯವಸ್ಥೆಗೆ ಚಾಲನೆ
ಇದೇ ಸಂದರ್ಭದಲ್ಲಿ ರಾಜ್ಯ ಸರಕಾರದ ಕಾಲೇಜು ಶಿಕ್ಷಣ ಇಲಾಖೆ ರೂಪಿಸಿರುವ ಮಹತ್ವಾಕಾಂಕ್ಷಿ ಯೋಜನೆ ‘ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ’ ಎಂಬ ವಿದ್ಯಾರ್ಥಿಗಳ ದಾಖಲಾತಿ ವ್ಯವಸ್ಥೆಗೂ ಇದೇ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ ನೀಡಿದರು.
‘ಆದ್ಯತೆಯ ಮೇರೆಗೆ ಶಿಕ್ಷಣ ನೀತಿಯನ್ನು ಜಾರಿ ಮಾಡಲಾಗುವುದು. ಇದಕ್ಕೆ ಬೇಕಾದ ಎಲ್ಲ ಸಹಕಾರ, ಸಂಪನ್ಮೂಲವನ್ನು ಒದಗಿಸಲಾಗುವುದು. ಇವತ್ತಿನಿಂದಲೇ ರಾಜ್ಯದಲ್ಲಿ ಅಧಿಕೃತವಾಗಿ ಶಿಕ್ಷಣ ನೀತಿ ಜಾರಿಗೆ ಬಂದಿದ್ದು, ಇದಕ್ಕೆ ಪೂರಕವಾಗಿ ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲೂ ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಮೂಲಕವೇ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಶಿಕ್ಷಣ ನೀತಿಯ ವೆಬ್‌ಸೈಟ್, ಸಹಾಯವಾಣಿ ಆರಂಭ
ರಾಷ್ಟೀಯ ಶಿಕ್ಷಣ ನೀತಿಯ ಜಾರಿ ಸಂದರ್ಭದಲ್ಲಿ ಯಾವುದೇ ಗೊಂದಲ, ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಕಾಲೇಜು ಶಿಕ್ಷಣ ಇಲಾಖೆ ರೂಪಿಸಿರುವ ಶಿಕ್ಷಣ ನೀತಿಯ ವೆಬ್‌ಸೈಟ್ ಮತ್ತು ಸಹಾಯವಾಣಿ ಆರಂಭಿಸಲಾಗಿದೆ. ಸಹಾಯವಾಣಿ ಸಂಖ್ಯೆ: 080-24486666 ಯನ್ನು ಎಲ್ಲರೂ ಸಂಪರ್ಕ ಮಾಡಬಹುದು.
ಇದೇ ಕಾರ್ಯಕ್ರಮದಲ್ಲಿ ಹೊಸ ಶಿಕ್ಷಣ ನೀತಿಯಡಿ ಉನ್ನತ ಶಿಕ್ಷಣವನ್ನು ಜಾಗತೀಕರಣಗೊಳಿಸುವ ನಿಟ್ಟಿನಲ್ಲಿ ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಮಾಂಟಿಗೋಮೆರಿ ಕಮ್ಯುನಿಟಿ ಕಾಲೇಜಿನ ಜತೆ ಕಾಲೇಜು ಶಿಕ್ಷಣ ಇಲಾಖೆ ಒಪ್ಪಂದ ಮಾಡಿಕೊಂಡಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಅನಾವರಣಗೊಳಿಸಿದರು.
ಡಾ. ಕಸ್ತೂರಿ ರಂಗನ್ ಸನ್ಮಾನಿಸಿದ ಸಿಎಂ
ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿ ಅಧ್ಯಕ್ಷರಾಗಿದ್ದ ಇಸ್ರೋ ಸಂಸ್ಥೆಯ ವಿಶ್ರಾಂತ ಅಧ್ಯಕ್ಷ ಡಾ. ಕಸ್ತೂರಿ ರಂಗನ್, ಶಿಕ್ಷಣ ತಜ್ಞರಾದ ಪ್ರೊ. ಎಂ. ಕೆ. ಶ್ರೀಧರ್, ಪ್ರೊ. ಟಿ. ವಿ. ಕಟ್ಟೀಮನಿ ಹಾಗೂ ಅನುರಾಗ್ ಬೇಹರ್ ಅವರನ್ನು ಮುಖ್ಯಮಂತ್ರಿ ಬೊಮ್ಮಾಯಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಸ್ತೂರಿ ರಂಗನ್, ‘ಕರ್ನಾಟಕ ಸರಕಾರವು ಅತಿದೊಡ್ಡ, ಮಹತ್ವದ ನಿರ್ಧಾರ ಕೈಗೊಂಡಿದೆ. ಹೊಸ ಶಿಕ್ಷಣ ನೀತಿಯೂ ಪ್ರತಿಯೊಂದು ಹಂತದಲ್ಲೂ ಸಮಾಜವನ್ನು ಜ್ಞಾನದ ಮೂಲಕ ಬದಲಾವಣೆ ಮಾಡುತ್ತಾ ಹೋಗುತ್ತದೆ’ ಎಂದರು.
‘ಶಿಕ್ಷಣ ನೀತಿಯ ಕರಡು ಸಿಕ್ಕಿದ ಕೂಡಲೇ ರಾಜ್ಯ ಸರಕಾರ ಕಾರ್ಯಪಡೆಯನ್ನು ರಚನೆ ಮಾಡಿತು. ಕೇಂದ್ರ ಸರಕಾರ ನೀತಿಯನ್ನು ಘೋಷಣೆ ಮಾಡಿದ ನಂತರ ನಾನು ಬೆಂಗಳೂರಿಗೆ ವಾಪಸ್ ಬಂದೆ. ಆ ಕೂಡಲೇ ನಮ್ಮ ಮನೆಗೆ ಬಂದ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಡಾ. ಅಶ್ವಥ್ ನಾರಾಯಣ, ಆದಾಗ್ಗೆ ಕೈಗೊಂಡಿದ್ದ ಕ್ರಮಗಳ ಬಗ್ಗೆ ವಿವರಿಸಿದರು. ಅವರಿಬ್ಬರೂ ನಮಗಿಂತ ವೇಗವಾಗಿದ್ದರು. ಅಂದು ನಡೆದ ಚರ್ಚೆಯಂತೆ ಇಂದು ಶಿಕ್ಷಣ ನೀತಿ ಕರ್ನಾಟಕದಲ್ಲಿ ಅನುಷ್ಠಾನಕ್ಕೆ ಬರುತ್ತಿದೆ’ ಎಂದು ಕಸ್ತೂರಿ ರಂಗನ್ ಹೇಳಿದರು.

ವರದಿ: ಅಜಯ.ಚ
ಹುಗಲೂರು
ಹೂವಿನ ಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
