;

ಅಫ್ಘಾನಿಸ್ತಾನ ತಾಲಿಬಾನ್ ವಶ. ಭಾರತಕ್ಕೆ ಗಂಡಾಂತರ ಕಾದಿರಬಹುದೇ.!!!

ಎಚ್ಚರಿಕೆ 16

ಅಫ್ಘಾನಿಸ್ತಾನ ತಾಲಿಬಾನ್ ವಶ. ಭಾರತಕ್ಕೆ ಗಂಡಾಂತರ ಕಾದಿರಬಹುದೇ.!!!

ಬಾಮಿಯಾನ್ ಬುದ್ಧನ ಪ್ರತಿಮೆಗಳ ಧ್ವಂಸ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ. ಹಿಂಸೆಯ ಪರಾಕಾಷ್ಠೆ. ಒಂದಿಡೀ ದೇಶದಲ್ಲಿ ತಾರಕಕ್ಕೆ ಏರಿದಾಗ ಆ ದೇಶದ ನೆರೆ ಹೊರೆಯ ದೇಶಗಳು ನೆಮ್ಮದಿಯಿಂದ ಇರಲು ಸಾಧ್ಯವೇ?

ಅಫ್ಘಾನಿಸ್ತಾನದಲ್ಲಿ ದಶಕಗಳ ಹಿಂದೆ ತಾಲಿಬಾನ್‌ ಅಟ್ಟಹಾಸ ಮೇರೆ ಮೀರಿದಾಗ, ಡಬ್ಲ್ಯೂಟಿಸಿ ದಾಳಿ ಮಾಡಿ ಕ್ರೌರ್ಯ ಮೆರೆದಾಗ ಅಮೆರಿಕ ಹಾಗೂ ಮಿತ್ರ ಪಡೆಯ ನೇಟೋ ಸೇನೆ ಪ್ರವೇಶ ಮಾಡಿತ್ತು. ತಾಲಿಬಾನ್‌ ಉಗ್ರರನ್ನು ಮಟ್ಟಹಾಕಲು ಹಲವು ವರ್ಷಗಳ ಕಾಲ ಬೆವರು ಮಾತ್ರವಲ್ಲ, ರಕ್ತವನ್ನೇ ಹರಿಸಿತು. ಲೆಕ್ಕವಿಲ್ಲದಷ್ಟು ಅಮೆರಿಕ ಹಾಗೂ ಯುರೋಪ್‌ನ ಸೈನಿಕರು ಅಫ್ಘಾನಿಸ್ತಾನದಲ್ಲಿ ಜೀವ ಬಿಟ್ಟರು. ಬಿಲಿಯನ್‌ಗಟ್ಟಲೆ ಅಮೆರಿಕನ್ ಡಾಲರ್ ಹಣವನ್ನು ಅಫ್ಘಾನಿಸ್ತಾನದಲ್ಲಿ ನೀರಿನಂತೆ ಖರ್ಚು ಮಾಡಲಾಯ್ತು. ಆದ್ರೆ ಪ್ರತಿಫಲ. ಎಲ್ಲವೂ ನಿಷ್ಪಲ!

ಹೌದು, ರಕ್ತಬೀಜಾಸುರರಂತೆ ಹುಟ್ಟಿ ಬರುವ ತಾಲಿಬಾನ್ ಉಗ್ರರು, ಅಮೆರಿಕದಂಥಾ ಪ್ರಬಲ ದೇಶದ ಸೈನ್ಯವನ್ನೇ ಕಂಗೆಡಿಸಿದರು. ಒಂದೆಡೆ ಕೊರೊನಾ ಕಾಟ, ಮತ್ತೊಂದೆಡೆ ಆರ್ಥಿಕ ಸಂಕಟಕ್ಕೆ ಸಿಲುಕಿದ ದೈತ್ಯ ರಾಷ್ಟ್ರಗಳೇ ಇನ್ನು ಸಾಕು ಎಂಬ ತೀರ್ಮಾನಕ್ಕೆ ಬರುವಂತೆ ಮಾಡಿಬಿಟ್ಟರು ಉಗ್ರರು! ಅಮೆರಿಕ ಹಾಗೂ ಅದರ ಮಿತ್ರ ದೇಶಗಳ ಪಡೆ ಅಫ್ಘಾನಿಸ್ತಾನದಿಂದ ಕಾಲ್ತೆಗೆದ ಕೂಡಲೇ ತಾಲಿಬಾನ್‌ ಉಗ್ರರು ರಾಜಧಾನಿ ಕಾಬೂಲ್‌ನಲ್ಲೇ ರಾರಾಜಿಸುತ್ತಿದ್ದಾರೆ.ಇದು ಸದ್ಯದ ಪರಿಸ್ಥಿತಿ

ಹಾಗಾದ್ರೆ ಈ ಸನ್ನಿವೇಶದಿಂದ ಭಾರತಕ್ಕೇನು ನಷ್ಟ? ದೂರದ ಅಫ್ಘಾನಿಸ್ತಾನದಲ್ಲಿ ಆಗಿರುವ ಅತಂತ್ರ ಸನ್ನಿವೇಶ, ಅರಾಜಕತೆಯಿಂದ ಭಾರತಕ್ಕಾಗುವ ಪರಿಣಾಮವೇನು? ಈ ಪ್ರಶ್ನೆಗೆ 4 ಸವಾಲುಗಳೇ ಉತ್ತರ!

1. ಪಾಕಿಸ್ತಾನ ತಾಲಿಬಾನ್ ಗೆ ನೆರವು ಋಣ ತೀರಿಸಲೂ ಮುಂದಾದ್ರೆ ಭಾರತಕ್ಕೆ ದೊಡ್ಡ ಸವಾಲು.!

ಇದು ಭಾರತದ ಎದುರಿಗೆ ಇರುವ ಅತಿದೊಡ್ಡ ಸವಾಲು..! ಲಷ್ಕರ್ ಎ ತೊಯ್ಬಾದಂಥಾ ಅತ್ಯುಗ್ರ ಸಂಘಟನೆಯ ಮೂಲ ಸ್ಥಾನವಾಗಿರುವ ಪಾಕಿಸ್ತಾನ, ಭಾರತದ ಮೇಲೆ ಸದಾ ಕಾಲ ಒಂದಿಲ್ಲೊಂದು ಕಾರಣಕ್ಕೆ ಕಾಲು ಕೆರೆದು ಜಗಳಕ್ಕೆ ಬರುತ್ತಲೇ ಇರುತ್ತದೆ. ಪಾಕಿಸ್ತಾನ ಸೇನೆ ಭಾರತದ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸೋದು, ಐಎಸ್‌ಐ ಕುಮ್ಮುಕ್ಕಿನೊಂದಿಗೆ ದೇಶದ ಗಡಿಯೊಳಗೆ ಉಗ್ರರನ್ನು ನುಸುಳುವಂತೆ ಮಾಡೋದು ಒಂದು ಕಡೆಯಾದ್ರೆ, ಅಫ್ಘಾನಿಸ್ತಾನ ಗಡಿಯಲ್ಲೂ ಇದೇ ತಂತ್ರವನ್ನು ಇಷ್ಟು ದಿನ ಅನುಸರಿಸುತ್ತಿತ್ತು.

ಅಮೆರಿಕ ಮೈತ್ರಿಕೂಟದ ವಿರುದ್ಧ ಹೋರಾಡುವ ತಾಲಿಬಾನಿಗಳಿಗೆ ಪಾಕಿಸ್ತಾನದಲ್ಲೇ ತರಬೇತಿ
ಕೊಡಲಾಗುತ್ತಿತ್ತು ಎಂಬ ವಿಚಾರ ಗುಟ್ಟಾಗಿ ಉಳಿದಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಪಾಕಿಸ್ತಾನದ ಬಣ್ಣ ಬಯಲಾಗಿದೆ. ಇದೀಗ ಇಡೀ ಅಫ್ಘಾನಿಸ್ತಾನವೇ ತಾಲಿಬಾನಿಗಳ ಕೈವಶ ಆಗಿರುವ ಹಿನ್ನೆಲೆಯಲ್ಲಿ, ಧಾರ್ಮಿಕ ಮೂಲಭೂತವಾದಕ್ಕೆ ಅವಕಾಶ ನೀಡುವ ಪಾಕಿಸ್ತಾನ ಕೂಡಾ ತಾಲಿಬಾನಿಗಳ ಸ್ವರ್ಗವಾಗೋದ್ರಲ್ಲಿ ಸಂಶಯವಿಲ್ಲ. ಅಫ್ಘಾನಿಸ್ತಾನವನ್ನು ಗೆಲ್ಲಲು ತಾಲಿಬಾನಿಗಳಿಗೆ ಪಾಕಿಸ್ತಾನ ನೆರವು ನೀಡಿತು ಅನ್ನೋ ಕಾರಣಕ್ಕೆ ತಾಲಿಬಾನಿಗಳು ಇದೀಗ ಪಾಕಿಸ್ತಾನದ ಋಣ ತೀರಿಸಲು ಮುಂದಾದ್ರೆ ಅಚ್ಚರಿ ಪಡಬೇಕಿಲ್ಲ..! ಭಾರತದ ವಿರುದ್ಧ ಸಮರ ಸಾರುವ ಮೂಲಕ ತಾಲಿಬಾನಿಗಳ ಪಾಕಿಸ್ತಾನದ ಋಣ ತೀರಿಸಲು ಮುಂದಾದ್ರೆ ಅದು ಭಾರತಕ್ಕೆ ಅತಿದೊಡ್ಡ ಸವಾಲು!

2. ಚೀನಾ ಭಾರತ ಪ್ರವೇಶಕ್ಕೆ ಅಫ್ಘನ್ ಹೆಬ್ಬಾಗಿಲು!

ಅಫ್ಘಾನಿಸ್ತಾನದ ಪ್ರಜಾಸತ್ತಾತ್ಮಕ ಸರ್ಕಾರದ ಅಧ್ಯಕ್ಷ ಅಬ್ದುಲ್ ಘನಿ ಅವರೊಂದಿಗೆ ಭಾರತ ಸೌಹಾರ್ದಯುತ ಬಾಂಧವ್ಯ ಹೊಂದಿತ್ತು. ಡ್ಯಾಂ, ರಸ್ತೆ ಸೇರಿದಂತೆ ಹಲವು ಮೂಲಭೌತ ಸೌಕರ್ಯ ಕಲ್ಪಿಸುವ ಯೋಜನೆಗಳಿಗೆ ಭಾರತ ಸಹಭಾಗಿತ್ವ ವಹಿಸಿತ್ತು. ಆದ್ರೆ, ಈಗ ಬದಲಾದ ಸನ್ನಿವೇಶದಲ್ಲಿ ಉಗ್ರ ಪ್ರಭುತ್ವಕ್ಕೆ ಚೀನಾ ಜೈ ಎನ್ನುತ್ತಿದೆ..! ಅಫ್ಘಾನಿಸ್ತಾನದಲ್ಲಿ ಚೀನಾ ಡ್ರ್ಯಾಗನ್‌ ಪ್ರವೇಶ ಪಡೆಯಲು ತಾಲಿಬಾನಿಗಳು ಹೆಬ್ಬಾಗಿಲು ತೆರೆದಂತೆ ಆಗಿದೆ.

ಈಗಾಗಲೇ ತಾಲಿಬಾನ್ ನಾಯಕರು ಇರಾನ್, ರಷ್ಯಾ ಹಾಗೂ ಚೀನಾ ಜೊತೆಗೆ ಮಾತುಕತೆ ನಡೆಸಿದ್ದಾರೆ. ಚೀನಾ ದೇಶವು ಅಫ್ಘಾನಿಸ್ತಾನದಲ್ಲಿ ಮೂಲ ಸೌಕರ್ಯ ಕಲ್ಪಿಸುವ ಯೋಜನೆಗಳು, ಗಣಿಗಾರಿಕೆ ಸೇರಿದಂತೆ ಹಲವು ಯೋಜನೆಗಳೊಂದಿಗೆ ಮುಂದಡಿ ಇಟ್ಟಿದೆ. ಅಫ್ಘನ್‌ನಲ್ಲಿ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳುವ ಸಂಬಂಧ ಚೀನಾ ಭಾರೀ ಉತ್ಸುಕವಾಗಿದೆ. ಈ ಮೂಲಕ ಏಷ್ಯಾದ ಈ ಭಾಗದಲ್ಲಿ ಭಾರತದ ಪ್ರಾಬಲ್ಯ ಕುಗ್ಗಿ ಚೀನಾ ಪಾರಮ್ಯ ಮೆರೆಯಲಿದೆ. ಈಗಾಗಲೇ ಪಾಕಿಸ್ತಾನವನ್ನ ತನ್ನ ತೆಕ್ಕೆಗೆ ತೆಗೆದುಕೊಂಡು ವಿಶ್ವಾಸ ಗಿಟ್ಟಿಸಿರವ ಚೀನಾಗೆ, ಅಫ್ಘಾನಿಸ್ತಾನ ಕೂಡಾ ಹತ್ತಿರವಾಗಲಿದೆ.

3. ಉಗ್ರರಿಗೆ ಒಂದು ಭದ್ರ ನೆಲೆಯಾಗಲಿದೆ ಅಫ್ಘಾನಿಸ್ತಾನ!

ಭಾರತದಲ್ಲಿ ದಾಳಿ ನಡೆಸುವ, ದಾಳಿಯ ಸಂಚು ರೂಪಿಸುವ ಉಗ್ರರು ಪಾಕಿಸ್ತಾನದಲ್ಲಿ ಅಡಗಿ ಕುಳಿತಿದ್ದರೆ ಆ ದೇಶದೊಳಗೆ ನುಗ್ಗಿ ಹೊಡೆಯುತ್ತೆ ಭಾರತ..! ಪಾಕಿಸ್ತಾನ ತಾನೊಂದು ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳಿಕೊಳ್ಳುವ ಕಾರಣ, ಉಗ್ರರು ತನ್ನ ಒಡಲಲ್ಲಿ ಇಲ್ಲ ಎಂದು ಬಹಿರಂಗವಾಗಿ ವಾದಿಸುವ ಕಾರಣ, ಭಾರತದ ಇಂಥಾ ದಾಳಿಗಳ ವಿರುದ್ಧ ಆ ದೇಶಕ್ಕೆ ಸೊಲ್ಲೆತ್ತಲು ಸಾಧ್ಯವಾಗುತ್ತಿಲ್ಲ. ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರನ್ನು ಭಾರತ ಸದೆಬಡಿದರೂ ಕೂಡಾ ಏನೂ ಆಗಿಲ್ಲ ಎಂಬಂತೆ ವರ್ತಿಸಬೇಕಾದ ಅನಿವಾರ್ಯ ಪಾಕಿಸ್ತಾನಕ್ಕಿದೆ..!

ಆದ್ರೆ ಈಗ ಸನ್ನಿವೇಶ ಬದಲಾಗಿದೆ. ಪಕ್ಕದಲ್ಲೇ ಅತ್ಯುಗ್ರ ಸಂಘಟನೆಯೊಂದು ಇಡೀ ದೇಶವನ್ನೇ ಅನಾಮತ್ತು ತನ್ನ ವಶಕ್ಕೆ ತೆಗೆದುಕೊಂಡಿದೆ. ಇಷ್ಟು ದಿನ ಪಾಕಿಸ್ತಾನ ತನ್ನ ನೆಲದಲ್ಲಿ ತಾಲಿಬಾನಿಗಳಿಗೆ ತರಬೇತಿ ಕೊಟ್ಟು ಅಫ್ಘಾನಿಸ್ತಾನಕ್ಕೆ ನುಗ್ಗಿಸುತ್ತಿತ್ತು. ಆದರೆ ಈಗ ಅಫ್ಘಾನಿಸ್ತಾನವೇ ಉಗ್ರರ ರಾಜಧಾನಿ, ಅಫ್ಘಾನಿಸ್ತಾನವೇ ಉಗ್ರರ ನೆಲೆ, ಸ್ವರ್ಗ..! ಹೀಗಿರುವಾಗ 26/11ನಂಥಾ ದಾಳಿಗಳನ್ನು ಅಫ್ಘಾನಿಸ್ತಾನದ ನೆಲದಲ್ಲಿ ಕುಳಿತು ಸಂಘಟಿಸೋದು ಉಗ್ರ ಸಂಘಟನೆಗಳಿಗೆ ಕಷ್ಟದ ಕೆಲಸವೇನಲ್ಲ! ಅದು ಅಮೆರಿಕ ಆಗಲಿ, ಭಾರತವೇ ಆಗಲಿ ತಾನು ಬಯಸುವ ಯಾವುದೇ ದೇಶದಲ್ಲಿ ಭಯೋತ್ಪಾದಕ ಕೃತ್ಯ ಎಸಗಲು ಇಡೀ ಅಫ್ಘಾನಿಸ್ತಾನ ದೇಶವೇ ಉಗ್ರರಿಗೆ ಸಂಪನ್ಮೂಲ ಸ್ಥಾನ! ಇದು ನಿಜಕ್ಕೂ ಭಾರತ ಮಾತ್ರವಲ್ಲ, ವಿಶ್ವಕ್ಕೇ ದೊಡ್ಡ ಕಂಟಕ!

4. ಮಾನವ ಹಕ್ಕುಗಳ ಹರಣ. ಇಡೀ ವಿಶ್ವಕ್ಕೇ ಪಾಷಾಣ!

ಬಾಮಿಯಾನ್ ಬುದ್ಧನ ಪ್ರತಿಮೆಗಳ ಧ್ವಂಸ.. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ.. ಹಿಂಸೆಯ ಪರಾಕಾಷ್ಠೆ.. ಒಂದಿಡೀ ದೇಶದಲ್ಲಿ ತಾರಕಕ್ಕೆ ಏರಿದಾಗ ಆ ದೇಶದ ನೆರೆ ಹೊರೆಯ ದೇಶಗಳು ನೆಮ್ಮದಿಯಿಂದ ಇರಲು ಸಾಧ್ಯವೇ..? ಇಡೀ ಅಫ್ಘಾನಿಸ್ತಾನ ತಾಲಿಬಾನಿಗಳ ಕೈವಶ ಆಗುವ ಮೂಲಕ ಆ ದೇಶವು 20 ವರ್ಷ ಹಿಂದಕ್ಕೆ ಹೋಗಿ ನಿಂತಿದೆ.

ಸಾಮೂಹಿಕ ಗಲ್ಲು, ಕಲ್ಲು ಹೊಡೆದು ಕೊಲ್ಲುವ ಪ್ರಕ್ರಿಯೆಗಳು ನಿಧಾನವಾಗಿ ನೆರೆಯ ಪಾಕಿಸ್ತಾನವನ್ನೂ ಕ್ಯಾನ್ಸರ್‌ನಂತೆ ವ್ಯಾಪಿಸುವ ಸಾಧ್ಯತೆಗಳು ಇಲ್ಲದಿಲ್ಲ. ಇದೀಗ ಅಫ್ಘಾನಿಸ್ತಾನದಲ್ಲಿ ಅಸ್ತಿತ್ವಕ್ಕೆ ಬಂದಿರುವ ತಾಲಿಬಾನ್ ಸರ್ಕಾರ ಮಾನವೀಯತೆಯಿಂದ ನಡೆದುಕೊಳ್ಳುತ್ತದೆ, ಅಭಿವೃದ್ಧಿ ಪರವಾಗಿ ನಿಲ್ಲುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಏಕೆಂದರೆ ಈಗಾಗಲೇ ತನ್ನ ವಶಕ್ಕೆ ಸಿಕ್ಕಿರುವ ಅಫ್ಘನ್‌ನ ಪ್ರಾಂತ್ಯಗಳಲ್ಲಿ ಶಾಲೆ, ಆಸ್ಪತ್ರೆಗಳನ್ನು ತಾಲಿಬಾನ್‌ ಉಗ್ರರು ಬಾಂಬುಗಳನ್ನು ಇಟ್ಟು ಉಡಾಯಿಸಿಬಿಟ್ಟಿದ್ದಾರೆ! ಇಂಥಾ ಪರಿಸ್ಥಿತಿಯಲ್ಲಿ ಜನ ಸಾಮಾನ್ಯರು ನೆರೆ ರಾಷ್ಟ್ರಗಳಿಗೆ ಲಗ್ಗೆ ಇಡೋದು ಸರ್ವೇ ಸಾಮಾನ್ಯ. ಇಂದಿನ ಬಾಂಗ್ಲಾ ದೇಶ ಅಂದು ಪೂರ್ವ ಪಾಕಿಸ್ತಾನವಾಗಿದ್ದಾಗ ಗಲಭೆ ಸಂಭವಿಸಿ ಲಕ್ಷಾಂತರ ನಿರಾಶ್ರಿತರು ಭಾರತಕ್ಕೆ ಬಂದಿರಲಿಲ್ಲವೇ? ಇದು ಭಾರತದಲ್ಲಿ ಸಮಸ್ಯೆ ಸೃಷ್ಟಿ ಮಾಡುವ ಸಾಧ್ಯತೆ ಇದೆ. ಎಚ್ಚರಿಕೆ

ವರದಿ: ಅಜಯ.ಚ
ಹುಗಲೂರು
ಹೂವಿನ ಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;