;

ರೈತರು, ಸಾರ್ವಜನಿಕರಲ್ಲಿ ತೋಟಗಾರಿಕೆಯ ಆಸಕ್ತಿ ಹೆಚ್ಚಿಸಲು ಕ್ರಮ….!!!!

ರೈತರು, ಸಾರ್ವಜನಿಕರಲ್ಲಿ ತೋಟಗಾರಿಕೆಯ ಆಸಕ್ತಿ ಹೆಚ್ಚಿಸಲು ಕ್ರಮ
ತೋಟಗಾರಿಕೆ ಇಲಾಖೆಯ ಸೌಲಭ್ಯಗಳನ್ನು ನೇರವಾಗಿ ತಲುಪಿಸಲು ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ
—
10ನೇ ವರ್ಷದ ‘ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನಕ್ಕೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ
—-
ಕೊಪ್ಪಳ : ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ತೋಟಗಾರಿಕೆ ಪಿತಾಮಹ ಡಾ. ಎಂ.ಎಚ್. ಮರಿಗೌಡರ ಜನ್ಮದಿನಾಚರಣೆಯ ಅಂಗವಾಗಿ ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಆಗಸ್ಟ್ 15 ರಿಂದ ಆ. 20ರವರೆಗೆ ಹಮ್ಮಿಕೊಳ್ಳಲಾದ 10ನೇ ವರ್ಷದ ‘ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ–2026’ ಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ಶನಿವಾರ ಚಾಲನೆ ನೀಡಿದರು.
ಕೊಪ್ಪಳದ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ಆಯೋಜಿಸಲಾಗಿರುವ ಸಸ್ಯ ಸಂತೆಯಲ್ಲಿನ ವಿವಿಧ ಹಣ್ಣುಗಳು, ಕರಿಬೇವು, ವಿಳ್ಯೆದೆಲೆ ಸಸಿಗಳು, ಸಾಂಬಾರು ಪದಾರ್ಥ ಬೆಳೆಗಳ ಸಸಿಗಳು ಹಾಗೂ ಅಲಂಕಾರಿಕ ಸಸಿಗಳು ಸೇರಿದಂತೆ ಇತರೆ ತಳಿಯ ಸಸಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ್ ಹಿಟ್ನಾಳ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ಗಡಾದ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್, ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ, ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್ ಅರಸಿದ್ಧಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ, ಕೊಪ್ಪಳ ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷರಾದ ಯಂಕಣ್ಣ ಯರಾಶಿ, ಕೊಪ್ಪಳದ ತೋಟಗಾರಿಕೆ ಜಂಟಿ ನಿರ್ದೇಶಕರಾದ ಕೃಷ್ಣ ಸಿ. ಉಕ್ಕುಂದ, ಕೊಪ್ಪಳ (ರಾ.ವ.) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಮಂಜುನಾಥ ಆರ್. ದೊಡ್ಡಪತ್ತಾರ, ವಿವಿಧ ತಾಲ್ಲೂಕುಗಳ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಮಂಜುನಾಥ, ಲಿಂಗನಗೌಡ್ರ ಹಾಗೂ ಶಿವಯೋಗಿ, ಗಿಣಿಗೇರಾದ ತೋಟಗಾರಿಕೆ ಮಣ್ಣು ಮತ್ತು ನೀರು ಪರೀಕ್ಷಾ ಕೇಂದ್ರದ ಹಿರಿಯ ಸಹಾಯಕ ನಿರ್ದೇಶಕರಾದ ದುರ್ಗಾಪ್ರಸಾದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಇತರೆ ಜನಪ್ರತಿನಿಧಿಗಳು, ತೋಟಗಾರಿಕೆ ಬೆಳೆಗಾರರು, ರೈತರು, ತೋಟಗಾರಿಕೆ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
*ರೈತರು, ಸಾರ್ವಜನಿಕರಲ್ಲಿ ತೋಟಗಾರಿಕೆಯ ಆಸಕ್ತಿ ಹೆಚ್ಚಿಸಲು ಕ್ರಮ:* ರೈತರು ಹಾಗೂ ಸಾರ್ವಜನಿಕರಲ್ಲಿ ತೋಟಗಾರಿಕೆ ಬಗ್ಗೆ ಆಸಕ್ತಿ ಹೆಚ್ಚಿಸಲು ಮತ್ತು ಇಲಾಖೆಯ ಸೌಲಭ್ಯಗಳನ್ನು ನೇರವಾಗಿ ತಲುಪಿಸುವ ನಿಟ್ಟಿನಲ್ಲಿ ಈ ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು, ಸಸ್ಯ ಸಂತೆಯಲ್ಲಿನ ಪ್ರಮುಖ ಆಕರ್ಷಣೆಗಳು ಮತ್ತು ವೈಶಿಷ್ಟ್ಯಗಳು ಇಂತಿವೆ.
*ವಿಶೇಷ ಹಾಗೂ ವಿದೇಶಿ ತಳಿಗಳ ಪರಿಚಯ:* ಜಿಲ್ಲೆಯ ವಾತಾವರಣಕ್ಕೆ ಸೂಕ್ತವಾದ ಜಗತ್ತಿನ ಅತ್ಯಂತ ದುಬಾರಿ ಮಾವಿನ ತಳಿಯಾದ ‘ಮಿಯಾಜಾಕಿ’ ಗಿಡಗಳು, ಹೊಸ ಕಸಿ ಸಸಿಗಳು ಹಾಗೂ ತೆಂಗಿನ ಹೈಬ್ರಿಡ್ ತಳಿಗಳಾದ ಚೌಘಾಟ್ ಆರೆಂಜ್ ಡ್ವಾರ್ಫ್, ಚೌಘಾಟ್ ಗ್ರೀನ್ ಡ್ವಾರ್ಫ್, ಮಲೇಶಿಯನ್ ಗ್ರೀನ್ ಡ್ವಾರ್ಫ್, ಕಲ್ಪಶ್ರೀ ಮತ್ತು ಮಲೇಶಿಯನ್ ರೆಡ್ ಡ್ವಾರ್ಫ್ ಸಸಿಗಳನ್ನು ಪರಿಚಯಿಸಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
*ಲಕ್ಷಾಂತರ ಸಸಿಗಳ ಲಭ್ಯತೆ:* ಜಿಲ್ಲೆಯ 9 ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಲಾದ 15ಕ್ಕೂ ಹೆಚ್ಚು ಹಣ್ಣಿನ ತಳಿಗಳು, ವಾಟರ್ ಆಪಲ್, ಲಿಚಿ, ಬೀಜರಹಿತ ಲಿಂಬೆ, ರಾಮಫಲ, ಲಕ್ಷ್ಮಣಫಲ ಗಿಡಗಳು ಲಭ್ಯವಿವೆ. ಜೊತೆಗೆ ಪಾಲಿಮನೆಯಲ್ಲಿ ಬೆಳೆಸಿದ 5 ಲಕ್ಷಕ್ಕೂ ಅಧಿಕ ಟೊಮ್ಯಾಟೊ, ಮೆಣಸಿನಕಾಯಿ, ಬದನೆ, ನುಗ್ಗೆ ಸೇರಿದಂತೆ ತರಕಾರಿ ಸಸಿಗಳು, ಗುಲಾಬಿ, ಮಲ್ಲಿಗೆ, ಸಂಪಿಗೆ, ಪೆಟೊನಿಯಾ ಮುಂತಾದ 100ಕ್ಕೂ ಹೆಚ್ಚು ಅಲಂಕಾರಿಕ ಹೂವಿನ ಸಸಿಗಳು ಈ ಮೇಳದಲ್ಲಿ ಮಾರಾಟಕ್ಕಿವೆ.
*‘ಸಾವಯವದತ್ತ ಒಂದು ಹೆಜ್ಜೆ’:* ರೈತರಿಗೆ ಸಾವಯವ ಕೃಷಿ ಉತ್ತೇಜನಕ್ಕಾಗಿ ಪಂಚಗವ್ಯ, ಜೀವಾಮೃತ, ಬೀಜಾಮೃತ, ಅಗ್ನಿಅಸ್ತ್ರ, ಬ್ರಹ್ಮಾಸ್ತ್ರ, ದಶಪರ್ಣಿ ಕಷಾಯ ಹಾಗೂ ಎರೆಹುಳು ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ರೈತರು ಬೆಳೆದ ಸಾವಯವ ಉತ್ಪನ್ನಗಳ ಮಾರಾಟಕ್ಕೂ ಮಳಿಗೆ ಕಲ್ಪಿಸಲಾಗಿದೆ.
*ಆಧುನಿಕ ತಂತ್ರಜ್ಞಾನ ಮತ್ತು ಒಪ್ಪಂದ ಕೃಷಿ:* ಹನಿ ನೀರಾವರಿ, ಯಾಂತ್ರೀಕರಣ, ಮಳೆನೀರು ಕೊಯ್ಲು, ಬೋರ್‌ವೆಲ್ ರೀಚಾರ್ಜ್ ವಿಧಾನ, ಬೋರ್‌ವೆಲ್‌ಗಳಿಗೆ ಸೋಲಾರ್ ಅಳವಡಿಕೆ ಹಾಗೂ ‘ಫ್ಲೋರೋಜಾ’ ಕಂಪನಿಯೊಂದಿಗೆ ಹಲಸಿನ ಒಪ್ಪಂದ ಕೃಷಿ ಮತ್ತು ‘3ಎಫ್’ ಕಂಪನಿಯೊಂದಿಗೆ ತಾಳೆಬೆಳೆ ಕೃಷಿ ಕುರಿತು ತಜ್ಞರಿಂದ ನೇರ ಮಾರ್ಗದರ್ಶನ ನೀಡಲಾಗುತ್ತಿದೆ.
*ನಗರವಾಸಿಗಳಿಗೆ ತಾರಸಿ ತೋಟ ಮಾರ್ಗದರ್ಶನ:* ವರ್ಟಿಕಲ್ ಗಾರ್ಡನ್, ಹೈಡ್ರೋಪೋನಿಕ್ಸ್, ಬೋನ್ಸಾಯ್, ರಾಕ್ ಗಾರ್ಡನ್ ಹಾಗೂ ಹುಲ್ಲಿನ ಹಾಸು (ಲಾನ್) ಬೆಳೆಸುವ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದ್ದು, ಸಾರ್ವಜನಿಕರ ಆಕರ್ಷಣೆಗೆ ವಿಶೇಷ ‘ಸೆಲ್ಫಿ ಪಾಯಿಂಟ್’ ನಿರ್ಮಿಸಲಾಗಿದೆ.
*ಬ್ಯಾಂಕಿಂಗ್ ಹಾಗೂ ವಿಜ್ಞಾನಿಗಳ ಸಲಹೆ:* ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಕೆ.ವಿ.ಕೆ ವಿಜ್ಞಾನಿಗಳಿಂದ ಬರ ನಿರ್ವಹಣೆ, ಮಣ್ಣು-ನೀರು ಪರೀಕ್ಷೆ, ಅಣಬೆ ಬೇಸಾಯ, ಜೇನು ಸಾಕಾಣಿಕೆ ಹಾಗೂ ಬೆಳೆ ವಿಮೆ ಮತ್ತು ಬ್ಯಾಂಕ್ ಸಾಲ ಸೌಲಭ್ಯಗಳ ಕುರಿತು ರೈತರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ.
*ಮನವಿ:*
“ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನದಲ್ಲಿ ಆಗಮಿಸುವ ಪ್ರತಿಯೊಬ್ಬ ರೈತರು ಹಾಗೂ ಗ್ರಾಹಕರು ಒಂದೇ ಸೂರಿನಡಿ ಇಲಾಖೆಯ ಎಲ್ಲ ಸೌಲಭ್ಯ ಹಾಗೂ ಸಸಿಗಳನ್ನು ಪಡೆಯಬಹುದು. ಜಿಲ್ಲೆಯ ಸಮಸ್ತ ಸಾರ್ವಜನಿಕರು, ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಅಭಿಯಾನದ ಪ್ರಯೋಜನ ಪಡೆದುಕೊಳ್ಳಬೇಕು.”
— ಕೃಷ್ಣ ಸಿ. ಉಕ್ಕುಂದ, ತೋಟಗಾರಿಕೆ ಜಂಟಿ ನಿರ್ದೇಶಕರು (ಜಿ.ಪಂ.), ಕೊಪ್ಪಳ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;