ಕಾಂಗ್ರೆಸ್ ಪಕ್ಷದಿಂದ ಭೀಮನಾಯ್ಕ ಉಚ್ಚಾಟನೆಗೆ ಒತ್ತಾಯ.
ಕೊಟ್ಟೂರು: ಕ್ಷೇತ್ರದ ಕಾರ್ಯಕರ್ತರನ್ನು ಹಾಗೂ ಮುಖಂಡರನ್ನು ನಿರ್ಲಕ್ಷಿಸಿ ತನಗಿಷ್ಟ ಬಂದಂತೆ ದುರಹಂಕಾರದಿಂದ ವರ್ತಿಸುತ್ತಿರುವ ಮಾಜಿ ಶಾಸಕ ಹಾಗೂ ಕೆಎಂಎಫ್ ಮಾಜಿ ಅಧ್ಯಕ್ಷ ಎಲ್.ಬಿ.ಪಿ. ಭೀಮನಾಯ್ಕ ಇವರನ್ನು ಕೂಡಲೇ ಹೈಕಮಾಂಡ್ ಉಚ್ಚಾಟಸಬೇಕು ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಪಿ.ಹೆಚ್.ದೊಡ್ಡರಾಮಣ್ಣ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿ ಇತ್ತೀಚಿಗೆ ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ಸಂಘಟನೆ ಸೃಜನ್ ಅಭಿಯಾನ ಕಾರ್ಯಕ್ರಮದಲ್ಲಿ ಮುಖಂಡರಿಗೆ ಅವಮಾನ ಮಾಡಿರುವುದರಿಂದ ಅಸಮಧಾನ ಉಂಟಾಗಿದ್ದು ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳನ್ನು ಹಾಗೂ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ಹಗರಿಬೊಮ್ಮನಹಳ್ಳಿ ಕ್ಷೇತ್ರದದಲ್ಲಿ ನಡೆಯುತ್ತಿರುವ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತೇವೆ ಎಂದರು.
ತೊಡೆ ತಟ್ಟುವ ಸಂಸ್ಕೃತಿ ಹಾಗೂ ಅಹಂಕಾರದಿಂದ ವರ್ತಿಸುತ್ತಿರುವ ಭೀಮನಾಯ್ಕ ಚುನಾವಣೆಯಲ್ಲಿ ಸೋತು ಪಕ್ಷವನ್ನು ಮೂರಾಬಟ್ಟೆ ಮಾಡಿದರೂ ಬುದ್ಧಿ ಬರದ ಇವರಿಗೆ ಮುಂಬರುವ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕೀಲರಾದ ಸಿ.ಬಸವರಾಜ್ ಮಾತನಾಡಿ ಭೀಮನಾಯ್ಕ ತಳಮಟ್ಟದ ಕಾರ್ಯಕರ್ತರನ್ನು ನಿರ್ಲಕ್ಷಿಸಿ ಪಕ್ಷವನ್ನು ಹಾಗೂ ಕ್ಷೇತ್ರವನ್ನು ಅಧೋಗತಿಗಿಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಏಂದು ವ್ಯಂಗ್ಯವಾಡಿದರು.
ಮುಖಂಡ ಹೆಚ್.ಎ.ಕೊಟ್ರೇಶ್ ಮಾತನಾಡಿ ಏಕ ಪಕ್ಷೀಯ ನಿರ್ಧಾರದಿಂದ ತನಗೆ ಬೇಕಾದವರಿಗೆ ಮಾತ್ರ ಎಪಿಎಂಸಿ ಸೇರಿದಂತೆ ಆಯಕಟ್ಟಿನ ಹುದ್ದೆಗಳನ್ನು ನೀಡಿ ಪಕ್ಷಕ್ಕೆ ದುಡಿದವರನ್ನು ಕಡೆಗಣಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿ ಇವರ ವರ್ತನೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿಯಾಗಿದೆ ಎಂದರು.
ಮುಖಂಡರಾದ ವಿಶ್ವನಾಥರಾಜ್, ಎ.ನೂರುಲ್ಲಾಖಾನ್, ಎ.ಎಂ.ಪರಮೇಶ್ವರಯ್ಯ, ಕರಡಿ ಕೊಟ್ರಯ್ಯ, ಬೋರನಹಳ್ಳಿ ಮೂಗಣ್ಣ, ಇಂದ್ರಜಿತ್ ಮುಂತಾದವರು ಪಾಲ್ಗೊಂಡಿದ್ದರು.
ಚಿತ್ರ– ಕೊಟ್ಟೂರಿನ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ಭಾನುವಾರ ಸಭೆ ನಡೆಸಿ ಮಾಜಿ ಶಾಸಕ ಎಲ್.ಬಿ.ಪಿ. ಭೀಮನಾಯ್ಕ ಇವರನ್ನು ಹೈಕಮಾಂಡ್ ಉಚ್ಚಾಟಸಬೇಕು ಎಂದು ಒತ್ತಾಯಿಸಿದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
