ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಪೂರೈಸಿ: ರಾಹುಲ್ ಪಾಂಡೆಯ
: ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರನ್ನು ಪೂರೈಸಲು ಕ್ರಮ ವಹಿಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜೂನ್ 6 ರಂದು ಬಸರಿಹಾಳ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಬಸರಿಹಾಳ ಗ್ರಾಮದಲ್ಲಿ ಏಕಕಾಲಕ್ಕೆ ಹಲವಾರು ಜನರಲ್ಲಿ ವಾಂತಿ ಬೇಧಿ ರೋಗ ಲಕ್ಷಣಗಳು ಕಂಡು ಬಂದಿರುವುದು ಗಮನಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ತಪಾಸಣಾ ಶಿಬಿರ ಕಾರ್ಯಗತಗೊಳಿಸಲು ಸೂಚಿಸಿದರು. ಈ ಗ್ರಾಮದಲ್ಲಿ ಇರುವ 450 ಮನೆಗಳ ಜನರ ಆರೋಗ್ಯ ತಪಾಸಣೆ ಮಾಡಲು ನಿರ್ದೇಶನ ನೀಡಿದರು.
ಈ ಕುರಿತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರರು ಸದರಿ ಪ್ರಕರಣದ ಕುರಿತು ಜಂಟಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತಿರುವ ಮೂಲಗಳ ಗುಣಮಟ್ಟ ಪರೀಕ್ಷಿಸಿ ವರದಿ ನೀಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.
ಗ್ರಾಮಸ್ಥರಿಗೆ ಸರಬರಾಜು ಆಗುತ್ತಿರುವ ನೀರು ಕಾಯಿಸಿ ಆರಿಸಿ ಕುಡಿಯಲು ಮುಂಜಾಗ್ರತಾ ಕ್ರಮ ವಹಿಸುವ ಕುರಿತು ಜಾಗೃತಿ ಮೂಡಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ನಿರ್ದೇಶನ ನೀಡಿದರು. ಈಗ ಸರಬರಾಜು ಆಗುತ್ತಿರುವ ನೀರಿನ ಮೂಲಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಪಂಚಾಯತ್ಅಭಿವೃದ್ಧಿ ಅಧಿಕಾರಿಗಳಿಗ ಸೂಚಿಸಿದರು.
ಪ್ರತಿ ದಿನ ನೀರಿನ ಗುಣಮಟ್ಟದ ತಪಾಸಣೆ ಮಾಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಮುಂಗಾರು ಮಳೆ ಮುಂಚೂಣಿಯಲ್ಲಿದ್ದು ಗ್ರಾಮದಲ್ಲಿ ಇರುವ ಕುಡಿಯುವ ನೀರಿನ ಮೂಲಗಳ ಆವರಣವನ್ನು ಶುಚಿತ್ವಗೊಳಿಸಿ ಮಣ್ಣು ಮಿಶ್ರಿತ ನೀರು ಕುಡಿಯುವ ನೀರಿನ ಮೂಲಗಳೊಂದಿಗೆ ಮಿಶ್ರಣವಾಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದೆ ವೇಳೆ ಸಿಇಓ ಅವರು ಘಟನೆಯ ಬಗ್ಗೆ ಗ್ರಾಮಸ್ಥರೊಂದಿಗೆ ಸಮಾಲೋಚಿಸಿ ಸದರಿ ಅನಾರೋಗ್ಯಕ್ಕೆ ಕಾರಣವಾದ ಅಂಶಗಳ ಕುರಿತು ಪರಿಶೀಲಿಸಿದರು. ಘಟನೆಯ ಬಗ್ಗೆ ಸಿಇಓ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು.
32ರ ವಯೋಮಾನದ ಹನುಮಮ್ಮ ಮತ್ತು ನಾಲ್ಕು ವರ್ಷದ ಅಶ್ವಿನಿ ಅವರು ಮೇ 5ರಂದು ತಾವರಗೇರಾದಲ್ಲಿ ಜಾತ್ರೆಗೆ ಹೋಗಿದ್ದು ಆ ವೇಳೆ ವಾಂತಿ ಮತ್ತು ಬೇಧಿಯಿಂದ ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆ ಬಳಿಕ ಅಶ್ವಿನಿಯು ಹೆಚ್ಚಿನ ಚಿಕಿತ್ಸೆಗಾಗಿ ಸಿಂಧನೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. 19 ತಿಂಗಳ ಮಗುವಾದ ಶ್ರುತಿ ತಂದೆ ಮಂಗಳೇಶ ನಾಯಕ ಇವಳನ್ನು ಅವಳ ಪಾಲಕರು ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ಮಗು ತೀವ್ರ ಅಸ್ವಸ್ಥಗೊಂಡಿದ್ದು ವೈದ್ಯರು ತುರ್ತಾಗಿ ಚಿಕಿತ್ಸೆ ನೀಡಲು ಪ್ರಯತ್ನಿಸಿದರು ಸಹ ಮಗು ಮರಣ ಹೊಂದಿರುತ್ತದೆ ಎಂದು ಅಲ್ಲಿನ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಅಲಕನಂದಾ ಕೆ. ಮಳಗಿ ಅವರು ವಿವರಿಸಿದರು.
ಬಸರಿಹಾಳ ಗ್ರಾಮದಲ್ಲಿ ವಾಂತಿ ಬೇಧಿ ಕಂಡುಬಂದ ಪ್ರಯುಕ್ತ ಇಲಾಖೆಯಿಂದ ಹಲವಾರು ಕ್ರಮಗಳನ್ನು ತೆಗೆದುಕೊಂಡು ಗ್ರಾಮದಲ್ಲಿ ಕ್ಲಿನಿಕ್ ತೆರೆಲಾಗಿದ್ದು ವೈದ್ಯರನ್ನು ನಿಯೋಜಿಸಿ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದಲ್ಲಿ ಕರೆದೊಯಲು ಸ್ಥಳದಲ್ಲಿಯೇ ಆಂಬ್ಯಲೆನ್ಸ್ ವ್ಯವಸ್ಥೆ ಇರಿಸಲಾಗಿದೆ. ಊರಿನ ಎಲ್ಲಾ 450 ಮನೆಗಳನ್ನು ಸರ್ವೇ ಮಾಡಲಾಗಿ 12 ಮನೆಗಳಲ್ಲಿ ರೋಗಲಕ್ಷಣ ಇರುವುದು ಕಂಡುಬಂದಿದ್ದು ಅವರಿಗೆ ಚಿಕಿತ್ಸೆ ನೀಡಲಾಗಿದೆ. ಪ್ರಸ್ತುತ 9 ಜನರು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸಿಇಓ ಅವರಿಗೆ ಮಾಹಿತಿ ನೀಡಿದರು. ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಸಹ ಗ್ರಾಮಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗೂ ಇನ್ನೀತರರು ಇದ್ದರು…

ವರದಿ. ಬಸವರಾಜ್ ಕಳ್ಳಿಮರದ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
