ಕೊಪ್ಪಳ ರಜತ ಮಹೋತ್ಸವ ಮಹತ್ವದ ಸವಿನೆನಪು: ಕರಡಿ ಸಂಗಣ್ಣ ಬಣ್ಣನೆ
ಕೊಪ್ಪಳ ಜಿಲ್ಲಾ ರಜತ ಮಹೋತ್ಸವವು ನಮಗೆಲ್ಲರಿಗೂ ಸವಿನೆನಪಾಗಿ ಉಳಿಯುತ್ತದೆ ಎಂದು ಸಂಸದರಾದ ಕರಡಿ ಸಂಗಣ್ಣ ಅವರು ಬಣ್ಣಿಸಿದರು.
ಜಿಲ್ಲಾ ಕ್ರೀಡಾಂಗಣದ ಕೊಪಣಾಚಲ ವೇದಿಕೆಯಲ್ಲಿ ಮಾರ್ಚ 11ರಂದು ನಡೆದ ರಜತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನಿಸರ್ಗ ಉಳಿಸಿದಾಗ ಮಾತ್ರ ನಾವು ಬದುಕುತ್ತೇವೆ ಎಂದ ಅವರು, ನಮ್ಮ ಮನೆಗಳ ಮುಂದೆ ಸಸಿ ನೆಡೋಣ, ಸುಂದರ ಪರಿಸರ ನಿರ್ಮಾಣವು ನಮ್ಮ ಮನದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಶೈಕ್ಷಣಿಕ, ಕೈಗಾರಿಕಾ ಕ್ಷೇತ್ರಗಳ ಸುಧಾರಣೆಗೆ ಒತ್ತು ಕೊಡಲಾಗುತ್ತಿದೆ ಎಂದು ತಿಳಿಸಿದರು.
*ಊರ ಹಬ್ಬದ ಸಂಭ್ರಮ:* ಶಾಸಕರಾದ ಬಸವರಾಜ ಧಡೇಸಗೂರ ಅವರು ಮಾತನಾಡಿ, ಕೊಪ್ಪಳವು ಜಿಲ್ಲೆಯಾದ ಮೇಲೆ
ನಮ್ಮ ಮಕ್ಕಳು ಓದಿಗಾಗಿ ದೂರದ ಊರಿಗೆ ಹೋಗುವುದು ತಪ್ಪಿದೆ. ಕೊಪ್ಪಳ ಜಿಲ್ಲೆ ಆಗಬೇಕು ಅನ್ನುವ ನಮ್ಮ ಸಂಕಲ್ಪ ಈಡೇರಿ ಇಂದಿಗೆ 25 ವರ್ಷಗಳು ತುಂಬಿರುವುದು ಊರ ಹಬ್ಬದ ಸಂಭ್ರಮ ಆಗಿದೆ ನಮಗೆ ಎಂದರು.

ಮತ್ತಷ್ಟು ಸ್ಪೂರ್ತಿ ಬಂದಿದೆ:
ಇದಕ್ಕು ಮೊದಲು ಜಿಲ್ಲಾಧಿಕಾರಿಗಳಾದ ಎಂ ಸುಂದರೇಶಬಾಬು ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯ
ಜಿಲ್ಲಾ ರಚನಾ ಹೋರಾಟಗಾರರು, ಎಲ್ಲ ಜನಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳು, ವಕೀಲರು, ಪ್ರಾಧ್ಯಾಪಕರು, ವಿವಿಧ ಸಂಘ ಸಂಸ್ಥೆಗಳು, ಸಂಘಟನೆಗಳ ಪ್ರಮುಖರು, ವ್ಯಾಪಾರಸ್ಥರು, ಯುವ ಸಂಘಟನೆಗಳ ಪ್ರಮುಖರು ಮತ್ತು ಎಲ್ಲ ವರ್ಗದವರು ಉತ್ತಮ ಸಲಹೆ ಮತ್ತು ಸಹಕಾರ ನೀಡಿದ್ದರಿಂದ ಈ ಬೆಳ್ಳಿ ಹಬ್ಬವನ್ನು ಯಶಸ್ವಿಗೊಳಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು. ಈ ಉತ್ಸವಕ್ಕಾಗಿ ಹಲವಾರು ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಿದಂತೆ ಅತಿ ಕಡಿಮೆ ಅವಧಿಯಲ್ಲಿಯೇ ಎಲ್ಲ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಉತ್ಸವಕ್ಕೆ ಸಹಕರಿಸಿದ್ದಾರೆ. ಜನರು ಈ ಉತ್ಸವಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದು ನಮಗೆ ಮತ್ತಷ್ಟು ಸ್ಪೂರ್ತಿ ತುಂಬಿದೆ ಎಂದು ತಿಳಿಸಿದರು.
ಕೊಪ್ಪಳವು ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿರುವುದು ಕೊಪ್ಪಳ ಜಿಲ್ಲೆಯ ಇತಿಹಾಸದಲ್ಲಿ ಅವೀಸ್ಮರಣೀಯವಾಗಿದೆ. ಈ
ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ರಚನಾ ಹೋರಾಟಗಾರರನ್ನು ಸನ್ಮಾನಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಭಾವಿಸಿ ಜಿಲ್ಲಾ ರಚನಾ ಹೋರಾಟಗಾರರನ್ನು ಸನ್ಮಾನಿಸಿ ಗೌರವಿಸಿದ್ದೇವೆ. ಒಂದು ನಾಡಿನ ಏಳ್ಗೆಯ ವಿಷಯದಲ್ಲಿ ಆ ನೆಲದ ಕಲೆ ಸಾಹಿತ್ಯದ ಪಾತ್ರವು ಸಹ ಅಷ್ಟೇ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಯೋಚಿಸಿ ಉತ್ಸವದಲ್ಲಿ ಬಹುತೇಕ ಜಿಲ್ಲೆಯ ಎಲ್ಲಾ ಕಲಾವಿದರಿಗೆ ವೇದಿಕೆ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಸಾಹಿತಿಗಳು ಚಿಂತಕರಿಗೂ ವೇದಿಕೆ ಕಲ್ಪಿಸಲಾಗಿದೆ ಎಂದರು. ಕೊಪ್ಪಳ ಜಿಲ್ಲಾ ರಚನಾ ಹೋರಾಟಕ್ಕೆ ಅಂದು ಪ್ರತ್ಯಕ್ಷ ಸಾಕ್ಷಿಯಾಗಿದ್ದ ಪತ್ರಕರ್ತರ, ಪತ್ರಿಕಾರಂಗದ ಪಾತ್ರವನ್ನು ಸಹ ಸ್ಮರಿಸಲು 25 ವರ್ಷಗಳ ಹಿಂದಿನ ಪತ್ರಿಕಾ ತುಣುಕುಗಳ ಪ್ರದರ್ಶನಕ್ಕೆ ಏರ್ಪಾಡು ಮಾಡಲಾಗಿದೆ ಎಂದು ತಿಳಿಸಿದರು.

ಪ್ರತಿವರ್ಷ ಉತ್ಸವ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಜಿಲ್ಲೆಯಲ್ಲಿನ ಅನೇಕ ಪ್ರತಿಭೆಗಳಿಗೆ ಈ ಉತ್ಸವದಲ್ಲಿ ವೇದಿಕೆ ಒದಗಿಸಿದ ಸಂತಸ ನಮಗಿದೆ. ಜಿಲ್ಲೆಯ ಈ ರಜತ ಮಹೋತ್ಸವದ ಸಂಭ್ರಮವನ್ನು ಇನ್ಮುಂದೆ ಪ್ರತಿವರ್ಷ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಈ ನೆಲದ ಸಂಸ್ಕೃತಿ ಕಲೆಯನ್ನು ಪರಿಚಯಿಸುವ ಕಾರ್ಯವನ್ನು ನಾವು ನೀವು ಸೇರಿ ಮಾಡೋಣ ಎಂದು ತಿಳಿಸಿದರು.
ಸಮಾರಂಭದಲ್ಲಿ ಶಾಸಕರಾದ ಅಮರೇಗೌಡ ಪಾಟೀಲ ಬಯ್ಯಾಪುರ, ಹೇಮಲತಾ ನಾಯಕ,
ನಗರಸಭೆಯ ಅಧ್ಯಕ್ಷೆ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಾಂತೇಶ ಎಸ್ ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡೆ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ, ಸಹಾಯಕ ಆಯುಕ್ತರಾದ ಬಸವಣ್ಣಪ್ಪ ಕಲಶೆಟ್ಟಿ, ಕೊಪ್ಪಳ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಕಾವ್ಯರಾಣಿ, ಡಿಎಸ್ಪಿ ಶರಣಬಸಪ್ಪ ಸುಭೇದಾರ, ತಹಸೀಲ್ದಾರ ಅಮರೇಶ ಬಿರಾದಾರ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. ನಿವೃತ್ತ ಪ್ರಾಚಾರ್ಯರಾದ ಸಿ.ವಿ.ಜಡಿಯವರ ನಿರೂಪಿಸಿದರು..

ವರದಿ. ಸಂಗೀತ ಪಾಟೀಲ್, ಕೊಪ್ಪಳ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
