ಫೆಬ್ರವರಿ ೦೭ ಮಹಾ ಮಾತೆ ಶ್ರೀಮತಿ ರಮಾಬಾಯಿ ಅಂಬೇಡ್ಕರ್ ಅವರ ಜನ್ಮದಿನದ ಶುಭಾಶಯಗಳು…!!!

ಫೆಬ್ರವರಿ ೦೭ ಮಹಾ ಮಾತೆ ಶ್ರೀಮತಿ ರಮಾಬಾಯಿ ಅಂಬೇಡ್ಕರ್ ಅವರ ಜನ್ಮದಿನದ ಶುಭಾಶಯಗಳು

“ಪ್ರತಿಯೊಬ್ಬ ಪುರುಷನ ಯಶಸ್ವಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ” ಎಂಬ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಅಂತೆಯೇ ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ ಯಶಸ್ವಿನ ಹಿಂದೆ ಪತ್ನಿ ರಮಾಬಾಯಿಯವರ ತ್ಯಾಗ ಎದ್ದು ಕಾಣುತ್ತದೆ. ಬಹುಶಃ ರಮಾಬಾಯಿಯವರ ಸ್ಥಾನದಲ್ಲಿ ಬೇರೆ ಮಹಿಳೆ ಇದ್ದಿದ್ದರೆ ಡಾ. ಅಂಬೇಡ್ಕರ್ ರವರು ಈ ಮಟ್ಟದ ಮಹಾನ್ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅನಕ್ಷರಸ್ಥೆಯೂ,ಮುಗ್ಧೆಯೂ, ಶೀಲವಂತೆಯೂ ಹಾಗೂ ತ್ಯಾಗಮಯಿಯೂ ಆದ ಶ್ರೀಮತಿ ರಮಾಬಾಯಿಯವರು ತನ್ನ ಪತಿ ಬಾಬಾಸಾಹೇಬ್ ಅಂಬೇಡ್ಕರ್ ರವರು ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡುವಾಗ, ನಂತರ ಭಾರತದಲ್ಲಿ ಶೋಷಿತರ ಪರ ಬೃಹತ್ ಹೋರಾಟ ನಡೆಸುವಾಗ ಒಬ್ಬ ಹೆಣ್ಣು ಸಹಜವಾಗಿ ಬಯಸುವ ಸಂಸಾರ ಸುಖಗಳನ್ನು ಹಾಗೂ ಶ್ರೀಮಂತಿಕೆ ಜೀವನ ಶೈಲಿಯನ್ನು ಎಂದೂ ಬಯಸದೆ ಗಂಡನ ಏಳಿಗೆಗಾಗಿ, ಗಂಡನ ಸಂತೋಷಕ್ಕಾಗಿ, ಪತಿಯು ನಡೆಸುತ್ತಿದ್ದ ದಣಿವಿಲ್ಲದ ಹೋರಾಟಗಳಿಗಾಗಿ ಬಡತನದ ಹಾಗೂ ಸಂಕಷ್ಟದ ಜೀವನದಲ್ಲೇ ಬದುಕು ನಡೆಸಿದ ಪತ್ನಿ. ಈ ಬಗ್ಗೆ ಸ್ವತಃ ಡಾ.ಅಂಬೇಡ್ಕರ್ ರವರೇ ಲಂಡನ್ನಿನಲ್ಲಿ ನಡೆದ* *ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿದ್ದ ಸಮಯದಲ್ಲಿ ದಿನಾಂಕ ೩೦/೧೨/೧೯೩೦ ರಂದು ಪತ್ನಿ ರಮಾಬಾಯಿಗೆ ಬರೆದ ಪತ್ರದಲ್ಲಿ ಈ ರೀತಿ ತಿಳಿಸಿದ್ದಾರೆ”*

*”ರಮಾ, ನೀನು ನನ್ನ ಬದುಕಿನಲ್ಲಿ ಬರದೇ ಹೋಗಿದ್ದರೆ.. ..? ನೀನು ನನ್ನ ಮನಸಾಕ್ಷಿಯಾಗಿ ನನ್ನ ಬಾಳಿನಲ್ಲಿ ಬರದೇ ಹೋಗಿದ್ದರೆ.. ..? ಏನಾಗಬಹುದಿತ್ತು.. ..? ಕೇವಲ ಸಂಸಾರ ಸುಖವನ್ನೇ ಧ್ಯೇಯವಾಗಿರಿಸಿಕೊಂಡಿರುತ್ತಿದ್ದ ಹೆಣ್ಣು ನನ್ನನ್ನು ಬಿಟ್ಟು ಎಂದೋ ಹೋಗಿರುತ್ತಿದ್ದಳು! ಅರ್ಧ ಹೊಟ್ಟೀಲೆ ಇರುವುದು, ಬೆರಣಿ ತಟ್ಟುವುದು, ಒಣಗಿದ ಸೌದ ಆರಿಸುವುದು ಯಾರಿಗಾದರೂ ಇಷ್ಟವಾಗುತ್ತಿತ್ತೇ? ಅಡುಗೆಯ ಉರುವಳಿಗಾಗಿ ಅಡ್ಡಾಡುವುದನ್ನು ಯಾರು ತಾನೆ ಇಷ್ಟ ಪಡುತ್ತಾರೆ? ಮುರಿದ ಮನೆಗೆ ತೇಪೆ ಹಚ್ಚುವುದು, ಹರಿದ ಬಟ್ಟೆಗಳನ್ನು ಹೊಲೆಯುವುದು, ಒಂದರೆಡು ಬೆಂಕಿಪೊಟ್ಟಣದಲ್ಲೇ ತಿಂಗಳನ್ನು ಕಳೆಯುವುದು, ಒಂದಿಷ್ಟು ಕಾಳು, ಒಂದಿಷ್ಟು ಎಣ್ಣೆ, ಉಪ್ಪು, ಖಾರಗಳಿಂದಲೇ ಜೀವನ ನಡೆಸುವ ಬಡತನದ ಬದುಕು ಅವಳಿಗೆ ರುಚಿಸದೇ ಇದ್ದಿದ್ದರೆ? ನನ್ನ ಮನಸ್ಸು ಒಡೆದು ಹೋಗಿರುತ್ತಿತ್ತು! ನನ್ನ ಹಠಕ್ಕೆ ಎಂದೋ ಕಡಿವಾಣ ಬಿದ್ದಿರುತ್ತಿತ್ತು! ನನ್ನ ಕನಸೇ ನುಚ್ಚು ನೂರಾಗುತ್ತಿತ್ತು! ಎಲ್ಲವೂ ಮನಸ್ತಾಪದಲ್ಲಿಯೇ ಕೊನೆಯಾಗುತ್ತಿತ್ತು! ನನ್ನ ಸ್ವರದಲ್ಲಿ ಎಂದೋ ಅಪಸ್ವರ ಮೂಡುತ್ತಿತ್ತು! ರಮಾ, ನಾನೂ ನಿಜವಾಗಿಯೂ ಒಣಗಿದ ತರಗೆಲೆಯಾಗಿ ಗಾಳಿ ಬಂದತ್ತ ತೂರಿ ಹೋಗುತ್ತಿದ್ದೆ.*

*ಆದರೆ ನೀನು ನನ್ನ ಮನಸ್ಸಿಗೆ ಸಾರಥಿಯಾಗಿ ಬಂದೆ. ಕಷ್ಟ, ಬಡತನಕ್ಕೆ ಬೆದರದ ಬಲವನ್ನು ನನಗೆ ನೀನು ನೀಡಿಡೆ. ನನ್ನ ಕನಸಿಗೆ ರೆಕ್ಕೆ, ಪುಕ್ಕ ಮೂಡಿಸಿದಾಕೆ ನೀನೇ ರಮಾ! ನನ್ನ ಮನಸ್ಸಿನಲ್ಲಿ ಹೊಸ ಹೊಸ ದಿನಗಳು ಬೆಳಗಾಗತೊಡಗಿದವು. ನನ್ನ ಹೆಜ್ಜೆ ಮತ್ತಷ್ಟು ನಿರ್ಭಯವಾಯಿತು. ನನ್ನ ನಡೆಯಲ್ಲಿ ಗಂಭೀರತೆ ಬಂತು.”*

*ರಮಾಬಾಯಿಯವರ ಚಿಕ್ಕಂದಿನ ಜೀವನ*

*ಮಹಾರಾಷ್ಟ್ರದ ‘ದಾಪೋಲಿ’ ಎಂಬ ಸಣ್ಣ ಪಟ್ಟಣದ ಪಕ್ಕದಲ್ಲಿದ್ದ ‘ವಣಂದಗಾವ್’ ಎಂಬ ಒಂದು ಹಳ್ಳಿಯಲ್ಲಿ ವಾಸವಾಗಿದ್ದ ‘ಭಿಕೂ ವಾಲಂಕರ್’ ಮತ್ತು ‘ರುಕ್ಮಿಣಿ’ ಎಂಬ ದಂಪತಿಗಳಿಗೆ ಮೀರಾ, ರಮಾ,ಗೌರಿ,ಎಂಬ ಮೂರು ಹೆಣ್ಣುಮಕ್ಕಳು ಹಾಗೂ ಶಂಕರ ಎಂಬ ಒಂದು ಗಂಡು ಮಗು, ಒಟ್ಟು ನಾಲ್ಕು ಮಕ್ಕಳುಗಳಿದ್ದವು. ಈ ನಾಲ್ಕು ಜನ ಮಕ್ಕಳುಗಳಲ್ಲಿ ‘ರಮಾ’ ಎಂಬ ಹೆಣ್ಣು ಮಗು ಎರಡನೆ ಮಗುವಾಗಿತ್ತು. ‘ರಮಾ’ ಹುಟ್ಟಿದ್ದು ೧೮೯೭ರಲ್ಲಿ ಚಿಕ್ಕಂದಿನಲ್ಲಿ ‘ ರಮಾ’ಳನ್ನು ‘ರಾಮಿ’ ಎಂದು ಕರೆಯುತ್ತಿದ್ದರು. ಮುಂದೆ ‘ರಮಾ’ಳ ಮದುವೆಯ ಸಂದರ್ಭದಲ್ಲಿ* *’ರಮಾಬಾಯಿ’* *ಎಂದು ಹೆಸರು ಬದಲಾಯಿಸಲಾಯಿತು.ಮದುವೆಯ ನಂತರ ಡಾ. ಅಂಬೇಡ್ಕರ್ ಅವರ ಪತ್ನಿ ‘ರಮಾಬಾಯಿ’ ಯನ್ನು ಪ್ರೀತಿಯಿಂದ ‘ರಾಮೂ’ ಎಂದು ಕರೆಯುತ್ತಿದ್ದರು.*

*ರಮಾಬಾಯಿಯವರ ತಂದೆ ತಾಯಿಗಳಾದ ಬಿಕೂವಾಲಂಕರ ಮತ್ತು ರುಕ್ಮಿಣಿಯವರು ಕೆಲಸ ಮಾಡುತ್ತಿದ್ದರು.* *ಬಿಕೂವಾಲಂಕರರವರು ದಾಪೋಲಿ ಪಟ್ಟಣದಲ್ಲಿ ಮುಟೆಗಳನ್ನು ಹೊರುವ ಕೂಲಿ ಕೆಲಸ ಮಾಡುತ್ತಿದ್ದರು. ಕಿತ್ತು ತಿನ್ನುವ ಬಡತನದ ಜೊತೆ ತಮ್ಮ ನಾಲ್ಕು ಮಕ್ಕಳ ಸಂಸಾರವನ್ನು ಸಾಗಿಸಲು ಈ ದಂಪತಿಗಳು ಬಿಡುವಿಲ್ಲದೆ ದುಡಿಯುತ್ತಿದ್ದರು. ಒಂದು ದಿನ ಕೂಲಿಗೆ ಹೋಗಿದಿದ್ದರೆ ಆ ದಿನ ನಾಲ್ಕು ಮಕ್ಕಳ ಜೊತೆ ಈ ದಂಪತಿಗಳು ಹಸಿದ ಹೊಟ್ಟೆಯಲ್ಲೇ ಇರಬೇಕಾಗಿತ್ತು. ಹಿರಿಯ ಮಗಳಾದ ‘ಮೀರ’ಳನ್ನು ‘ದಾಪೋಲಿ’ಯಲ್ಲೇ ವಾಸವಾಗಿದ್ದ ‘ವರ’ನ ಜೊತೆ ಮದುವೆ ಮಾಡಿದರು. ನಂತರ ಮೂರು ಮಕ್ಕಳುಗಳು ಈ ದಂಪತಿಗಳ ಜೊತೆ ಉಳಿದುಕೊಂಡರು.ಬಿಡುವಿಲ್ಲದ ದುಡಿಮೆಯಿಂದ ನಿತ್ರಾಣಗೊಂಡಿದ್ದ ರುಕ್ಮಿಣಿ (ರಮಾಬಾಯಿ ತಾಯಿ) ರಮಾಬಾಯಿ ಐದು ವರ್ಷದ ಮಗುವಾಗಿದ್ದಾಗ ತೀರಿಕೊಂಡರು. ಇದಾದ ಎರಡು ವರ್ಷಗಳಲ್ಲೇ ರಮಾಬಾಯಿಯವರ ತಂದೆ ಭಿಕೂವಾಲಂಕರ ಎದೆ ನೋವಿನಿಂದ ಬಳಲಿ ನಿಧನರಾದರು. (ದಿನವೆಲ್ಲಾ ಭಾರವಾದ ಮೂಟೆಗಳನ್ನು ಹೊರುತ್ತಿದ್ದ ಇವರು ಎದೆ ನೋವಿನಿಂದ ಬಳಲುತ್ತಿದ್ದರು. ಇವರು ನಿಧನರಾಗುವ ದಿನ ಎದೆನೋವು ವಿಪರೀತಕ್ಕೆ ಹೋಗಿ ರತ್ತ ಕಕ್ಕಿ ಸಾವನ್ನಪ್ಪಿದರು.) ಇದರಿಂದಾಗಿ ರಮಾಬಾಯಿ ತನ್ನ ೭ನೇ ವಯಸ್ಸಿಗೆ ತಂದೆ ತಾಯಿಗಳನ್ನು ಕಳೆದುಕೊಂಡ ತಬ್ಬಲಿ ಮಗುವಾದರು. ಭಿಕೂವಾಲಂಕರ ತೀರಿಕೊಂಡಾಗ ಅವರ ಶವ ಸಂಸ್ಕಾರ ನಡೆಸಲು ಬಂದ ಬಿಕೂವಾಲಂಕರ ರವರ ಅಣ್ಣ ‘ಧುತ್ರೆ’ ತಂದೆಯ ಶವದ ಮುಂದೆ ಅ‌ನಾಥವಾಗಿ ನಿಂತು ಅಳುತ್ತಿದ್ದ ಈ ಮೂರು ಮಕ್ಕಳನ್ನು ಸಂತೈಸಿ, ತಮ್ಮನಾದ ಬಿಕೂವಾಲಂಕರನ ಶವಸಂಸ್ಕಾರದ ವಿಧಿ ವಿಧಾನಗಳನ್ನು ಹಾಗೂ ತಿಥಿ ಕಾರ್ಯವನ್ನು ಮುಗಿಸಿ, ಈ ಮೂರು ಮಕ್ಕಳನ್ನು ಸಾಕಲು ತನ್ನ ಜೊತೆ ‘ಮುಂಬೈ’ ನಗರಕ್ಕೆ ಕರೆದಿಕೊಂಡು ಹೋದರು. ‘ಧತ್ರೆ’ಯವರು ಸೈನ್ಯದಲ್ಲಿದ್ದು ನಿವೃತ್ತರಾಗಿದ್ದರು. ಅಂದು ನಿವೃತ್ತರಾದ ಮೇಲೆ ನಿವೃತ್ತಿ ವೇತನ ನೀಡುತ್ತಿರಲಿಲ್ಲ. ಹಾಗಾಗಿ ತನ್ನ ಸಂಸಾರ ನೀಗಿಸಲು ‘ಧತ್ರೆ’ ಯವರು ತನ್ನ ಇಳಿವಯಸ್ಸಿನಲ್ಲೂ ಮುಂಬೈನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಇವರು ಮುಂಬೈನ ಬೈಕಳ ಎಂಬ ಮೀನು ಮಾರುಕಟ್ಟೆಯ ಹತ್ತಿರದಲ್ಲಿರುವ ಚಾಳಿನಲ್ಲಿ ವಾಸವಾಗಿದ್ದರು. ಇಲ್ಲಿ ತನ್ನ ಮಕ್ಕಳ ಜೊತೆ ಈ ಮೂರು ಮಕ್ಕಳನ್ನು ಸಾಕತೊಡಗಿದರು. ಆದರೆ ಈ ಮೂರು ಮಕ್ಕಳಲ್ಲಿ ಯಾರನ್ನೂ ಸಹ ಶಾಲೆಗೆ ಸೇರಿಸಲು ಸಾಧ್ಯವಾಗಲಿಲ್ಲ. ಜೀವನ ನಡೆಸುವುದೇ ಕಷ್ಟ ಇನ್ನೂ ಶಾಲೆಗೆ ಸೇರಿಸಿ ಓದಿಸಲು ಸಾಧ್ಯವೆ..?*

*ಪರಿಚಯಸ್ಥರ ಕಡೆಯಿಂದಾಗಿ ಅಂಬೇಡ್ಕರ್ ರವರ ತಂದೆ ರಾಮಜಿ ಸಕ್ಪಾಲ್ ಮತ್ತು ರಮಾಬಾಯಿಯವರ ದೊಡ್ಡಪ್ಪ ‘ಧುತ್ರೆ’ ಯವರ ನಡುವೆ ತಮ್ಮ ಮಕ್ಕಳ ಮದುವೆ ಬಗ್ಗೆ ಮಾತುಕತೆಗಳು ನಡೆದು ರಾಮ್ ಜಿ ಸಕ್ಪಾಲರು ‘ರಮಾಬಾಯಿ’ಯನ್ನು ಮನೆಗೆ ಹೋಗಿ ನೋಡಿದರು. ರಮಾಬಾಯಿಯು ಅನಕ್ಷರಸ್ಥೆಯಾದರು ಸಹ ಗುಣವಂತೆಯಾಗಿದ್ದಳು. ಕಡುಬಡತನದಲ್ಲೇ ಬೆಳೆದಿದ್ದುದರಿಂದ ಬಡತನದ ಜೀವನಕ್ಕೆ ಸಹಜವಾಗಿಯೇ ಹೊಂದಿಕೊಳ್ಳುವ ಹುಡುಗಿಯಾಗಿದ್ದಳು.ಹುಡುಗಿಯನ್ನು ನೋಡಿ ಒಪ್ಪಿಕೊಂಡ ರಾಮಜಿ ಸಕ್ಪಾಲರು ಕೊನೆಗೆ ತನ್ನ ಮಗನಿಗೆ(ಅಂಬೇಡ್ಕರ್ ರಿಗೆ) ೧೯೦೬ರಲ್ಲಿ ರಮಾಬಾಯಿಯ ಜೊತೆ ವಿವಾಹ ಮಾಡಿದರು. ವಿವಾಹ ನಡೆದಾಗ ಅಂಬೇಡ್ಕರ್ ರವರಿಗೆ ೧೬ ವರ್ಷ. ಆಗ ಅಂಬೇಡ್ಕರ್ ೯ನೇ ತರಗತಿ ಓದುತ್ತಿದ್ದರು. ರಮಾಬಾಯಿಗೆ ೯ ವರ್ಷ. ಅಂಬೇಡ್ಕರ್ ಮತ್ತು ರಮಾಬಾಯಿಯವರ ವಿವಾಹವು ಮುಂಬೈನ ಬೈಕಳ ಎಂಬ ಮೀನು ಮಾರುಕಟ್ಟೆಯಲ್ಲಿ ಮೀನು ಮಾರುವ ಒಂದು ಕಟ್ಟೆಯ ಮೇಲೆ ರಾತ್ರಿ ಹೊತ್ತು ನೆರವೇರಿರು. ಏಕೆಂದರೆ ಹಗಲಿನಲ್ಲಿ ಆ ಜಾಗವನ್ನು ತೊಳೆದು ಸ್ವಚ್ಚಗೊಳಿಸಿ ಕೊಡಲಾಯಿತು.*

*ಈ ಮೀನು ಮಾರುಕಟ್ಟೆಗೆ ಸೂರು ಇರಲಿಲ್ಲ. ಇದೊಂದು ಬಯಲು ಮಾರುಕಟ್ಟೆಯಾಗಿತ್ತು. ಅಲ್ಲಿ‌ದ ಕಲ್ಲುಗಳೇ ಮದುವೆಗೆ ಬಂದಿದ್ದ ಜನರಿಗೆ ಕುರ್ಚಿಗಳಾದ್ದವು. ಮೀನು ಮಾರುವ ಜಗುಲಿಯೇ ಮದುವೆ ಮಂಟಪವಾಗಿತ್ತು. ಮದುವೆಗೆ ಬಂದಿದ್ದ ಜನಗಳ ಕಾಲಡಿ ಕೊಳಚೆ ನೀರು ಹರಿಯುತ್ತಿತ್ತು.*

*ಕಡು ಬಡತನದ ಕುಟುಂಬದಲ್ಲಿ ಹುಟ್ಟಿದ ‘ರಮಾಬಾಯಿ’* *ಚಿಕ್ಕ ವಯಸ್ಸಿನಲ್ಲೇ ತನ್ನ ತಂದೆ ತಾಯಿಗಳನ್ನು ಕಳೆದುಕೊಂಡು ಆನಾಥೆಯಾದರು. ನಂತರ ತನ್ನ ದೊಡ್ಡಪ್ಪ ಮತ್ತು ದೊಡ್ಡಮ್ಮನವರ ಮನೆಯಲ್ಲಿ ಬಡತನದಲ್ಲಿಯೇ ಬೆಳೆದ ಇವರು ಡಾ.ಅಂಬೇಡ್ಕರ್ ರವರನ್ನು ಮದುವೆಯಾದ ಮೇಲೆಯೂ ಸಹ ಬಡತನದ ಜೀವನವನ್ನೇ ನಡೆಸಿದರು. ಪತಿ ಡಾ.ಅಂಬೇಡ್ಕರ್ ರವರು ವಿದೇಶಗಳಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುವಾಗ, ಇಲ್ಲಿ ಬೆರಣಿ ತಟ್ಟಿ ಮಾರಾಟ ಮಾಡಿ ತನ್ನ ಮಕ್ಕಳನ್ನು ಸಾಕಿಕೊಂಡು ಸಂಕಷ್ಟದ ಜೀವನ ನಡೆಸುತ್ತಿದ್ದರು. ಮಹಾನ್ ಶೀಲವಂತೆಯಾಗಿದ್ದ ರಮಾಬಾಯಿಯವರು ತನ್ನ ಪತಿಯ ಏಳಿಗೆಗಾಗಿ ತನ್ನ ಇಡಿ ಬದುಕನ್ನೇ ತ್ಯಾಗ ಮಾಡಿದ್ದರು‌ ತನ್ನ ಇಡೀ ಸಾಂಸಾರಿಕ ಜೀವನದಲ್ಲಿ ಅಂಬೇಡ್ಕರ್ ರವರ ಮನಸ್ಸಿಗೆ ಒಂದೇ ಒಂದು ಕ್ಷಣ ಬೇಜಾರು ಮಾಡಲಿಲ್ಲ. ಒಂದೇ ಒಂದು ಕ್ಷಣ ನೋವುಂಟುಮಾಡಲಿಲ್ಲ. ಅವರ ಮುಂದೆ ಯಾವ ಬೇಡಿಕೆಯನ್ನು ಇಡಲಿಲ್ಲ. ಅಂಬೇಡ್ಕರ್ ರವರು ಏನೆಲ್ಲಾ, ಎಷ್ಟೆಲ್ಲಾ ಓದಿದ್ದಾರೆ ಎಂದು ಇವರಿಗೆ ಗೊತ್ತಿರಲಿಲ್ಲ. ಆದರೆ ನನ್ನ ಪತಿ ದೊಡ್ಡ ವಿದ್ಯಾವಂತರಾಗಿದ್ದಾರೆ. ಎಂದುಷ್ಟೇ ಗೊತ್ತಿತ್ತು. ಅಂಬೇಡ್ಕರ್ ರವರು ಯಾವ ಯಾವ ವಿಷಯಗಳಿಗಾಗಿ ಹೋರಾಡುತ್ತಿದ್ದಾರೆ ಎಂಬುದು ತಿಳಿದಿರಲಿಲ್ಲ. ಆದರೆ ನನ್ನ ಪತಿ ಬಡವರಿಗಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಗೊತ್ತಿತ್ತು.*

*ಶಾಲನ್ನೇ ಸೀರೆಯನ್ನಾಗಿ ಉಟ್ಟ ಮಾತೆ ರಮಾಬಾಯಿ*

*ಡಾ. ಅಂಬೇಡ್ಕರ್ ರವರು ಲಂಡನ್ನಿನಲ್ಲಿ ‘ ಬಾರ್ -ಅಟ್-ಲಾ’ ಪದವಿ ಮುಗಿಸಿ ದಿನಾಂಕ 03/04/1923 ರಂದು ಭಾರತಕ್ಕೆ ಹಡಗಿನ ಮೂಲಕ ಬಂದರು. ಆ ದಿನ ಡಾ. ಅಂಬೇಡ್ಕರ್ ರವರನ್ನು ಅದ್ದೂರಿಯಾಗಿ* *ಬರಮಾಡಿಕೊಳ್ಳಲು ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಮುಂಬೈನ ಹಡಗು ನಿಲ್ದಾಣದಲ್ಲಿ ಸೇರಿದ್ದರು. ಅಂದು ಅಂಬೇಡ್ಕರ್ ರವರನ್ನು ಹಣೆಗೆ ತಿಲಕವಿಟ್ಟು , ಆರತಿ ಬೆಳಗಿಸಿ ಸ್ವಾಗತಿಸಲು ಅಂಬೇಡ್ಕರ್ ಅವರ ಪತ್ನಿ ರಮಾಬಾಯಿಯವರು ಚಡಪಡಿಸುತ್ತಿದ್ದರು! ಏಕೆಂದರೆ ರಮಾಬಾಯಿಯವರ ಹತ್ತಿರ ಉಡಲು ಒಂದು ಒಳ್ಳೆಯ ಸೀರೆ ಇರಲಿಲ್ಲ. ಅವರ ಬಳಿ ಇದ್ದ ಎರಡೂ ಸೀರೆಗಳು ಹರಿದ ಸೀರೆಗಳಾಗಿದ್ದವು. ಕೆಲವು ವರ್ಷಗಳ ಹಿಂದೆ ಶಾಹು ಮಹಾರಾಜರು ಒಂದು ಸಮಾರಂಭದಲ್ಲಿ ಜರಿ ಅಂಚಿನ ಕೆಂಪು ಬಣ್ಣದ ಒಂದು ದೊಡ್ಡ ಶಾಲನ್ನು ಅಂಬೇಡ್ಕರ್ ರವರಿಗೆ ಹೊದಿಸಿ ಸನ್ಮಾನ ಮಾಡಿದ್ದರು. ಆ ಶಾಲನ್ನು ಅಂಬೇಡ್ಕರ್ ರವರು ಒಂದು ಟ್ರಂಕಿನಲ್ಲಿ ಜೋಪಾನವಾಗಿ ಇಟ್ಟಿದ್ದರು. ಈ ಶಾಲನ್ನು ರಮಾಬಾಯಿಯವರು ಟ್ರಂಕಿನಿಂದ ಹೊರತೆಗೆದು ಆ ಶಾಲನ್ನೇ ಸೀರೆಯಾಗಿ ಉಟ್ಟುಕೊಂಡು ಬಂದು ಪತಿಯ ಹಣೆಗೆ ತಿಲಕವಿಟ್ಟು, ಆರೈಕೆ ಬೆಳಗಿಸಿ ಸ್ವಾಗತಿಸಿದರು. ಆಗ ಅಲ್ಲಿದ್ದ ಯಾರಿಗೂ ಸಹ ಇದು ಸೀರೆಯಲ್ಲ, ಶಾಲು ಎಂದು ಪತ್ತೆ ಮಾಡಲಾಗಲಿಲ್ಲ . ಆದರೆ ಅಂಬೇಡ್ಕರ್ ರವರು ಮಾತ್ರ ರಮಾಬಾಯಿ ಧರಿಸಿರುವ ಸೀರೆಯು ಶಾಹು ಮಹಾರಾಜರು ನನಗೆ ಸನ್ಮಾನಿಸಿದ್ದ ಶಾಲು ಎಂದು ಪತ್ತೆ ಹಚ್ಚಿ, ನಾನು ಹೊರ ದೇಶಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ರಮಾಬಾಯಿ ಇಲ್ಲಿ ಅನುಭವಿಸಿದ ಹಣಕಾಸಿನ ತೊಂದರೆಯನ್ನು ಕಲ್ಪಿಸಿಕೊಂಡು ಕಣ್ಣೀರು ಸುರಿಸಿದರು. ಭಾರತದ ಕೋಟಿ ಕೋಟಿ ಮಹಿಳೆಯರು ಇಂದು ಗೌರವಯುತವಾದ ಸುಖವಾದ ಜೀವನ ನಡೆಸಲು ಕಾರಣರಾದ ಡಾ. ಅಂಬೇಡ್ಕರ್ ರವರ ಪತ್ನಿಯ ಪರಿಸ್ಥಿತಿ ಹೇಗಿತ್ತು ನೋಡಿ! ಇದು ಒಂದು ಉದಾಹರಣೆ ಅಷ್ಟೇ.* *ರಮಾಬಾಯಿಯವರು ಅನುಭವಿಸಿದ ಇಂತಹ ಹಲವಾರು ಆರ್ಥಿಕ ಸಂಕಷ್ಟಗಳನ್ನು ನೋಡಬಹುದು.* *ರಮಾಬಾಯಿಯವರು ತನ್ನ ಪತಿಯ ವಿದ್ಯಾಭ್ಯಾಸಕ್ಕಾಗಿ ನಂತರ ಅವರ ಹೋರಾಟಗಳಿಗಾಗಿ ಬಡತನ ಮತ್ತು ಸಂಕಷ್ಟಗಳನ್ನು ಅನುಭವಿಸಿ ತ್ಯಾಗ ಮಾಡದೆ ಮಹಿಳೆಯರು ಸಹಜವಾಗಿ ಬಯಸುವ ಸುಖ ಮತ್ತು ಶ್ರೀಮಂತಿಕೆ ಜೀವನವನ್ನು ಬೆನ್ನು ಹತ್ತಿದ್ದರೆ ಅಂಬೇಡ್ಕರ್ ರವರು ಅಷ್ಟೊಂದು ಸಾಧನೆಗಳನ್ನು ಮಾಡಲು ಮತ್ತು ಕೋಟ್ಯಾನುಕೋಟಿ ಧಮನಿತರನ್ನು ವಿಮೋಚನೆ ಮಾಡಲು ಖಂಡಿತ ಸಾಧ್ಯವಿರುತ್ತಿರಲಿಲ್ಲ..

ಈ ಮಹಾಮಾತೆ ಜನ್ಮದಿನದಂದು ಕೋಟಿ ಕೋಟಿ ನಮನಗಳು.

ವರದಿ. ಪ್ರತಾಪ್. ಸಿ. ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend