ರಂಗ ಒಕ್ಕಲು ಟ್ರಸ್ಟ್ ನಿಂದ ಮೂರು ದಿನಗಳ ಕನ್ನಡ ಕಾವ್ಯ ಓದು ಅಭಿಯಾನ
ಹೂವಿನಹಡಗಲಿ: ತಾಲ್ಲೂಕಿನ ಹುಗಲೂರು ಗ್ರಾಮದ ರಂಗ ಒಕ್ಕಲು ಟ್ರಸ್ಟ್ ವತಿಯಿಂದ ಹೂವಿನಹಡಗಲಿಯ ಪದ್ಯ ಬಳಗದ ಸಹಯೋಗದೊಂದಿಗೆ ಆಯ್ದ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕನ್ನಡ ಕಾವ್ಯ ಓದು ಅಭಿಯಾನ ಆಯೋಜಿಸಲಾಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷ, ರಂಗಕರ್ಮಿ ಅಜಯ್ ಚಲವಾದಿ ತಿಳಿಸಿದರು.
ಹೂವಿನಹಡಗಲಿಯ ಜಿ. ಬಿ. ಆರ್. ಕಾಲೇಜಿನಲ್ಲಿ 28 ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಕ್ಕಿ ಶಿವಕುಮಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕನ್ನಡ ಭಾಷಾ ಪರಿಣಿತ ಪ್ರಭು ಸೊಪ್ಪಿನ ಹಾಗೂ ಪ್ರಶಸ್ತಿ ಪುರಸ್ಕೃತ ಕವಿ ರಾಮಪ್ಪ ಕೋಟಿಹಾಳ ಉಪನ್ಯಾಸ ನೀಡಲಿದ್ದು ನಂತರ ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧೆ ಕನ್ನಡ ಕಾವ್ಯ ವಾಚನ ಸ್ಪರ್ಧೆ ನಡೆಯಲಿದೆ.
28 ರಂದು ಹೂವಿನಹಡಗಲಿಯ ಎಸ್ ಆರ್ ಎಂ ಪಿ ಪಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಂ ವಿಜಯಕುಮಾರ್ ಹೇಮಪ್ಪ ವಹಿಸಲಿದ್ದಾರೆ. ಜಿ. ಬಿ. ಆರ್. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವೈ ಚಂದ್ರಬಾಬು ಹಾಗೂ ಜಿ. ಪಿ. ಜಿ ಸರ್ಕಾರಿ ಪಿಯು ಕಾಲೇಜಿನ ಇತಿಹಾಸ ಉಪನ್ಯಾಸಕ ಶಂಕರ್ ಬೆಟಗೇರಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದ ಸಮಾರೋಪ ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜಿನಲ್ಲಿ ನಡೆಯಲಿದ್ದು, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮ ಕಲ್ಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಚಾರ್ಯ ಶಾಂತಮೂರ್ತಿ ಕುಲಕರ್ಣಿ ಸಮಾರೋಪ ಭಾಷಣ ಮಾಡಲಿದ್ದು ಹೂವಿನಹಡಗಲಿಯ ಎಸ್ ಆರ್ ಎಂ ಪಿ ಪಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಬಸವರಾಜ್ ಹೆಬ್ಬಾಳ ಉಪನ್ಯಾಸ ನೀಡಲಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಪದವಿ ವಿದ್ಯಾರ್ಥಿಗಳಲ್ಲಿ ಕನ್ನಡ ಕಾವ್ಯದ ರುಚಿ ಹಚ್ಚುವ ಕೆಲಸ ಇದಾಗಿದೆ ಎಂದು ಅಜಯ್ ತಿಳಿಸಿದರು…

ವರದಿ. ಅಜಯ್ ಛಲವಾದಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
