;

ಯುವ ಮಹಿಳಾ ಮತದಾರರು ಹೆಸರು ಸೇರ್ಪಡೆ ಮಾಡಲು ಡಿ.ಸಿ. ಮನವಿ…!!!

ಯುವ ಮಹಿಳಾ ಮತದಾರರು ಹೆಸರು ಸೇರ್ಪಡೆ ಮಾಡಲು ಡಿ.ಸಿ. ಮನವಿ
ಕಲಬುರಗಿ ಜಿಲ್ಲೆಯಲ್ಲಿ 1,000 ಯುವ ಪುರುಷರ ಎದುರಾಗಿ 626 ಯುವ ಮಹಿಳಾ ಮತದಾರರು ಮಾತ್ರ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು ಕರಡು ಪಟ್ಟಿಯಲ್ಲಿ ಕಂಡುಬಂದಿದೆ. ಹೀಗಾಗಿ ಅರ್ಹ ಯುವ ಮಹಿಳಾ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಮನವಿ ಮಾಡಿದ್ದಾರೆ.

ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023 ಅಂಗವಾಗಿ ಕರಡು ಮತದಾರರ ಪಟ್ಟಿ ಪ್ರಕಟ ಕುರಿತು ವಿವರಿಸಲು ಬುಧವಾರ ತಮ್ಮ ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 1024 ಮತಗಟ್ಟೆಯಲ್ಲಿ ಯುವ ಮಹಿಳಾ ಮತದಾರರ ನೋಂದಣಿ ಕಡಿಮೆ ಇದೆ. ಅರ್ಹ ಯುವ ಮಹಿಳಾ ಮತದಾರರು ಹೆಸರು ನೋಂದಾಯಿಸಲು ವಿಶೇಷ ಗಮನಹರಿಸಲಾಗುವುದು. ಇದಲ್ಲದೆ ತೃತೀಯ ಲಿಂಗಿಗಳು ಮತ್ತು ಲೈಂಗಿಕ ಕಾರ್ಯಕರ್ತೆಯರನ್ನು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಈ ಬಾರಿ ವಿಶೇಷ ಆಸಕ್ತಿ ವಹಿಸಲಾಗುತ್ತಿದೆ ಎಂದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023 ಅಂಗವಾಗಿ 01-01-2023 ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಬುಧವಾರ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಕರಡು ಮತದಾರರ ಪಟ್ಟಿಗೆ ಆಕ್ಷೇಣೆಗಳನ್ನು ಸಲ್ಲಿಸಲು ಡಿಸೆಂಬರ 8 ಕೊನೆಯ ದಿನವಾಗಿದೆ. ಸ್ವೀಕೃತ ಆಕ್ಷೇಪಣೆಗಳನ್ನು ಡಿಸೆಂಬರ್ 26 ರೊಳಗೆ ವಿಲೇವಾರಿ ಮಾಡಿ ಅಂತಿಮ ಮತದಾರರ ಪಟ್ಟಿಯನ್ನು ಜನವರಿ 5, 2023 ರಂದು ಪ್ರಕಟಿಸಲಾಗುತ್ತದೆ ಎಂದರು.

ಮತದಾರರ ಪಟ್ಟಿ ಪರಿಷ್ಕರಣೆ ನಿಟ್ಟಿನಲ್ಲಿ ಮನೆ-ಮನೆಗೆ ಬಿ.ಎಲ್.ಓ.ಗಳು ಬಂದಾಗ ಹೆಸರು ಸೇರ್ಪಡೆಗೆ ಅಗತ್ಯ ದಾಖಲಾತಿಗಳು ನೀಡಿದಲ್ಲಿ ಸ್ಥಳದಲ್ಲಿಯೆ ಗರುಡಾ ತಂತ್ರಾಂಶದ ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲಾಗುತ್ತದೆ. ಮತದಾರ ಪಟ್ಟಿಯಿಂದ ಯಾರು ಅರ್ಹರು ಹೊರಗುಳಿಯದಂತೆ ಮನೆ-ಮನೆ ಸರ್ವೇ ಮಾಡಲಾಗುತ್ತದೆ. ವಿಶೇಷಚೇತನರ ಮತದಾನಕ್ಕೆ ರ್ಯಾಂಪ್ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗುವುದು. ಹೆಸರು ಸೇರ್ಪಡೆಗೆ ನಮೂನೆ 6ರಲ್ಲಿ, ಪಟ್ಟಿಯಿಂದ ತೆಗೆದು ಹಾಕಲು ನಮೂನೆ 7 ಹಾಗೂ ತಿದ್ದುಪಡಿ, ಒಂದು ಮತಕ್ಷೇತ್ರದಿಂದ ಮತ್ತೊಂದು ಮತಕ್ಷೇತ್ರಕ್ಕೆ ವರ್ಗಾವಣೆಗೆ ನಮೂನೆ 8ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಓಟರ್ ಹೆಲ್ಪಲೈನ್ ಆ್ಯಪ್ ಅಥವಾ www.nvsp.in ಆನ್‍ಲೈನ್ ಮೂಲಕವು ಸಲ್ಲಿಸಬಹುದಾಗಿದೆ ಎಂದು ತಿಳಿಸಿದ ಅವರು, ಯಾವುದೇ ದೂರುಗಳಿದಲ್ಲಿ ಟೋಲ್ ಫ್ರೀ ಸಂಖ್ಯೆ 1950ಗೆ ಸಲ್ಲಿಸಬಹುದು ಎಂದರು.

ಮತದಾರರ ಪಟ್ಟಿ ಪರಿಷ್ಕರಣೆ ಹಿಂದೆಲ್ಲಾ ಪ್ರತಿ ವರ್ಷದ ಜನವರಿ-1 ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಪರಿಷ್ಕರಿಸಲಾಗುತ್ತಿತ್ತು. ಇತ್ತೀಚಿಗೆ ಚುನಾವಣಾ ಆಯೋಗವು ಪ್ರತಿ ವರ್ಷದ ಜನವರಿ-1, ಏಪ್ರಿಲ್-1, ಜುಲೈ-1 ಹಾಗೂ ಅಕ್ಟೋಬರ್-1 ರಂದು ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಲು ನಿರ್ಧರಿಸಿದ್ದು, ಹೀಗಾಗಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಿರಂತರವಾಗಿರುತ್ತದೆ ಎಂದರು.

ವಿಶೇಷ ಅಭಿಯಾನ:

ಮತದಾರರ ಪಟ್ಟಿ ಪರಿಷ್ಕರಣೆಗೆ ನವೆಂಬರ್ 12 ಮತ್ತು 20, ಡಿಸೆಂಬರ್ 3 ಮತ್ತು 4 ರಂದು ವಿಶೇಷ ಅಭಿಯಾನ ಹಮ್ಮಿಕೊಂಡಿದ್ದು, ಅಂದು ಬೂತ್ ಮಟ್ಟದ ಮತಗಟ್ಟೆ ಅಧಿಕಾರಿಗಳು ಮತಗಟ್ಟೆಯಲ್ಲಿ ಹಾಜರಿದ್ದು, ಅರ್ಜಿಗಳನ್ನು ಪಡೆಯಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಿ.ಸಿ. ಯಶವಂತ ವಿ. ಗುರುಕರ್ ತಿಳಿಸಿದರು.

21.64 ಲಕ್ಷ ಮತದಾರರು:

ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ 10,96,041 ಪುರುಷರು ಮತ್ತು 10,68,186 ಮಹಿಳೆಯರು ಸೇರಿದಂತೆ ನವೆಂಬರ್ 7ರ ಅಂತ್ಯಕ್ಕೆ 21,64,227 ಮತದಾರರಿದ್ದಾರೆ. ಜಿಲ್ಲೆಯ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು 2,96,198 ಮತ್ತು ಚಿಂಚೋಳಿಯಲ್ಲಿ ಕಡಿಮೆ 1,99,001 ಮತದಾರರಿದ್ದಾರೆ.

ಇನ್ನು ವಿಧಾನಸಭಾ ಕ್ಷೇತ್ರವಾರು ನೋಡಿದಾಗ ಅಫಜಲಪೂರ ಕ್ಷೇತ್ರದಲ್ಲಿ 1,16,022 ಪುರುಷರು ಮತ್ತು 1,09,832 ಮಹಿಳೆಯರು ಸೇರಿ 2,25,854, ಜೇವರ್ಗಿ ಕ್ಷೇತ್ರದಲ್ಲಿ 1,19,040 ಪುರುಷರು ಮತ್ತು 1,15,900 ಮಹಿಳೆಯರು ಸೇರಿ 2,34,940, ಚಿತ್ತಾಪುರ ಕ್ಷೇತ್ರದಲ್ಲಿ 1,16,133 ಪುರುಷರು ಮತ್ತು 1,14,714 ಮಹಿಳೆಯರು ಸೇರಿ 2,30,847, ಸೇಡಂ ಕ್ಷೇತ್ರದಲ್ಲಿ 1,09,146 ಪುರುಷರು ಮತ್ತು 1,11,653 ಮಹಿಳೆಯರು ಸೇರಿ 2,20,799, ಚಿಂಚೋಳಿ ಕ್ಷೇತ್ರದಲ್ಲಿ 1,01,724 ಪುರುಷರು ಮತ್ತು 97,277 ಮಹಿಳೆಯರು ಸೇರಿ 1,99,001, ಗುಲಬರ್ಗಾ ಗ್ರಾಮೀಣ ಕ್ಷೇತ್ರದಲ್ಲಿ 1,28,894 ಪುರುಷರು ಮತ್ತು 1,21,992 ಮಹಿಳೆಯರು ಸೇರಿ 2,50,886, ಗುಲಬರ್ಗಾ ದಕ್ಷಿಣ ಕ್ಷೇತ್ರದಲ್ಲಿ 1,34,233 ಪುರುಷರು ಮತ್ತು 1,35,700 ಮಹಿಳೆಯರು ಸೇರಿ 2,69,933, ಗುಲಬರ್ಗಾ ಉತ್ತರ ಕ್ಷೇತ್ರದಲ್ಲಿ 1,48,038 ಪುರುಷರು ಮತ್ತು 1,48,160 ಮಹಿಳೆಯರು ಸೇರಿ 2,96,198, ಆಳಂದ ಕ್ಷೇತ್ರದಲ್ಲಿ 1,22,811 ಪುರುಷರು ಮತ್ತು 1,12,958 ಮಹಿಳೆಯರು ಸೇರಿ 2,35,769 ಮತದಾರರಿದ್ದಾರೆ ಎಂದು ಡಿ.ಸಿ. ಯಶವಂತ ವಿ. ಗುರುಕರ್ ಮಾಹಿತಿ ನೀಡಿದರು.

91 ಸಾವಿರ ಹೆಸರು ಡಿಲಿಟ್:

ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ವಿಧಾನಸಭಾ ಕ್ಷೇತ್ರಗಳಿಗೆ ಸೀಮಿತವಾಗಿ ಎರಡೆರಡು ಮತಗಟ್ಟೆಗಳಲ್ಲಿ ಒಂದೇ ಭಾವಚಿತ್ರವಿರುವುದನ್ನು ಪತ್ತೆ ಹಚ್ಚಿ 1,84,532 ಹೆಸರು ಮತದಾರರ ಪಟ್ಟಿಯಿಂದ ತೆಗೆದು ಹಾಕುವಂತೆ ಚುಣಾವಣಾ ಆಯೋಗದಿಂದ ತಿಳಿಸಲಾಗಿತ್ತು. ಬಿ.ಎಲ್.ಓ.ಗಳ ಮೂಲಕ ಇದನ್ನು ಭೌತಿಕವಾಗಿ ಸರ್ವೇ ಮಾಡಿ ವರದಿ ಪಡೆದು ಎರಡು ಭಾವಚಿತ್ರ ಇರುವುದನ್ನು ಖಾತ್ರಿ ಮಾಡಿಕೊಂಡು 91,000 ಜನರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಡಿ.ಸಿ. ಯಶವಂತ ವಿ. ಗುರುಕರ್ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾ ಚುನಾವಣಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಇದ್ದರು…

ವರದಿ. ಎಚ್ಚರಿಕೆ ಕನ್ನಡ ನ್ಯೂಸ್ ವರದಿಗಾರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;