ಕೇಂದ್ರ ಅಧ್ಯಯನ ತಂಡದಿಂದ ಬೆಳೆ ಹಾನಿ ಪರಿಶೀಲನೆಹೊನ್ನಕಿರಣಗಿ-ಜೇವರ್ಗಿಯಲ್ಲಿ ಬೆಳೆ ಹಾನಿ, ಮನೆ ಕುಸಿತ ವೀಕ್ಷಿಸಿದ ತಂಡ
ಕಲಬುರಗಿ ಸೆ 8: ಕೇಂದ್ರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ನಿರ್ದೇಶಕ ಡಾ.ಕೆ.ಮನೋಹರನ್ ನೇತೃತ್ವದ ಆಂತರಿಕ ಸಚಿವಾಲಯದ ತ್ರಿಸದಸ್ಯ ತಂಡ ಗುರುವಾರ ಜಿಲ್ಲೆಯ ಕಲಬುರಗಿ ತಾಲೂಕಿನ ಹೊನ್ನಕಿರಣಗಿ, ಜೇವರ್ಗಿ ಪಟ್ಟಣಕ್ಕೆ ಭೇಟಿ ನೀಡಿ ಬೆಳೆ ಹಾನಿ ಹಾಗೂ ಮಳೆಯಿಂದ ಭಾಗಶಃ ಕುಸಿದ ಮನೆಗಳನ್ನು ವೀಕ್ಷಿಸಿತು.
ಕಳೆದ ಜುಲೈ-ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಉಂಟಾದ ಬೆಳೆ ಹಾನಿಯ ಸಾಕ್ಷಾತ್ ವೀಕ್ಷಣೆಗೆ ತಂಡ ಆಗಮಿಸಿತ್ತು. ತಂಡದಲ್ಲಿ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ಎಸ್.ಬಿ.ತಿವಾರಿ ಮತ್ತು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ಎಸ್.ಜಗದೀಶ್ ಇದ್ದರು.
ಆರಂಭದಲ್ಲಿ ಕಲಬುರಗಿ ತಾಲೂಕಿನ ಹೊನ್ನಕಿರಣಗಿಗೆ ಭೇಟಿ ನೀಡಿದ ತಂಡ ಗ್ರಾಮದ ರೈತ ಮಹಿಳೆ ರಸೂಲ್ ಬಿ ಮಾಲೀಕತ್ವದ 1.30 ಎಕರೆ ಪ್ರದೇಶದಲ್ಲಿ ಬೆಳೆಯಲಾದ ತೊಗರಿ ಹೊಲದಲ್ಲಿ ಮಳೆ ಉಂಟು ಮಾಡಿದ ಹಾನಿ ವೀಕ್ಷಿಸಿದರು. ಸ್ಥಳದಲ್ಲಿದ ಕೃಷಿ ಅಧಿಕಾರಿಗಳಿಂದ ಗ್ರಾಮದಲ್ಲಿ ಬಿತ್ತನೆಯಾದ ಪ್ರದೇಶದಲ್ಲಿ ಹಾನಿಯ ಪ್ರಮಾಣದ ಬಗ್ಗೆ ಮಾಹಿತಿ ಪಡೆದರು.
ಪ್ರಭಾರಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ಅವರು ಮಾಹಿತಿ ನೀಡುತ್ತಾ, ಗ್ರಾಮದಲ್ಲಿ 3,290 ಹೆಕ್ಟೇರ್ ಪ್ರದೇಶ ತೊಗರಿ ಬೆಳೆಯಲಾಗಿತ್ತು, ಇದರಲ್ಲಿ 680 ಹೆಕ್ಟೇರ್ ಪ್ರದೇಶ ಹಾಳಾಗಿದೆ. 1,481 ರೈತರ ಹೊಲಕ್ಕೆ ನೀರು ನುಗ್ಗಿದ್ದರಿಂದ ಬೆಳೆ ನಾಶವಾಗಿದೆ. ಇಲ್ಲಿ ರೈತರು ಎರಡು ಮೂರು ಬಾರಿ ಬಿತ್ತನೆ ಮಾಡಿದ್ದಾರೆ. ಪ್ರತಿ ಬಾರಿ ಬಿತ್ತನೆಗೆ ಪ್ರತಿ ಎಕರೆಗೆ 4-5 ಸಾವಿರ ರೂ. ವ್ಯಯ ಮಾಡಿದ್ದಾರೆ. ಇದಲ್ಲದೆ 350 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾದ ಹತ್ತಿಯಲ್ಲಿ 50 ಹೆಕ್ಟೇರ್ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.
ನಂತರ ಇದೇ ಗ್ರಾಮದ ವಿನೋದ್ ಬಸನಾಳಕರ್ ಅವರ 10 ಎಕರೆ ಪ್ರದೇಶದಲ್ಲಿ ಬೆಳೆದ ಹಾನಿಯಾದ ತೊಗರಿ ಬೆಳೆ ವೀಕ್ಷಿಸಿದರು. ರೈತ ವಿನೋದ ಬಸನಾಳಕರ್ ಮಾತನಾಡಿ, ಶೇ.80ರಷ್ಟು ಹಾನಿಯಾಗಿದೆ. ಬೆಳೆ ವಿಮೆ ಪರಿಹಾರಕ್ಕೆ ದೂರು ನೀಡುವ ಕಾಲಾವಧಿಯನ್ನು ವಿಸ್ತರಿಬೇಕು ಎಂದು ಮನವಿ ಮಾಡಿದರು.
ನಂತರ ತಂಡವು ಜೇವರ್ಗಿ ಪಟ್ಟಣದಲ್ಲಿ ಮಳೆಯಿಂದ ಭಾಗಶಃ ಹಾನಿಯಾದ ಮಲ್ಲಿಕಾರ್ಜುನ ಡೂಗನಕರ್, ಧರ್ಮಣ್ಣ ಎನ್.ಖರ್ಗೆ,ಮರೆಮ್ಮ ಗಂಡ ಕಾಳಪ್ಪ ನಾಟಿಕಾರ್ ಅವರ ಕುಸಿದ ಮನೆಗಳನ್ನು ಕೇಂದ್ರ ತಂಡದ ಅಧಿಕಾರಿಗಳು ವೀಕ್ಷಿಸಿದರು. ಜೇವರ್ಗಿ ತಾಲೂಕಿನ ಪ್ರಭಾರಿ ತಹಶೀಲ್ದಾರ್ ಸಂಜೀವಕುಮಾರ್ ದಾಸರ್ ಅವರು ಜೇವರ್ಗಿ ಪಟ್ಟಣದಲ್ಲಿ 4 ಸೇರಿ ತಾಲೂಕಿನಾದ್ಯಂತ 160 ಮನೆ ಹಾನಿಗೊಳಗಾಗಿವೆ. ಭಾಗಶಃ ಹಾನಿಯಾದ ಮನೆಗಳ ಮಾಲೀಕರಿಗೆ ತಕ್ಷಣ ತಲಾ ರೂ 10 ಸಾವಿರ ಹಾಗೂ ರೂ. ತದನಂತರ ತಲಾ ರೂ. 40 ಸಾವಿರ ಸೇರಿದಂತೆ ತಲಾ ರೂ. 50 ಸಾವಿರ ಪರಿಹಾರ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಗೆ 30.79 ಕೋಟಿ ರೂ. ಪರಿಹಾರ ಬಿಡುಗಡೆ:
ಡಿ.ಸಿ. ಯಶವಂತ ವಿ. ಗುರುಕರ್ ಅವರು ಮಾತನಾಡಿ, ಕಳೆದ ಆಗಸ್ಟ್ ತಿಂಗಳ ಮೊದಲ 10 ದಿನಗಳಲ್ಲಿ ಹೆಚ್ಚಿನ ಮಳೆಯಾದ ಪರಿಣಾಮ ಜಿಲ್ಲೆಯಲ್ಲಿ 1,11,400 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಜೊತೆಗೆ, 805 ಮನೆಗಳು ಸಹ ಮಳೆಗೆ ಭಾಗಶಃ ಕುಸಿದಿದ್ದು, 6 ಜನರು ಮೃತಪಟ್ಟಿದ್ದಾರೆ. ಪ್ರಸ್ತುತ ಬೆಳೆ ಹಾನಿ ಪರಿಹಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಬುಧವಾರ 33,487 ರೈತರಿಗೆ ರೂ. 30.79 ಕೋಟಿ ಮೊದಲನೇ ಕಂತಿನ ರೂಪದಲ್ಲಿ ರೈತರ ಖಾತೆಗೆ ಹಣ ಜಮಾ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಕಲಬುರಗಿ ತಹಶೀಲ್ದಾರ್ ಪ್ರಕಾಶ ಕುದರಿ ಸೇರಿದಂತೆ ಕಂದಾಯ, ಕೃಷಿ ಇಲಾಖೆಯ ಅಧಿಕಾರಿಗಳು ಇದ್ದರು.ಇದಕ್ಕೂ ಮುನ್ನ ಕಲಬುರಗಿ ನಗರದ ಐವಾನ್-ಎ-ಶಾಹಿ ಅತಿಥಿ ಗೃಹದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ತಂಡವು, ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ರಸ್ತೆ, ಸೇತುವೆ, ಮನೆ, ಬೆಳೆ ಹಾನಿ, ಮಾನವ-ಪ್ರಾಣಿ ಹಾನಿ ಕುರಿತು ಸಂಪೂರ್ಣ ಮಾಹಿತಿ ಪಡೆಯಿತು…

ವರದಿ. ಬಸಯ್ಯ ಹಿರೇಮಠ್ ಕಲಬುರ್ಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
