;

ಜಂತುಹುಳು ನಿವಾರಕ ಮಾತ್ರೆಯು ಮಕ್ಕಳ ಆರೋಗ್ಯ ರಕ್ಷಣೆಗೆ ಸಹಕಾರಿ: ಜಿಲ್ಲಾಧಿಕಾರಿ ಆರ್.ಲತಾ…!!!

ಜಂತುಹುಳು ನಿವಾರಕ ಮಾತ್ರೆಯು ಮಕ್ಕಳ ಆರೋಗ್ಯ ರಕ್ಷಣೆಗೆ ಸಹಕಾರಿ: ಜಿಲ್ಲಾಧಿಕಾರಿ ಆರ್.ಲತಾ.
ಬೆಂಗಳೂರು ಗ್ರಾಮಾಂತರ : ಜಂತು ಹುಳುಗಳ ಬಾಧೆಯಿಂದ ಎಲ್ಲಾ ಮಕ್ಕಳನ್ನು ರಕ್ಷಣೆ ಮಾಡಲು ಜಂತುಹುಳು ನಿವಾರಕ ಮಾತ್ರೆಯು ಸಹಕಾರಿಯಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಟಾಸ್ಕ್‌ಪೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಮಗುವಿನ ಭವಿಷ್ಯದ ಶೈಕ್ಷಣಿಕ ಮತ್ತು ಸರ್ವತೋಮುಖ ಅಭಿವೃದ್ದಿಗಾಗಿ ಹಾಗೂ ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆಗೆ ಜಂತುಹುಳು ನಿವಾರಕ ಮಾತ್ರೆಯು ಸಹಕಾರಿಯಾಗಿದೆ ಎಂದು ಹೇಳಿದರು.
ಆಗಸ್ಟ್ 10 ರ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಪೂರ್ವಸಿದ್ಧತೆ ಹಿನ್ನೆಲೆಯಲ್ಲಿ ಕೋವಿಡ್-19 ಸುರಕ್ಷತಾ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯ ಎಲ್ಲಾ 1 ರಿಂದ 19 ವರ್ಷ ವಯಸ್ಸಿನ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ಅಲ್ಬೆಂಡಾಜೋಲ್ ಅನ್ನು ಅಂಗನವಾಡಿ ಕೇಂದ್ರಗಳಲ್ಲಿ, ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಶಿಕ್ಷಕರು ನೀಡಬೇಕು ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೂ ಭೇಟಿ ನೀಡಿ ಹದಿಹರೆಯದವರಿಗೆ ಅವರ ಮನೆಗಳಲ್ಲಿ ನೀಡಬೇಕು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಇರಬೇಕು. ಪ್ರತಿಯೊಂದು ಮಗುವಿಗೂ ತಪ್ಪದೇ ಜಂತುಹುಳು ನಿವಾರಣಾ ಮಾತ್ರೆಯನ್ನು ನುಂಗಿಸಬೇಕು ಎಂದು ತಿಳಿಸಿದರು. ಈ ಕುರಿತು ಎಲ್ಲಾ ಶಾಲೆಗಳ ಶಿಕ್ಷಕರಿಗೆ ಸಮರ್ಪಕ ಮಾಹಿತಿ ನೀಡಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದ ದಿನ ಮಕ್ಕಳ ವಯಸ್ಸಿಗೆ ಅನುಗುಣವಾಗಿ ಮಾತ್ರೆಗಳನ್ನು ನೀಡಬೇಕು. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ವಸತಿ ನಿಲಯಗಳಲ್ಲಿನ ಮಕ್ಕಳ ಸಂಖ್ಯೆಯನ್ನಾಧರಿಸಿ ತಾಲೂಕು ಆರೋಗ್ಯಾಧಿಕಾರಿಗಳಿಂದ ಮಾತ್ರೆಗಳನ್ನು ಪಡೆದು ಮಕ್ಕಳಿಗೆ ನುಂಗಿಸಿದ ನಂತರ ಸಂಪೂರ್ಣ ವರದಿ ನೀಡಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರ್.ಸಿ.ಎಚ್.ಓ. ಡಾ|| ಸೀಮಾ ಅವರು ಮಾತನಾಡಿ ಮಕ್ಕಳ ಜಂತುಹುಳ ರೋಗ ಲಕ್ಷಣಗಳಾದ ಹೊಟ್ಟೆ ಹಸಿವಾಗದಿರುವುದು, ಆಯಾಸ, ಹೊಟ್ಟೆನೋವು , ಹೊಟ್ಟೆ ಉಬ್ಬರ, ವಾಕರಿಕೆ, ವಾಂತಿ, ದೇಹದ ತೂಕ ಕಡಿಮೆಯಾಗುವುದು, ಹೊಟ್ಟೆ ಕೆಟ್ಟು ಭೇದಿ ಆಗುವುದು. ಕೆಲವೊಂದು ವಿಶೇಷ ಪ್ರಕರಣಗಳಲ್ಲಿ ಮಗು ಮಲವಿಸರ್ಜನೆ ಮಾಡುವಾಗ ಕರುಳಿನ ಹುಳುಗಳನ್ನು ಸಹ ಮಲದ ಮೂಲಕ ಹೊರಹಾಕುವುದು. ಕರುಳಿನ ಹುಳುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಕರುಳನ್ನು ಗಟ್ಟಿಯಾಗಿಸಿ ಕರುಳಿನ ಚಲನೆಯನ್ನು ನಿಲ್ಲುವಂತೆ ಮಾಡುತ್ತವೆ. ಕರುಳಿನಲ್ಲಿ ವಾಸ ಮಾಡುವ ಹುಳುಗಳು ಮತ್ತು ಜಂತುಹುಳುಗಳು ನಮ್ಮ ದೇಹ ಸೇರಿ ಮಗುವಿನ ಆರೋಗ್ಯಕ್ಕೆ ಮತ್ತು ಅಂಗಾಂಗಗಳ ಕಾರ್ಯಚಟುವಟಿಕೆಗೆ ತೊಂದರೆ ಉಂಟು ಮಾಡುತ್ತವೆ. ಇದರ ನಿವಾರಣೆಗಾಗಿ ಜಂತುಹುಳು ನಿವಾರಕ ಮಾತ್ರೆಯು ಮಕ್ಕಳಿಗೆ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿವೆ ಎಂದು ತಿಳಿಸಿದರು.
ಜಂತುಹುಳು ನಿವಾರಣಾ ಕಾರ್ಯಕ್ರಮವು ಆಗಸ್ಟ್ 10ರ ಜಂತುಹುಳು ನಿವಾರಣಾ ದಿನದಂದು ಪ್ರಾರಂಭವಾಗಿ ಆಗಸ್ಟ್ 17 ರವರೆಗೆ ಜಿಲ್ಲೆಯಲ್ಲಿ ನಡಯಲಿದೆ. ಪ್ರತಿಯೊಂದು ಮಗುವನ್ನು ಜಂತುಹುಳ ರೋಗಭಾದೆಯಿಂದ ಮುಕ್ತಗೊಳಿಸುವುದೇ ಈ‌ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಆರ್.ವೆಂಕಟೇಶ ರೆಡ್ಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀಕಂಠಯ್ಯ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲ್ಲೂಕು ಆರೋಗ್ಯಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು…

ವರದಿ. ಕಲಾವತಿ, ಎನ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;